Advertisement

ಮಕ್ಕಳ ಪಾಲನೆ-ಪೋಷಣೆಯಲ್ಲಿ ತಾಯಿ ಪಾತ್ರ ಮಹತದ್ದು 

05:47 PM Jun 25, 2018 | |

ಹಾವೇರಿ: ಮಕ್ಕಳ ಸಾಧನೆಗೆ ಬಡತನ ಅಡ್ಡಿ ಬರುವುದಿಲ್ಲ. ಅವರ ಗುರಿ ಸಾಧನೆಗೆ ಸಹಕರಿಸಬೇಕು. ಅವರ ಭವಿಷ್ಯ ತಾಯಂದಿರ ಕೈಯಲ್ಲಿದೆ ಎಂದು ಶಿಕ್ಷಣ ಇಲಾಖೆ ಕ್ಷೇತ್ರ ಸಮನ್ವಯಾಧಿಕಾರಿ ಸಿ.ಎಸ್‌. ಭಗವಂತಗೌಡರ ಹೇಳಿದರು. ತಾಲೂಕಿನ ಹಳೇರಿತ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಎಸ್‌.ಎಲ್‌. ಪಾಟೀಲ ತಮ್ಮ ತಂದೆ ಸ್ಮರಣಾರ್ಥ ಸ್ಫೂರ್ತಿ ವಿದ್ಯಾ ಕುಟೀರದ ಸಹಯೋಗದಲ್ಲಿ ಏರ್ಪಡಿಸಿದ್ದ ಮಕ್ಕಳಿಗೆ ಬೋಧನಾ ಸಲಕರಣೆಗಳ ಕೊಡುಗೆ ಹಾಗೂ ತಾಯಂದಿರ ಸಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

Advertisement

ಮಕ್ಕಳ ಲಾಲನೆ, ಪಾಲನೆಯಲ್ಲಿ ತಂದೆಗಿಂತ ತಾಯಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳು ಹಾಳಾಗಲು ತಾಯಿಯೇ ಕಾರಣವಾಗುತ್ತಾಳೆ. ಶಿವಾಜಿಯ ತಾಯಿ, ಭಗತ್‌ಸಿಂಗ್‌ನ ತಾಯಿಯ ಪ್ರೇರಣೆ ಮಹಾನ್‌ ಸಾಧಕರನ್ನಾಗಿ ಮಾಡಿತು. ತಾಯಿ ಮನಸ್ಸು ಮಾಡಿ ಸಮಯೋಚಿತ ಮಾರ್ಗದರ್ಶನ ಉತ್ತೇಜನ ಮಾಡಬೇಕು ಎಂದರು.

ನಿವೃತ್ತ ಪ್ರಾಚಾರ್ಯ ನಾಗನಗೌಡ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿ, ಶಾಲೆಗೆ ಐದು ನೂರು ಪುಸ್ತಕಗಳನ್ನು ಹಾಗೂ 7ನೇ ವರ್ಗದಲ್ಲಿ ಪ್ರಥಮ ಸ್ಥಾನ ಪಡೆದ ಬಾಲಕ-ಬಾಲಕಿಯರಿಗೆ ತಲಾ ಐದು ನೂರು ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿದರು. ಶಿಕ್ಷಣ ಚಿಂತಕ ನಿಜಲಿಂಗಪ್ಪ ಬಸೇಗಣ್ಣಿ ಮಾತನಾಡಿ, ಮಕ್ಕಳ ಬಗ್ಗೆ ಶಿಕ್ಷಕರಷ್ಟೇ ಜವಾಬ್ದಾರಿ ಪಾಲಕರದ್ದೂ ಇದೆ. ತಂದೆ-ತಾಯಿ ವ್ಯಕ್ತಿತ್ವ, ಆದರ್ಶ ಮಕ್ಕಳಿಗೆ ಅನುಕರಣೀಯವಾಗಬೇಕು. ಸಮರ್ಥ ಶಿಕ್ಷಕರು ರಾಷ್ಟ್ರ ರಕ್ಷಕರು. ಹಳ್ಳಿಗಳ ಸುಧಾರಣೆ ಶಾಲೆಗಳನ್ನು ಅವಲಂಬಿಸಿದೆ. ನಮ್ಮ ಬದುಕು ಮಕ್ಕಳಿಗೆ ಮೀಸಲಾಗಿರಬೇಕು ಎಂದರು.

ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ಮಕ್ಕಳ ಗೆಲುವು ತಂದೆ-ತಾಯಿ ಪಾಲಿಗೆ ಹರುಷ, ಸಂಭ್ರಮವನ್ನು ತಂದು ಕೊಡುವುದು ನಿಜ. ಆದರೆ ಕೇವಲ ಸಂತೋಷವನ್ನು ಅನುಭವಿಸಿದರೆ ಸಾಲದು. ಅವರು ತಮ್ಮ ಜವಾಬ್ದಾರಿಯನ್ನು ಅರಿಯಬೇಕು. ಮಕ್ಕಳಿಗೆ ತಂದೆ- ತಾಯಿಯರೇ ಮಾದರಿ. ಮಕ್ಕಳು ಸತ್ಪ್ರಜೆಯಾಗಬೇಕಾದರೆ ನಾವೂ ಒಳ್ಳೆಯರಾಗಿರಬೇಕು ಎಂದರು. ತಾಪಂ ಸದಸ್ಯ ಮೃತ್ಯುಂಜಯ ವಗ್ಗಣ್ಣನವರ ಮಾತನಾಡಿ, ಎಲ್ಲ ದಾನಗಳಲ್ಲಿ ವಿದ್ಯಾದಾನ ಅತ್ಯಂತ ಶ್ರೇಷ್ಠ. ಮಕ್ಕಳೆದುರಿಗೆ ದುಶ್ಚಟಗಳಾಗಲಿ, ಜಗಳಗಳಾಗಲಿ ಮಾಡಬೇಡಿ. ಅವು ಮಕ್ಕಳ ಮೇಲೆ ಪ್ರಭಾವ ಬೀರುತ್ತವೆ. ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ ಎಂದರು.

ಶತಾಯುಷಿ ನಿವೃತ್ತ ಮುಖ್ಯಾಧ್ಯಾಪಕ ಎಂ.ಬಿ. ಹಿರೇಮಠ ಮಾತನಾಡಿ, ತಾಯಂದಿರ ಶಕ್ತಿ ಅಗಾಧವಾದದ್ದೂ ಅವರು ಏನೆಲ್ಲ ಮಾಡಲು ಸಾಧ್ಯ. ಮಕ್ಕಳು ತಪ್ಪು ಮಾಡಿದಾಗ ನಯವಾಗಿ ಸಿಟ್ಟು ಮಾಡಿ ಬುದ್ಧಿಮಾತು ಹೇಳಬೇಕು. ಮಹಾನ್‌ ಸಾಧಕರ ಚರಿತ್ರೆಗಳು ಮಕ್ಕಳಿಗೆ ಆದರ್ಶವಾಗಬೇಕು ಎಂದರು.

Advertisement

ಹೇಮನಗೌಡ ಪಾಟೀಲ, ಪ್ರೌಢಶಾಲೆ ಮುಖ್ಯ ಶಿಕ್ಷಕ ಎಂ.ಎಫ್‌. ಹುಳ್ಯಾಳ, ನಗರಸಭೆ ಮಾಜಿ ಸದಸ್ಯೆ ಸೌಭಾಗ್ಯ ಹಿರೇಮಠ, ಎಸ್‌ಡಿಎಂಸಿ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಗ್ರಾಪಂಅಧ್ಯಕ್ಷೆ ಕೆಂಚಮ್ಮ ಕಿತ್ತೂರ, ಯಲ್ಲಮ್ಮ ಪಾಟೀಲ, ಮುತ್ತಣ್ಣ ವಗ್ಗಣ್ಣನವರ, ಬಸಣ್ಣ ದೇಸೂರ, ರಾಜು ಡಂಬರಮತ್ತೂರ, ರಮೇಶ ಬಸೇಗಣ್ಣಿ, ಮಲಕಯ್ಯನವರು, ಗೋಪಾಳಿ ಇದ್ದರು. ನೂರಕ್ಕೂ ಅಧಿಕ ತಾಯಂದಿರು ಪಾಲ್ಗೊಂಡಿದ್ದರು. ಶಿಕ್ಷಕ ಬಿ.ವಿ. ಹಿರೇಮಠ ಸ್ವಾಗತಿಸಿದರು. ಎಚ್‌.ಬಿ. ಸಾಸ್ವಿಹಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಶಿಕ್ಷಕ ಎಸ್‌.ಬಿ. ಮಠದ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next