Advertisement

ಕ್ಷಯ ಪತ್ತೆಗೆ ಜಿಲ್ಲಾದ್ಯಂತ ಆಂದೋಲನ

09:09 PM Jul 15, 2019 | Lakshmi GovindaRaj |

ಮೈಸೂರು: ಕೇಂದ್ರ ಸರ್ಕಾರದ ಆಶಯದಂತೆ 2025ರೊಳಗೆ ಭಾರತವನ್ನು ಕ್ಷಯರೋಗ ಮುಕ್ತ ರಾಷ್ಟ್ರವನ್ನಾಗಿಸಲು ಆರೋಗ್ಯ ಇಲಾಖೆಯ ಜೊತೆ ಎಲ್ಲಾ ಇಲಾಖೆಗಳು ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್‌.ವೆಂಕಟೇಶ್‌ ಹೇಳಿದರು.

Advertisement

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಹಾಗೂ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ವತಿಯಿಂದ ಹಮ್ಮಿಕೊಂಡಿರುವ ಕ್ಷಯರೋಗ ಪತ್ತೆ ಆಂದೋಲನಕ್ಕೆ ಅಶೋಕಪುರಂನಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಮೈಸೂರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಇಂದಿನಿಂದ ಜು.27ರವರೆಗೆ ಮನೆ-ಮನೆಗೆ ಭೇಟಿ ನೀಡಲಾಗುವುದು. “ನಾಯಕರು ಬೇಕಾಗಿದ್ದಾರೆ. ಕ್ಷಯರೋಗ ಮುಕ್ತ ವಿಶ್ವ ನಿರ್ಮಾಣಕ್ಕೆ, ಕ್ಷಯರೋಗವನ್ನು ನಿರ್ಮೂಲನೆಗೊಳಿಸಿ-ಇತಿಹಾಸ ನಿರ್ಮಿಸಿ’ ಎಂಬ ಘೋಷ ವಾಕ್ಯದೊಂದಿಗೆ ಆಂದೋಲನ ಪ್ರಾರಂಭಿಸಲಾಗಿದೆ ಎಂದರು.

ತಂಡ, ಸಿಬ್ಬಂದಿ ನಿಯೋಜನೆ: ಜಿಲ್ಲೆಯಾದ್ಯಂತ ಒಟ್ಟು 371 ಗಂಪನ್ನು ಗುರುತಿಸಲಾಗಿದೆ, ಒಟ್ಟು 1,19,978 ಮನೆಗಳಿಗೆ ಭೇಟಿ ನೀಡಲಿದ್ದು, 5,99,893 ಜನಸಂಖ್ಯೆಯಲ್ಲಿ ಕ್ಷಯರೋಗ ಪತ್ತೆ ಹಚ್ಚಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರಲ್ಲಿ ಕರ್ತವ್ಯಕ್ಕೆ 1328 ತಂಡಗಳನ್ನು ಆಯ್ಕೆ ಮಾಡಿದ್ದು, 2670 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಮಾತಿ ನೀಡಿದರು.

ಕ್ಷಯರೋಗವು ಮೈಕೋಬ್ಯಾಕ್ಟೀರಿಯಂ ಟ್ಯೂಬರ್‌ ಕ್ಯೂಲೋಸಿಸ್‌ ಎಂಬ ಬ್ಯಾಕ್ಟೀರಿಯಾದಿಂದ ಬರುವ ಸೋಂಕು ರೋಗವಾಗಿದ್ದು, ಕೊಳಗೇರಿಗಳಲ್ಲಿ ವಾಸಿಸುವ ಪೌರ ಕಾರ್ಮಿಕರು, ಗಾರ್ಮೆಂಟ್ಸ್‌ ಹಾಗೂ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಬರುವ ಸಾಧ್ಯತೆಯಿದ್ದು ಅಂತಹವರನ್ನು ಪರೀಕ್ಷಿಸಲಾಗುವುದು ಎಂದು ಅವರು ತಿಳಿಸಿದರು.

Advertisement

ಉಚಿತ ಚಿಕಿತ್ಸೆ: ಕ್ಷಯರೋಗಿಗಳು ಕೆಮ್ಮುವಾಗ ಮತ್ತು ಸೀನುವಾಗ ಬಾಯಿ ಮತ್ತು ಮೂಗಿಗೆ ಕರವಸ್ತ್ರವನ್ನು ಇಟ್ಟುಕೊಳ್ಳಬೇಕು, ರೋಗಿಯು ಕಫ‌ವನ್ನು ಮನಸ್ಸಿಗೆ ಬಂದ ಕಡೆ ಉಗಿಯಬಾರದು, ನವಜಾತ ಶಿಶುಗಳಿಗೆ ಬಿಸಿಜಿ ಲಸಿಕೆ ಹಾಕಿಸಬೇಕು ಹಾಗೂ ಅತಿಯಾದ ಕೆಮ್ಮು ಹಾಗೂ ಕಫ‌ ಇರುವ ವ್ಯಕ್ತಿಗಳು ಪಕ್ಕದಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಉಚಿತ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ಮಾಜಿ ಮೇಯರ್‌ ಪುರುಷೋತ್ತಮ್‌, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ರವಿ ಪಿ., ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹಮ್ಮದ್‌ ಸಿರಾಜ್‌ ಅಹಮ್ಮದ್‌, ಅಶೋಕಪುರಂ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದೇವಿಪ್ರಸಾದ್‌ ಮತ್ತಿತರರು ಹಾಜರಿದ್ದರು.

ಈ ಲಕ್ಷಣ ಕಂಡರೆ ಚಿಕಿತ್ಸೆ ಪಡೆಯಿರಿ: ಎರಡು ವಾರ ಹಾಗೂ ಅದಕ್ಕಿಂತ ಮೇಲ್ಪಟ್ಟು ಸತತವಾಗಿ ಕೆಮ್ಮು, ಜ್ವರ ಹಾಗೂ ಸಂಜೆ ವೇಳೆ ಅತಿಯಾದ ಜ್ವರ, ಎದೆನೋವು, ತೂಕ ಕಡಿಮೆಯಾಗುವುದು, ಹಸಿವು ಆಗದಿರುವುದು ಮತ್ತು ಕಫ‌ದಲ್ಲಿ ರಕ್ತ ಬೀಳುವುದು ಕ್ಷಯ ರೋಗದ ಪ್ರಮುಖ ಲಕ್ಷಣವಾಗಿದ್ದು, ಇಂತಹ ಲಕ್ಷಣಗಳು ಕಂಡುಬಂದರೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದು ಡಾ.ಆರ್‌.ವೆಂಕಟೇಶ್‌ ಸಲಹೆ ನೀಡಿದರು.

ಕ್ಷಯರೋಗದ ಪರೀಕ್ಷೆ ಹಾಗೂ ಚಿಕಿತ್ಸೆ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲೂ ಉಚಿತ ಮತ್ತು ಖಚಿತವಾಗಿ ದೊರೆಯುತ್ತದೆ. ರೋಗಿಗಳ ಪೌಷ್ಟಿಕ ಆಹಾರಕ್ಕಾಗಿ ತಿಂಗಳಿಗೆ 500 ರೂ. ಪ್ರೋತ್ಸಾಹಧನ ಸಹ ನೀಡಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next