Advertisement

ಚಿಕಿತ್ಸೆಗಾಗಿ ಡಯಾಲಿಸಿಸ್‌ ರೋಗಿಗಳ ಪರದಾಟ

04:57 PM Oct 19, 2022 | Team Udayavani |

ಬಾಗೇಪಲ್ಲಿ: ಮೂತ್ರಪಿಂಡ (ಕಿಡ್ನಿ) ಸಮಸ್ಯೆ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್‌ ಸೌಲಭ್ಯ ಸಿಗದ ಕಾರಣ ಗಡಿ ಭಾಗದಲ್ಲಿರುವ ಆಂಧ್ರಪ್ರದೇಶದ ಹಿಂದೂಪುರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಗಳಿಗೆ ತೆರಳಿ ಡಯಾಲಿಸಿಸ್‌ ಚಿಕಿತ್ಸೆ ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

Advertisement

ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನೂತನ ಡಯಾಲಿಸಿಸ್‌ ಘಟಕವನ್ನು ಸ್ಥಾಪಿಸಿ ಉಚಿತ ಸೇವೆಗೆ ಚಾಲನೆ ನೀಡಿ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಮೂತ್ರ ಪಿಂಡ ಕಾಯಿಲೆಯ ರೋಗಿಗಳಿಗೆ ಔಷಧ ನೀಡಿ ಡಯಾಲಿಸಿಸ್‌ ಸೇವೆ ನೀಡುತ್ತಿದ್ದರು. ಆದರೆ ಸಾರ್ವಜನಿಕ ಅಸ್ಪತ್ರೆ ಆಡಳಿತ ಮಂಡಳಿ ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಸಮರ್ಪಕ
ನಿರ್ವಹಣೆ ಮಾಡಾದ ಹಿನ್ನಲೆಯಲ್ಲಿ ಉಚಿತ ಡಯಾಲಿಸಿಸ್‌ ಘಟಕಕ್ಕೆ ತಿಂಗಳಿನಿಂದ ಬೀಗ ಜಡಿಯಲಾಗಿದೆ. ಬಡವರ ಸೇವೆಗಾಗಿ ತಾಲೂಕು ಕೇಂದ್ರದಲ್ಲಿ ಉಚಿತ ಡಯಾಲಿಸಿಸ್‌ ಘಟಕ ಸ್ಥಾಪನೆಗೊಂಡಿದ್ದರೂ ಬಡಪಾಯಿಗಳಿಗೆ ಅದರ ಸೌಲಭ್ಯ ಸಿಗದಂತಾಗಿದೆ.

ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಬಡ ರೋಗಿಗಳು ಎರಡು ದಿನಗಳಿಗೊಮ್ಮೆ ಡಯಾಲಿಸಿಸ್‌ ಮಾಡಿಕೊಳ್ಳುವುದು ಕಡ್ಡಾಯವಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಉಚಿತ ಡಯಾಲಿಸಿಸ್‌ ಘಟಕಕ್ಕೆ ಬೀಗ ಹಾಕಿರುವ ಕಾರಣ ರೋಗಿಗಳು ಸಾವಿರಾರು ರೂ. ಖರ್ಚು ಮಾಡಿ ನಗರ ಅಥವಾ ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಚಿಕಿತ್ಸೆ ಮಾಡಿಸಿಕೊಳ್ಳಬೇಕಾಗಿದೆ. ಇದರಿಂದ ರೋಗಿಗಳ ಜೇಬಿಗೆ ನಿತ್ಯ ಕತ್ತರಿ ಬೀಳುವಂತಾಗಿದೆ.

ಮೂತ್ರ ಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಒಬ್ಬ ರೋಗಿ ಹೊರಗಡೆ ಹೋಗಿ ಡಯಾಲಿಸಿಸ್‌ ಮಾಡಿಸಿಕೊಳ್ಳಲು ಸಾರಿಗೆ ಮತ್ತು ಚಿಕಿತ್ಸೆ ವೆಚ್ಚ ಸೇರಿ ಒಂದು ಬಾರಿಗೆ ಸುಮಾರು 2-3 ಸಾವಿರ ರೂ. ವೆಚ್ಚ ತಗುಲಲಿದೆ. ತಿಂಗಳ ಚಿಕಿತ್ಸೆಗಾಗಿ ಒಬ್ಬ ರೋಗಿ ಕನಿಷ್ಠ ಎಂದರೆ 30-40 ಸಾವಿರ ರೂ ವೆಚ್ಚ ಮಾಡಬೇಕಾಗುತ್ತದೆ. ನಿತ್ಯ ಆರ್ಥಿಕ ಸಮಸ್ಯೆ ಎದುರುಸುತ್ತಿರುವ ಕೂಲಿ ಕಾರ್ಮಿಕರು, ರೈತರು ಹಾಗೂ ನಿರ್ಗತಿಕರು ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಚಿಕಿತ್ಸೆ ಮಾಡಿಸಿಕೊಳ್ಳಲು ಹಣವಿಲ್ಲದೆ ಪರಿತಪಿಸುವಂತಾಗಿದೆ.

ತಾಲೂಕು ವ್ಯಾಪ್ತಿಯಲ್ಲಿರುವ ವಿವಿಧ ಆರೋಗ್ಯ ಕೇಂದ್ರಗಳಿಂದ ಲಭ್ಯವಾಗಿರುವ ಮಾಹಿತಿಯಂತೆ 30ಕ್ಕೂ ಹೆಚ್ಚು ರೋಗಿಗಳು ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದು ಡಯಾಲಿಸಿಸ್‌ ಚಿಕಿತ್ಸೆಗಾಗಿ ನಿತ್ಯ ಅಳೆದಾಡುತ್ತಿದ್ದಾರೆ.

Advertisement

ಪ್ರತಿಬಾರಿ 2 ಸಾವಿರ ಖರ್ಚು
ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಘಟಕದಲ್ಲಿ ಸೇವೆ ಇಲ್ಲದ ಕಾರಣ ಎರಡು ದಿನಕ್ಕೊಮ್ಮೆ ಬಿಳ್ಳೂರು ಗ್ರಾಮದಿಂದ 70 ಕಿ.ಮೀ. ದೂರದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಹೋಗಿ ಡಯಾಲಿಸಿಸ್‌ ಮಾಡಿಸಿಕೊಂಡು ವಾಪಸ್‌ ಬರಬೇಕಿದೆ. ಚಿಕ್ಕಬಳ್ಳಾಪುರಕ್ಕೆ ಹೋಗಲು ಸೂಕ್ತ ಬಸ್‌ ಸೌಲಭ್ಯ ಇಲ್ಲದ ಕಾರಣ 2 ಸಾವಿರ ರೂ. ಕೊಟ್ಟು ಬಾಡಿಗೆ ಕಾರಿನಲ್ಲಿ ಹೋಗಬೇಕು. ಉಚಿತ ಆರೋಗ್ಯ ಸೇವೆಗಳಿಗಾಗಿ ಸರ್ಕಾರ ನೀಡಿರುವ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಹೆಲ್ತ್‌ ಕಾರ್ಡ್‌ ಇದ್ದರೂ ಯಾವುದೇ ರೀತಿ ಪ್ರಯೋಜನ ಇಲ್ಲದಂತಾಗಿದೆ.? ಎಂದು ಹೆಸರು ಹೇಳಲು ಇಚ್ಚಿಸದ ಬಾಗೇಪಲ್ಲಿಯ ಬಿಳ್ಳೂರು ಗ್ರಾಮದ ಡಯಾಲಿಸಿಸ್‌ ರೋಗಿ ತಿಳಿಸುತ್ತಾರೆ.

ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರುವ ಡಯಾಲಿಸಿಸ್‌ ಘಟಕ ನಿರ್ವಹಣೆಗೆ ಬೇಕಾಗಿರುವ ಆಗತ್ಯ ಸಿಬ್ಬಂದಿ ಇಲ್ಲದ ಕಾರಣ ನಿರ್ವಹಣೆ ಮಾಡಲು ಸಾಧ್ಯ ವಾಗುತ್ತಿಲ್ಲ. ಡಯಾಲಿಸಿಸ್‌ ಘಟಕದಲ್ಲಿ ಸಣ್ಣ ಪುಟ್ಟ ತಾಂತ್ರಿಕ ದೋಷಗಳು ಕಂಡು ಬಂದಿದ್ದು ಶೀಘ್ರ ಸರಿಪಡಿಸಿ ಮೂತ್ರಪಿಂಡ ರೋಗಿಗಳಿಗೆ ಸೇವೆ ಪ್ರಾರಂಭಿಸಲಾಗುತ್ತದೆ.
●ಡಾ.ರಾಮಾಂಜನೇಲು, ಬಾಗೇಪಲ್ಲಿ
ಸಾರ್ವಜನಿಕ ಅಸ್ಪತ್ರೆ ಆಡಳಿತಾಧಿಕಾರಿ

●ಆರ್‌. ಎಂ. ಗೋಪಾಲ ರೆಡ್ಡಿ, ಬಾಗೇಪಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next