ಪ್ರೀತಿ, ಪ್ರೇಮ, ಮದುವೆ, ಮಕ್ಕಳು- ಇದರ ಮಧ್ಯೆ ಗಲಾಟೆ, ಕಿತ್ತಾಟ… ಬಹುತೇಕ ಸಂಸಾರಗಳಲ್ಲಿ ಇದು ಈಗ ಸಾಮಾನ್ಯ ಎನ್ನಬಹುದು. ಇದೇ ವಿಚಾರವನ್ನು ಒಂದಷ್ಟು ವಿಭಿನ್ನವಾಗಿ ಜೊತೆಗೆ ಯೂತ್‌ಫುಲ್ ಆಗಿ ಹೇಳಿದರೆ ಹೇಗಿರಬಹುದು ಹೇಳಿ. ಈ ವಾರ ತೆರೆಕಂಡಿರುವ “ಬೈ ಟು ಲವ್’ ಚಿತ್ರದಲ್ಲಿ ನಿರ್ದೇಶಕ ಹರಿ ಸಂತೋಷ್ ಆಯ್ಕೆ ಮಾಡಿಕೊಂಡಿರುವ ಸಬೆjಕ್ಟ್ ಇದೇ ಹಾದಿಯಲ್ಲಿ ಸಾಗುತ್ತದೆ.
ಈ ಹಿಂದೆ “ಕಾಲೇಜ್ ಕುಮಾರ್’ ಚಿತ್ರದಲ್ಲೂ ಹೊಸ ಬಗೆಯ ಕಥೆಯನ್ನು ಕಟ್ಟಿಕೊಟ್ಟಿದ್ದ ನಿರ್ದೇಶಕ ಸಂತೋಷ್, ಈ ಬಾರಿ ಯುವ ಮನಸ್ಸುಗಳಿಗೆ ಹತ್ತಿರವಾಗುವ ಕಥೆಯನ್ನು ಆಯ್ಕೆ ಮಾಡಿಕೊಂಡು ಅದನ್ನು ಅಷ್ಟೇ ನೀಟಾಗಿ ಕಟ್ಟಿಕೊಟ್ಟಿದ್ದಾರೆ. ಈ ಚಿತ್ರ ಹೇಗೆ ಲವ್‌ಸ್ಟೋರಿಯೋ ಅದೇ ರೀತಿ ಫ್ಯಾಮಿಲಿ
ಸ್ಟೋರಿ ಕೂಡಾ. ಇಲ್ಲಿ ಕಥೆ ಇಷ್ಟವಾಗಲು ಕಾರಣ, ಇಂದಿನ ಯುವ ಜನತೆಯ ಮನಸ್ಸಿಗೆ ಹೆಚ್ಚು ಹತ್ತಿರವಾಗಿದೆ. ಪ್ರೀತಿ ಕೊಡುವ ಖುಷಿ, ಸಂಸಾರದ ಭಾರ, ಈ ನಡುವಿನ ಕಿತ್ತಾಟ … ಈ ಅಂಶವನ್ನು ಇಲ್ಲಿ ನೀಟಾಗಿ ಕಟ್ಟಿಕೊಡಲಾಗಿದೆ. ಮುಖ್ಯವಾಗಿ ಚಿತ್ರ ಲವ್‌ಸ್ಟೋರಿಯಾಗಿ ಹೇಗೆ ನಗು ಮೂಡಿಸುತ್ತೋ, ಅದೇ ರೀತಿ ಸೆಂಟಿಮೆಂಟ್ ಅಂಶಗಳ ಮೂಲಕ ಕಣ್ಣಂಚಲ್ಲಿ ನೀರು ತರಿಸುತ್ತದೆ.
ಎಲ್ಲಾ ಓಕೆ ಸಿನಿಮಾದ ಕಥೆ ಏನು ಎಂದು ನೀವು ಕೇಳಬಹುದು. ಒಂದೇ ರೀತಿಯ ಮನಸ್ಥಿತಿಯುಳ್ಳ ಇಬ್ಬರು ಪ್ರೇಮಿಗಳ ನಡುವಿನ ಕಥೆ. ಜೊತೆಗೊಂದು ಮುದ್ದಾದ ಮಗು, ನಡುವೆ ಖುಷಿ, ಆ ನಂತರ ಸಂಕಟ, ಗೊಂದಲ… ಇದಕ್ಕೆಲ್ಲಾ ಕಾರಣ ಏನು ಎಂಬ ಕುತೂಹಲ ನಿಮಗಿದ್ದರೆ ನೀವು “ಬೈ ಟು ಲವ್’ ಚಿತ್ರವನ್ನು ಆರಾಮವಾಗಿ ನೋಡಬಹುದು. ಚಿತ್ರದಲ್ಲಿ ಹೆಚ್ಚು ಪಾತ್ರಗಳಿಲ್ಲ. ಅನಾವಶ್ಯಕವಾಗಿ ಯಾವುದೇ ಪಾತ್ರವನ್ನು ಪ್ರವೇಶ ಮಾಡಿಸದ ಪರಿಣಾಮ ಸಿನಿಮಾ ಸರಾಗವಾಗಿ ಸಾಗುತ್ತದೆ. ಒಂದು ಕ್ಯೂಟ್ ಜೊಡಿ ಮುದ್ದಾಟ, ಕಿತ್ತಾಟ ಖುಷಿ ಇಷ್ಟವಾಗುತ್ತದೆ.
ನಾಯಕ ಧನ್ವೀರ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆ್ಯಕ್ಷನ್‌ಗಿಂತ ಇಲ್ಲಿ ನಟನೆಗೆ ಹೆಚ್ಚು ಒತ್ತು ನೀಡಲಾಗಿದೆ ಕೂಡಾ. ನಾಯಕಿ ಶ್ರೀಲೀಲಾ ಅವರ ಮತ್ತೂಮ್ಮೆ ಭರವಸೆಮೂಡಿಸಿದ್ದಾರೆ. ಕನ್ನಡದಲ್ಲಿ ನಾಯಕಿಯರ ಕೊರತೆ ಕಾಡುತ್ತಿರುವ ಸಮಯದಲ್ಲಿಶ್ರೀಲೀಲಾ ತಮ್ಮ ಪರ್‌ಫಾರ್ಮೆನ್ಸ್ ಮೂಲಕ ಗಮನ ಸೆಳೆದಿದ್ದಾರೆ. ಉಳಿದಂತೆ ಸಾಧುಕೋಕಿಲ,ರಂಗಾಯಣ ರಘು, ಅಚ್ಯುತ್ ನಟಿಸಿದ್ದಾರೆ. ಅಜನೀಶ್ ಹಾಡುಗಳು “ಲವ್’ ಹೆಚ್ಚಿಸಿವೆ.
…………………………………………………………………………………………………………………………
ಚಿತ್ರ: ಬೈ ಟು ಲವ್
ರೇಟಿಂಗ್: ***
ನಿರ್ಮಾಣ: ಕೆವಿಎನ್ ಪ್ರೊಡಕ್ಷನ್ಸ್
ನಿರ್ದೇಶನ: ಹರಿ ಸಂತೋಷ್
ತಾರಾಗಣ: ಧನ್ವೀರ್, ಶ್ರೀಲೀಲಾ, ಸಾಧು ಕೋಕಿಲ, ಶಿವರಾಜ್ ಕೆ.ಆರ್.ಪೇಟೆ, ರಂಗಾಯಣ ರಘು ಮತ್ತಿತರರು.
-ರವಿ ಪ್ರಕಾಶ್ ರೈ