Advertisement

ತೇಗ ಮರ ಕದ್ದು ಸಾಗಿಸುತ್ತಿದ್ದ ವಾಹನ ಅಪಘಾತ

11:52 AM Jul 27, 2019 | Suhan S |

ಮಂಡ್ಯ: ನಗರದ ಹೊರವಲಯದಲ್ಲಿರುವ ಇಂಡುವಾಳು ಪ್ರಕೃತಿ ಉದ್ಯಾನವನದಲ್ಲಿ ತೇಗದ ಮರ ಕದ್ದು ಸಾಗಿಸುತ್ತಿದ್ದ ವಾಹನ ಅಪಘಾತಕ್ಕೀಡಾಗಿರುವ ಘಟನೆ ಗುರುವಾರ ಮಧ್ಯರಾತ್ರಿ ನಡೆದಿದೆ.

Advertisement

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಾಲಕನನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿ ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫ‌ಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಸುಮಾರು 1 ಲಕ್ಷ ರೂ. ಮೌಲ್ಯದ ತೇಗದ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆಗಿದ್ದೇನು? : ಗುರುವಾರ ಮಧ್ಯರಾತ್ರಿ ಇಂಡುವಾಳು ಉದ್ಯಾನದಲ್ಲಿರುವ ಬೆಲೆಬಾಳುವ ಮರಗಳನ್ನು ಕದ್ದೊಯ್ಯಲು ಮರಗಳ್ಳತರ ತಂಡ ಎರಡು ವಾಹನಗಳಲ್ಲಿ ಆಗಮಿಸಿದೆ. ಮೊಳೆಕೊಪ್ಪಲು ರಸ್ತೆ ಬಳಿ ಬೆಳೆದು ನಿಂತಿದ್ದ ಮೂರ್‍ನಾಲ್ಕು ತೇಗದ ಮರಗಳ ಪೈಕಿ ಬೃಹತ್‌ ಗಾತ್ರದ ಮರವನ್ನು ಆಯ್ಕೆ ಮಾಡಿಕೊಂಡು ಗರಗಸದಿಂದ ಬುಡ ಕತ್ತರಿಸಿದ್ದಾರೆ. ನೆಲಕ್ಕುರುಳಿದ ಮರವನ್ನು ಅಳತೆಗೆ ತಕ್ಕಂತೆ ಕೊಯ್ದು ತಾವು ತಂದಿದ್ದ ವಾಹನಗಳಿಗೆ ತುಂಬಿದ್ದಾರೆ.

ಮರದ ತುಂಡುಗಳನ್ನು ತುಂಬಿದ್ದ ಬೊಲೇರೋ ವಾಹನ (ಕೆಎ.45- 7418) ಬೆಂಗಳೂರು-ಮೈಸೂರು ಹೆದ್ದಾರಿ ಕಡೆ ಬರುವ ವೇಳೆ ಇಂಡುವಾಳು ಉದ್ಯಾನದ ತಿರುವೊಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿ ಬಿದ್ದಿದೆ. ವಾಹನದಲ್ಲಿದ್ದ ಮರದ ತುಂಡುಗಳು ನೆಲಕ್ಕುರುಳಿವೆ. ಬಳಿಕ ಹರಸಾಹಸ ನಡೆಸಿ ವಾಹನವನ್ನು ಮೇಲೆತ್ತಿ ನಿಲ್ಲಿಸಿದರಾದರೂ ಮತ್ತೆ ದೊಡ್ಡ ಗಾತ್ರದ ಮರದ ತುಂಡುಗಳನ್ನು ತುಂಬಿಕೊಳ್ಳುವುದಕ್ಕೆ ಅವರಿಂದ ಸಾಧ್ಯವಾಗಿಲ್ಲ. ಜೊತೆಗೆ ಚಾಲಕ ಗಂಭೀರವಾಗಿ ಗಾಯಗೊಂಡು ನರಳಾಡುತ್ತಿದ್ದ ಕಾರಣ ಮರದ ತುಂಡುಗಳೊಂದಿಗೆ ಅವನನ್ನೂ ಬಿಟ್ಟು ಮರದ ದೊಡ್ಡ ದಿಮ್ಮಿಯನ್ನು ಹೊತ್ತಿದ್ದ ಮತ್ತೂಂದು ವಾಹನದಲ್ಲಿ ಕಳ್ಳರು ಕಾಲ್ಕಿತ್ತಿದ್ದಾರೆ.

ರಾತ್ರಿ ಗಸ್ತು ತಿರುಗುತ್ತಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ ವಾಹನ ಹಳ್ಳಕ್ಕೆ ಉರುಳಿರುವುದನ್ನು ಕಂಡು ಹತ್ತಿರಕ್ಕೆ ಹೋಗಿ ನೋಡಿದಾಗ ಪಕ್ಕದಲ್ಲೇ ಗಂಭೀರ ವಾಗಿ ಗಾಯಗೊಂಡು ನರಳಾಡುತ್ತಿದ್ದ ಚಾಲಕನನ್ನು ಕಂಡಿದ್ದಾರೆ. ಬಳಿಕ ವಿಷಯವನ್ನು ಮೇಲಧಿಕಾರಿಗಳಿಗೆ ತಿಳಿಸಿ ಆ್ಯಂಬುಲೆನ್ಸ್‌ ಮೂಲಕ ಗಾಯಾಳುವನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಚಾಲಕ ಮಧ್ಯಾಹ್ನದ ವೇಳೆಗೆ ಮೃತಪಟ್ಟಿದ್ದಾನೆ.

Advertisement

ಬೆಲೆ ಬಾಳುವ ಮರಗಳಿವೆ: ಇನ್ನೂ ಇಂಡುವಾಳು ಪ್ರಕೃತಿ ಉದ್ಯಾನವನದಲ್ಲಿ ತೇಗ, ಹೊನ್ನೆ, ಬೀಟೆ ಸೇರಿದಂತೆ ಹಲವಾರು ಬೆಲೆಬಾಳುವ ಮರಗಳು ಬೆಳೆದು ನಿಂತಿವೆ. ಉದ್ಯಾನದಲ್ಲಿರುವ ಮರಗಳನ್ನು ರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಂಪೂರ್ಣ ವಿಫ‌ಲರಾಗಿದ್ದಾರೆ. ಹಾಲಿ ಇರುವ ಮರಗಳ ರಕ್ಷಣೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಪರಿಣಾಮ ನಿರಂತರವಾಗಿ ಮರಗಳ ಲೂಟಿ ನಡೆಯುತ್ತಿರುವುದರಿಂದ ಉದ್ಯಾನ ಬೋಳಾಗುತ್ತಲೇ ಇದೆ.

ಗಿಡ-ಮರ ಬೆಳೆಸುವ ಆಸಕ್ತಿ ಇಲ್ಲ: ಹಿಂದೆಲ್ಲಾ ಇಂಡುವಾಳು ಪ್ರಕೃತಿ ಉದ್ಯಾನದಲ್ಲಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಗಿಡ-ಮರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸುವುದನ್ನು ರೂಢಿಸಿಕೊಂಡಿದ್ದರು. ನರ್ಸರಿಯಿಂದ ಬೇವು, ಹೊನ್ನೆ, ಬೀಟೆ, ತೇಗ, ಹಲಸು ಸೇರಿದಂತೆ ವಿವಿಧ ಜಾತಿಯ ಮರಗಳನ್ನು ನೆಟ್ಟು ಬೆಳೆಸುತ್ತಿದ್ದರು.

ಈಗ ಉದ್ಯಾನದ ಬಹುತೇಕ ಭಾಗ ಬೋಳು ಬೋಳಾಗಿದ್ದರೂ ಅಲ್ಲಿ ಯಾವುದೇ ಗಿಡ-ಮರಗಳನ್ನು ನೆಡುತ್ತಲೂ ಇಲ್ಲ, ಪ್ರಕೃತಿ ಉದ್ಯಾನವನ್ನು ಗಿಡ- ಮರಗಳಿಂದ ಕೂಡಿರುವಂತೆ ಮಾಡಿ ಸುಂದರ ಪರಿಸರ ವನ್ನು ಕಾಪಾಡುವತ್ತಲೂ ಆಸಕ್ತಿ ತೋರುತ್ತಿಲ್ಲ ಎನ್ನುವುದು ಮೊಳೆಕೊಪ್ಪಲು ಗ್ರಾಮದ ಪ್ರಕಾಶ್‌ ಹೇಳುವ ಮಾತು.

ನಮ್ಮ ತಂದೆಯವರು ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ಸ್ವಲ್ಪ ಜಾಗವೂ ಬಿಡದಂತೆ ಗಿಡ-ಮರಗಳನ್ನು ನೆಟ್ಟು ಬೆಳೆಸಿದ್ದರು. ಅವರ ಕಾಲದ ಮರಗಳು ಇಂದು ಬೃಹದಾಕಾರವಾಗಿ ಬೆಳೆದು ನಿಂತಿವೆ. ರಜಾದಿನಗಳಲ್ಲಿ ಹೊರಗಿನಿಂದ ಮೋಜು-ಮಸ್ತಿಗೆಂದು ಇಲ್ಲಿಗೆ ಬರುವವರೂ ಇದ್ದಾರೆ. ಅವರೆಲ್ಲರೂ ಉತ್ತಮ ಜಾತಿಯ ಮರಗಳು ಎಲ್ಲೆಲ್ಲಿವೆ ಎಂದು ಗುರುತು ಮಾಡಿಕೊಳ್ಳುವುದಕ್ಕೂ ಅನುಕೂಲ ವಾಗಿದೆ. ಅದಕ್ಕಾಗಿ ಉದ್ಯಾನ ಪ್ರವೇಶಿಸುವವರನ್ನು ಮೊದಲು ನಿಷೇಧಿಸಬೇಕು ಎಂದು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next