ತುಮಕೂರು: ನೂತನ ಮೋಟಾರ್ ಕಾನೂನು ಜಾರಿಯಾದ ಬಳಿಕ ಸಂಚಾರ ನಿಯಮಗಳು ಬಿಗಿ ಯಾಗಿದ್ದು, ಟ್ರಾಫಿಕ್ ಪೊಲೀಸರು ಕಾರ್ಯಪ್ರವೃತ್ತ ರಾಗಿರುವುದರಿಂದ ಎಮಿಷನ್, ಇನ್ಶೂರೆನ್ಸ್, ಆರ್‌ಟಿಒ ಕಚೇರಿಗಳಲ್ಲಿ ವಾಹನ ಸವಾರರ ಕ್ಯೂ ಹನುಮನ ಬಾಲದಂತೆ ಬೆಳೆಯುತ್ತಿದೆ. ಹೊಸ ನಿಯಮ ಬಂದ ಮೇಲೆ 18 ಲಕ್ಷ ರೂ.ವವರೆಗೆ ದಂಡ ವಸೂಲಿಯಾಗಿದೆ. ಗುರುವಾರ ಒಂದೇ ದಿನಕ್ಕೆ 4.94 ಲಕ್ಷ ರೂ. ದಂಡ ವಸೂಲಿಯಾಗಿದೆ.
ವಾಹನದ ದಾಖಲೆ ಸರಿಯಿಲ್ಲದಿದ್ದರೆ, ಇನ್ನಿತರ ಕಾರಣಗಳಿಗೆ ಪೊಲೀಸರು ದುಬಾರಿ ದಂಡ ವಿಧಿಸುತ್ತಿ ರುವುದರಿಂದ ಎಚ್ಚೆತ್ತಿರುವ ವಾಹನ ಸವಾರರು ಪಕ್ಕಾ ದಾಖಲೆ ಪಡೆಯಲು ಕಚೇರಿಗಳತ್ತ ಧಾವಿಸುತ್ತಿದ್ದಾರೆ. ಜಿಲ್ಲೆಯಲ್ಲಿರುವ ನಾಲ್ಕು ಎಮಿಷನ್ ಸರ್ಟಿಫಿಕೇಟ್ ಪಡೆಯುವ ಕೇಂದ್ರಗಳಲ್ಲಿ ಸವಾರರ ಉದ್ದನೆಯ ಸಾಲು ಸಾಮಾನ್ಯವಾಗಿದೆ. ತುಮಕೂರು ಜಿಲ್ಲೆಯಲ್ಲಿ ಲಕ್ಷಾಂತರ ವಾಹನಗಳಿದ್ದು, ಕೇವಲ ನಾಲ್ಕು ಮಾಲಿನ್ಯ ತಪಾಸಣಾ ಕೇಂದ್ರಗಳಿವೆ. ಒಂದೇ ಬಾರಿ ಎಲ್ಲಾ ವಾಹನ ತಪಾಸಣೆ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನೂತನ ಸಂಚಾರಿ ನಿಯಮ ಜಾರಿಯಾದ ಮೇಲೆ ಜಿಲ್ಲೆಯಲ್ಲಿ ದುಬಾರಿ ದಂಡಕ್ಕೆ ಹೆದರಿ ವಾಹನ ಸವಾರರು ದಾಖಲಾತಿಗೆ ಪರದಾಡುವಂತಾಗಿದೆ.
ದಂಡಕ್ಕೆ ಹೆದರಿಕೆ: ವಿಮೆ, ಮಾಲಿನ್ಯ ತಪಾಸಣೆ ಪ್ರಮಾಣ ಪತ್ರ, ಚಾಲನಾ ಪರವಾನಗಿಗೆ ಮುಗಿ ಬೀಳುತ್ತಿದ್ದಾರೆ. ದಾಖಲೆ ಇಲ್ಲದವರು ಪೊಲೀಸರ ಕಣ್ಣು ತಪ್ಪಿಸಿ ಸಂಚರಿಸುತ್ತಿದ್ದಾರೆ. ನೂತನ ಸಂಚಾರಿ ನಿಯಮದ ಅನುಷ್ಠಾನಕ್ಕೂ ಮುನ್ನ ನಗರದಲ್ಲಿ ಸಂಚಾರಿ ನಿಯಮ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿತ್ತು. ಹೆಲ್ಮೆಟ್ ಇಲ್ಲದೆ, ಸೀಟ್ ಬೆಲ್r ಹಾಕದೆ, ಸಿಗ್ನಲ್ ಜಂಪ್ ಮಾಡಿಕೊಂಡು ಸಂಚರಿಸುವವರ ಸಂಖ್ಯೆ ಹೆಚ್ಚಿತ್ತು. ಪೊಲೀಸರ ಕೈಗೆ ಸಿಕ್ಕರೆ ನೂರು, ಇನ್ನೂರು ದಂಡ ಕಟ್ಟಿದ ರಾಯ್ತು ಎಂಬಂತಿದ್ದ ಸವಾರರು ನೂತನ ನಿಯಮ ದಿಂದ ಸಾವಿರಾರು ರೂ. ದಂಡಕ್ಕೆ ಪತರುಗುಟ್ಟಿದ್ದಾರೆ.
ದಂಡಕ್ಕೆ ಹೆದರಿರುವ ಸವಾರರು ವಾಹನಗಳ ದಾಖಲೆ ಇಲ್ಲದೇ ವಾಹನ ರಸ್ತೆಗಿಳಿಸಲು ಹಿಂದು- ಮುಂದು ನೋಡುತ್ತಿದ್ದಾರೆ. ನಿಯಮ ಮೀರಿ ವಾಹನ ಚಲಾಯಿಸುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಒಂದು ದಾಖಲೆ ಇಲ್ಲದಿದ್ದರೂ ಸಾವಿರ ದಂಡ ವಿಧಿಸುತ್ತಿರುವುದಕ್ಕೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತುಮಕೂರಿನಲ್ಲಿ ನಾಲ್ಕು, ಗುಬ್ಬಿ ಯಲ್ಲಿ ಒಂದು ಕೇಂದ್ರ ಸೇರಿ ಐದು ಕೇಂದ್ರಗಳಿವೆ. ನಿರಂತರವಾಗಿ ತಪಾಸಣೆ ನಡೆಸಿದರೂ ವಾಯು ಮಾಲಿನ್ಯ ತಪಾಸಣೆ ಮಾಡಿಸಿಕೊಳ್ಳುವ ವಾಹನ ಸವಾರರ ಸಂಖ್ಯೆ ಮಾತ್ರ ಇಳಿಮುಖವಾಗುತ್ತಿಲ್ಲ. ಒಂದು ಕೇಂದ್ರದಲ್ಲಿ ದಿನವೊಂದಕ್ಕೆ 300ರಿಂದ400 ವಾಹನಗಳು ಮಾಲಿನ್ಯ ತಪಾಸಣೆ ನಡೆಯುತ್ತದೆ.
ಸಾರಿಗೆ ಇಲಾಖೆಯಲ್ಲಿ ಜನಸಂದಣಿ:ಸಾವಿರ ದಂಡ ವಿಧಿಸುತ್ತಿರುವ ಹಿನ್ನೆಲೆಯಲ್ಲಿ ದಾಖಲಾತಿ ಸರಿಪಡಿಸಿ ಕೊಳ್ಳಲು ಸಾರಿಗೆ ಇಲಾಖೆಗೆ ಬರುವವರ ಸಂಖ್ಯೆ ಹೆಚ್ಚಾಗಿದ್ದು, ಆರ್‌ಟಿಒ ಕಚೇರಿಯಲ್ಲೂ ಜನಸಂದಣಿ ಹೆಚ್ಚಿದೆ. ಪೊಲೀಸರು ಹಾಕುವ ದಂಡದ ಮೊತ್ತಕ್ಕೆ ಹೆದರಿರುವ ಸವಾರರು ಎಲ್ಎಲ್ಆರ್ ಹಾಗೂ ಡಿಎಲ್ ಮಾಡಿಸಲು ಮುಗಿಬೀಳುತ್ತಿದ್ದಾರೆ. ಎಲ್ಎಲ್ಆರ್ ಹಾಗೂ ಡಿಎಲ್ ಪರೀಕ್ಷೆಗೆ ಬರುತ್ತಿರು ವವರಿಗೆ ಒಂದು ತಿಂಗಳ ಕಾಲ ಬುಕ್ಕಿಂಗ್ ಆಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗಿರುವ ಕಾರಣ ಹೊಸಬರು ಎಲ್ಎಲ್ಆರ್, ಡಿಎಲ್ ಮಾಡಿಸಲು ಈಗ ಪರೀಕ್ಷೆಗೆ ಒಂದು ತಿಂಗಳು ಕಾಯಬೇಕಾಗಿದೆ. ಈ ಮೊದಲು ಖಾಲಿ ಹೊಡೆಯುತ್ತಿದ್ದ ತಂತ್ರಾಂಶ ಈಗ ಹೌಸ್‌ಫುಲ್ ಆಗಿದೆ. ಆರ್‌ಟಿಒ ಕಚೇರಿಯಲ್ಲಂತೂ ಜನದಟ್ಟಣೆ ಹೆಚ್ಚಾಗುತ್ತಿದೆ. ಇನ್ನೂ ವಿಮೆ ಇಲ್ಲದವರು ವಿಮೆ ಕಟ್ಟಲು ವಿಮಾ ಕಚೇರಿಗಳತ್ತ ಹೋಗುತ್ತಿದ್ದಾರೆ.
● ಚಿ.ನಿ. ಪುರುಷೋತ್ತಮ್