Advertisement

ಮೊವಾಡಿ: ಯಾಂತ್ರೀಕೃತ ಮರಳುಗಾರಿಕೆ ವಿರೋಧಿಸಿ ಪ್ರತಿಭಟನೆ

05:21 PM Mar 22, 2022 | Team Udayavani |

ತ್ರಾಸಿ: ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ ಮೊವಾಡಿಯಲ್ಲಿ ಕಳೆದ ಕೆಲ ದಿನಗಳಿಂದ ಯಾಂತ್ರೀಕೃತ ಮರಳುಗಾರಿಕೆ ನಡೆಯುತ್ತಿದ್ದು, ಇದನ್ನು ತತ್‌ಕ್ಷಣವೇ ನಿಲ್ಲಿಸಬೇಕು ಹಾಗೂ ಹೀಗೆ ಮುಂದುವರಿದರೆ ಪರವಾನಿಗೆ ರದ್ದುಪಡಿಸಬೇಕು ಎಂದು ಆಗ್ರಹಿಸಿ, ಮೊವಾಡಿಯ ಸ್ಥಳೀಯ ನಿವಾಸಿಗರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ.

Advertisement

ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಯಾಂತ್ರೀಕೃತ ಮರಳುಗಾರಿಕೆ ನಡೆಯುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ಮರಳು ಸಂಗ್ರಹ ಕಾರ್ಯಭರದಿಂದ ಸಾಗುತ್ತಿದೆ. ಈ ಬಗ್ಗೆ ಸ್ಥಳೀಯಾಡಳಿತಕ್ಕೂ ತಿಳಿಸದೇ ಏಕಾಏಕಿಯಾಗಿ ಮರಳು ತೆಗೆಯುತ್ತಿರುವುದು ಸರಿಯಾದ ಕ್ರಮವಲ್ಲ. ಯಾಂತ್ರೀಕೃತ ಮರಳುಗಾರಿಕೆ ನಡೆಸಲು ನಿಯಮಗಳನ್ನು ಗಾಳಿಗೆ ತೂರಿ ಇಲಾಖೆಯೇ ಪರವಾನಿಗೆ ನೀಡಿರುವುದನ್ನು ಪ್ರತಿಭಟನಕಾರರು ಖಂಡಿಸಿದ್ದಾರೆ.

ನದಿ ತೀರಕ್ಕೆ ಅಪಾಯ

ಅವ್ಯಾಹತವಾಗಿ ಯಾಂತ್ರೀಕೃತ ಮರಳುಗಾರಿಕೆ ನಡೆಸುವುದರಿಂದ ನದಿ ತೀರದ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಮರಳು ತೆಗೆಯುವುದರಿಂದ ನದಿ ತೀರ ಕುಸಿಯುತ್ತಿದ್ದು ಸಮೀಪದ ಮನೆಗಳು ನೀರುಪಾಲಾಗುವ ಭೀತಿಯುಂಟಾಗಿದೆ. ಅದಲ್ಲದೇ ಬಾವಿಗಳ ಶುದ್ಧ ನೀರು ಉಪ್ಪುನೀರಾಗಿ ಪರಿವರ್ತನೆಯಾಗುತ್ತಿದೆ. ಇರುವ ಕಿರಿದಾದ ರಸ್ತೆಗಳಲ್ಲಿ ಮರಳು ಲಾರಿಗಳ ಸಂಚಾರದಿಂದ ವಾಹನ ಸವಾರರು, ಸಾರ್ವಜನಿಕರು ಶಾಲಾ ಮಕ್ಕಳಿಗೆ ನಿತ್ಯವೂ ಸಮಸ್ಯೆಗಳಾಗುತ್ತಿವೆ. ಹೀಗಾಗಿ ಯಾಂತ್ರೀಕೃತ ಮರಳುಗಾರಿಕೆಯನ್ನು ತತ್‌ಕ್ಷಣವೇ ನಿಲ್ಲಿಸಬೇಕು ಇಲ್ಲವಾದಲ್ಲಿ ಎಲ್ಲರೂ ರಸ್ತೆಯ ಮೇಲೆ ಕುಳಿತು ಧರಣಿ ನಡೆಸುತ್ತೇವೆ ಎಂದು ಸ್ಥಳೀಯರು ಎಚ್ಚರಿಸಿದರು.

ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್‌ ಕುಮಾರ್‌ ಶೆಟ್ಟಿ, ಸ್ಥಳೀಯ ಮುಖಂಡರಾದ ಕಡಿಕೆ ಪ್ರವೀಣ್‌ ಕುಮಾರ್‌ ಶೆಟ್ಟಿ, ಅಶೋಕ್‌ ಶೆಟ್ಟಿ, ಪ್ರಣಯ್‌ ಕುಮಾರ್‌ ಶೆಟ್ಟಿ ಯಳೂರು, ಹಕ್ಲಾಡಿ ಗ್ರಾ.ಪಂ. ಅಧ್ಯಕ್ಷ ಚೇತನ್‌ ಮೊಗವೀರ, ತ್ರಾಸಿ ಪಂಚಾಯತ್‌ ಸದಸ್ಯರಾದ ಮಿಥುನ್‌ ದೇವಾಡಿಗ, ರೆಮ್ಸಮ್‌ ಪಿರೇರಾ, ಗ್ರಾಮ ಕರಣಿಕ ಶಿವರಾಯ್‌, ಸಿಪಿಐ ಸಂತೋಷ್‌ ಕಾಯ್ಕಿಣಿ, ಗಂಗೊಳ್ಳಿ ಠಾಣಾಧಿಕಾರಿ ನಂಜಾ ನಾಯ್ಕ, ಸಿಬ್ಬಂದಿ ಉಪಸ್ಥಿತರಿದ್ದರು.

Advertisement

ವರದಿ ಪಡೆದು ತೀರ್ಮಾನ ಎಸಿ

ಸ್ಥಳಕ್ಕಾಗಮಿಸಿದ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಕೆ. ರಾಜು ಅವರಿಗೆ ಪ್ರತಿಭಟನ ನಿರತರು ಮನವಿ ಸಲ್ಲಿಸಿದರು. ಸ್ಥಳೀಯ ನಿವಾಸಿಗಳ ಮನವಿಗೆ ಸ್ಪಂದಿಸಿದ ಎಸಿ ರಾಜು ಕೆ. ಅವರು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಮರಳುಗಾರಿಕೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ತಾಂತ್ರಿಕ ವರದಿ ತರಿಸಿಕೊಳ್ಳುವಂತೆ ಸೂಚನೆ ನೀಡಿದರು. ಇಲ್ಲಿನ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಲಾಗಿದ್ದು, ಅಲ್ಲಿಂದ ವರದಿ ಬಂದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದ ಅವರು, ಅಲ್ಲಿಯವರೆಗೆ ತಾತ್ಕಾಲಿಕವಾಗಿ ಯಾಂತ್ರೀಕೃತ ಮರಳುಗಾರಿಕೆಯನ್ನು ನಿಲ್ಲಿಸಲು ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next