Advertisement

ಅಂಗನವಾಡಿ ಮಕ್ಕಳಿಗೆ ತಾಯಂದಿರ ಪಾಠ

10:55 PM Aug 26, 2020 | mahesh |

ಬಜಪೆ: ಪ್ರಾಥಮಿಕ ಹಾಗೂ ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ ಈಗಾಗಲೇ ವಿದ್ಯಾಗಮ ಯೋಜನೆಯಡಿ ಆನ್‌ಲೈನ್‌ ಹಾಗೂ ಅಫ್‌ಲೈನ್‌ ಮೂಲಕ ಶಿಕ್ಷಣ ಆರಂಭವಾಗಿದ್ದು ಇದೀಗ ಅಂಗನವಾಡಿ ಮಕ್ಕಳಿಗೂ ಪಾಠ ಅವರವರ ಮನೆಯಲ್ಲಿ ಆರಂಭವಾಗಿದೆ.

Advertisement

ಮನೆಯ ಅಂಗಳದಲ್ಲಿ ಅಂಗನವಾಡಿ
ಅಂಗನವಾಡಿ ಕೇಂದ್ರದಲ್ಲಿ ಶಾಲೆ ನಡೆಯುತ್ತಿಲ್ಲ ಅಥವಾ ಮಕ್ಕಳು ಬರುವಂತಿಲ್ಲ. ಹೀಗಾಗಿ ಮಕ್ಕಳ ತಾಯಿಯವರಿಂದಲೇ ಪಾಠ ನಡೆಸಲು ಯೋಚಿಸಲಾಗಿದೆ. ರಾಜ್ಯದೆಲ್ಲೆಡೆ ಈ ಕಾರ್ಯಕ್ರಮ ಆರಂಭ ವಾಗಿದ್ದು, ಅವಿಭಜಿತ ದ.ಕ. ಜಿಲ್ಲೆಯಲ್ಲಿಯೂ ಯಶಸ್ವಿಯಾಗಿ ನಡೆಯುತ್ತಿದೆ.  ಅಂಗನವಾಡಿ ಮಕ್ಕಳ ತಾಯಂದಿರ ವಾಟ್ಸಾಪ್‌ ಗ್ರೂಪ್‌ ಮಾಡಲಾಗಿದೆ. ಅಂಗನವಾಡಿ ಶಿಕ್ಷಕರು ತಾಯಂದಿರ ವಾಟ್ಸಾಪ್‌ಗೆ ವಾರಕ್ಕೊಂದು ವಿಷಯ ನೀಡುತ್ತಿದ್ದು ಮಕ್ಕಳಿಗೆ ಹೇಗೆ ಪಾಠ ಮಾಡಬೇಕೆಂದು ತಿಳಿಸಲಾಗುತ್ತಿದೆ. ಇದರ ಜತೆ ಮನೆಗೆ ಆಹಾರ ಕೊಟ್ಟು ಮನೆಯಲ್ಲಿಯೇ ಮಕ್ಕಳಿಗೆ ತಾಯಿಂದಿರು ಅಡುಗೆ ಮಾಡುತ್ತಿದ್ದಾರೆ. ಈ ಕಾರ್ಯಕ್ರಮ ಆರಂಭವಾಗಿ ಎರಡು ವಾರವಷ್ಟೇ ಆಗಿದೆ. ಮಕ್ಕಳ ಚಟುವಟಿಕೆ ಬಗ್ಗೆ ಫೋಟೋ, ವೀಡಿಯೋ ಮಾಡಿ ಶಿಕ್ಷಕಿಗೆ ಕಳುಹಿಸಬೇಕಾಗಿದೆ. ಶಿಕ್ಷಕಿಯರು ಒಳ್ಳೆಯ ಫೋಟೋ, ವೀಡಿಯೋಗಳನ್ನು ಜಿಲ್ಲಾ ಗ್ರೂಪ್‌ಗೆ ಕಳುಹಿಸುತ್ತಾರೆ. ಕಳೆದ ವಾರ ಹೂ ಗಳ ವಿಷಯ ಬಗ್ಗೆ ಕಲಿಸಲಾಗಿತ್ತು. ಈ ವಾರ ಬಣ್ಣಗಳ ವಿಷಯ ಕಲಿಕೆ ಮಾಡಲು ತಾಯಿಯಂದಿರಿಗೆ ನೀಡಲಾಗಿದೆ.

ತಾಯಂದಿರ ವಾಟ್ಸಾಪ್‌ ಗ್ರೂಪ್‌
ಸಣ್ಣ ಮಕ್ಕಳಿಗೆ ಮೊಬೈಲ್‌ ಶಿಕ್ಷಣ ಸಾಧ್ಯವಿಲ್ಲದ ಕಾರಣ ರಾಜ್ಯದ ಎಲ್ಲ ಅಂಗನವಾಡಿ ಮಕ್ಕಳ ತಾಯಿಂದಿರ ವಾಟ್ಸಾಪ್‌ ಗ್ರೂಪ್‌ ಮಾಡಲಾಗಿದೆ.ಅಂಗನವಾಡಿ ಶಿಕ್ಷಕಿ ವಾರಕ್ಕೊಮ್ಮೆ ಎಲ್ಲ ಮನೆಗಳಿಗೆ ಭೇಟಿ ನೀಡಿ, ಮಕ್ಕಳ ಚಟುವಟಿಕೆಗಳನ್ನು ಪರಿಶೀಲನೆ ಮಾಡಿ ಮಾರ್ಗದರ್ಶನ ನೀಡುತ್ತಾರೆ. ತಾಯಿಂದಿರ ಸಭೆ ಹಾಗೂ ಬಾಲ ವಿಕಾಸ ಸಮಿತಿಯ ಸಭೆಯಲ್ಲಿಯೂ ಕೂಡ ಈ ಬಗ್ಗೆ ಹೇಳಲಾಗುತ್ತದೆ.

ಆಕರ್ಷಣೀಯ
ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣದಲ್ಲಿ ಆಸಕ್ತಿ ಮೂಡಿಸಲು ತಾಯಂದಿರ ಮೂಲಕ ಮನೆಯಲ್ಲಿಯೇ ಆಟ, ಪಾಠ ಕಲಿಸುವಂತಹ ಕಾರ್ಯಕ್ರಮ ಆಕರ್ಷಣೀಯವಾಗಿದೆ. ಮಕ್ಕಳ ಎಲ್ಲಾ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳನ್ನು ದಿನಾಲೂ ಮಾಡಲಾಗುತ್ತದೆ ಎಂದು ಕಟೀಲು ವಲಯದ ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಇಂದಿರಾ ತಿಳಿಸಿದ್ದಾರೆ.

ಕಲಿಕೆ ಸಾಗುತ್ತಿದೆ
ಬೆಂಗಳೂರಿನ ಮಕ್ಕಳ ಜಾಗೃತಿ ಸಂಸ್ಥೆಯು ಅಂಗನವಾಡಿ ಮಕ್ಕಳಿಗೆ ಮನೆಯಲ್ಲಿ ತಾಯಂದಿರಿಂದಲೇ ಪಾಠ ಎಂಬ ಪರಿಕಲ್ಪನೆಯನ್ನು ಆರಂಭಿಸಿದೆ. ಮಕ್ಕಳಿಗೆ ಹೇಗೆ, ಏನೇನು ಕಲಿಸಬೇಕೆಂಬುದನ್ನು ಸಂಸ್ಥೆಯವರು ಜಿಲ್ಲಾ ಇಲಾಖೆಗೆ ವಾಟ್ಸಾಪ್‌ ಮುಖಾಂತರ ಪ್ರತಿ ದಿನ ಒಂದೊಂದು ಥೀಂಗಳನ್ನು ಶೇರ್‌ ಮಾಡುತ್ತಾರೆ. ಪ್ರತಿ ಅಂಗನವಾಡಿಗಳಲ್ಲಿಯೂ ಮಕ್ಕಳ ತಾಯಿಂದಿರ ವಾಟ್ಸಾಪ್‌ ಗ್ರೂಪ್‌ಗ್ಳನ್ನು ರಚಿಸಿಕೊಳ್ಳಲಾಗಿದ್ದು, ಕಾರ್ಯಕರ್ತೆಯರು ಥೀಂಗಳನ್ನು ತಾಯಂದಿರಿಗೆ ಕಳುಹಿಸಿಕೊಡುತ್ತಾರೆ. ಹೀಗೆ ಕಲಿಕೆ ಸಾಗುತ್ತಿದೆ.
-ಉಸ್ಮಾನ್‌, ಸೇಸಪ್ಪ ಉಪ ನಿರ್ದೇಶಕರು ದ.ಕ., ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

Advertisement
Advertisement

Udayavani is now on Telegram. Click here to join our channel and stay updated with the latest news.

Next