Advertisement

ಯಾವ ವ್ಯಾಪಾರಿಗೂ ತೊಂದರೆ ಆಗದಂತೆ ಸ್ಥಳಾಂತರ: ಅಭಯಚಂದ್ರ 

02:12 PM Nov 02, 2017 | |

ಮೂಡಬಿದಿರೆ: ಇಲ್ಲಿನ ಪೇಟೆಯಲ್ಲಿರುವ ಪುರಸಭಾ ಮಾರುಕಟ್ಟೆಯನ್ನು ಹೊಸದಾಗಿ ಕಟ್ಟುವ ಮುನ್ನ ಸ್ವರಾಜ್ಯ ಮೈದಾನಕ್ಕೆ ಸ್ಥಳಾಂತರಗೊಳಿಸುವ ಪ್ರಕ್ರಿಯೆಯಲ್ಲಿ ಪ್ರಸ್ತುತ ಮಾರುಕಟ್ಟೆಯ ವ್ಯಾಪ್ತಿಯಲ್ಲಿರುವ ವ್ಯಾಪಾರಸ್ಥರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಮತ್ತು ಹೊಸದಾಗಿ ನಿರ್ಮಾಣವಾಗುವ ಮಾರುಕಟ್ಟೆಯಲ್ಲಿ ಎಲ್ಲ ವ್ಯಾಪಾರಸ್ಥರಿಗೂ ಅವಕಾಶ ಕಲ್ಪಿಸಲಾಗುವುದು. ಪಾರದರ್ಶಕವಾಗಿ ಈ ಎಲ್ಲ ಪ್ರಕ್ರಿಯೆ ನಡೆಯಲಿದೆ ಎಂದು ಶಾಸಕ ಕೆ. ಅಭಯಚಂದ್ರ ಜೈನ್‌ ಹೇಳಿದರು.

Advertisement

ಸ್ವರಾಜ್ಯ ಮೈದಾನದಲ್ಲಿ ಅಂತಿಮ ಹಂತದಲ್ಲಿರುವ ತಾತ್ಕಾಲಿಕ ಶೆಡ್‌ಗಳಿಗೆ ಆದಷ್ಟು ಶೀಘ್ರವಾಗಿ ಮಾರುಕಟ್ಟೆ
ವ್ಯಾಪಾರಸ್ಥರು ಸ್ಥಳಾಂತರಗೊಳ್ಳುವ ಮುನ್ನ ಸಮಾಜ ಮಂದಿರದಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೆಸರು ಇಲ್ಲದ ಗೊಂದಲ
ನಾನು 41 ವರ್ಷಗಳಿಂದ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದೇನೆ, ಮೊದಲ ಪಟ್ಟಿಯಲ್ಲಿ ಇದ್ದ ಹೆಸರು
ಈಗಿನ ಪಟ್ಟಿಯಲ್ಲಿ ಇಲ್ಲ ಎಂದು ಹಿರಿಯ ವ್ಯಾಪಾರಿ ಎ. ಎಲ್‌. ವಾಸ್‌ ದೂರಿದರು. 

ನಾನು ಕೋರ್ಟಿಗೆ ಹೋಗಿದ್ದೇನೆ, ಪುರಸಭೆಯೇ ನನ್ನನ್ನು ಸುದರ್ಶನ ಫ್ರೇಂ ವರ್ಕ್ಸ್ ನಡೆಸುವ ವ್ಯಾಪಾರಿ ಎಂದು ಒಪ್ಪಿಕೊಂಡಿದೆ. ಆದರೆ ನನ್ನ ಹೆಸರು ಈ ಪಟ್ಟಿಯಲ್ಲಿ ಏಕಿಲ್ಲ? ಎಂದ ಸುದರ್ಶನ ಎಂ. ಹೀಗೆ ಎಷ್ಟು ಮಂದಿಯ ಹೆಸರನ್ನು ಕೈ ಬಿಡಲಾಗಿದೆ? ನಮಗೆ ಏನು ವ್ಯವಸ್ಥೆ? ಎಂದು ಪ್ರಶ್ನಿಸಿದರು. ಅಶ್ರಫ್‌ ಮರೋಡಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು.

ಪುರಸಭಾ ಕಂದಾಯ ಅಧಿಕಾರಿ ಧನಂಜಯ ಅವರು, ಕೆಲವರು ನೇರ ಪುರಸಭೆಗೆ ಶುಲ್ಕ ಪಾವತಿಸುವವರು, ಇನ್ನು ಹಲವರು ಗುತ್ತಿಗೆದಾರರಿಗೆ ಶುಲ್ಕ ಪಾವತಿಸುವವರು ಎಂದು ವಿವರಣೆ ನೀಡಿದರು.

Advertisement

ಹಿರಿಯ ಸದಸ್ಯ ಪಿ.ಕೆ. ಥಾಮಸ್‌ ಮಾತನಾಡಿ, ಪುರಸಭೆಗೆ ನೇರ ಪಾವತಿಸುವ 39 ಅಂಗಡಿಯವರಿಗೆ ಪ್ರತ್ಯೇಕ ಏಲಂ ನಡೆಸಲಾಗುವುದು, ಸರಕಾರದ ಕಾನೂನಿನ್ವಯ ಚದರಡಿಗೆ ಇಂತಿಷ್ಟು ಎಂದು ಡಿಪಾಸಿಟ್‌, ಬಾಡಿಗೆ ನಿರ್ಧರಿಸಲಾಗುವುದು ಎಂದರು. ಗುತ್ತಿಗೆದಾರ ಮೊದಲ ವರ್ಷ ರೂ. 1 ಕೋಟಿ, 2ನೇ ವರ್ಷ 1.07 ಕೋಟಿ ಹೀಗೆ 17 ವರ್ಷ ಕೊಡುತ್ತ ಬರಬೇಕು. ಈಗ ಮಾರುಕಟ್ಟೆಯಿಂದ ಪುರಸಭೆಗೆ ಬರುತ್ತ ಇರುವ ಆದಾಯ ಕೇವಲ ರೂ. 30 ಲಕ್ಷ. ಹಾಗಾಗಿ ಎಲ್ಲ ದೃಷ್ಟಿಯಲ್ಲೂ ಹೊಸ ಮಾರುಕಟ್ಟೆ ಯೋಜನೆ ಪುರಸಭೆಗೆ ಆದಾಯ ತಂದುಕೊಡುವುದು ಎಂಬುದನ್ನು ಗಮನಿಸಬೇಕು ಎಂದು ಹೇಳಿದರು.

ಈಗ ಇರುವ ವ್ಯಾಪಾರಿಗಳಿಗೆ ಮುಂದಿನ ಕಟ್ಟಡದಲ್ಲಿ ವಿಧಿಸಲಾಗುವ ಡಿಪಾಸಿಟ್‌ ಮೊತ್ತವನ್ನು ಪುರಸಭೆ ನಿರ್ಣಯಿಸಲು ಸಾಧ್ಯವಿದೆ. ಹಾಗೆ ಮಾಡಿದರೆ ಅನುಕೂಲ ಎಂದು ಸುದರ್ಶನ ವಿನಂತಿಸಿದರು.

ಸ್ವರಾಜ್ಯಮೈದಾನಕ್ಕೆ ಸ್ಥಳಾಂತರಗೊಳ್ಳಲು ಕನಿಷ್ಠ 2 ತಿಂಗಳ ಅವಕಾಶವನ್ನಾದರೂ ಕೊಡಬೇಕು ಎಂದು ಎ. ಎಲ್‌. ವಾಸ್‌, ಅಶ್ರಫ್‌ ಮತ್ತಿತರರು ವಿನಂತಿಸಿದರು.

ಜಿಜ್ಞಾಸೆ
ಹೊಸ ಮಾರುಕಟ್ಟೆಯ ಗುತ್ತಿಗೆದಾರರು15 ವರ್ಷಗಳ ಬಳಿಕ ಪುರಸಭೆಗೆ ಮಾರುಕಟ್ಟೆಯನ್ನು ಬಿಟ್ಟುಕೊಡದಿದ್ದರೆ ಅಥವಾ ಬಿಟ್ಟುಕೊಟ್ಟರೂ ಯಾವ ರೀತಿ ಬಿಟ್ಟುಕೊಡುತ್ತಾನೆ ಎಂದು ಸುದರ್ಶನ ಎಂ. ತಮ್ಮ ಜಿಜ್ಞಾಸೆಯನ್ನು ಸಭೆಯ
ಮುಂದಿರಿಸಿದರು.

ತತ್‌ಕ್ಷಣ ಸ್ಪಂದಿಸಿದ ಅಭಯಚಂದ್ರ ಅವರು ಯಾರಿಗೂ ದ್ರೋಹ ಆಗದ ರೀತಿ ನೋಡಿಕೊಳ್ಳುತ್ತೇನೆ ಎಂದು ಪ್ರಕಟಿಸಿದರು.

ಮಳಿಗೆಗಳ ಮರು ಹಂಚಿಕೆ ಪಾರದರ್ಶಕವಾಗಿ ಪುರಸಭೆಯಿಂದಲೇ ನಡೆಯಲಿದೆ. ವರ್ತಕರು ಗುತ್ತಿಗೆದಾರ
ರೊಂದಿಗೆ ಹಣಕಾಸು ವಹಿವಾಟು, ಗೌಪ್ಯ ಒಳಒಪ್ಪಂದ ಮಾಡಿಕೊಳ್ಳಬಾರದು ಎಂದು ಪುರಸಭಾಧ್ಯಕ್ಷೆ ಹರಿಣಾಕ್ಷಿ ಎಸ್‌.
ಸುವರ್ಣ ಹಾಗೂ ಮುಖ್ಯಾಧಿಕಾರಿ ಶೀನ ನಾಯ್ಕ ತಿಳಿಸಿದರು.

ಫಲಾನುಭವಿಗಳ ಪಟ್ಟಿ
ಈಗಿರುವ ಪುರಸಭಾ ಮಾರುಕಟ್ಟೆಯಲ್ಲಿರುವ, ಪ್ಲಾಸ್ಟಿಕ್‌ ಹೊದೆಸಿಕೊಂಡು ವ್ಯಾಪಾರ ಮಾಡುವವರನ್ನೂ ಒಳಗೊಂಡಂತೆ, ಎಲ್ಲರನ್ನೂ ಒಳಗೊಂಡ ಪಟ್ಟಿಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಶಾಸಕರು ಸೂಚಿಸಿದಂತೆ
ಪುರಸಭಾಧ್ಯಕ್ಷರು ಕ್ರಮ ಜರಗಿಸುವುದಾಗಿ ತಿಳಿಸಿದರು.

ಪುರಸಭಾ ಸದಸ್ಯರು, ಮುಖ್ಯಾಧಿಕಾರಿ ಸಹಿತ ಅಧಿಕಾರಿಗಳು ಮತ್ತು ಸಿಬಂದಿ ವರ್ಗ, ಮಾರುಕಟ್ಟೆ ವ್ಯಾಪಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಮೂರು ಅಂತಸ್ತಿನ ಕಟ್ಟಡ
ಹೊಸ ವಾಣಿಜ್ಯ ಸಂಕೀರ್ಣವು 2 ಬೇಸ್‌ಮೆಂಟ್‌, ತಳ ಮತ್ತು 3 ಅಂತಸ್ತುಗಳ ಕಟ್ಟಡವಾಗಿದೆ. ಬೇಸ್‌ಮೆಂಟ್‌ನಲ್ಲಿ 210 ಕಾರು, 350 ಬೈಕ್‌ಗಳ ಪಾರ್ಕಿಂಗ್‌, ಮೇಲಿನಂತಸ್ತುಗಳಿಗೆ ಹೋಗಲು 2 ಎಸ್ಕಲೇಟರ್‌, 4 ಲಿಫ್ಟ್‌ ಗಳಿರುತ್ತವೆ. ಈಗಿರುವ ವರ್ತಕರಿಗೆ ಆದ್ಯತೆಯಲ್ಲಿ ಮಳಿಗೆಗಳನ್ನು ನೀಡಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next