Advertisement
ಕಡಲ ತಡಿಯ ಭಾರ್ಗವ, ನಡೆದಾಡುವ ವಿಶ್ವಕೋಶ ಖ್ಯಾತಿಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ| ಕೋಟ ಶಿವರಾಮ ಕಾರಂತರ ಪ್ರಮುಖ ಕಾದಂಬರಿಗಳಲ್ಲಿ ಒಂದಾಗಿರುವ “ಬೆಟ್ಟದ ಜೀವ’ದಿಂದ ಸಿಗುವ ಗ್ರಾಮ್ಯ ಸೊಬಗಿನ ಓದಿನ ಖುಷಿ ಅದಮ್ಯ ವಾದುದು.ಸ್ವಾತಂತ್ರ್ಯ ಪೂರ್ವದಲ್ಲಿ ಪಶ್ಚಿಮ ಘಟ್ಟದ ಗ್ರಾಮೀಣ ಭಾಗದ ಸನ್ನಿ ವೇಶಗಳನ್ನು ಬಿಚ್ಚಿಡುವ ಈ ಕಾದಂಬರಿ ಅನೇಕ ಆದರ್ಶಗಳನ್ನು ನಮಗೆ ಕಟ್ಟಿಕೊಡುತ್ತದೆ.
ಶಿವರಾಮು ಆ ಪರಿಸರದ ಸೌಂದರ್ಯ ಹಾಗೂ ಅಲ್ಲಿನವರ ಪ್ರೀತಿ, ಮುಗ್ಧತೆಗೆ ಸೋಲುತ್ತಾನೆ. ಇಳಿವಯಸ್ಸಿನವರಾದರೂ, “ನಿಮಗೆ ಬೇಕಿದ್ದರೆ ಹೇಳಿ, ಕುಮಾರ ಪರ್ವತದ ನೆತ್ತಿಯ ಮೇಲೆ ತೋಟ ಮಾಡಿ ಕೊಡುತ್ತೇನೆ’ ಎನ್ನುವ ಗೋಪಾಲಯ್ಯನವರ ಕೃಷಿ ಪ್ರೀತಿ ಮತ್ತು ಅಲ್ಲಿನ ಕೆಲವರ ನಿಷ್ಕಲ್ಮಶ ವ್ಯಕ್ತಿತ್ವ ಶಿವರಾಮು ಮೇಲೆ ಗಾಢ ಪ್ರಭಾವ ಬೀರುತ್ತದೆ. ಸಾಮರಸ್ಯದಿಂದ ಕೂಡಿದ ಗೋಪಾ ಲಯ್ಯ ಮತ್ತು ಶಂಕರಮ್ಮ ಅವರ ದಾಂಪತ್ಯ ಮತ್ತೂಂದು ಪ್ರಮುಖ ಸಂಗತಿ. ಅವರಿಗೆ ಪ್ರೀತಿಯೊಂದೆ ಆಸ್ತಿ ಎನ್ನುವುದನ್ನೂ ಕಾದಂಬರಿ ತಿಳಿಸುತ್ತದೆ. ಹಾದಿ ತಪ್ಪಿ ಬಂದ ಶಿವರಾಮು ಮತ್ತು ಮನೆಬಿಟ್ಟು ಹೋಗಿದ್ದ ಮಗ ಶಂಭು ಒಂದೇ ವಯಸ್ಸಿನವರಾದ ಕಾರಣ ಕಾದಂಬರಿಯ ಉದ್ದಕ್ಕೂ ಶಂಕರಮ್ಮಳ, “ತಾಯಿ ಹೃದಯ’ ಮಿಡಿದು ಓದುಗರ ಕಣ್ಣು ಒದ್ದೆಯಾಗುತ್ತದೆ. ಗೋಪಾಲಯ್ಯರ ಉತ್ಸಾಹಭರಿತ ವ್ಯಕ್ತಿತ್ವ, ಶಂಕರಮ್ಮ ಅವರ ವಾತ್ಸಲ್ಯ, ಗೋಪಾಲಯ್ಯ ಅವರು ಸಾಕಿ ಬೆಳೆಸಿದ ನಾರಾಯಣ ಮತ್ತು ಲಕ್ಷ್ಮೀ ದಂಪತಿಯ ಸರಳತೆ, ಅವರ ಇಬ್ಬರ ಮಕ್ಕಳಾದ ಸುಬ್ರಾಯ ಮತ್ತು ಸಾವಿತ್ರಿಯ ತುಂಟಾಟಗಳು ಕಾದಂಬರಿಯನ್ನು ಓದಿಸಲು ಹೊಸ ಉತ್ಸಾಹ ಮೂಡಿಸುತ್ತವೆ.
Related Articles
Advertisement
ಬೆಟ್ಟದ ಜೀವದಲ್ಲಿ ಹಿಂದಿನ ಗ್ರಾಮೀಣ ಜೀವನವು ನಮ್ಮ ಮುಂದೆ ತೆರೆಯಲ್ಪಡುತ್ತದೆ. ಜನರ ಮುಗ್ಧತೆಯೊಂದಿಗೆ ಅವರು ಎಲ್ಲ ನೋವನ್ನೂ ಪ್ರಕೃತಿಯ ಸಹವಾಸದಿಂದ ಮರೆಯಲು ಪ್ರಯತ್ನಿಸುವ ಸಂದೇಶವೂ ಇದೆ. ಪರಕೀಯರಲ್ಲೂ ಅವರು ತೋರಿಸುವ ವಿಶ್ವಾಸ, ಪರಕೀಯನಲ್ಲೂ ಮಗನನ್ನು ಕಾಣುವ ತಾಯಿಪ್ರೀತಿ ನಮಗೆ ಮಾದರಿ.
ಹಾಸ್ಯಭರಿತ ಮಾತುಕತೆಗಳು ಮತ್ತು ಗ್ರಾಮೀಣ ಸೊಗಡನ್ನು ಪರಿಚಯಿಸುವ ಕೋಲ, ಅಭ್ಯಂಜನ ಮುಂತಾದ ಸಂದ ರ್ಭಗಳ ವಿವರಣೆ ಕಾದಂಬರಿಯಲ್ಲಿ ಸ್ಥಳೀ ಯತೆಯ ಪರಿಚಯ ನೀಡುತ್ತದೆ. ಸಹೃದ ಯರಿಗೆ ತಮ್ಮ ಮನಸ್ಸೆಂಬ ಅರಳು ಮರುಳಿನ ಆಲಯದಲ್ಲಿ ಶಾಶ್ವತವಾಗಿ ಉಳಿಯುವ ಸವಿನೆನಪೆಂಬ ಅಡಿಪಾಯವಾಗಿರಲಿದೆ.
ಅರುಣ್ ಕಿರಿಮಂಜೇಶ್ವರ, ಪುತ್ತೂರು