ಗಂಗೊಳ್ಳಿ: ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಸಮಾಜಮುಖೀ ಚಟುವಟಿಕೆಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯ. ನಮ್ಮಲ್ಲಿ ಸಮಾಜಮುಖೀ ಚಿಂತನೆಯನ್ನು ಬೆಳೆಸಲು ಎನ್ನೆಸ್ಸೆಸ್ ಪ್ರೇರಣೆ.
ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನವೂ ಆಗುತ್ತದೆ ಎಂದು ಹೊಸಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ರಂಜಿತ್ ಶೆಟ್ಟಿ ಹೇಳಿದರು.ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ಪ್ರಸಕ್ತ ಶೈಕ್ಷಣಿಕ ವರ್ಷದ ದೈನಂದಿನ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು
ಎನ್ನೆಸ್ಸೆಸ್ ಎಂದರೆ ಜೀವನದಲ್ಲಿ ನಮ್ಮನ್ನು ನಾವು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಿಕೊಳ್ಳಲು ನಮಗೆ ಸಿಗುವ ಒಂದು ಅತ್ಯುತ್ತಮ ಅವಕಾಶ. ಅದನ್ನು ವಿದ್ಯಾರ್ಥಿಗಳು ಸರಿಯಾದ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳಬೇಕು ಎಂದವರು ಕರೆ ನೀಡಿದರು.
ಪ್ರಾಂಶುಪಾಲೆ ಕವಿತಾ ಎಂ.ಸಿ. ಅಧ್ಯಕ್ಷತೆ ವಹಿಸಿದ್ದರು. ಸಲಹಾ ಸಮಿತಿ ಸದಸ್ಯ ಭಾಸ್ಕರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿ ಶ್ರೀನಿಧಿ ಶಿಬಿರದ ಅನುಭವಗಳನ್ನು ಹಂಚಿಕೊಂಡರು.
ವಿದ್ಯಾರ್ಥಿನಿಯರಾದ ಪೂಜಾ ಸ್ವಾಗತಿಸಿ, ಚೈತ್ರಾ ವರದಿ ವಾಚಿಸಿದರು. ಚಿತ್ರಾ ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸುಗುಣ ಆರ್. ಕೆ. ವಂದಿಸಿದರು.