ರಾಯಚೂರು: ಮಸ್ಕಿ ಉಪಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಅಭ್ಯರ್ಥಿಗಳು ಪ್ರಸಿದ್ಧ ಹಾಡುಗಳನ್ನೇ ಡಬ್ಬಿಂಗ್ ಮಾಡಿ ಪ್ರಚಾರದ ಅಸ್ತ್ರವನ್ನಾಗಿ ಬಳಸಿಕೊಂಡಿರುವುದು ಗಮನ ಸೆಳೆಯುತ್ತಿದೆ.
ಕ್ಷೇತ್ರದ ಯಾವುದೇ ಊರಿಗೆ ಹೋದರೂ ಇಂಥ ಹಾಡುಗಳನ್ನು ಹಾಕಿಕೊಂಡು ಓಡಾಡುವ ವಾಹನಗಳು ಸಾಮಾನ್ಯ ಎನ್ನುವಂತಾಗಿದೆ. ಮಸ್ಕಿ ಪಟ್ಟಣದಲ್ಲಂತೂ ನಿತ್ಯ ಹತ್ತಾರು ಬಾರಿ ವಾಹನಗಳು ತಿರುಗಾಡುವುದು ಸ್ಥಳೀಯರಿಗೆ ಕಿರಿಕಿರಿ ಎನಿಸುವಂತಾಗಿದೆ. ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಹಾಡುಗಳ ಮೂಲಕವೇ ಮತದಾರರನ್ನು ತಲುಪುವ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಇತ್ತೀಚೆಗೆ ಹಿಟ್ ಆಗಿರುವ ಕನ್ನಡ ಸಿನಿಮಾದ ಹಾಡುಗಳು, ಪ್ರಸಿದ್ಧ ಜನಪದ ಹಾಡುಗಳು, ಇಂದಿಗೂ ಕಾಡುವಂಥ ಹಳೆಯ ಸಿನಿಮಾ ಹಾಡುಗಳನ್ನು ಡಬ್ಬಿಂಗ್ ಮಾಡಲಾಗಿದೆ. ರಾಬರ್ಟ್ ಸಿನಿಮಾದ ನಿನ್ನ ನೋಡಿ ಸುಮ್ಮನ್ಯಾಂಗ ಇರಲಿ, ಬಸಣ್ಣಿ ಬಾ, ಸಿಂಹಾದ್ರಿಯ ಸಿಂಹ ಸಿನಿಮಾದ ಹಾಡುಗಳು, ಕಂಬದ ಮ್ಯಾಲಿನ ಗೊಂಬೆಯೆ ಜತೆಗೆ ಈ ಭಾಗದಲ್ಲಿ ಇಂದಿಗೂ ಕೇಳಿ ಬರುವ ಜನಪದ ಹಾಡುಗಳು ಬದಲಾದ ಸಾಹಿತ್ಯದಲ್ಲಿ ಗುಂಯ್ ಗುಡುತ್ತಿವೆ.
ಟ್ಯೂನ್ ಅದೇ-ಸಾಹಿತ್ಯ ಬದಲು: ಕೇಳುಗರ ಕಿವಿಗೆ ಬೀಳುವ ಹಾಡಿನ ಟ್ಯೂನ್ ಮೂಲದ್ದೇ ಆಗಿರುತ್ತದೆ. ಆದರೆ, ಸಾಹಿತ್ಯ ಮಾತ್ರ ಬೇರೆಯಾಗಿದೆ. ಅಭ್ಯರ್ಥಿಗಳ ಗುಣಗಾನ ಮಾಡಿದ ಸಾಹಿತ್ಯ ರಚನೆಯಾಗಿದೆ. ಪ್ರತಾಪಗೌಡ ಕ್ಷೇತ್ರಕ್ಕೆ ನೀಡಿದ ಕೊಡುಗೆ, ಮುಂದೆ ಮಾಡುವ ಕೆಲಸಗಳನ್ನು ಹಾಡಿನ ದಾಟಿಯಲ್ಲಿ ರೂಪಿಸಿದರೆ; ಬಸನಗೌಡ ಅವಕಾಶ ಕೋರಿ ರಚಿಸಿದ ಹಾಡುಗಳು ಕೇಳಿ ಬರುತ್ತಿವೆ.
ಮೂಲ ಹಾಡುಗಳಿಗೆ ಧಕ್ಕೆಯಾಗದ ರೀತಿಯಲ್ಲೇ ಡಬ್ಬಿಂಗ್ ಹಾಡುಗಳನ್ನು ಹಾಡಿರುವುದು ಗಮನ ಸೆಳೆಯುತ್ತಿದೆ. ಬಹುತೇಕ ಹಾಡುಗಳನ್ನು ವೃತ್ತಿಪರ ಗಾಯಕರಿಂದಲೇ ಹಾಡಿಸಲಾಗಿದೆ ಎಂದು ತಿಳಿದು ಬಂದಿದೆ. ಎಲ್ಲ ಹಾಡುಗಳನ್ನು ಬೆಂಗಳೂರಿನಲ್ಲೇ ರೆಕಾರ್ಡ್ ಮಾಡಿಸಲಾಗಿದೆ. ಇನ್ನು ಸಾಹಿತ್ಯ ರಚನೆಯಲ್ಲೂ ಎಲ್ಲಿಯೂ ಆಭಾಸವಾಗದ ರೀತಿಯಲ್ಲಿ ಹಾಡು ರಚಿಸಲಾಗಿದೆ. ರಾಗ-ತಾಳ-ಲಯಗಳು ಯಥಾವತ್ ಮೂಲ ಹಾಡಿನಂತೆಯೇ ಕೇಳುವಂತೆ ರಚಿಸಲಾಗಿದೆ. ಈ ಹಾಡುಗಳು ಕ್ಷೇತ್ರದ ಬಹುತೇಕರ ಮೊಬೈಲ್ ಗಳಲ್ಲೂ ಹರಿದಾಡುತ್ತಿವೆ.
ಸಿದ್ಧಯ್ಯಸ್ವಾಮಿ ಕುಕುನೂರು