Advertisement
ಅಪ್ಪ ಹೋದಾಗ ಅಮ್ಮನಿಗಿನ್ನೂ ಇಪ್ಪತ್ತರ ಆಸುಪಾಸು. ನಾನು, ತಂಗಿ, ಅಮ್ಮ, ಅಜ್ಜಿ ಇಷ್ಟೇ ಜನ ಮನೆಯಲ್ಲಿ. ಗಂಡು ದಿಕ್ಕಿಲ್ಲದ ಮನೆ, ಅಮ್ಮ ಅತ್ತು, ಕರೆದು, ನೊಂದು ಸಾಕಾಗಿ, ಕೊನೆಗೆ ತಾನೇ ದುಡಿಯಬೇಕಾದ ಅನಿವಾರ್ಯತೆಗೆ ಶರಣಾದಳು. ತಾಳಿ ಇಲ್ಲದ ಕೊರಳೆಂದರೆ ಮೈಯೆಲ್ಲಾ ಕಣ್ಣಾಗಿಸಿಕೊಳ್ಳುವ ಬೀಡಾಡಿ ದನಗಳೇ ತುಂಬಿದ್ದ ಊರಲ್ಲಿ, ಎರಡು ಮಕ್ಕಳನ್ನೂ, ತನ್ನ ತಾಯಿಯನ್ನೂ ಸಲಹುತ್ತಾ, ಒಳಗೂ ಹೊರಗೂ ದುಡಿಯುವುದು ಸುಲಭದ ಮಾತಲ್ಲ.ಆ ವಯಸ್ಸಿನಲ್ಲಿ ಅಮ್ಮ ಹೇಗಿದ್ದಳು ಗೊತ್ತಾ? ಉದ್ದ ಮೂಗು, ಕೂಡು ಹುಬ್ಬು, ಚಿಕ್ಕ ಹಣೆ, ಹೊಳೆವ ಕಂಗಳು, ಗೋಧಿ ಮೈಬಣ್ಣ, ಉದ್ದವಿದ್ದ ಗುಂಗುರು ಕೂದಲು, ಕುಳ್ಳಗಿನ ದುಂಡುದೇಹ, ಮೊಣಕೈವರೆಗೆ ತೋಳಿರುವ ರವಿಕೆ ತೊಟ್ಟು ಶಿಫಾನ್ ಸೀರೆಯೊಂದನ್ನು ಉಟ್ಟು ಅಮ್ಮ ಕೆಲಸಕ್ಕೆ ಹೊರಟರೆ, ಸಿನಿಮಾ ನಟಿಯನ್ನೂ ಆಕೆಯ ಮುಂದೆ ನಿವಾಳಿಸಿ ಎಸೆಯಬೇಕಿತ್ತು. ಅಷ್ಟು ಮುದ್ದಾಗಿದ್ದಳು. ಅಕ್ಕಪಕ್ಕದ ಮನೆಯ ಹೆಂಗಸರೂ, ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಹೆಂಗಸರೂ ನನ್ನಮ್ಮನನ್ನು ನೋಡಿ ಅಸೂಯೆ ಪಡುತ್ತಿದ್ದರಷ್ಟೇ ಅಲ್ಲ, ಬೆನ್ನ ಹಿಂದೆ ಅದೇನೋ ಪಿಸುಪಿಸು ಮಾತಾಡಿಕೊಳ್ಳುತ್ತಿದ್ದದ್ದೂ ಉಂಟು. ಅಮ್ಮ ಅಂಥ ಚಿಲ್ಲರೆ ವಿಷಯಗಳಿಗ್ಯಾವತ್ತೂ ಕೇರ್ ಮಾಡಿದವಳೇ ಅಲ್ಲ.
ನಾನು ಎಂಟನೇ ತರಗತಿಯಲ್ಲಿದ್ದಾಗ ವಿಧವಾ ವಿವಾಹ ಅನ್ನೋ ವಿಷಯದ ಬಗ್ಗೆ ಟೀಚರ್ ಒಬ್ರು ಮನಮುಟ್ಟುವಂತೆ ವಿವರಿಸಿದ್ರು. ಆಗ ನಾನು, ಅಮ್ಮನಿಗೇಕೆ ಮತ್ತೆ ಮದುವೆ ಮಾಡ್ಬಾರ್ದು ಅನ್ನೋ ಹುಳವನ್ನು ತಲೆಗೆ ಬಿಟ್ಕೊಂಡೆ. ಅದನ್ನು ಅಜ್ಜಿ ಮುಂದೆ ಹೇಳಿದ್ದೆ ಕೂಡ. ಆಗ ಅಜ್ಜಿ, “ಮದುವೆ ಅನ್ನೋದು ಹೆಣ್ಣಿಗೆ ಒಂದೇ ಸಲ ಮಾಡೋದು. ಮತ್ತೆ ಮತ್ತೆ ಮಾಡೋಕೆ ಅದೇನು ಮಕ್ಕಳಾಟ ಅಂದ್ಕೊಂಡ್ಯಾ? ಅದೂ ಅಲ್ದೆ ಈ ಚಿಕ್ಕ ಬಾಯಲ್ಲಿ ಅಷ್ಟು ದೊಡಾತು ಹೇಗೆ ಬಂತು. ಸಂಜೆ ನಿಮ್ಮಮ್ಮ ಬರ್ಲಿ ಇರು..’ ಎನ್ನುತ್ತಾ ಬಾಗಿಲ ಹಿಂದಿದ್ದ ಪೊರಕೆ ಹಿಡಿದು ಮನೆಯ ಸುತ್ತಲೂ ಅಟ್ಟಾಡಿಸಿಬಿಟ್ಟಿದ್ದಳು. ನಾನಾಗ ಮಹಾಪರಾಧ ಮಾಡಿದವಳಂತೆ ಅಜ್ಜಿಯ ಕೈಕಾಲು ಹಿಡಿದು, ಅಮ್ಮನಿಗೆ ಆ ವಿಷಯ ಹೇಳದಂತೆ ತಡೆದಿದ್ದೆ. ಮೊನ್ನೆ ಮೊನ್ನೆ ನಾನೇ ಆ ವಿಷ್ಯವನ್ನು ಅಮ್ಮನಿಗೆ ಹೇಳಿದ್ದೆ, ಅಮ್ಮ ಬಿದ್ದು ಬಿದ್ದು ನಕ್ಕಿದ್ಲು. ಅಮ್ಮ ಹೀಗೆ ಎಲ್ಲವನ್ನೂ, ಎಲ್ಲರನ್ನೂ ನಗುತ್ತಲೇ ಬಾಚಿ ತಬ್ಬಿದವಳು. ಅದು ನೋವಿರಲಿ, ನಲಿವೇ ಇರಲಿ ಸಮನಾಗಿ ಗೌರವಿಸುವ ಕಲೆಯನ್ನು ಅವಳಿಂದಲೇ ನಾನು ಎರವಲು ಪಡೆದದ್ದು. ಇನ್ನು ಅಮ್ಮನ ಧೈರ್ಯದ ಬಗ್ಗೆ ಹೇಳಲೇಬೇಕು. ತಾನು ಹೆಣ್ಣಾಗಿದ್ದರೂ, ಕೆಲವು ಸಂದರ್ಭಗಳಲ್ಲಿ ಗಂಡಸೊಬ್ಬನ ಎದೆಯಲ್ಲಿ ನಡುಕ ಹುಟ್ಟಿಸುವಂಥ ಗಂಡಾಗಿ ಬಿಡುತ್ತಿದ್ದಳು. ಚಾಮುಂಡೇಶ್ವರಿ, ದುರ್ಗೆ, ಕಾಳಿ… ಹೀಗೆ ಸಂಹಾರಕ್ಕಾಗಿಯೇ ಹುಟ್ಟಿದ ದೇವತೆಯರನ್ನು ನಾನು ಫೋಟೋದಲ್ಲಷ್ಟೇ ನೋಡಿದ್ದೆ. ಆದರೆ, ಅದೊಂದು ದಿನ ಪ್ರತ್ಯಕ್ಷವಾಗಿ ನೋಡಿಯೇಬಿಟ್ಟೆ. ಹಳ್ಳಿಯ ರಾತ್ರಿ ಎಂದರೆ ಗೊತ್ತಲ್ಲ, ಗವ್ವನೆಯ ಕಗ್ಗತ್ತಲು, ವಿನಾಕಾರಣ ಊಳಿಡುವ ನಾಯಿಗಳು, ಕಣ್ಣಿಗೆ ಕಾಣದೆ ಅವಿತ ಅದ್ಯಾವುದೋ ಕೀಟದ ಗುಯ… ಎನ್ನುವ ಸದ್ದು… ಅಂಥದ್ದೇ ಮರೆಯಲಾಗದ ಒಂದು ಅರ್ಧರಾತ್ರಿಯದು. ಹೊರಗಿನ ಬಾಗಿಲನ್ನು ಯಾರೋ ಜೋರಾಗಿ ಬಡಿದಂತಾಗಿತ್ತು, ಸಣ್ಣಗೆ ಹಾವು ಹರಿದ ಸದ್ದಾದರೂ ದಢಕ್ಕನೆ ಎದ್ದು ಕೂರುತ್ತಿದ್ದ ಅಮ್ಮ, ಬಾಗಿಲು ಬಡಿದ ಸದ್ದಿಗೆ ಕದಲಲೂ ಇಲ್ಲ. ಬಹುಶಃ ಹಗಲೆಲ್ಲಾ ದುಡಿದು ಸೋತಿದ್ದಳೇನೋ… ಪಾಪ, ನನಗೆ ಥಟ್ಟನೆ ಎಚ್ಚರವಾಗಿತ್ತು. ಆಗ ಅಜ್ಜಿಯನ್ನು ಮೆಲ್ಲಗೆ ಎಬ್ಬಿಸಿದ್ದೆ, ಅಜ್ಜಿ ಎಚ್ಚರಗೊಂಡವಳೇ ಹೋಗಿ ಬಾಗಿಲು ತೆಗೆದಿದ್ದಳು, ಬಾಗಿಲು ತೆಗೆದಿದ್ದೇ ಗಾಬರಿಯ ಧ್ವನಿಯಲ್ಲಿ “ಓಹ್ ರಾಜಪ್ಪ, ಏನು ಈ ಹೊತ್ತಲ್ಲಿ? ಮಕ್ಳು, ಸುಶೀಲಮ್ಮ ಆರೋಗ್ಯವಾಗಿದ್ದಾರಲ್ವ?’… ನಾನು ಅಜ್ಜಿಯ ಹಿಂದೆಯೇ ಹೋಗಿದ್ದೆ. ಅದೂ ಅಜ್ಜಿಯ ಗಮನಕ್ಕೆ ಬಾರದಂತೆ, ಆದರೆ ಆತನ ಮುಖ ನೋಡಿ ಅಜ್ಜಿಯಷ್ಟೇ ನನಗೂ ಆಶ್ಚರ್ಯವಾಗಿತ್ತು. ಆತ ಬೇರೆ ಯಾರೂ ಅಲ್ಲ, ನನ್ನ ಸಹಪಾಠಿಯೊಬ್ಬಳ ತಂದೆ. ನೋಡೋಕೆ ಥೇಟ್ ವೀರಪ್ಪನ್ ಥರಾನೇ ಇದ್ದ. ಮೀಸೆ, ಕಣ್ಣು, ಉದ್ದ, ದಪ್ಪ, ಹಗಲಲ್ಲಿ ನೋಡಿದರೂ ಭಯವಾಗುವ ಮುಖಭಾವವದು. ತಕ್ಷಣವೇ ಅಜ್ಜಿಯ ಹಿಂದೆ ಬಚ್ಚಿಟ್ಟುಕೊಂಡೆ. ಆತ ಮಾತ್ರ ಅಜ್ಜಿ ಪ್ರಶ್ನೆಗಳಿಗೇನೂ ಉತ್ತರಿಸದೆ ಮಿಕಮಿಕ ನೋಡುತ್ತಾ ನಿಂತಿದ್ದ.
Related Articles
Advertisement
ಬಹುಶಃ ಆತನ ಆ ಕರ್ಕಶ ಧ್ವನಿಯ ಸದ್ದಿಗೆ ಅಮ್ಮನಿಗೆ ಎಚ್ಚರವಾಗಿತ್ತೋ ಏನೋ, ದಡದಡನೆ ಎದ್ದು ಬಂದವಳೇ, ನನ್ನನ್ನೂ ಅಜ್ಜಿಯನ್ನು ಕೋಣೆಯೊಳಗೆ ಕಳುಹಿಸಿ ಬಾಗಿಲು ಮುಂದಕ್ಕೆಳೆದುಕೊಂಡು, ಅದೇನೋ ಜೋರು ಜೋರಾಗಿ ಮಾತಾಡುತ್ತಿದ್ದಳು. ಬಾಗಿಲು ಮುಚ್ಚಿದ್ದರಿಂದ ನನಗೇನೂ ಸ್ಪಷ್ಟವಾಗಿ ಕೇಳಿಸುತ್ತಿರಲಿಲ್ಲ. ಸ್ವಲ್ಪ ಹೊತ್ತಿನ ನಂತರ ಒಮ್ಮೆಲೆ ನಿಶ್ಶಬ್ದ ಆವರಿಸಿಬಿಟ್ಟಿತ್ತು. ಅಜ್ಜಿ ಹೆದರಿ ಬಾಗಿಲು ತೆಗೆದುಕೊಂಡು ಆಚೆ ಬಂದಳು, ನಾನೂ ಅಜ್ಜಿಯನ್ನು ಹಿಂಬಾಲಿಸಿದ್ದೆ. ಅಮ್ಮನ ಕೈಲಿದ್ದ ಸೀಮೆಎಣ್ಣೆ ಡಬ್ಬ ನೋಡಿ ಅಜ್ಜಿ ಗರಬಡಿದವಳಂತೆ ನಿಂತುಬಿಟ್ಟಳು. ಅಮ್ಮ ಜೋರು ಧ್ವನಿಯಲ್ಲಿ, “ಇದೇ ಕೊನೆ. ಇನ್ಯಾವತ್ತಾದ್ರೂ ನಮ್ಮನೆ ಹೊಸ್ತಿಲು ತುಳಿದ್ರೆ ಇದೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಬಿಡ್ತೀನಿ. ಜೈಲಿಗೆ ಹೋಗೋಕೂ ಹಿಂಜರಿಯೋವಲ್ಲ ನಾನು. ನಿನ್ನಂಥ ಹಸಿಮಾಂಸ ಭಕ್ಷಕರನ್ನ ಕೊಂದೆ ಅನ್ನೋ ತೃಪ್ತಿಯಾದ್ರೂ ಉಳಿಯುತ್ತೆ ನನಗೆ..’ ಎನ್ನುತ್ತಾ ಅತಿವೃಷ್ಟಿಯಿಂದ ತುಂಬಿ ರೊಚ್ಚಿಗೆದ್ದ ನದಿಯೊಂದರಂತೆ ಅಬ್ಬರಿಸಿದಳು. ಅಮ್ಮನ ಅಬ್ಬರಕ್ಕೆ ಅವನಾಗಲೇ ಬೆಚ್ಚಿಬಿದ್ದಿದ್ದ. ಬೆಂಕಿಕಾರುತ್ತಿದ್ದ ಅವಳ ಕಣ್ಣುಗಳನ್ನು ಹೆದರಿಸಲಾಗದೆ ಜಾಗ ಖಾಲಿ ಮಾಡಿದ್ದ. ಆ ದಾರಿತಪ್ಪಿ ಬಂದಿದ್ದ ಕ್ರೂರಮೃಗವನ್ನೇನೋ, ಬೆದರಿಸಿ ಕಳುಹಿಸಿದ್ದಳು. ಆದರೆ, ಇಡೀ ರಾತ್ರಿ ಗೋಡೆಗಾತು ಸುಮ್ಮನೆ ಕುಳಿತುಬಿಟ್ಟಿದ್ದಳು.
ನಾನಿದೆಲ್ಲದಕ್ಕೂ ಮೂಕ ಸಾಕ್ಷಿಯಾಗಿದ್ದೆ. ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಿದ್ದೆ. ಏನೂ ಮಾಡಲಾಗದ ಅಸಹಾಯಕತೆ ನಂದು. ಆದರೆ, ಅದೊಂದು ಘಟನೆಯ ಬಗ್ಗೆ ಮಾತ್ರ ನಾನು ಇವತ್ತಿಗೂ ಅಮ್ಮನೊಂದಿಗೆ ಚರ್ಚಿಸಿಲ್ಲ. ಆ ಮನುಷ್ಯ ಅದ್ಯಾಕ್ ಹಾಗೆ ಧುತ್ತೆಂದು ಅಂಥದ್ದೊಂದು ಅರ್ಧರಾತ್ರಿಯಲ್ಲಿ ನನ್ನಮ್ಮನ ಕೆಂಗಣ್ಣಿಗೆ ಗುರಿಯಾಗಿದ್ದನೋ ಎನ್ನುವುದು ಆ ಕ್ಷಣಕ್ಕೆ ಅರ್ಥವಾಗಿರಲಿಲ್ಲ. ಆದರೆ ಅವತ್ತು, ಹೆಣ್ಣು ಹೂವಷ್ಟೇ ಅಲ್ಲ; ಸಮಯ ಬಂದಾಗ ಬೆಂಕಿಯಾಗಿಯೂ ಉರಿಯಬಲ್ಲಳು ಎಂಬ ಸತ್ಯವೊಂದು ನನ್ನರಿವಿಗೆ ಬಂದಿತ್ತು. ಅಂಥ ಧೈರ್ಯದ ಗಣಿಯ ಹೊಟ್ಟೆಯಲ್ಲಿ ಹುಟ್ಟಿದ್ದು ನನ್ನ ಪೂರ್ವಜನ್ಮದ ಪುಣ್ಯವೆಂಬುದು ನನ್ನ ಹೆಮ್ಮೆ.
ಅಮ್ಮ ಯಾವತ್ತೂ ತನ್ನ ಒಂಟಿ ಬದುಕನ್ನು ಶಪಿಸಿದ್ದು ನಾನು ಕಂಡೇ ಇಲ್ಲ. ಅವಳ ಆತ್ಮಸ್ಥೈರ್ಯವೇ ಅವಳನ್ನು ಕೈಹಿಡಿದು ನಡೆಸಿತ್ತು. ಹೆಣ್ಣೊಬ್ಬಳು ತಾಯಿಯಾಗುವುದರಲ್ಲಿ ವಿಶೇಷತೆ ಇಲ್ಲ. ಆದರೆ ಆಕೆ ತಂದೆಯಾಗಿ, ತಾಯಿಯಾಗಿ, ಹೆತ್ತಮಕ್ಕಳ ಪಾಲಿಗೆ ಸಕಲವೂ ಆಗಿ ನಿಲ್ಲುವುದಿದೆಯಲ್ಲ; ಅದು ನಿಜವಾದ ವೈಶಿಷ್ಟ್ಯ. ಏಳನೇ ತರಗತಿಯನ್ನಷ್ಟೇ ಕಲಿತಿದ್ದ ಅಮ್ಮನಿಗೆ ನಮ್ಮನ್ನು ಕಾಲೇಜು ಮೆಟ್ಟಿಲು ಹತ್ತಿಸಿಯೇ ತೀರಬೇಕೆಂಬ ಹೆಬ್ಬಯಕೆಯೊಂದಿತ್ತು. ಅದಕ್ಕಾಗಿಯೇ ದುಡಿದಳು, ದಣಿದಳು. ಎಲ್ಲವನ್ನೂ ತನ್ನಾಸೆಯಂತೆಯೇ ಮಾಡಿ ಮುಗಿಸಿದಳು. ನನ್ನಮ್ಮನ ಹಠಕ್ಕೆ ಅವಳ ಹಣೆಬರಹ ಗೀಚಿದ್ದ ಆ ವಿಧಿಯೂ ನಾಚಿ ತಲೆತಗ್ಗಿಸಿಬಿಟ್ಟಿತ್ತು.
ಅದೆಷ್ಟೋ ಬಾರಿ, ಅಮ್ಮನಿಗೆ ಎದುರಾಡಿದ್ದೇನೆ. ನನ್ನದೇ ತಪ್ಪಿದ್ದರೂ ವಾದಿಸಿದ್ದೇನೆ. ಅವಳ ಅತಿಯಾದ ಸ್ವಾಭಿಮಾನ ಸಹಿಸಲಾಗದೆ ಆಕೆಯ ಮನಸ್ಸಿಗೆ ನೋವು ಮಾಡಿ ನಾನೂ ನೊಂದಿದ್ದೇನೆ. ಅಂಥ ಸಂದರ್ಭಗಳಲ್ಲಿ ಪ್ರತಿಬಾರಿಯೂ ಅವಳೇ ನನ್ನನ್ನು ಕ್ಷಮಿಸುತ್ತಾಳೆ, ನೀನೀಗ ನನ್ನ ಮಗಳಷ್ಟೇ ಅಲ್ಲ ಜವಾಬ್ದಾರಿಯುತ ತಾಯಿಯೂ ಎಂದೆಚ್ಚರಿಸುತ್ತಾಳೆ.
ನಾನು ನಗುವಾಗ ಮರೆಯಲ್ಲೇ ನಿಂತು ಕಣ್ತುಂಬಿಕೊಳ್ಳುವ, ನನಗೆ ಚೂರು ನೋವಾದರೂ ಪ್ರತ್ಯಕ್ಷವಾಗಿಬಿಡುವ ನನ್ನ ದೇವತೆಯ ಋಣ ಸಂದಾಯಕ್ಕೆ ಮುಂದಿನ ಜನ್ಮದಲ್ಲಿ ಅವಳ ಪಾದುಕೆಯಾಗಿಯೇ ಹುಟ್ಟಬೇಕು.
ಸತ್ಯ ಗಿರೀಶ್