ಶಿವಮೊಗ್ಗ: ವಿರೋಧ ಪಕ್ಷಗಳು ಸದನವನ್ನು ಸರಿದಾರಿಯತ್ತ ನಡೆಯಲು ಬಿಡದೆ ವಿನಾಕಾರಣ ರಾಜಕಾರಣ ನಡೆಸುತ್ತಿವೆ ಎಂದು ಸಂಸದ ಬಿ.ವೈ. ರಾಘವೇಂದ್ರ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನದಲ್ಲಿ ಒಂದು ದೇಶ-ಒಂದು ಚುನಾವಣೆ ಮತ್ತು ಬಜೆಟ್ ಪೂರಕವಾದ ಮಹತ್ವದ ವಿಚಾರಗಳ ಚರ್ಚೆ ನಡೆಸಲು ಅವಕಾಶ ಕೊಡದೆ ವಿಪಕ್ಷಗಳು ಕ್ಷುಲ್ಲಕ ರಾಜಕೀಯದಲ್ಲಿ ತೊಡಗಿವೆ. ಇದು ಕಾಂಗ್ರೆಸ್‌ಗೆ ಶೋಭೆ ತರುವುದಿಲ್ಲ. ಆ ಪಕ್ಷದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಂತಹ ಹಿರಿಯರಿದ್ದು, ಈ ರೀತಿ ನಡೆದುಕೊಳ್ಳುವುದು ವಿಷಾದನೀಯ ಎಂದರು.
ಸ್ಪೀಕರ್ ನೇತೃತ್ವದ ಕಲಾಪ ವ್ಯವಹಾರಿಕ ಸಲಹಾ ಸಮಿತಿ ಸಭೆಯಲ್ಲಿ ಒಂದು ದೇಶ-ಒಂದು ಚುನಾವಣೆ ವಿಷಯ ಕುರಿತು ಚರ್ಚೆಗೆ ವಿಪಕ್ಷಗಳ ಮುಖಂಡರು ಒಪ್ಪಿಕೊಂಡಿದ್ದರು. ಆದರೆ ಸದನದಲ್ಲಿ ಭದ್ರಾವತಿ ಶಾಸಕರ ಕ್ಷುಲ್ಲಕ ವಿಷಯಕ್ಕೆ ಬೆಂಬಲವಾಗಿ ನಿಂತು ಕಲಾಪಕ್ಕೆ ಅಡ್ಡಿ ಪಡಿಸಿದ್ದು, ಸಿದ್ದರಾಮಯ್ಯನಂತವ ಹಿರಿಯ ನಾಯಕರು ಸಭಾಪತಿಗಳ ತೀರ್ಮಾನವನ್ನು ಧಿಕ್ಕರಿಸಿ ಮಾರ್ಷೆಲ್‌ಗಳಿಗೆ ಅವಮಾನ ಮಾಡುವ ಮೂಲಕ ಸಭಾಪತಿಗಳ ಆದೇಶದ ವಿರುದ್ಧ ನಡೆದುಕೊಂಡಿದ್ದಾರೆ ಎಂದರು.
ಭದ್ರಾವತಿಯಲ್ಲಿ ಫೆ. 27-28 ರಂದು ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಗೆದ್ದ ತಂಡಗಳು ಸಹಜವಾಗಿಯೇ ಘೋಷಣೆಗಳನ್ನು ಕೂಗಿದ್ದಾರೆ. ಇದನ್ನು ಕ್ರೀಡಾ ಮನೋಭಾವದಿಂದ ತೆಗೆದುಕೊಳ್ಳದ ಶಾಸಕ ಸಂಗಮೇಶ್ ಮತ್ತವರ ಕಾರ್ಯಕರ್ತರು ಕೈಗಳಿಗೆ ಸ್ಟೀಲ್ ಪಂಚಿಂಗ್ ಹಾಕಿಕೊಂಡು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಶಾಸಕ ಸಂಗಮೇಶ್ ಮತ್ತವರ ಕಾರ್ಯಕರ್ತರು ಕಳೆದು ಎರಡು-ಮೂರು ತಿಂಗಳಿನಿಂದ ಬಿಜೆಪಿ ಮುಖಂಡರನ್ನು, ಕಾರ್ಯಕರ್ತರನ್ನು ಬೆದರಿಸುವ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದಾರೆ. ಅದರ ಮುಂದುವರಿದ ಭಾಗವಾಗಿ ಕಬಡ್ಡಿ ಪಂದ್ಯಾವಳಿಯಲ್ಲಿ ಹಲ್ಲೆ ನಡೆಸಿದ್ದಾರೆ. ಪೊಲೀಸರು ತಪ್ಪು ಮಾಡಿದವರ ಜೊತೆಗೆ ತಪ್ಪು ಮಾಡದವರ ಮೇಲೂ ಕೇಸು ದಾಖಲಿಸಿದ್ದಾರೆ. ನಾನಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಅ ಧಿಕಾರ ದುರುಪಯೋಗ ಮಾಡಿಕೊಂಡಿಲ್ಲ. ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ. ತಪ್ಪಿತಸ್ಥರು ಯಾರಿದ್ದರೂ ಅವರ ವಿರುದ್ಧ ಕ್ರಮ ಆಗಲಿದೆ ಎಂದರು.
ಭದ್ರಾವತಿಯಲ್ಲಿ ಕೈಗಾರಿಕೆಗಳ ಸ್ಥಾಪನೆ ಮಾಡುವ ಮೂಲಕ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸುವ, ಅಮೃತ್ ಯೋಜನೆ ಮೂಲಕ ನೂರಾರು ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ರೈಲ್ವೆ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಭದ್ರಾವತಿಯ ಅಭಿವೃದ್ಧಿಯಲ್ಲಿ ಯಾವುದೇ ಪಕ್ಷಪಾತ ಮಾಡಿಲ್ಲ. ಇದನ್ನು ಸಹಿಸದ ಸಂಗಮೇಶ್ ಬಿಜೆಪಿ ಕಾರ್ಯಕರ್ತರನ್ನು ಬೆದರಿಸುವ ಕೆಲಸಕ್ಕಿಳಿದಿದ್ದಾರೆ. ಶಾಸಕರು ಸಂವಿಧಾನಬದ್ಧವಾಗಿ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಬೇಕು, ಗೂಂಡಾಗಿರಿ ಮಾಡುತ್ತೇನೆ ಎನ್ನುವುದು ನಡೆಯುವುದಿಲ್ಲ .ಶಾಸಕರ ಬೆದರಿಕೆಗೆ ಹೆದರುವುದಿಲ್ಲ ಎಂದು ಎಚ್ಚರಿಕೆ ನೀಡಿದ ಸಂಸದ ಬಿ.ವೈ.ರಾಘವೇಂದ್ರ ಅವರು, ಭದ್ರಾವತಿಯ ಅಭಿವೃದ್ಧಿ ದಿಕ್ಕಿನಲ್ಲಿ ಶಾಸಕರು ಕೈಜೋಡಿಸಲಿಎಂದು ಸಲಹೆ ಮಾಡಿದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್, ಹಿರಿಯ ಮುಖಂಡ ಎಂ.ಬಿ. ಭಾನುಪ್ರಕಾಶ್, ಆರ್ಯವೈಶ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಡಿ.ಎಸ್. ಅರುಣ್ , ಪದಾಧಿ ಕಾರಿ ಶಿವರಾಜು, ಕೆ.ವಿ ಅಣ್ಣಪ್ಪ ಇದ್ದರು.