Advertisement
ಪಾಕಿಸ್ಥಾನದಲ್ಲಿ ಇದು ಶೇ.10 ಆಗಿದ್ದರೆ, ಭಾರತದಲ್ಲಿ ಇನ್ನೂ ಹೆಚ್ಚು, ಸುಮಾರು ಶೇ.45ರಷ್ಟಿದೆ. 2004ರಿಂದ 2009ರ ವರೆಗಿನ ಅವಧಿಯಲ್ಲಿ ಬಾಯಿ ಮತ್ತು ಒರೊಫರಂಜಿಯಲ್ ಭಾಗದ ಮೂರು ಲಕ್ಷದಷ್ಟು ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ ಏಳು ಸಾವಿರಕ್ಕೂ ಅಧಿಕ ಬಾಯಿಯ ಕ್ಯಾನ್ಸರ್ ರೋಗಿಗಳು ಮೃತಪಟ್ಟಿದ್ದಾರೆ.
Related Articles
ಭಾರತದಲ್ಲಿ ಬಾಯಿಯ ಕ್ಯಾನ್ಸರ್ ಉಂಟಾಗುವುದಕ್ಕೆ ಕಾರಣವಾಗುವ ಅತಿದೊಡ್ಡ ಅಪಾಯಾಂಶಗಳು ಎಂದರೆ ತಂಬಾಕು ಸೇವನೆ ಮತ್ತು ಮದ್ಯಪಾನವಾಗಿದೆ. ಈ ಅಪಾಯಾಂಶಗಳು ಸ್ವತಂತ್ರವಾಗಿದ್ದರೂ ಅವುಗಳ ಕಾರ್ಯಚಟುವಟಿಕೆ ಮತ್ತು ಪರಿಣಾಮಗಳು ಸಂಯೋಜಿತವಾಗಿರುತ್ತವೆ. ಬಾಯಿಯ ಕ್ಯಾನ್ಸರ್‌ನ ಒಟ್ಟು ಪ್ರಕರಣಗಳಲ್ಲಿ ತಂಬಾಕು ಸೇವನೆ ಅಥವಾ ಧೂಮಪಾನವು ಶೇ.75 ಪ್ರಕರಣಗಳಿಗೆ ಕಾರಣವಾಗಿರುತ್ತದೆ. ಧೂಮಪಾನ ಮಾಡದೆ ಇರುವುದಕ್ಕೆ ಹೋಲಿಸಿದರೆ ಧೂಮಪಾನ ಮಾಡುವುದರಿಂದ ಬಾಯಿಯ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವು ಆರು ಪಟ್ಟುಗಳಷ್ಟು ಹೆಚ್ಚುತ್ತದೆ. ಮದ್ಯಪಾನ ಮಾಡುವವರಿಗೆ ಮದ್ಯಪಾನ ಮಾಡದೆ ಇರುವವರಿಗಿಂತ ಬಾಯಿಯ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯ ಆರು ಪಟ್ಟು ಹೆಚ್ಚಿರುತ್ತದೆ. ಮದ್ಯಪಾನ ಮತ್ತು ಧೂಮಪಾನ ಎರಡೂ ಅಭ್ಯಾಸಗಳನ್ನು ಹೊಂದಿದ್ದರೆ ಈ ಅಪಾಯ ಹದಿನೈದು ಪಟ್ಟು ಏರುತ್ತದೆ.
Advertisement
ಬಾಯಿಯ ಕ್ಯಾನ್ಸರ್‌ನ ಸಾಂಪ್ರದಾಯಿಕ ಅಪಾಯಾಂಶಗಳಲ್ಲಿ ಧೂಮಪಾನ ಮತ್ತು ಮದ್ಯಪಾನ ಪ್ರಮುಖವಾದವುಗಳಾದರೂ ಕೆಲವು ಜನಾಂಗಗಳಲ್ಲಿ ಅಡಿಕೆ ಜಗಿಯುವಂತಹ ಇತರ ಅಪಾಯ ಕಾರಣಗಳನ್ನೂ ನಿರ್ಲಕ್ಷಿಸಲಾಗದು. ಅಡಿಕೆ ಜಗಿಯುವುದು ಭಾರತ ಮತ್ತು ತೈವಾನೀ ಜನಸಮುದಾಯಗಳಲ್ಲಿ ಸಾಮಾನ್ಯ ಹವ್ಯಾಸವಾಗಿದ್ದು, ಇದು ಕೂಡ ಬಾಯಿಯ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸುತ್ತದೆ. ಅಡಿಕೆ, ಮಾದಕ ದ್ರವ್ಯಗಳು ಹಾಗೂ ಕ್ಯಾನಬಿ ಕೂಡ ಬಾಯಿಯ ಕ್ಯಾನ್ಸರ್ ಉಂಟು ಮಾಡಬಲ್ಲ ಅಪಾಯ ಸಾಧ್ಯತೆಗಳಾಗಿವೆ. ಹಿರಿಯ ವಯಸ್ಕ ಗಂಡಸರಲ್ಲಿ, ಕೆಳ ಸಾಮಾಜಿಕ, ಆರ್ಥಿಕ ಸ್ತರದ ಗುಂಪುಗಳಲ್ಲಿ ಮತ್ತು ಜನಾಂಗೀಯವಾಗಿ ಅಲ್ಪಸಂಖ್ಯಾಕರಲ್ಲಿ ಒಎಸ್‌ಸಿಸಿ ಉಂಟಾಗುವ ಸಂಭಾವ್ಯ ಹೆಚ್ಚಿರುತ್ತದೆ. ಇತರ ಕೆಲವು ಅಂಶಗಳು ಕೂಡ ಒಎಸ್‌ಸಿಸಿ ಉಂಟಾಗುವಲ್ಲಿ ಪಾತ್ರ ವಹಿಸುತ್ತವೆ. ಅವೆಂದರೆ,– ಮ್ಯುಟಾಜೆನ್‌ಗಳಿಂದ ಹಾನಿಗೀಡಾದ ಡಿಎನ್‌ಎಗಳನ್ನು ದುರಸ್ತಿ ಮಾಡುವ ಸಾಮರ್ಥ್ಯ ಕಡಿಮೆಯಾಗಿರುವುದು.
– ಕಾರ್ಸಿನೋಜೆನ್‌ಗಳನ್ನು ಚಯಾಪಚಯ ಕ್ರಿಯೆಗೊಳಪಡಿಸುವ ಸಾಮರ್ಥ್ಯ ನಷ್ಟವಾಗಿರುವುದು.
– ವಿಟಮಿನ್ ಎ, ಇ ಅಥವಾ ಸಿ ಹಾಗೂ ಸೂಕ್ಷ್ಮ ಧಾತುಗಳ ಕೊರತೆ.
– ರೋಗ ನಿರೋಧಕ ಶಕ್ತಿಯ ಕೊರತೆಗಳು.
ರೋಗಪ್ರತಿರೋಧ ಶಕ್ತಿಯ ಅಸಮರ್ಪಕ ಪ್ರತಿಕ್ರಿಯೆಯು ಕ್ಯಾನ್ಸರ್ ಉಂಟಾಗುವುದಕ್ಕೆ ಪೂರಕವಾದ ಸ್ಥಿತಿಯನ್ನು ನಿರ್ಮಿಸಬಹುದು. ಎಚ್‌ಐವಿಗೆ ತುತ್ತಾಗಿರುವ ವ್ಯಕ್ತಿಗಳಲ್ಲಿ ಉಂಟಾಗುವ ಅತಿ ಸಾಮಾನ್ಯ ಬಾಯಿಯ ಅಪಾಯಕಾರಿ ಗಡ್ಡೆ ಬೆಳವಣಿಗೆಯೆಂದರೆ, ಕಪೊಸಿಸ್ ಸರ್ಕೋಮಾ. ಬಿ ಸೆಲ್ ಹಾಜಿRನ್ ಲಿಂಫೊಮಾ ಹೊಂದಿರುವವರಲ್ಲಿಯೂ ಅಪಾಯ ಸಾಧ್ಯತೆ ಹೆಚ್ಚು ಇರುತ್ತದೆ. ಎಚ್‌ಐವಿಗೆ ತುತ್ತಾಗಿರುವವರು, ಅಂಗಾಂಗ ಕಸಿಗೆ ಒಳಪಟ್ಟಿರುವವರು ಹಾಗೂ ಇಮ್ಯುನೊಸಪ್ರಸ್ಸಿವ್ ಚಿಕಿತ್ಸೆಗೆ ಒಳಗಾಗಿರುವವರು ಕೂಡ ಹೆಚ್ಚು ಅಪಾಯವನ್ನು ಹೊಂದಿರುತ್ತಾರೆ. ಪತ್ತೆಹಚ್ಚುವುದು ಹೇಗೆ?
– ಈ ನಿಯೋಪ್ಲಾಸ್¾ನ ಅತ್ಯಂತ ಅಪಾಯಕಾರಿ ಅಂಶ ಎಂದರೆ, ಆರಂಭಿಕ ಹಂತಗಳಲ್ಲಿ ಇದು ನಿರ್ಲಕ್ಷ್ಯಕ್ಕೆ ಈಡಾಗುವ ಸಾಧ್ಯತೆ ಇರುತ್ತದೆ. ಪ್ರಾಥಮಿಕ ಹಂತದಲ್ಲಿ ಇದು ನೋವಿಲ್ಲದೆ ಇರಬಹುದು; ಆದರೆ ಬಳಿಕ ಮುಂದುವರಿದ ಹಂತ ತಲುಪಿದಾಗ ಉರಿಯ ಅನುಭವ ಅಥವಾ ನೋವು ಉಂಟು ಮಾಡಬಹುದು.
– ನಾಲಿಗೆ, ತುಟಿ, ಬಾಯಿಯ ತಳ – ಇವು ಒಎಸ್‌ಸಿಸಿ ಉಂಟಾಗುವ ಸಾಮಾನ್ಯ ಸ್ಥಳಗಳು.
– ಸಾಮಾನ್ಯವಾಗಿ ಒಎಸ್‌ಸಿಸಿಯು ಗಂಟು ಇರುವ ಹುಣ್ಣು ಅಥವಾ ಎಕೊÕಫೈಟಿಕ್ ಸುತ್ತುವರಿದಿರುವ ಉಬ್ಬುಗಳಾಗಿ ಕಾಣಿಸಿಕೊಳ್ಳುತ್ತದೆ.
– ಕೆಂಪು ಗಂಟು (ಎರಿಥ್ರೊಪ್ಲೇಕಿಯಾ), ಬಿಳಿ ಅಥವಾ ಬಿಳಿ ಮತ್ತು ಕೆಂಪು ಮಿಶ್ರಿತವಾಗಿರುವ ಗಂಟು, ಗುಣವಾಗದ ಹೊರಚಾಚಿದ ಗಂಟು ಅಥವಾ ಗಟ್ಟಿಯಾದ, ಅಂಟಿಕೊಂಡ ಸರ್ವಿಕಲ್ ಲಿಂಫ್ ನೋಡ್ ಊತವಾಗಿಯೂ ಕಾಣಿಸಿಕೊಳ್ಳಬಹುದು. ಈ ಯಾವುದೇ ಒಂದು ಲಕ್ಷಣ ಎರಡು ವಾರಗಳಿಗಿಂತಲೂ ಹೆಚ್ಚು ಅವಧಿಗೆ ಉಳಿದುಕೊಂಡರೂ ಒಎಸ್‌ಸಿಸಿಯನ್ನು ಶಂಕಿಸಿ ತಪಾಸಣೆ ನಡೆಸಬೇಕು. ಒಎಸ್‌ಸಿಸಿಯ ಹಂತಗಳು
ಒಎಸ್‌ಸಿಸಿಯ ವಿವಿಧ ಹಂತಗಳನ್ನು ಟಿಎನ್‌ಎಂ ವ್ಯವಸ್ಥೆಯನ್ನು ಉಪಯೋಗಿಸಿ ನಡೆಸಲಾಗುತ್ತದೆ. ರೋಗಿಯ ವೈದ್ಯಕೀಯ ಪರೀಕ್ಷೆಯ ಬಳಿಕ ನೀಡಲಾಗುವ ಹಂತ ಸಿಟಿಎನ್‌ಎಂ ಆಗಿರುತ್ತದೆ; ಶಸ್ತ್ರಚಿಕಿತ್ಸಾತ್ಮಕ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ ಬಳಿಕ ಗುರುತಿಸಲಾಗುವ ಹಂತ ಪಿಟಿಎನ್‌ಎಂ ಆಗಿರುತ್ತದೆ. ಆದರೆ, ಸಾಂಪ್ರದಾಯಿಕವಾದ ಈ ಹಂತಗಳ ಗುರುತಿಸುವಿಕೆಯು ಸಾಮಾನ್ಯವಾಗಿ ಸಾಕಾಗುವುದಿಲ್ಲ. ವ್ಯತ್ಯಾಸಗಳ ಡಿಗ್ರಿ, ಇನ್‌ಫಿಲೆóàಶನ್ ವಿಧ, ಮರುಕಳಿಸುವಿಕೆಯ ಡಿಗ್ರಿಗಳಂತಹ ನಿಯೋಪ್ಲಾಸ್¾ಗಳ ಇತರ ಗುಣಲಕ್ಷಣಗಳ ವಿಶ್ಲೇಷಣೆಯು ಖಚಿತವಾದ ರೋಗ ಪತ್ತೆಗೆ ಸಹಾಯ ಮಾಡುತ್ತವೆಯಲ್ಲದೆ ಸರಿಯಾದ ಚಿಕಿತ್ಸಾ ವಿಧಾನದ ಆಯ್ಕೆಗೆ ನೆರವಾಗುತ್ತದೆ. ಚಿಕಿತ್ಸಾ ವಿಧಾನ
ಮತ್ತು ಮುನ್ನರಿವು
ಮಾದರಿ ಚಿಕಿತ್ಸಾ ಆಯ್ಕೆಗಳಾಗಿರುವ ಶಸ್ತ್ರಚಿಕಿತ್ಸೆ ಮತ್ತು ರೇಡಿಯೋಥೆರಪಿಯಲ್ಲಿ ಸಾಕಷ್ಟು ಮುನ್ನಡೆಯಾಗಿದ್ದರೂ ಅನೇಕ ದಶಕಗಳಿಂದ ಮೃತ್ಯು ಪ್ರಮಾಣ ಇನ್ನೂ ಕಡಿಮೆಯಾಗಿಲ್ಲ; ಐದು ವರ್ಷಗಳ ಬದುಕುಳಿಯುವ ಪ್ರಮಾಣ ಶೇ.50ರಲ್ಲಿಯೇ ಇದೆ. ಪ್ರಾಥಮಿಕ (1 ಮತ್ತು 2) ಹಂತಗಳಲ್ಲಿ ಶಸ್ತ್ರಚಿಕಿತ್ಸೆ ಮತ್ತು ರೇಡಿಯೋ ಥೆರಪಿಯೇ ಚಿಕಿತ್ಸೆಯ ಆಯ್ಕೆಗಳಾಗಿದ್ದು, ಇದು ಸಾಮಾನ್ಯವಾಗಿ ಖಾಯಂ ಗುಣಪಡಿಸುತ್ತದೆ. ಒಎಸ್‌ಸಿಸಿಯ ಮೂರನೆಯ ಮತ್ತು ನಾಲ್ಕನೆಯ ಹಂತಗಳಲ್ಲಿ ಶಸ್ತ್ರಚಿಕಿತ್ಸೆ, ರೇಡಿಯೋಥೆರಪಿ ಅಥವಾ ಕಿಮೊಥೆರಪಿಯ ಸಂಯೋಜಿತ ಚಿಕಿತ್ಸೆಯನ್ನು ಉಪಯೋಗಿಸಲಾಗುತ್ತದೆ. ರೇಡಿಯೋಥೆರಪಿಯನ್ನು ಒದಗಿಸುವ ಸಂದರ್ಭದಲ್ಲಿ ಮ್ಯುಕೋಸೈಟಿಸ್, ಸೆರೊಸ್ಟೋಮಿಯಾ ಮತ್ತು ಓಸ್ಟಿನೊಸೆರೋಸಿಸ್ ಉಂಟಾಗುವ ಸಾಧ್ಯತೆಯಿರುವುದರಿಂದ ಬಾಯಿಯ ಆರೈಕೆಯು ಬಹಳ ಮುಖ್ಯವಾಗಿರುತ್ತದೆ. ಒಎಸ್‌ಸಿಸಿಯ ಆರಂಭಿಕ ಹಂತದಲ್ಲಿ, ಅದರಲ್ಲೂ ಮೆಟಾಸೈಜ್‌ಡ್ ಅಲ್ಲವಾದರೂ ವ್ಯತ್ಯಾಸವು ಚೆನ್ನಾಗಿ ತೋರಿಬರುವ ಪ್ರಕರಣಗಳಲ್ಲಿ ಮುನ್ನರಿವು ಅತ್ಯುತ್ತಮ ಎಂಬುದು ನಿಜವಾದರೂ ಬಹುತೇಕ ಒಎಸ್‌ಸಿಸಿಗಳು ಕಾಯಿಲೆಯ ಮುಂದುವರಿದ ಹಂತಗಳಲ್ಲಿಯೇ ಪತ್ತೆಯಾಗುತ್ತವೆ ಎಂಬುದು ದುರದೃಷ್ಟಕರ. ಒಎಸ್‌ಸಿಸಿಯ ಮುನ್ನರಿವು ರೋಗಿಗೆ ಸಂಬಂಧಿಸಿ, ಗಡ್ಡೆಗೆ ಸಂಬಂಧಿಸಿದ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ಅನೇಕ ಅಂಶಗಳನ್ನು ಆಧರಿಸಿರುತ್ತದೆ. ಆದರೂ ಮುಂದುವರಿದ ಹಂತಗಳಿಗೆ ಸಂಬಂಧಿಸಿ ಐದು ವರ್ಷಗಳ ಬದುಕುಳಿಯುವ ಪ್ರಮಾಣವು ಶೇ.12ನ್ನು ಮೀರುವುದಿಲ್ಲ. ಮುಂದುವರಿದ ಒಎಸ್‌ಸಿಸಿ ಹೊಂದಿರುವ ಬಹುತೇಕ ರೋಗಿಗಳು ತಮ್ಮ ಕಾಯಿಲೆಯ ಮೊದಲ 30 ತಿಂಗಳುಗಳಲ್ಲಿ ಸಾವನ್ನಪ್ಪುತ್ತಾರೆ. ಸರಿಸುಮಾರು ಶೇ.80 ಪ್ರಕರಣಗಳಲ್ಲಿ ಒಎಸ್‌ಸಿಸಿಯ ಮೆಟಾಸ್ಟೇಸ್‌ಗಳು ಇದ್ದಾಗ ಸರ್ವಿಕಲ್ ಲಿಂಫ್ ನೋಡ್‌ಗಳಲ್ಲಿ ಕಂಡುಬರುತ್ತವೆ. ಇಂತಹ ಪ್ರಕರಣಗಳಲ್ಲಿ ಸರ್ವಿಕಲ್ ಲಿಂಫಡೆನೆಕ್ಟೊಮಿ (ಕುತ್ತಿಗೆಯ ರ್ಯಾಡಿಕಲ್ ಶಸ್ತ್ರಚಿಕಿತ್ಸೆ) ಅನ್ವಯಿಸಲಾಗುತ್ತದೆ. ರ್ಯಾಡಿಕಲ್ ಕುತ್ತಿಗೆಯ ಶಸ್ತ್ರಚಿಕಿತ್ಸೆಯ ಹಾನಿಯನ್ನು ಕಡಿಮೆ ಮಾಡುವುದಕ್ಕಾಗಿ ಇತ್ತೀಚೆಗಿನ ದಿನಗಳಲ್ಲಿ ಆಯ್ಕೆಯ ಕುತ್ತಿಗೆಯ ಶಸ್ತ್ರಚಿಕಿತ್ಸೆಯನ್ನು ಅಭಿವೃದ್ಧಿಪಡಿಸಲಾಗಿದೆ. ಸ್ಥಳೀಯವಾಗಿ ಮುಂದುವರಿದಿರುವ ಪ್ರಕರಣಗಳಲ್ಲಿ ರೇಡಿಯೋಥೆರಪಿಯ ಪರಿಣಾಮಕಾರಿತ್ವವನ್ನು ಉತ್ತಮಪಡಿಸುವ ಪ್ರಯತ್ನಗಳಲ್ಲಿ ಆಲ್ಟರ್‌ಡ್ ಫ್ರಾಕÏನೇಟೆಡ್ ರೇಡಿಯೋಥೆರಪಿ ಅಥವಾ ಕಾನ್‌ಕಮಿಟೆಂಟ್ ಕಿಮೊಥೆರಪಿ (ಸಿಟಿ-ಆರ್‌ಟಿ) ಸೇರಿವೆ. ಸ್ಥಳೀಯವಾಗಿ ಮುಂದುವರಿದಿರುವ ಕುತ್ತಿಗೆ ಮತ್ತು ತಲೆಯ ಎಸ್‌ಸಿಸಿಗಳಲ್ಲಿ ಕಿಮೊಥೆರಪಿಯ ಮಟ್ಟಿಗೆ ಸಿಸ್‌ಪ್ಲಾಟಿನ್ ಆಧರಿತ ಕಿಮೊರೇಡಿಯೇಶನ್ ಮಾದರಿ ಚಿಕಿತ್ಸೆಯಾಗಿದೆ. ಪ್ರಸ್ತುತ, ಬಾಯಿಯ ಕ್ಯಾನ್ಸರ್ ರೋಗಿಗಳಿಗೆ ಮೊನೊಕ್ಲೋನಲ್ ಆ್ಯಂಟಿಬಾಡಿಗಳು ಮತ್ತು ವಂಶವಾಹಿ ಚಿಕಿತ್ಸೆಯಂತಹ ಗುರಿ ನಿರ್ದೇಶಿತ ಮಾಲೆಕ್ಯುಲಾರ್ ಥೆರಪಿಯನ್ನು ನೀಡಲಾಗುತ್ತದೆ. ಶಸ್ತ್ರಚಿಕಿತ್ಸೆ, ಕಿಮೋಥೆರಪಿ ಮತ್ತು ರೇಡಿಯೋಥೆರಪಿಯಲ್ಲಿ ಉಂಟಾಗುವಂತಹ ಅಡ್ಡಪರಿಣಾಮಗಳು ಈ ಚಿಕಿತ್ಸಾ ವಿಧಾನದಲ್ಲಿ ಉಂಟಾಗುವುದಿಲ್ಲ. ಗುರಿನಿರ್ದೇಶಿತ ಮಾಲೆಕ್ಯುರಾಲ್ ಥೆರಪಿಯು ಇನ್ನಿತರ ಕ್ಯಾನ್ಸರ್ ಚಿಕಿತ್ಸೆಗಳಿಗೆ ಪೂರಕವಾಗಿಯೂ ಕೆಲಸ ಮಾಡಬಹುದಾಗಿದೆ ಮತ್ತು ನಾಲ್ಕು ಮಾಲೆಕ್ಯೂಲ್‌ಗಳನ್ನು ಗಮನದಲ್ಲಿರಿಸಿಕೊಂಡಿರುತ್ತದೆ; ಅವೆಂದರೆ, ಎಪಿಡರ್ಮಲ್ ಗ್ರೋತ್ ಫ್ಯಾಕ್ಟರ್ ರಿಸೆಪ್ಟರ್ (ಇಜಿಎಫ್ಆರ್), ಸೈಕ್ಲೊಆಕ್ಸಿಜನೇಸ್-2 (ಸಿಒಎಕ್ಸ್-2), ಪೆರೊಕ್ಸಿಸೋಮ್ ಪ್ರಾಲಿಫರೇಟರ್- ಆ್ಯಕ್ಟಿವೇಟೆಡ್ ರಿಸೆಪ್ಟರ್ (ಪಿಪಿಎಆರ್) ಮತ್ತು ಪ್ರೊಜೆಸ್ಟಿರೋನ್ ರಿಸೆಪ್ಟರ್. ಈ ಮಾಲೆಕ್ಯೂಲ್‌ಗಳು ಒಎಸ್‌ಸಿಸಿಯ ವಿಸ್ತರಣೆ ಮತ್ತು ವಿಭಿನ್ನವಾಗುವಿಕೆಯ ಜತೆಗೆ ಸಂಬಂಧ ಹೊಂದಿವೆ.
ಒಟ್ಟಾರೆಯಾಗಿ ನೋಡುವುದಾದರೆ, ಒಎಸ್‌ಸಿಸಿಗಳಿಗೆ ಸಮರ್ಪಕವಾದ ಚಿಕಿತ್ಸೆಯನ್ನು ಒದಗಿಸುವಲ್ಲಿ ಶೀಘ್ರ ರೋಗ ಪತ್ತೆಯು ಪ್ರಧಾನ ಅಂಶವಾಗಿರುತ್ತದೆ. ಏಕಾಕಿ ಹುಣ್ಣುಗಳು, ಗಡ್ಡೆಗಳು, ಬಿಳಿ ಅಥವಾ ಕೆಂಪು ಗಂಟುಗಳು, ನಿರ್ದಿಷ್ಟವಾಗಿ ಎರಡು ವಾರಗಳಿಗಿಂತ ಹೆಚ್ಚು ಅವಧಿಯಿಂದ ಇದ್ದರೆ ಅಪಾಯಕಾರಿ ಬೆಳವಣಿಗೆ ಆಗಿರಬಹುದು ಎಂಬ ಬಗ್ಗೆ ವೈದ್ಯರು ಜಾಗೃತಿ ಹೊಂದಿರಬೇಕು. ಇಂತಹ ಪ್ರಕರಣಗಳಲ್ಲಿ ಶಂಕಿತ ಬೆಳವಣಿಗೆಯ ಬಯಾಪ್ಸಿ ನಡೆಸುವುದು ಅಗತ್ಯವಾಗಿರುತ್ತದೆ. ಜೊಲ್ಲಿನ ಮಾದರಿಗಳು ಅಥವಾ ಸೈಟೊಲಾಜಿಕ್ ಅಂಶಗಳ ಮಾಲೆಕ್ಯುಲಾರ್ ವಿಶ್ಲೇಷಣೆಯನ್ನು ನಡೆಸಿ ಒಎಸ್‌ಸಿಸಿಯನ್ನು ಶೀಘ್ರವಾಗಿ ಪತ್ತೆ ಹಚ್ಚಬಹುದಾದ ಹೊಸ ತಂತ್ರಜ್ಞಾನಗಳು ಅಭಿವೃದ್ಧಿ ಹೊಂದುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಬಾಯಿಯ ಕ್ಯಾನ್ಸರ್ ವಾರ್ಷಿಕವಾಗಿ 18 ಲಕ್ಷ ಮಂದಿಯನ್ನು ಪೀಡಿಸುತ್ತದೆ. ಈ ವರ್ಷ ವಿಶ್ವ ಆರೋಗ್ಯ ಸಂಸ್ಥೆಯು ಶೀಘ್ರ ರೋಗ ಪತ್ತೆ ಮತ್ತು ತಂಬಾಕು ಬಳಕೆಗೆ ತಡೆಯಿಂದ ಬಾಯಿಯ ಕ್ಯಾನ್ಸರ್ ಮಾರಿಯನ್ನು ಗೆಲ್ಲುವ “”ನಾನು ಮತ್ತು ನನ್ನಿಂದ ಸಾಧ್ಯ” ಎಂಬ ಘೋಷವಾಕ್ಯವನ್ನು ಅಳವಡಿಸಿಕೊಂಡು ಕಾರ್ಯಾಚರಿಸುತ್ತಿದೆ. ಬಾಯಿಯ ಕ್ಯಾನ್ಸರ್ ಬಗ್ಗೆ ಅರಿವು ಹೊಂದಿರುವುದು ಬಹಳ ಮುಖ್ಯವಾಗಿದೆ, ಏಕೆಂದರೆ, ಶೀಘ್ರವಾಗಿ ರೋಗಪತ್ತೆ ಹಚ್ಚುವುದು ಉತ್ತಮ ಚಿಕಿತ್ಸೆ ಪಡೆಯುವುದಕ್ಕೆ ನೆರವಾಗುತ್ತದೆ ಹಾಗೂ ಬೇಗನೆ ಚಿಕಿತ್ಸೆ ಲಭಿಸಿದರೆ ಗುಣ ಹೊಂದುವುದು ಅಥವಾ ಪರಿಣಾಮಕಾರಿ ರೋಗ ನಿರ್ವಹಣೆಗೆ ಪ್ರಯೋಜನಕಾರಿಯಾಗುತ್ತದೆ. -ಡಾ| ರತ್ನರಾಯ ಮಲ್ಯ,
ಉಪನ್ಯಾಸಕರು
ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ ವಿಭಾಗ
ಎಂಸಿಒಡಿಎಸ್, ಮಂಗಳೂರು