ಬಳ್ಳಾರಿ: ವಿಜಯನಗರ ಜಿಲ್ಲೆ ದೇವರಕೊಳ್ಳದ ನಾಗಸಾಧು ದಿಗಂಬರ ರಾಜಭಾರತಿ ಸ್ವಾಮೀಜಿ ಆಶೀರ್ವಾದ ಪಡೆಯುವ ರಾಜಕೀಯ ನಾಯಕರ ಹೆಚ್ಚುತ್ತಿದ್ದು, ಇದೀಗ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ ಹೆಗಡೆ ಸಹ ಸ್ವಾಮೀಜಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿರುವುದು ಕುತೂಹಲ ಮೂಡಿಸಿದೆ.
ದೇವರಕೊಳ್ಳದ ನಾಗಸಾಧು ದಿಗಂಬರ ರಾಜಭಾರತಿ ಸ್ವಾಮೀಜಿಯನ್ನು ಎರಡು ದಿನಗಳ ಹಿಂದಷ್ಟೇ ಮಾಜಿ ಸಚಿವ ಬಿ. ಶ್ರೀರಾಮುಲು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು. ಇದೀಗ ಅನಂತಕುಮಾರ್ ಹೆಗಡೆ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದು, ಈ ವೇಳೆ ಲೋಕಸಭೆ ಚುನಾವಣೆ ಬಗ್ಗೆಯೂ ಚರ್ಚೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ದೇವರಕೊಳ್ಳದ ಗುಡ್ಡದ ಮೇಲಿನ ಮರವೊಂದರಲ್ಲಿ ವಾಸ ಮಾಡುತ್ತಿರುವ ನಾಗಸಾಧು ರಾಜಭಾರತಿ ಸ್ವಾಮೀಜಿ ಪ್ರಭಾವಿಯಾಗಿದ್ದಾರೆ. ಈಗಾಗಲೇ ರಾಜ್ಯದ ಹಲವಾರು ರಾಜಕೀಯ ಮುಖಂಡರು ಸಾಧುಗಳ ಆಶೀರ್ವಾದ ಪಡೆದಿದ್ದಾರೆ.
ಸಂಸದ ಅನಂತಕುಮಾರ್ ಹೆಗಡೆ ಲೋಕಸಭೆ ಚುನಾವಣೆಯಲ್ಲಿ ಮತ್ತೂಮ್ಮೆ ಸ್ಪರ್ಧಿಸುವ ಹುಮ್ಮಸ್ಸಿನಲ್ಲಿದ್ದು ಸಕ್ರಿಯವಾಗಿದ್ದಾರೆ. ನಾಗಸಾಧುಗಳ ಆಶೀರ್ವಾದ ಪಡೆದರೆ ಗೆಲ್ಲುತ್ತಾರೆ ಎನ್ನುವ ನಂಬಿಕೆ ಇದೆ.
ಹಾಗಾಗಿ ಲೋಕಸಭೆ ಚುನಾವಣೆ ಮುನ್ನ ಹಲವು ನಾಯಕರು ಶ್ರೀಗಳನ್ನು ಭೇಟಿ ಮಾಡಿದ್ದು, ಜಿಲ್ಲೆಯಿಂದ ಲೋಕಸಭೆಗೆ ಸ್ಪರ್ಧಿಸುವ ಪ್ರಯತ್ನದಲ್ಲಿರುವ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸಹ ಭೇಟಿ ಮಾಡಿ ಸ್ವಾಮೀಜಿ ಆಶೀರ್ವಾದ ಪಡೆದಿದ್ದಾರೆ.