Advertisement

ಸಾಕು ಮಗಳಿಗಾಗಿ ತಾಯಿಯ ಸಂಕಷ್ಟ 

03:44 PM Oct 03, 2018 | Team Udayavani |

ಕಲಬುರಗಿ: ‘ಕರುಣಾಮಯಿ’ ತಾಯಿ ಮತ್ತು ‘ಅನಾಥ’ ಮಗಳ ಸಂಬಂಧಕ್ಕೆ ಈಗ ಕಾನೂನು ಸವಾಲಾಗಿದೆ. ಏಳು ವರ್ಷಗಳ ಹಿಂದೆ ಕಸದ ಗುಂಡಿಯಲ್ಲಿ ಬಿದ್ದಿದ್ದ ಹೆಣ್ಣು ಶಿಶುವೊಂದನ್ನು ಸಾಕಿ ಬೆಳೆಸಿದ ಮಹಿಳೆಯೊಬ್ಬರು ಈಗ ಕಾನೂನಿನ ಚೌಕಟ್ಟಿನಲ್ಲಿ ಸಿಲುಕಿದ್ದಾರೆ. ಈ ಮಹಿಳೆಯೇ ತನ್ನ ತಾಯಿ ಎಂದು ತಿಳಿದಿದ್ದ ಮಗುವೀಗ ಸಂಕಷ್ಟಕ್ಕೆ ಒಳಗಾಗುವಂತಾಗಿದೆ.

Advertisement

ನಗರದ ಗುಬ್ಬಿ ಕಾಲೋನಿ ನಿವಾಸಿ ಜಯಶ್ರೀ ಗುತ್ತೇದಾರ ಎಂಬುವರು ಕಳೆದ ಏಳು ವರ್ಷಗಳ ಹಿಂದೆ ಕಸದ ಗುಂಡಿಯಲ್ಲಿ ಬಿದ್ದಿದ್ದ ಅನಾಥ ಶಿಶುವೊಂದನ್ನು ತಂದು ಹೆತ್ತ ಮಗಳಂತೆ ನೋಡಿಕೊಳ್ಳುತ್ತಿದ್ದಾರೆ. ಆ ಮಗುವಿಗೆ ಶಿಕ್ಷಣವನ್ನು ಕೊಡಿಸುತ್ತಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಅನಧಿಕೃತವಾಗಿ ಮಗು ಸಾಕಲಾಗುತ್ತಿದೆ ಎಂದು ಯಾರೋ ಚೈಲ್ಡ್‌ಲೈನ್‌ಗೆ ದೂರು ನೀಡಿದ್ದೇ ಈ ಸಂಕಷ್ಟಕ್ಕೆ ಕಾರಣವಾಗಿದೆ. ಇದರಿಂದ ಮಕ್ಕಳ ಸಂರಕ್ಷಣಾ ಸಮಿತಿಯವರು ಎರಡು ತಿಂಗಳಿಂದ ಮಗುವನ್ನು ತಮಗೆ ಒಪ್ಪಿಸುವಂತೆ ಜಯಶ್ರೀ ಅವರ ಬೆನ್ನು ಬಿದ್ದಿದ್ದಾರೆ.

2012ರಲ್ಲಿ ದೊರಕಿತ್ತು ಮಗು: 2012ರ ಅಕ್ಟೋಬರ್‌ 8ರಂದು ಗುಬ್ಬಿಯ ಕಾಲೋನಿಯ ಈಡಿಗ ಸಮಾಜದ ಆವರಣದ ಮುಳ್ಳು ಕಂಟಿಯಲ್ಲಿದ್ದ ಕಸದ ಗುಂಡಿಯಲ್ಲಿ ಈ ಮಗು ದೊರಕಿತ್ತು. ಆಗ ಇದನ್ನು ಕಂಡ ಜನರು ಮರುಕ ವ್ಯಕ್ತಪಡಿಸಿದ್ದರೇ ವಿನಃ ರಕ್ಷಣೆಗೆ ಮುಂದಾಗಿರಲ್ಲಿಲ್ಲ. ಇದೇ ವೇಳೆ ತಮ್ಮ ಮನೆಯಿಂದ ಹೊರಗೆ ಹೊರಟಿದ್ದ ಜಯಶ್ರೀ ಅವರು ಈ ಮಗುವನ್ನು ಎತ್ತಿಕೊಂಡು ಹೋಗಿ ಸಲುಹಿದ್ದರು.

ಹೆತ್ತ ಮಗಳಂತೆ ಬೆಳೆಸಿದ್ದೇನೆ: ಯಾರೋ ಬೀಸಾಡಿ ಹೋಗಿದ್ದ ಶಿಶುವಿನ ದೇಹದ ಮೇಲೆ ಇರುವೆಗಳು ಓಡಾಡುತ್ತಿದ್ದವು. ಹಾಗೆ ಬಿಟ್ಟಿದ್ದರೆ ಮಗು ಬೀದಿ ನಾಯಿಗಳ ಪಾಲಾಗುತ್ತಿತ್ತು. ಇಂತಹ ಶಿಶು ಎತ್ತಿಕೊಂಡು ಬಂದು ಹೆತ್ತ ಮಗಳಂತೆ ಬೆಳೆಸಿದ್ದೇನೆ. ಆರೈಕೆ ಮಾಡಿದ್ದೇನೆ. ಮಗು ದೊರೆತ ದಿನ ದಸರಾ ಅಮಾವಾಸ್ಯೆ ಇತ್ತು. ಈಕೆ ಭವಾನಿ ರೂಪವೆಂದು ಭಾವಿಸಿ ಐದು ತಿಂಗಳು ತುಂಬಿದಾಗ ಭವಾನಿ ದೇವಸ್ಥಾನದಲ್ಲೇ ತೊಟ್ಟಿಲು ಕಾರ್ಯಕ್ರಮ ಹಮ್ಮಿಕೊಂಡು ‘ವೈಷ್ಣವಿ’ ಎಂದು ನಾಮಕರಣ ಮಾಡಿರುವೆ. ನನಗೆ ಒಬ್ಬ ಗಂಡು, ಇಬ್ಬರು ಹೆಣ್ಣು ಮಕ್ಕಳಿದ್ದು, ವೈಷ್ಣವಿ ನನಗೆ ನಾಲ್ಕನೇ ಮಗಳು ಎಂದು ಜಯಶ್ರೀ ಹೇಳುತ್ತಾರೆ.

ಆಂಗ್ಲ ಮಾಧ್ಯಮದಲ್ಲಿ ಒಂದೇ ತರಗತಿ ಓದುತ್ತಿರುವ ವೈಷ್ಣವಿಗೆ ನನ್ನ ಮೂರು ಮಕ್ಕಳಿಗೆ ಇರುವಷ್ಟೇ ಹಕ್ಕಿದೆ. ನಮ್ಮ ಆಸ್ತಿಯಲ್ಲಿ ಆಕೆಗೂ ಒಂದು ಪಾಲಿದೆ. ಕಳೆದು ಎರಡು ತಿಂಗಳ ತನಕ ವೈಷ್ಣವಿ ನಾನೇ ಅಮ್ಮ ಎಂದು ತಿಳಿದಿದ್ದಳು. ಆದರೆ ಯಾರ್ಯಾರೋ ಮನೆಗೆ ಬರುತ್ತಿರುವುದರಿಂದ ಆಕೆಯಲ್ಲಿ ಭಯ ಕಾಡುತ್ತಿದೆ. ನಮಗೂ ಆತಂಕ ಎದುರಾಗಿದೆ ಎನ್ನುತ್ತಾರೆ ಜಯಶ್ರೀ.

Advertisement

ಮಾನವೀಯ ದೃಷ್ಟಿಯಲ್ಲಿ ದತ್ತು ಕೊಡಿ: ಯಾರಧ್ದೋ ಮಗುವನ್ನು ಮನೆಯಲ್ಲಿಟ್ಟುಕೊಳ್ಳುವುದು ಕಾನೂನಿನಡಿ ತಪ್ಪೆಂದು ಮಕ್ಕಳ ಸಂರಕ್ಷಣಾ ಸಮಿತಿಯವರು ಹೇಳಿದ್ದಾರೆ. ನಿಜ. ಕಾನೂನನ್ನು ನಾನೂ ಒಪ್ಪುತ್ತೇನೆ. ಅದರ ಮುಂದೆ ತಲೆ ಬಾಗುತ್ತೇನೆ. ಕಾನೂನಿನ ಪ್ರಕಾರವೇ ವೈಷ್ಣವಿಯನ್ನು ದತ್ತು ಕೊಡಿಯೆಂದು ಕೇಳಿಕೊಂಡಿದ್ದೇನೆ. ಇಲ್ಲವೇ ಮಾನವೀಯ ದೃಷ್ಟಿಯಲ್ಲಾದರೂ ದತ್ತು ಕೊಡಿ. ಒಟ್ಟಿನಲ್ಲಿ ನಮ್ಮಿಂದ ವೈಷ್ಣವಿಯನ್ನು ದೂರ ಮಾಡಬೇಡಿ ಎನ್ನುತ್ತಾರೆ ಜಯಶ್ರೀ.

ಸಚಿವ ಖರ್ಗೆ ಅಭಯ: 15 ದಿನಗಳ ಹಿಂದೆ ಮಗು ಮತ್ತು ನಮ್ಮ ನಡುವಿನ ಬಾಂಧವ್ಯ ಬಗ್ಗೆ ಸ್ಥಳೀಯರಿಂದ ಮಕ್ಕಳ ಸಂರಕ್ಷಣಾ ಸಮಿತಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ ಬಳಿಕ ಸುಮ್ಮನಿದ್ದರು. ಆದರೆ ಸೋಮವಾರ ಅಧಿಕಾರಿಗಳು ಏಕಾಏಕಿ ಮನೆಗೆ ಬಂದು ಮಗು ನಮಗೆ ಒಪ್ಪಿಸಿ, ಇಲ್ಲವಾದರೆ ಬಂಧಿಸಬೇಕಾಗುತ್ತದೆ ಎಂದು ಬೆದರಿಸಿದರು. ಹೀಗಾಗಿ ದಿಕ್ಕು ತೋಚದೆ ಮಗಳು ವೈಷ್ಣವಿ ಸಮೇತ ಸುತ್ತಮುತ್ತಲಿನ ಮಹಿಳೆಯರ ಜೊತೆಗೂಡಿ ಎಸ್‌ಪಿ ಕಚೇರಿಗೆ ತೆರಳಿದ್ದೆವು. ಆಗ ಮಿನಿ ವಿಧಾನಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಎಸ್‌ಪಿ ಪಾಲ್ಗೊಂಡಿದ್ದಾರೆಂದು ತಿಳಿಯಿತು. ನಂತರ ಎಸ್‌ಪಿ ಕಚೇರಿಯಿಂದ ಮಿನಿ ವಿಧಾನಸಭೆಗೆ ತೆರಳಿ ಸಚಿವ ಪ್ರಿಯಾಂಕ್‌ ಖರ್ಗೆರನ್ನು ಭೇಟಿ ಮಾಡಿ ನನ್ನ ಸಂಕಷ್ಟ ವಿವರಿಸಿದೆ. ಮಗು ವೈಷ್ಣವಿಯನ್ನು ನಮ್ಮ ಬಳಿಯೇ ಉಳಿಸಿಕೊಳ್ಳುವಂತೆ ಸಚಿವರು ಸೂಚಿಸಿದ್ದಾರೆ. ಅಲ್ಲದೇ, ಸ್ಥಳದಲ್ಲಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಉಪನಿರ್ದೇಶಕರನ್ನು ಕರೆದು ನಮಗೆ ಕಿರುಕುಳ ನೀಡದಂತೆ ಹೇಳಿದ್ದಾರೆ. ಕಾನೂನು ರೀತಿಯಲ್ಲಿ ಸಮಸ್ಯೆ ಬಗೆಹರಿಸಿ ಮಗುವನ್ನು ನಿಮ್ಮ ಬಳಿಯೇ ಇರುವಂತೆ ಮಾಡುತ್ತೇನೆ. ಜತೆಗೆ ಯಾರಾದರೂ ತೊಂದರೆ ಕೊಟ್ಟರೆ ತಮ್ಮನ್ನು ಸಂಪರ್ಕಿಸುವಂತೆ ಸಚಿವರು ಅಭಯ ನೀಡಿದ್ದಾರೆ. ಇದು ಜಯಶ್ರೀ ಅವರಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ.

ಎಸ್‌ಪಿ ಕಚೇರಿಯಲ್ಲಿಂದು ಸಭೆ
ಮಗು ವೈಷ್ಣವಿಯನ್ನು ತಾಯಿ ಜಯಶ್ರೀ ಅವರ ಮಡಿಲಲ್ಲೇ ಮುಂದುವರಿಸುವ ನಿಟ್ಟಿನಲ್ಲಿ ಕಾನೂನಡಿ ಮುಂದಿನ ಹೆಜ್ಜೆ ಇಡಲು ಆ.3ರಂದು ಎಸ್‌ಪಿ ಕಚೇರಿಯಲ್ಲಿ ಸಭೆ ಕರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next