“ಕುಪುತ್ರೋ ಜಾಯೇತ್ ಕ್ವಚಿದಪಿ ಕುಮಾತಾ ನಭವತಿ’ ಎಂಬ ಸಂಸ್ಕೃತೋಕ್ತಿ “ಕೆಟ್ಟ ಮಕ್ಕಳು ಜನಿಸಬಹುದು ಆದರೆ ತಪ್ಪಿಯೂ ಕೆಟ್ಟ ತಾಯಿ ಇರಲಾರಳು’ ಎಂಬ ಶಾಶ್ವತ ಸತ್ಯಸಂದೇಶವನ್ನು ನೀಡುತ್ತದೆ. ಆಶ್ಚರ್ಯವೆಂದರೆ ಕೆಟ್ಟ ಮಕ್ಕಳು ಜನಿಸಬಹುದು ಎಂದರೆ ಹೆಣ್ಣು ಮಗವೂ ಅದರಲ್ಲಿ ಸೇರಿತು ತಾನೆ? ಅಂದರೆ ಮಗುವಾದ ಹೆಣ್ಣು ಮುಂದೆ ತಾಯಿರೂಪ ಪಡೆಯುತ್ತಿದ್ದಂತೆ ಅವಳಲ್ಲಿ ಒಳ್ಳೆಯತನ ತುಂಬಿ ದೈವತ್ವ ಪ್ರಾಪ್ತವಾಗುತ್ತದೆ. ಮಕ್ಕಳಿಗಂತೂ ತಾಯಿ ಕೈಗೆ ಸಿಗುವ ದೇವರಾಗಿಬಿಡುತ್ತಾಳೆ.
ಮತ್ತೊಂದು ಆಶ್ಚರ್ಯಕರ ಅಂಶ ತಾಯಿಯೇಕೆ ಮಕ್ಕಳನ್ನು ಪ್ರಾಣಕ್ಕಿಂತ ಹೆಚ್ಚಿಗೆ ಪ್ರೀತಿಸುವಳು? ತಂದೆ, ಅಣ್ಣ, ತಂಗಿ, ಸ್ನೇಹಿತರು ಹೀಗೆ ಎಲ್ಲಾ ಸಂಬಂಧಕ್ಕಿಂತ ತಾಯಿಯ ಪ್ರೀತಿ ಹಿರಿದೇಕೆ?ಅಥವಾ ಹುಟ್ಟಿನಿಂದ ಸಾಯುವವರೆಗೆ ಇರುವ ಎಲ್ಲಾ ಸಂಬಂಧಗಳ ಒಟ್ಟೂ ಪ್ರೀತಿಗೂ ತಾಯಿಯ ಪ್ರೀತಿ ಸರಿಸಾಟಿಯಾಗದು ಏಕೆ? ಪ್ರತಿಯೊಬ್ಬರೂ ಈ ಪ್ರಪಂಚಕ್ಕೆ ಬರುವ ಮೊದಲು ತಾಯಿಗರ್ಭದ ಪ್ರಪಂಚದಲ್ಲಿರುವವರು. ಅಣುವಿನ ರೂಪದಿಂದ ಮಾನವ ರೂಪಹೊಂದುವುದೇ ಈ ಪ್ರಪಂಚದಲ್ಲಿ.
ಗರ್ಭಾಂಕುರವಾಗುತ್ತಿದ್ದಂತೆ ಹೆಣ್ಣು ತಾಯಿಯ ದೀಕ್ಷೆ ಪಡೆಯುತ್ತಾಳೆ. ಅಲ್ಲಿಂದ ಪ್ರಸವದವರೆಗೆ ಯಾರೂ ಅನು ಭವಿಸದ ರೋಮಾಂಚನವನ್ನು ಕ್ಷಣಕ್ಷಣ ಪಡೆಯುತ್ತಾಳೆ. ಅಲ್ಲಿಂದಲೇ ಅವರ್ಣನೀಯ ಸಂಬಂಧ ಬೆಸೆಯುತ್ತದೆ. 50ಕ್ಕೂ ಹೆಚ್ಚು ಮೂಳೆಗಳು ಏಕಕಾಲದಲ್ಲಿ ಮುರಿದಾಗ ಆಗುವ ನೋವಿಗಿಂತ ಹೆಚ್ಚು ನೋವನ್ನುಂಡು ಮಗುವಿಗೆ ಜನ್ಮ ನೀಡುತ್ತಾಳೆ. ಆ ಅಪಾರ ಪ್ರಸವಯಾತನೆ ಸಮಯದಲ್ಲಿ ಎಲ್ಲಾ ತಾಯಂದಿರೂ “”ಈ ಮಗುವೇ ಬೇಡ” ಎಂದು ಗೋಳಾಡುತ್ತಾರೆ. ಆದರೆ ಮಗು ಹುಟ್ಟಿದ ಮರುಕ್ಷಣವೇ “”ಈ ಮಗು ಬಿಟ್ಟು ನನಗೇನೂ ಬೇಡ” ಎಂದು ಪ್ರೀತಿಸು ತ್ತಾರೆ. ಎದೆಯಾಮೃತ ಧಾರೆಯೆರೆದು ಪೋಷಿಸುತ್ತಾಳೆ. ತಾಯಿ ಸ್ಥಾನ ಇಷ್ಟೊಂದು ಕಷ್ಟಪಟ್ಟು ಹೆತ್ತ ಮೇಲೆ ಸೃಷ್ಟಿಯಾಗುತ್ತದೆ. ಕಷ್ಟಪಟ್ಟು ಪಡೆದುದೇ ಹೆಚ್ಚು ಇಷ್ಟವಾಗುತ್ತದೆ.
ಹೀಗೆಂದೇ ತಾಯಿ ಅಗಣಿತ ಪ್ರೀತಿ ತೋರುವಳು; ಅವಳ ಮಮತೆಗೆ ಸಾಟಿಯಿಲ್ಲ ಎಂದೆನ್ನಿಸುತ್ತದೆ. ಈ ತಾಯಿ ಮಗುವಿನ ಸಂಬಂಧ ಬೇರಾವ ಸಂಬಂಧದಲ್ಲಿದೆ ಹೇಳಿ? ತಂದೆ, ಅಣ್ಣ, ಅಕ್ಕ, ತಂಗಿ, ಮಾವ, ಇವೆಲ್ಲಾ ಸಂಬಂಧಗಳು ಜನ್ಮದಿಂದ ತಾನಾಗಿಯೇ ಸಹಜವಾಗಿ ಪ್ರಾಪ್ತವಾಗುತ್ತವೆ. ಸ್ನೇಹಿತರನ್ನು ಹುಡುಕಿ ಪಡೆಯುತ್ತೇವೆ. ಹೀಗಾಗಿ ಉಳಿದೆಲ್ಲಾ ಸಂಬಂಧಗಳು ಪುಕ್ಕಟ್ಟೆ ಪ್ರಾಪ್ತವಾಗುತ್ತವೆ.
ತಾಯಿಗೆ ಮಕ್ಕಳೆಂದರೆ ಇಷ್ಟವೆಂಬುದು ತಿಳಿಯಿತು. ಆದರೆ ಎಲ್ಲರಿಗೂ ಅಮ್ಮಾ ಎಂದರೆ ಏಕಿಷ್ಟ? ತಾಯಿಯ ಈ ಪ್ರೀತಿ, ಕರುಣೆ, ಕಾಳಜಿ, ತ್ಯಾಗ, ದುಡಿಮೆ ಮುಂತಾದವುಗ ಳೆಲ್ಲಾ ಸಹಜವಾಗಿ ಮತ್ತು ಅನಿವಾರ್ಯವಾಗಿ ಮಕ್ಕಳು ತಾಯಿಯನ್ನು ಪ್ರೀತಿಸುವಂತೆ ಮಾಡುತ್ತವೆ. ಅಮ್ಮನ ಆ ನಿಸ್ವಾರ್ಥ ಪ್ರೀತಿಯು ಮಕ್ಕಳ ಮೇಲೆ ಪ್ರಭಾವ ಬೀರುತ್ತಾ ಹೋಗುತ್ತದೆ. ಜಗತ್ತೇ ಶತ್ರುವಂತೆ ಕಂಡಾಗಲೂ ತಾಯಿ ಮಾತ್ರ ಆತ್ಮೀಯಳಾಗಿ ಕಾಣುತ್ತಾಳೆ. ಕೆಲವು ಸಂದರ್ಭಗಳಲ್ಲಿ ಕೆಲವು ಸಂಬಂಧಗಳು ಶಿಥಿಲಗೊಳ್ಳುತ್ತಿರುತ್ತವೆ. ಆದರೆ ತಾಯಿ ಸಂಬಂಧ ಸರ್ವಕಾಲಿಕ, ಚಿರಂತನ. ಎಲ್ಲಾ ಸಂಬಂಧಗಳಲ್ಲಿ ಒಂದಲ್ಲಾ ಒಂದು ದೋಷಕಂಡರೂ ಅಮ್ಮ ಮಾತ್ರ ನಿರ್ದೋಷಿ ಯಾಗಿ ಪ್ರೀತಿ ಪಾತ್ರಳಾಗಿರುತ್ತಾಳೆ.
ತಾಯಿಗಿಂತ ಬಂಧುವಿಲ್ಲ ಎಂಬ ಗಾದೆ ಮಾತಿದೆಯಾದರೂ ತಾಯಿಯು ಬಂಧು ಎಂಬ ಪದದ ತಾತ್ಪರ್ಯವನ್ನು ಮೀರಿದ ಸ್ಥಾನಕ್ಕೇರುತ್ತಾಳೆ. ಕಷ್ಟಪಟ್ಟು ಮಗುವನ್ನು ಹೆತ್ತು ತಾಯಿ ಸ್ಥಾನ ಪಡೆಯುತ್ತಾಳೆ. ಆದರೆ ಮಗು ಪುಕ್ಕಟ್ಟೆ ಮಗುವಿನ ಸ್ಥಾನ ಪಡೆಯುತ್ತದೆ. ಆದರೆ ತಾಯಿಯ ಅವರ್ಣನೀಯ ನಿಷ್ಕಾಮ ಪ್ರೀತಿಯೇ ಮಗುವು ತಾಯಿ ಯನ್ನು ಅನಿವಾರ್ಯವಾಗಿ ಇಷ್ಟಪಡುವಂತೆ ಮಾಡುತ್ತದೆ. ಮಕ್ಕಳ ಪ್ರೀತಿಯೋ ಋಣದ ಭಾರ ತೀರಿಸುವ ವ್ಯಾವಹಾರಿಕ ಪ್ರೀತಿಯಾದರೆ; ತಾಯಿಯದೋ ನಿಸ್ವಾರ್ಥ ಬತ್ತದ ಅಕ್ಕರೆಯ ಆಗರ! ಹೌದಲ್ಲವೇ? ಯೋಚಿಸಿ ನೋಡಿ.
ಆತ್ಮೀಯರೇ ನಿಮಗೆಲ್ಲಾ ತಾಯಿಯೆಂದರೆ ಇಷ್ಟವಲ್ಲವೆ? ಎಷ್ಟು ಇಷ್ಟವೆಂದು ಅಳೆಯಲಾದೀತೆ? ನಿಮ್ಮ ಸ್ಮತಿಪಟಲದ ಮೇಲೆ ನಿಮ್ಮ ತಾಯಿಯ ಒಡನಾಟ ಸ್ಮರಿಸಿಕೊಳ್ಳಿ. ಹೃದಯ ತುಂಬಿ ಬರುವುದಲ್ಲವೆ? ತಾಯಿಗೆ ತಾಯಿಯೇ ಉಪ ಮೇಯ. ಉಳಿದೆಲ್ಲಾ ಮಾತು ಅತ್ಯಲ್ಪ.
– ಕಾಳಿದಾಸ ಬಡಿಗೇರ, ಉತ್ತರ ಕನ್ನಡ