ಚಿಕ್ಕಬಳ್ಳಾಪುರ: ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ- 2009ರನ್ವಯ 6-14 ವಯೋಮಾನದ ಎಲ್ಲಾ ಮಕ್ಕಳಿಗೆ ತಾರತಮ್ಯವಿಲ್ಲದೇ ಕಡ್ಡಾಯ, ಉಚಿತ ಹಾಗೂ ಗುಣ ಮಟ್ಟದ ಪ್ರಾಥಮಿಕ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು ಜೂ.1ರಿಂದ 30ರ ವರೆಗೂ ಸಾಮಾನ್ಯ ದಾಖಲಾತಿ ಆಂದೋಲನಾ ಹಮ್ಮಿಕೊಳ್ಳ ಲಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಜಿ.ನಾಗೇಶ್ ತಿಳಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿ ರುವ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 5 ವರ್ಷ 10 ತಿಂಗಳು ತುಂಬಿದ ಮಕ್ಕಳನ್ನು ನೇರವಾಗಿ ಶಾಲೆಗೆ ದಾಖಲಿಸಲು, ಶಾಲೆಗೆ ಬರುತ್ತಿರುವ ಎಲ್ಲಾ ಮಕ್ಕಳನ್ನು ಶಾಲಾ ಪ್ರಾರಂಭದ ದಿನದಂದೇ ಶಾಲೆಗೆ ಹಾಜರಾಗುವಂತೆ ಮಾಡಲು ಆಂದೋಲನಾ ನಡೆಸಲಾಗುತ್ತಿದೆ.
ವಿವಿಧ ಕಾರಣಗಳಿಂದ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸದೇ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತರುವ ಉದ್ದೇಶದಿಂದ ಮೇ 20 ರಿಂದ ಮೇ 31 ರವರೆಗೆ ಜಿಲ್ಲೆಯಲ್ಲಿ ವಿಶೇಷ ದಾಖ ಲಾತಿ ಆಂದೋಲನ ನಡೆಸಿದ್ದು, ಅದೇ ರೀತಿ ಜೂನ್ 01 ರಿಂದ ಜೂನ್ 30 ರವರೆಗೆ ಸಾಮಾನ್ಯ ದಾಖಲಾತಿ ಆಂದೋಲನಾ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.ಮಕ್ಕಳ ಶಾಲಾ ದಾಖಲಾತಿ ಆಂದೋಲ ನದ ಪ್ರಯುಕ್ತ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ವಿವಿಧ ಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು, ಸಾರ್ವಜನಿಕರು, ಜನಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿ ಪೋಷಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ದಾಖಲಿಸುವಲ್ಲಿ ಪೂರ್ಣ ಪ್ರಮಾಣದ ಸಹಕಾರ ನೀಡಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗೇಶ್ ಕೋರಿದ್ದಾರೆ.