Advertisement

ಬಾಯಿ ಹುಣ್ಣು ಪರೀಕ್ಷೆ ಮತ್ತು ನಿರ್ವಹಣೆಯ ಮಾರ್ಗದರ್ಶಿ

01:34 PM Nov 01, 2020 | Suhan S |

ಬಾಯಿ ಅಥವಾ ವಸಡುಗಳ ತಳದಲ್ಲಿ ಕಾಣಿಸಿಕೊಳ್ಳುವ ನೋವು ಸಹಿತವಾದ ಸಣ್ಣ ಹುಣ್ಣುಗಳನ್ನು ಬಾಯಿ ಹುಣ್ಣು ಅಥವಾ ಮೌತ್‌ ಅಲ್ಸರ್‌ ಎಂಬುದಾಗಿ ಕರೆಯಲಾಗುತ್ತದೆ. ಆಹಾರ ಸೇವನೆ, ಕುಡಿಯುವುದು ಮತ್ತು ಮಾತನಾಡುವುದಕ್ಕೆ ಇವು ಅಡಚಣೆ ಉಂಟು ಮಾಡುತ್ತವೆ. ಮಹಿಳೆಯರು, ಹದಿಹರೆಯದವರು ಮತ್ತು ಬಾಯಿ ಹುಣ್ಣುಗಳ ಕುಟುಂಬ ಇತಿಹಾಸ ಇರುವವರಿಗೆ ಬಾಯಿ ಹುಣ್ಣುಗಳು ಉಂಟಾಗುವ ಅಪಾಯ ಹೆಚ್ಚಿರುತ್ತದೆ. ಬಾಯಿ ಹುಣ್ಣುಗಳು ಸಾಂಕ್ರಾಮಿಕವಲ್ಲ ಮತ್ತು ಸಾಮಾನ್ಯವಾಗಿ ಒಂದೆರಡು ವಾರಗಳಲ್ಲಿ ತಾವಾಗಿ ವಾಸಿಯಾಗುತ್ತವೆ. ಆದರೆ ತಿಂಗಳುಗಳ ಕಾಲ ಗುಣವಾಗದೆ ಉಳಿದರೆ ಅದು ಕ್ಯಾನ್ಸರ್‌ನ ಲಕ್ಷಣವಾಗಿರಬಹುದಾಗಿದ್ದು, ದಂತ ವೈದ್ಯರ ಬಳಿ ಪರೀಕ್ಷಿಸಿಕೊಂಡು ಸಲಹೆ ಪಡೆಯುವುದು ಒಳಿತು.

Advertisement

ಬಾಯಿಹುಣ್ಣು  ಉಂಟಾಗಲು ಕಾರಣವೇನು? :  ಬಾಯಿಹುಣ್ಣುಗಳು ಉಂಟಾಗುವುದಕ್ಕೆ ನಿರ್ದಿಷ್ಟ ಕಾರಣ ಇಲ್ಲ. ಆದರೆ ಕೆಲವು ಅಂಶಗಳು ಮತ್ತು ಪ್ರಚೋದಕಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ:

  • ದಂತ ವೈದ್ಯಕೀಯ ಚಿಕಿತ್ಸೆಯ ಸಂದರ್ಭದಲ್ಲಿ ಉಂಟಾದ ಸಣ್ಣ ಗಾಯ, ಬಲವಾಗಿ ಹಲ್ಲುಜ್ಜುವುದು ಅಥವಾ ಅಕಸ್ಮಾತ್‌ ಕಚ್ಚಿಕೊಂಡಿರುವುದು.
  • ಸೋಡಿಯಂ ಲಾರಿಲ್‌ ಸಲ್ಫೆಟ್‌ ಹೊಂದಿರುವ ಟೂತ್‌ಪೇಸ್ಟ್‌ ಮತ್ತು ಬಾಯಿ ಮುಕ್ಕಳಿಸುವ ದ್ರಾವಣದ ಬಳಕೆ.
  • ಸ್ಟ್ರಾಬೆರಿ, ಸಿಟ್ರಸ್‌ ಹಣ್ಣುಗಳು ಮತ್ತು ಅನಾನಸಿನಂಥ‌ವು ಹಾಗೂ ಚಾಕಲೇಟ್‌ ಮತ್ತು ಕಾಫಿಯಂತಹ ಇತರ ಪ್ರಚೋದಕ ಆಹಾರಗಳಿಗೆ ಸೂಕ್ಷ್ಮ ಸಂವೇದನೆ.
  • ಆವಶ್ಯಕ ವಿಟಾಮಿನ್‌ಗಳ ಕೊರತೆ, ಅದರಲ್ಲೂ ಬಿ-12, ಫೊಲೇಟ್‌ ಮತ್ತು ಕಬ್ಬಿಣಾಂಶ.
  • ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳಿಂದ ಅಲರ್ಜಿ.
  • ಹಲ್ಲು ಸರಿಪಡಿಸಲು ಹಾಕಿರುವ ಬ್ರೇಸ್‌.
  • ಋತುಸ್ರಾವದ ಸಂದರ್ಭದಲ್ಲಿ ಹಾರ್ಮೋನ್‌ ಬದಲಾವಣೆ.
  • ಭಾವನಾತ್ಮಕ ಒತ್ತಡ ಅಥವಾ ನಿದ್ರಾಹೀನತೆ.
  • ಬ್ಯಾಕ್ಟೀರಿಯಾ, ವೈರಾಣು ಅಥವಾ ಫ‌ಂಗಲ್‌ ಸೋಂಕು.

ಬಾಯಿಹುಣ್ಣುಗಳು ಹೆಚ್ಚು ಗಂಭೀರವಾದ ಮತ್ತು ವೈದ್ಯಕೀಯ ನೆರವು, ನಿರ್ವಹಣೆ ಅಗತ್ಯವಾಗಿರುವ ಕೆಲವು ಆರೋಗ್ಯ ಸಮಸ್ಯೆಗಳ ಸೂಚನೆಯೂ ಆಗಿರಬಹುದು. ಅವುಗಳೆಂದರೆ:

  • ಸೆಲಿಯಾಕ್‌ ಕಾಯಿಲೆ (ದೇಹವು ಗಲುಟೆನ್‌ ಸಹಿಸಿಕೊಳ್ಳದ ಸಮಸ್ಯೆ).
  • ಉದರದ ಉರಿಯೂತ ಕಾಯಿಲೆ (ಐಬಿಡಿ- ಇನ್‌ಫ್ಲಮೇಟರಿ ಬವೆಲ್‌ ಡಿಸೀಸ್‌).
  • ಮಧುಮೇಹ.
  • ಬೆಚೆಟ್ಸ್‌ ಡಿಸೀಸ್‌ (ದೇಹವಿಡೀ ಉರಿಯೂತ ಉಂಟಾಗುವ ಕಾಯಿಲೆ).
  • ದೇಹದ ರೋಗನಿರೋಧಕ ವ್ಯವಸ್ಥೆಯು ವೈರಾಣು ಅಥವಾ ಬ್ಯಾಕ್ಟೀರಿಯಾಗಳ ಬದಲಾಗಿ ಬಾಯಿಯ ಅಂಗಾಂಶಗಳ ವಿರುದ್ಧವೇ ದಾಳಿ ಮಾಡುವ ರೋಗ ನಿರೋಧಕ ಶಕ್ತಿಯ ತಪ್ಪು ಕಾರ್ಯಾಚರಣೆ ಸಮಸ್ಯೆ.
  • ಎಚ್‌ಐವಿ/ ಏಡ್ಸ್‌.
  • ಗುಣ ಕಾಣದ ಬಾಯಿ ಹುಣ್ಣುಗಳು ಬಾಯಿಯ ಕ್ಯಾನ್ಸರ್‌ನ ಲಕ್ಷಣವೂ ಆಗಿರಬಹುದು.

ಬಾಯಿ ಹುಣ್ಣುಗಳಿಗೆ ಸಂಬಂಧಿಸಿದ ಲಕ್ಷಣಗಳೇನು? ಬಾಯಿ ಹುಣ್ಣುಗಳಲ್ಲಿ ಪ್ರಧಾನವಾಗಿ ಮೂರು ವಿಧಗಳಿವೆ. ಅವುಗಳೆಂದರೆ, ಲಘು, ಗಂಭೀರ ಮತ್ತು ಹರ್ಪೆಟಿಫಾರ್ಮ್.

ಲಘು (ಮೈನರ್‌) :  ಲಘು ಬಾಯಿ ಹುಣ್ಣುಗಳು ಸಣ್ಣದಾದ, ಮೊಟ್ಟೆಯ ಆಕಾರದವಾಗಿದ್ದು, ಒಂದೆರಡು ವಾರಗಳಲ್ಲಿ ತಾವಾಗಿ ವಾಸಿಯಾಗುತ್ತವೆ, ಕಲೆ ಉಳಿಯುವುದಿಲ್ಲ.

Advertisement

ಗಂಭೀರ (ಮೇಜರ್‌) :

ಇವು ಲಘು ಬಾಯಿ ಹುಣ್ಣುಗಳಿಗಿಂತ ಆಳವಾಗಿದ್ದು, ದೊಡ್ಡವಾಗಿರುತ್ತವೆ. ಇವುಗಳ ಅಂಚುಗಳು ಅವ್ಯವಸ್ಥಿತವಾಗಿದ್ದು, ಗುಣವಾಗಲು ಆರು ವಾರಗಳ ವರೆಗೆ ಸಮಯ ಹಿಡಿಯುತ್ತದೆ. ಇವುಗಳ ಗಾಯಕಲೆ ದೀರ್ಘ‌ ಸಮಯದ ವರೆಗೆ ಇರಬಹುದು.

ಹರ್ಪೆಟಿಫಾರ್ಮ್ :  ಇವು ಸೂಜಿಮೊನೆ ಗಾತ್ರದ ಹುಣ್ಣುಗಳಾಗಿದ್ದು, 10ರಿಂದ 100 ಹುಣ್ಣುಗಳ ಸಮೂಹವಾಗಿ ಉಂಟಾಗುತ್ತವೆ. ಇವು ವಯಸ್ಕರಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು. ಇವುಗಳ ಅಂಚುಗಳು ಕೂಡ ಅವ್ಯವಸ್ಥಿತವಾಗಿದ್ದು, ಗಾಯವುಳಿಸದೆ ಒಂದೆರಡು ವಾರಗಳಲ್ಲಿ ವಾಸಿಯಾಗುತ್ತವೆ.

 

ಡಾ| ಆನಂದ್‌ದೀಪ್‌ ಶುಕ್ಲಾ

ಓರಲ್‌ ಮತ್ತು ಮ್ಯಾಕ್ಸಿಲೊಫೇಶಿಯಲ್‌ ಸರ್ಜರಿ ವಿಭಾಗ,

ಮಣಿಪಾಲ ದಂತವೈದ್ಯಕೀಯ ಮಹಾವಿದ್ಯಾಲಯ,

ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next