Advertisement

ಮೌಂಟ್‌ ಎವರೆಸ್ಟ್‌ ಏರಿದ ಮಾನಸ!

03:17 PM Jan 02, 2018 | |

ಶಿವಮೊಗ್ಗ: ಚಳಿಗಾಲದಲ್ಲಿ ಯಶಸ್ವಿಯಾಗಿ ಮೌಂಟ್‌ ಎವರೆಸ್ಟ್‌ ಬೇಸ್‌ ಕ್ಯಾಂಪ್‌ ಏರಿದ ಭಾರತದ ಏಕೈಕ ಯುವತಿ ಎನ್ನುವ ಹೆಗ್ಗಳಿಕೆಗೆ ಜಿಲ್ಲೆಯ ಸಾಗರ ಪಟ್ಟಣದ ಕು. ಮಾನಸ ಪಾತ್ರರಾಗಿದ್ದಾರೆ. ನೇಪಾಳದ ಅಡ್ವೆಂಚರ್‌ ನೇಚರ್‌ ಕ್ಯಾಂಪ್‌ನವರು ಏರ್ಪಡಿಸಿದ್ದ ಮೌಂಟ್‌ ಎವರೆಸ್ಟ್‌ ಬೇಸ್‌ ಕ್ಯಾಂಪ್‌ ಚಾರಣಕ್ಕೆ ಆಯ್ಕೆಯಾಗಿ 18500 ಅಡಿ ಕ್ರಮಿಸಿ ದೇಶದ ತ್ರಿವರ್ಣ ಧ್ವಜ ಹಾರಿಸಿ ದೇಶಾಭಿಮಾನ ಮೆರೆದಿದ್ದಾರೆ.

Advertisement

ಚಾರಣಕ್ಕೆ ಆಯ್ಕೆಯಾಗಿದ್ದ ಮಾನಸ ಡಿ.17ರಂದು ಬೆಂಗಳೂರಿನಿಂದ ದೆಹಲಿ ತಲುಪಿ, ಅವರ ಜೊತೆಗೆ ಅದೇ ಸಂಸ್ಥೆಯಿಂದ ಆಯ್ಕೆಯಾಗಿದ್ದ ದೆಹಲಿಯ ದೀಪಾಂಶು ಅವರನ್ನು ಭೇಟಿ ಮಾಡಿ ಡಿ. 18ರಂದು ವಿಮಾನ ಮೂಲಕ ನೇಪಾಳದ ಕಠ್ಮಂಡುವಿಗೆ ಪ್ರಯಾಣ ಬೆಳೆಸಿದ್ದರು. ಡಿ.19ರಂದು ಕಠ್ಮಂಡುವಿನಿಂದ ಸಣ್ಣ ವಿಮಾನದಲ್ಲಿ ಲೂಕ್ಲಾಗೆ ತಲುಪಿ ತಮ್ಮ ಮೊದಲ ದಿನದ ಚಾರಣ ಆರಂಭಿಸಿದರು. ಸುಮಾರು 12 ಕಿ.ಮೀ. ಕ್ರಮಿಸಿ ಫಕ್ಕಂಡಿಗ್‌ ಎಂಬ ಊರು, ನಂತರ ಫಕ್ಕಂಡಿಗ್‌ನಿಂದ 2ನೇ ದಿನದ ಚಾರಣ ಆರಂಭಿಸಿ 24 ಕಿ.ಮೀ. ಕ್ರಮಿಸಿ ನ್ಯಾಂಚೆ ಬಜಾರ ತಲುಪಿದರು. ಡಿ.21ರಂದು ನ್ಯಾಂಚೆ ಬಜಾರದಲ್ಲಿ ನಡೆದ ದೈಹಿಕ ಸಾಮರ್ಥ್ಯದ ಪರೀಕ್ಷೆಗಾಗಿ ಸುಮಾರು 8 ಗಂಟೆಗಳ ಕಾಲ ನಡೆದ ಚಾರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಪುನಃ ನ್ಯಾಂಚೆ ಬಜಾರ ತಲುಪಿದರು.

ಇವರೊಂದಿಗೆ ದೆಹಲಿಯ ದೀಪಾಂಶು, ಆಸ್ಟ್ರೇಲಿಯಾದ ಆ್ಯನಾ, ಯುಎಸ್‌ಎ ದ್ವಾರಾ ಡಿಸೋಜಾ ಅವರು ಸೇರ್ಪಡೆಗೊಂಡರು.
ಆರೋಗ್ಯದಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಆ್ಯನಾ ಹಾಗೂ ದ್ವಾರಾ ಡಿಸೋಜಾ ಮುಂದಿನ ಚಾರಣವನ್ನು ಅರ್ಧಕ್ಕೆ
ಮೊಟಕುಗೊಳಿಸಿದರು. ಡಿ.22ರಂದು ಕೊರೆಯುವ ಚಳಿ ನಡುವೆಯೂ ನ್ಯಾಂಚೆ ಬಜಾರದಿಂದ ದೀಪಾಂಶು ಹಾಗೂ ಮಾನಸ ಸುಮಾರು 17 ಕಿ.ಮೀ. ಚಾರಣ ಆರಂಭಿಸಿ ತೆಂಗ್‌ಬೂಚೆ ತಲುಪಿದರು. ಈ ವೇಳೆ ಹವಾಮಾನ ವೈಫ‌ರಿತ್ಯದಿಂದ ಸಮಸ್ಯೆ ಉಂಟಾದ
ಹಿನ್ನೆಲೆಯಲ್ಲಿ ದೀಪಾಂಶು ಕೂಡ ಚಾರಣ ಅರ್ಧಕ್ಕೆ ಮೊಟಕುಗೊಳಿಸಬೇಕಾಯಿತು. ನಂತರ ಮೂರು ದಿನಗಳ ಕಾಲ
ಶೇರ್ಪಾಗಳೊಂದಿಗೆ ಚಾರಣ ನಡೆಸಿದ ಮಾನಸ, ಬೇಸ್‌ ಕ್ಯಾಂಪ್‌ ತಲುಪಿ ದೇಶದ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಡಿಸೆಂಬರ್‌ ತಿಂಗಳ
ಮೈನಸ್‌ 23 ಡಿಗ್ರಿ ಕೊರೆಯುವ ಚಳಿ ನಡುವೆ ಧೈರ್ಯಗುಂದದೆ ಸಾಧನೆ ಮಾಡಿರುವುದು ವಿಶೇಷ.

ಸಾಗರದಲ್ಲಿ ಆರೋಗ್ಯ ಇಲಾಖೆಯಲ್ಲಿ ಸೇವೆಯಲ್ಲಿರುವ ಮ.ಸ.ನಂಜುಂಡಸ್ವಾಮಿ ಹಾಗೂ ಜ್ಯೋತಿ ದಂಪತಿ ಪುತ್ರಿಯಾದ ಮಾನಸ
ಪ್ರಸ್ತುತ ಬೆಂಗಳೂರಿನಲ್ಲಿ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜತೆಗೆ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದಾರೆ.
ಕರ್ನಾಟಕ ಸಂಗೀತಾಭ್ಯಾಸ ನಡೆಸುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾನಸ, ಸಾಧನೆಗೆ ಪ್ರೇರಣೆ ನೀಡಿದ್ದು, ನನ್ನ ತಂದೆ-ತಾಯಿ ಅವರ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಎ.ಮಂಜುನಾಥ್‌, ಉಪಾಧ್ಯಕ್ಷ ಎನ್‌.ಗೋಪಿನಾಥ್‌, ಪ್ರಧಾನ ಕಾರ್ಯದರ್ಶಿ ಅ.ನಾ. ವಿಜೇಂದ್ರರಾವ್‌, ನಿರ್ದೇಶಕರಾದ ನಿರ್ಮಲಾ ಕಾಶಿ, ಪ್ರವೀಣ್‌ ಕುಮಾರ್‌ ಜೈನ್‌ ಉಪಸ್ಥಿತರಿದ್ದರು.

ಸಾಧನೆಗೆ ಪ್ರೇರಣೆ ನೀಡಿದ್ದು ತನ್ನ ತಂದೆ-ತಾಯಿ. ಅವರ ಸಹಕಾರವಿಲ್ಲದಿದ್ದರೆ ಸಾಧನೆ ತೋರುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಡಿಸೆಂಬರ್‌-ಜನವರಿ ತಿಂಗಳಿನ ಕೊರೆಯುವ ಚಳಿಯಲ್ಲಿ ಭಾರತದ ಬಾವುಟ ಅಲ್ಲಿ ಹಾರಾಡಿದ್ದು ಕಂಡಿಲ್ಲ ಎಂಬ ಶೇರ್ಪಾಗಳ ಹೇಳಿಕೆ
ತನ್ನಲ್ಲಿ ಕಿಚ್ಚು ಮೂಡಿಸಿತು. ಭಾರತ ಬಾವುಟ ಡಿಸೆಂಬರ್‌ ತಿಂಗಳಿನಲ್ಲಿ ಹಾರಿಸಲೇಬೇಕೆಂದು ದೃಢ ನಿರ್ಧಾರ  ಮಾಡಿದೆ. ಅಂತೂ ಯಶಸ್ವಿಯಾಗಿ ಮೌಂಟ್‌ ಎವರೆಸ್ಟ್‌ ಬೇಸ್‌ ಕ್ಯಾಂಪ್‌ ತಲುಪಿ ತ್ರಿವರ್ಣ ಧ್ವಜ ಹಾರಿಸಿದೆ. ಅದು ನಿಜಕ್ಕೂ ತನಗೆ ಸಂತೋಷ ತಂದಿದೆ.

ಮಾನಸ, ಮೌಂಟ್‌ ಎವರೆಸ್ಟ್‌ ಬೇಸ್‌ ಕ್ಯಾಂಪ್‌ ಏರಿದ ಸಾಗರದ ಯುವತಿ. 

Advertisement
Advertisement

Udayavani is now on Telegram. Click here to join our channel and stay updated with the latest news.

Next