ಅಫಜಲಪುರ: ಸಮಾಜದ ಓರೆಕೋರೆ ತಿದ್ದಿ, ಸರಿದಾರಿಗೆ ತರುವಲ್ಲಿ ವಚನಗಳು ಪ್ರಮುಖ ಪಾತ್ರ ವಹಿಸಿವೆ. ವಚನಗಳೇ
ಸಂವಿಧಾನ ರಚನೆಗೆ ಪ್ರೇರಣೆಯಾಗಿವೆ ಎಂದು ಸಾಮಾಜಿಕ ಹೋರಾಟಗಾರ್ತಿ ಕೆ. ನೀಲಾ ಹೇಳಿದರು. ಪಟ್ಟಣದಲ್ಲಿ ಲಿಂಗಾಯತ ಮಹಾಸಭಾ, ವೀರಶೈವ ಮಹಾಸಭಾ ವತಿಯಿಂದ ಸಂವಿಧಾನ ರಕ್ಷಿಸಿ ವಚನ ತತ್ವ ಬೆಳೆಸಿ ಎನ್ನುವ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತ ಬಹು ಸಂಸ್ಕೃತಿ ನೆಲೆಯಾಗಿದೆ. ಸರ್ವ ಧರ್ಮ ಸಮನ್ವಯತೆ, ಸಾಮರಸ್ಯ, ಭಾತೃತ್ವ, ಐಕ್ಯತೆ ದೇಶದ ತತ್ವವಾಗಿದೆ. ಇದನ್ನೇ ಭಾರತೀಯ ಸಂವಿಧಾನ ಹೇಳಿದೆ. ಆದರೆ ಕೆಲ ಮತೀಯ ಶಕ್ತಿಗಳ ಹುನ್ನಾರದಿಂದ ಸಂವಿಧಾನಕ್ಕೆ ಕುತ್ತು ಬರುತ್ತಿದೆ. ನಮ್ಮನ್ನು ರಕ್ಷಿಸುತ್ತಿರುವ ಸಂವಿಧಾನಕ್ಕೆ ಧಕ್ಕೆಯಾಗುತ್ತಿರುವಾಗ ನಾವು ಸುಮ್ಮನಿರಬಾರದು ಎಂದರು.
ಸಂವಿಧಾನ ರಕ್ಷಿಸಿ ಅಭಿಯಾನ ಆರಂಭಿಸಿ ಆರು ತಿಂಗಳಾಗಿದೆ. ಪಟ್ಟಣ, ಹೋಬಳಿ ಮಟ್ಟದಲ್ಲಿ, ಕಾಲೇಜುಗಳಲ್ಲಿ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾಗರೋಪಾದಿಯಲ್ಲಿ ಎಲ್ಲರೂ ಅಭಿಯಾನಕ್ಕೆ ಕೈ ಜೋಡಿಸುತ್ತಿರುವುದು ಖುಷಿಯ ಸಂಗತಿ. ಪ್ರತಿಯೊಬ್ಬರು ಅಭಿಯಾನದಲ್ಲಿ ಪಾಲ್ಗೊಂಡು ಸಂವಿಧಾನದ ಉಳಿವಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಮುಖಂಡ ಮಾರುತಿ ಗೊಕಲೆ ಮಾತನಾಡಿ, ದೇಶದಲ್ಲಿ ಹಲವಾರು ಸಮಸ್ಯೆಗಳು ಎದುರಾದರೂ ಅವುಗಳನ್ನೆಲ್ಲ ಸಮರ್ಥವಾಗಿ ಎದುರಿಸಿ ಸಂವಿಧಾನದ ಅಡಿಯಲ್ಲಿ ಸಾಗಬೇಕೆಂದು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ವೈಚಾರಿಕ ಚಿಂತಕ ಬಸಣ್ಣ ಗುಣಾರಿ, ಮುಖಂಡರಾದ ಪ್ರಭು ಖಾನಾಪುರ, ಡಾ| ಕಾಶಿನಾಥ ಅಂಬಲಗಿ, ಸಂಗಯ್ಯ ಹಳ್ಳದಮಠ, ಮಹಾಂತೇಶ ಕಲಬುರ್ಗಿ, ಎಂ.ಬಿ. ಸಜ್ಜನ್, ಸುನೀಲ ಹುಡುಗಿ, ದತ್ತಾತ್ರೇಯ ಇಕ್ಕಳಕಿ, ಶ್ರೀಮಂತ ಬಿರಾದಾರ, ಸದಾಶಿವ ಮೇತ್ರೆ, ಬಸವರಾಜ ಚಾಂದಕವಟೆ, ರಾಜು ಆರೇಕರ್, ಅಪ್ಪಾರಾವ್ ಹೆಗ್ಗಿ, ಜಿ.ಎಸ್. ಬಾಳಿಕಾಯಿ, ಎನ್.ಆರ್. ಸಾಸನೂರ, ಲೋಹಿತಕುಮಾರ ಹೊಳಿಕೇರಿ, ಭೀಮರಾವ್ ಗೌರ ಬಾಬು ಸೊನ್ನ ಮುಂತಾದವರಿದ್ದರು. ಮುಖಂಡರಾದ ಶ್ರೀಮಂತ ಬಿರಾದಾರ ನಿರೂಪಿಸಿದರು, ಶಂಕ್ರೆಪ್ಪ ಮಣ್ಣೂರ ವಂದಿಸಿದರು.