‘ಅಮ್ಮ ‘ ಎಂಬ ಪದದ ಅರ್ಥವನ್ನು ಬಣ್ಣಿಸಲು ಅಸಾಧ್ಯ. ಅಂಥಹದೊಂದು ಅದ್ಭುತವಾದ ಶಕ್ತಿ ಈ ಎರಡಕ್ಷರಕಿದೆ.
ಭೂಮಿಯಲ್ಲಿ ಕಾಣುವ ದೇವತೆ ಅಮ್ಮ. ನಾನು ಅಮ್ಮನನ್ನು ಎಷ್ಟೇ ವಿಧ ವಿಧವಾಗಿ ಹೊಗಳಿದರು ಅದು ಅವಳ ಮುಂದೆ ವ್ಯರ್ಥ, ಯಾಕೆಂದರೆ ಅವಳ ನಿಷ್ಕಲ್ಮಶ ಪ್ರೀತಿಯ ಎದುರು ಅದು ಶೂನ್ಯ.
ಅಮ್ಮ ನನ್ನನು ಹೊತ್ತು, ಹೆತ್ತು ಸನ್ಮಾರ್ಗದಲ್ಲಿ ಬೆಳೆಸಿದಳು. ದುಃಖವಾದಾಗ ಸಾಂತ್ವನ ಹೇಳಿ, ಗೆದ್ದಾಗ ಬೆನ್ನು ತಟ್ಟಿ, ಸೋತಾಗ ಕೈ ಹಿಡಿದು, ಅಷ್ಟೇ ಅಲ್ಲದೆ ಕಷ್ಟ ಬಂದಾಗ ಹೆಗಲು ಕೊಟ್ಟು ಹೀಗೆ ನನ್ನ ಪ್ರತಿಯೊಂದು ಹೆಜ್ಜೆ ಹೆಜ್ಜೆಯಲ್ಲೂ ನನ್ನ ಜೊತೆಯಲ್ಲಿ ಇರುವವಳು ಅಮ್ಮ.
ನಾನು ಅವಳ ಜೊತೆ ಎಷ್ಟೇ ಜಗಳವಾಡಿ ಮುನಿಸಿಕೊಂಡಾಗ ನನ್ನನ್ನು ಸಮಾಧಾನ ಪಡಿಸಿ ರಾತ್ರಿ ಅವಳ ಮಡಿಲಿನಲ್ಲಿ ಮಲಗಿಸಿ ಹಲವಾರು ಕತೆಗಳನ್ನು ಹೇಳುತ್ತಾ ನನ್ನನ್ನು ನಿದ್ರೆಗೆ ಜಾರಿಸಿದ್ದಾಳೆ. ಹೀಗೆ ಅವಳ ಬೆಚ್ಚಗಿನ ಮಡಿಲಿನಲ್ಲಿ ಮಲಗುತ್ತಾ ಹಲವಾರು ಕನಸುಗಳನ್ನು ಖಂಡಿದ್ದೀನಿ. ಆ ಒಂದು ಕನಸಿನಲ್ಲಿ ನಾನು ಮತ್ತು ಅಮ್ಮ ಹಕ್ಕಿಗಳಾಗಿದ್ದೆವು.
ಆಗ ತಾನೆ ಹುಟ್ಟಿದ ನನಗೆ ಹಾರಾಡಲು ಹೇಳಿಕೊಟ್ಟು ಅದ್ಭುತವಾದ ಪ್ರಪಂಚವನ್ನು ತೋರಿಸುತ್ತಾ ಸ್ವಚಂದವಾಗಿ ಆಗಸದಲ್ಲಿ ಹಾರಾಡುತಿರಬೇಕಾದರೆ ರಕ್ಕಸ ರೂಪದಲ್ಲಿ ಎದುರಾದ ಗಿಡುಗವೊಂದು ಬೆನ್ನಟ್ಟಿ ಬರುತ್ತಿದಾಗ ಅಮ್ಮ ತನ್ನ ಪ್ರಾಣವನ್ನು ಲೆಕ್ಕಿಸದೆ ಅದರ ಜೊತೆ ಹೋರಾಡಿ ನನ್ನನ್ನು ರಕ್ಷಿಸಿದ್ದಾಳೆ. ತಕ್ಷಣ ಎಚ್ಚರಗೊಂಡ ನಾನು ವಾಸ್ತವಕ್ಕೆ ಬಂದು ಅವಳನ್ನು ನೋಡಿದಾಗ ಪುಟ್ಟ ಮಗುವಿನಂತೆ ಮಲಗಿದ್ದಳು.
ನನಗಾಗಿ ಬಣ್ಣ ಬಣ್ಣದ ಉಡುಗೊರೆಯನ್ನು ನೀಡಿ ನನ್ನನ್ನು ಖುಷಿಪಡಿಸುತ್ತಿದ್ದಳು. ಆದರೆ ನಾನು ಇದುವರೆಗೂ ಅವಳಿಗೊಂದು ಉಡುಗೊರೆಯನ್ನು ಕೊಟ್ಟಿಲ್ಲ ಮುಂದೊಂದಿನ ನಾನು ಉನ್ನತ ಹುದ್ದೆಯನ್ನು ಅಲಂಕರಿಸಿ ಅವಳಿಗೆ ಕೀರ್ತಿಯನ್ನು ತರುತ್ತೇನೆ ಅದೇ ನನ್ನ ಉಡುಗೊರೆ .
– ದೀಪ್ತಿ ಕೋಡಪದವು, ದ್ವಿತೀಯ ಪತ್ರಿಕೋದ್ಯಮ, ವಿವೇಕಾನಂದ ಕಾಲೇಜು ಪುತ್ತೂರು