Advertisement

ಮೊಟೊ ಯೋಗಾ! ಬೈಕ್‌ ರೈಡರ್‌ಗಳ ಫಿಟ್ನೆಸ್‌ ಮಂತ್ರ

12:43 PM Jun 23, 2019 | Vishnu Das |

ನಿನ್ನೆ ಇಡೀ ದಿನ ವಿಶ್ವದಾದ್ಯಂತ ಯೋಗದ್ದೇ ಧ್ಯಾನ. ಇಂದೂ ಅದು ತಣ್ಣಗಾಗಿಲ್ಲ. ಆದರೆ, ಇದು ಯೋಗದ ಇನ್ನೊಂದು ರೂಪ. “ಮೋಟೊ ಯೋಗ’! ಬೈಕರ್ಗಳಿಗೆ ಯೋಗದ ಮೂಲಕ ಫಿಟ್‌ನೆಸ್‌ ಮಂತ್ರ ಹೇಳುವ ವಿನೂತನ ವಿಧಾನ. ಇದನ್ನು ಜಗತ್ತಿಗೆ ಪರಿಚಯಿಸಿದ ಕನ್ನಡಿಗ, “ಯೋಗಬಂಧು ಪ್ರಶಾಂತ್‌’ ಇಂದು (ಜೂ.22) “ಮೋಟೊ ಯೋಗ ಡೇ’ ಅಂತಲೇ ಆಚರಿಸುತ್ತಿದ್ದಾರೆ…

Advertisement

ವೀಕೆಂಡ್‌ ಬರುತ್ತಿದ್ದಂತೆ, ಬೈಕಲ್ಲಿ ರೊಯ್ಯಂತ ಲಾಂಗ್‌ ರೈಡ್‌ ಹೊರಡುವವರನ್ನು ನೋಡಿರುತ್ತೀರಿ. ಬೈಕ್‌ನಲ್ಲಿ ಲೇಹ್‌-ಲಡಾಕ್‌ಗೆ ಟ್ರಿಪ್‌ ಹೋಗುವವರು, ಕನ್ಯಾಕುಮಾರಿಯಿಂದ ಕಾಶ್ಮೀರದ ನೆತ್ತಿ ಮುಟ್ಟಿ ಬರುವವರು ಹೀಗೆ, ಬೈಕೊಂದಿದ್ದರೆ ಸಾಕು ಅನ್ನುವವರ ಸಂಖ್ಯೆ ದಿನದಿನಕ್ಕೂ ಹೆಚ್ಚುತ್ತಿದೆ. ಇನ್ನೂ ಕೆಲವರಿಗೆ ಆ ಆಸೆ ಇದ್ದರೂ, “ಅಯ್ಯೋ, ಅಷ್ಟೆಲ್ಲಾ ದೂರ ರೈಡ್‌ ಮಾಡೋಕಾಗುತ್ತಾ?’ ಅನ್ನೋ ಅಂಜಿಕೆಯಿಂದ ಸುಮ್ಮನಿರುತ್ತಾರೆ. ಯಾಕಂದ್ರೆ, ನೂರಾರು ಕಿಲೋಮೀಟರ್‌ ಬೈಕ್‌ ಓಡಿಸುವುದು, ಸುಲಭದ ಮಾತಲ್ಲ. ಬೈಕ್‌ ಟ್ರಿಪ್‌ನ ಥ್ರಿಲ್‌ ಜೊತೆಗೆ, ಕೈಕಾಲು ನೋವು, ಬೆನ್ನು ನೋವು ಎಂಬಿತ್ಯಾದಿ ಸಂಕಟಗಳು ಬೈಕರ್‌ಗಳನ್ನು ಡ್ರಿಲ್‌ ಮಾಡಿ ಬಿಡುತ್ತವೆ. ಅಂಥ, ಬೈಕರ್ಗಳಿಗೆ ಯೋಗದ ಮೂಲಕ ಫಿಟ್‌ನೆಸ್‌ ಮಂತ್ರ ಹೇಳುವ ಕಾರ್ಯಕ್ರಮವೊಂದು ನಗರದಲ್ಲಿ ನಡೆಯುತ್ತಿದೆ.

“ಬಿಗ್‌ ಬೈಕಿಂಗ್‌ ಕಮ್ಯೂನ್‌’ ತಂಡದ ವತಿಯಿಂದ, ಯೋಗಬಂಧು ಪ್ರಶಾಂತ್‌ ನೇತೃತ್ವದಲ್ಲಿ “ಮೋಟೊ ಯೋಗ ದಿನಾಚರಣೆ’ ಹಮ್ಮಿಕೊಳ್ಳಲಾಗಿದೆ. ಜೂನ್‌ 22ರನ್ನು “ಮೋಟೊ ಯೋಗ ಡೇ’ ಎಂದು ಘೋಷಿಸಿರುವ ಬಿಗ್‌ ಬೈಕಿಂಗ್‌ ಕಮ್ಯೂನ್‌, ಬೈಕ್‌ ಕ್ರೇಝ್ ಉಳ್ಳ ನೂರಾರು ಮಂದಿಯನ್ನು ಒಂದೆಡೆ ಸೇರಿಸಿ ಯೋಗ ತರಬೇತಿ ನೀಡಲಿದೆ.

ಏನಿದು ಮೋಟೊ ಯೋಗ?
ಯೋಗದ ಮೂಲಕ ಬೈಕ್‌ ರೈಡಿಂಗ್‌ ಅನ್ನು ಇನ್ನಷ್ಟು ಮಜವಾಗಿಸುವುದು ಹೇಗೆ ಎಂದು ತಿಳಿಸಿಕೊಡುವ ಕಾರ್ಯಕ್ರಮವಿದು. ಬೈಕ್‌ ಓಡಿಸುವಾಗ ಕಾಡುವ ಬೆನ್ನುನೋವು, ಮಂಡಿನೋವು, ಸ್ನಾಯು ಸೆಳೆತ ನಿವಾರಣೆಗೆ ಯಾವ ಆಸನ ಮಾಡಬೇಕು, ದೂರದ ಪ್ರದೇಶಗಳಿಗೆ ಬೈಕ್‌ ರೈಡ್‌ ಹೊರಡುವ ಮುನ್ನ ಹೇಗೆ ಫಿಟ್‌ನೆಸ್‌ ಕಾಪಾಡಿಕೊಳ್ಳಬೇಕು ಎಂಬಿತ್ಯಾದಿ ವಿಷಯಗಳ ಕುರಿತು ಮಾಹಿತಿ, ಕಾರ್ಯಾಗಾರ ನಡೆಯಲಿದೆ. ಬೈಕರ್‌ಗಳಾದ ವೀಣಾ ಶೆಟ್ಟಿ, ಸಮೀರಾ ದಹಿಯ ಮತ್ತು ವಿಶ್ವಾಸ್‌ ಎಸ್‌.ಡಿ. ಕಾರ್ಯಾಗಾರ ನಡೆಸಿಕೊಡಲಿದ್ದಾರೆ.

ಕೆಲವರು ಸತತವಾಗಿ ಒಂದೆರಡು ತಿಂಗಳು ಬೈಕ್‌ನಲ್ಲಿ ಸುತ್ತುತ್ತಿರುತ್ತಾರೆ. ಅಂಥವರು ಬೈಕ್‌ ಅನ್ನು ಆಸರೆಯಾಗಿ ಹಿಡಿದು ಯಾವೆಲ್ಲಾ ಆಸನಗಳನ್ನು ಮಾಡಬಹುದು ಎಂದು ಯೋಗಬಂಧು ಪ್ರಶಾಂತ್‌ ತಿಳಿಸಿಕೊಡಲಿದ್ದಾರೆ. ಅವರು ಮೋಟಾರ್‌ ಬೈಕ್‌ ಮೇಲೆ ಕಠಿಣ ಆಸನಗಳನ್ನೂ ಲೀಲಾಜಾಲವಾಗಿ ಮಾಡಬಲ್ಲರು. ಜೊತೆಗೆ, ಧ್ಯಾನ, ಪ್ರಾಣಾಯಾಮ, ಆಕ್ಯುಪಂಕ್ಚರ್‌ ಬಗ್ಗೆ ಮಾಹಿತಿಯೂ ಇಲ್ಲಿ ಸಿಗಲಿದೆ. ಬೆನ್ನುನೋವು ಕಾಡದಂತೆ ತಡೆಯಲು ಯಾವ ಆಸನ, ಬೆನ್ನುನೋವು ಇರುವವರಿಗೆ ಯಾವ ಆಸನ ಎಂಬ ಮಾಹಿತಿಯನ್ನು ಪ್ರಶಾಂತ್‌ ನೀಡಲಿದ್ದಾರೆ.

Advertisement

12 ದೇಶ ಸುತ್ತಿರುವ ಯೋಗಬಂಧು
ಮೋಟೊ ಯೋಗ ದಿನದ ನೇತೃತ್ವ ವಹಿಸಿರುವ ಯೋಗಬಂಧು ಪ್ರಶಾಂತ್‌, ಜೆಪಿ ನಗರದ “ಓಜಸ್‌ ಯೋಗ ಅಕಾಡೆಮಿ’ಯ ಸ್ಥಾಪಕರು. ಮೂಲತಃ ಬೆಂಗಳೂರಿನವರೇ ಆದ ಪ್ರಶಾಂತ್‌ 15 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದು, 10 ವರ್ಷಗಳಿಂದ ಯೋಗ ಶಿಕ್ಷಕರಾಗಿದ್ದಾರೆ. ಜರ್ಮನಿ, ದುಬೈ, ಸಿಡ್ಜರ್‌ಲ್ಯಾಂಡ್‌, ಥಾಯ್‌ಲ್ಯಾಂಡ್‌ ಸೇರಿ 12 ದೇಶಗಳಲ್ಲಿ ಯೋಗ ಶಿಬಿರ ನಡೆಸಿರುವ ಖ್ಯಾತಿ ಇವರದ್ದು. ಯೋಗದ ಅತ್ಯಂತ ಕಠಿಣ ಆಸನಗಳನ್ನು ಮೋಟಾರ್‌ ಬೈಕ್‌ ಮೇಲೆ ಲೀಲಾಜಾಲವಾಗಿ ಮಾಡಬಲ್ಲ ಇವರು, ಬೈಕ್‌ ರೈಡರ್ಗಳಿಗೆ ಫಿಟ್‌ನೆಸ್‌ ಟಿಪ್ಸ್‌ ನೀಡಲಿದ್ದಾರೆ.

ಕನ್ಯಾಕುಮಾರಿ ಟು ಕಾಶ್ಮೀರ
ಯೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಯೋಗಬಂಧು ಪ್ರಶಾಂತ್‌ ಮತ್ತು ತಂಡದವರು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಬೈಕ್‌ ರ್ಯಾಲಿ ಹೊರಡಲಿದ್ದಾರೆ. ಈ ಪ್ರಯಾಣದ ಮಧ್ಯೆ ಅಲ್ಲಲ್ಲಿ ಉಚಿತ ಯೋಗ ಶಿಬಿರ, ಯೋಗದ ಮಹತ್ವವನ್ನು ಸಾರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸರ್ಕಾರಿ ಶಾಲೆ, ಗ್ರಾಮ ಕೇಂದ್ರ ಮುಂತಾದೆಡೆ ಜನರನ್ನು ಸೇರಿಸಿ, ಶಿಬಿರ ನಡೆಸುವ ಇರಾದೆ ತಂಡಕ್ಕಿದೆ. ಜುಲೈ 1ರಂದು ಮೂರು ಬೈಕ್‌ಗಳಲ್ಲಿ ಬೆಂಗಳೂರಿನಿಂದ ಕನ್ಯಾಕುಮಾರಿ, ಅಲ್ಲಿಂದ ಕಾಶ್ಮೀರಕ್ಕೆ ತಂಡ ಪ್ರಯಾಣ ಬೆಳೆಸಲಿದೆಯಂತೆ.

ಮೋಟೊ ಯೋಗ ಅಂದರೆ, ಬೈಕ್‌ ಮೇಲೆ ಯೋಗಾಸನ ಮಾಡುವುದಲ್ಲ. ಯೋಗದಲ್ಲಿ ಆ ರೀತಿಯ ಯಾವ ಆಸನಗಳೂ ಇಲ್ಲ. ಹತ್ತು ವರ್ಷಗಳಿಂದ ಅಭ್ಯಾಸ ಮಾಡಿದ್ದರ ಫ‌ಲವಾಗಿ ನಾನು ಬೈಕ್‌ ಮೇಲೆ ಬ್ಯಾಲೆನ್ಸ್‌ ಮಾಡುತ್ತಾ, ಯೋಗಾಸನ ಮಾಡಬಲ್ಲೆ ಅಷ್ಟೆ. ಮೋಟೊ ಯೋಗ ದಿನದ ಉದ್ದೇಶ, ಲಾಂಗ್‌ ರೈಡ್‌ ಹೋಗುವ ಬೈಕರ್ಗಳಿಗೆ ಯೋಗದ ಮೂಲಕ ಫಿಟ್‌ನೆಸ್‌ ಮಾಹಿತಿ ನೀಡುವುದು. ಹೇಗೆ, ಹಿರಿಯರಿಗೆ, ಮಹಿಳೆಯರಿಗೆ, ಗರ್ಭಿಣಿಯರಿಗೆ, ಮಕ್ಕಳಿಗೆ ಅಂತ ಪ್ರತ್ಯೇಕವಾಗಿ ಯೋಗ ಕಮ್ಯುನಿಟಿ ಇರುತ್ತದೋ, ಹಾಗೇ ಇದು ಬೈಕ್‌ ಓಡಿಸುವವರಿಗೆ.
– ಯೋಗಬಂಧು ಪ್ರಶಾಂತ್‌, ಯೋಗ ಶಿಕ್ಷಕ

ಎಲ್ಲಿ?: ಮೆಜೆಸ್ಟೀನ್‌ ನ್ಪೋರ್ಟ್ಸ್, ಎಚ್‌ಎಸ್‌ಆರ್‌ ಲೇಔಟ್‌
ಯಾವಾಗ?: ಜೂ. 22, ಶನಿವಾರ, ಬೆಳಗ್ಗೆ 6.30ರಿಂದ

– ಪ್ರಿಯಾಂಕ

Advertisement

Udayavani is now on Telegram. Click here to join our channel and stay updated with the latest news.

Next