Advertisement
ಸಾತಾರ್ಕರ್ ಮಂಡಳಿಯಲ್ಲಿ ಹಾಡುಗಾರ್ತಿಯೂ, ಕಥಕ್ ನೃತ್ಯಗಾರ್ತಿಯೂ ಆದ ಇನ್ನೂ ಇಪ್ಪತ್ತು ಮುಟ್ಟದ ಮೋಗೂ ಎಂಬ ಎಳೆಯ ಯುವತಿ ಇದ್ದಳು. ತಾಯಿ ತೀರಿದ ಬಳಿಕ ನಾಟಕ ಕಂಪೆನಿಯೇ ಅವಳ ಬದುಕು. ಸಾಂಗ್ಲಿಯಲ್ಲಿ ಅದು ಮೊಕ್ಕಾಂ ಹಾಕಿ¨ªಾಗ, ಮೋಗೂ ಮನೆಯೊಳಗೆ ಒಂದು ದಿನ ಹಗಲಿನ ಅಭ್ಯಾಸ ಮಾಡುತ್ತಿದ್ದಳು. ಕೇಳಿ ಕುತೂಹಲದ ಕಿವಿಯಾಗಿ ನೇರ ಒಳಗೆ ಬಂದ ಒಬ್ಬ ಅಪರಿಚಿತ ಗಂಡಸು “ಶಹಬ್ಟಾಸ್’ ಅಂದ. “ನಾನೆ ನಿನಗೆ ಹೊಸ ಗುರುವಾಗುವೆ’ ಅಂದ.ಬಂದವರು ಅಲ್ಲಾದಿಯಾ ಖಾನ್ ಸಾಹೇಬ್. ಹಿಂದೂಸ್ತಾನಿ ಸಂಗೀತ ಪ್ರಪಂಚದಲ್ಲಿ ಜೈಪುರ್ ಅತ್ರಾವಲಿ ಘರಾನಾ ಎಂದರೆ ಒಂದು ಕ್ಷಣ ಅದರ ವಿದ್ವತ್ತಿಗೆ, ಸಿದ್ಧಿಗೆ, ಸಂಕೀರ್ಣತೆಗೆ ನುರಿತ ಸಂಗೀತಗಾರರು ಕೂಡ ದಿಗ್ಭ್ರಮೆಯಲ್ಲಿ ಮಣಿಯುತ್ತಾರೆ. ಈ ಗಾಯನ ಪರಂಪರೆಗೆ ಗಟ್ಟಿ ಚೌಕಟ್ಟು ಹಾಕಿದ ಕಲಾವಿದ ಆಚಾರ್ಯ ಅಲ್ಲಾದಿಯಾ ಖಾನ್. ಮುಂದೆ ಈ ಮಹಾಗುರು ತನ್ನ ಉಸಿರು ನಿಲ್ಲಿಸುವವರೆಗೆ ಮೋಗೂವಿನ ಸಂಗೀತ ಕಲಿಕೆ ಎರಡು ದಶಕಗಳ ಕಾಲ ನಡೆಯಿತು. ಮೋಗೂಬಾಯಿಯ ಶಿಷ್ಯೆ ಕಿಶೋರಿ ತಾಯಿಯಲ್ಲಿ ಇನ್ನೊಂದು ಹೊಸ ನಾದಪ್ರವಾಹವಾಗಿ ಜೈಪುರ್‌ಘರಾನಾ ಕವಲೊಡೆಯಿತು.
ಕಿಶೋರಿಗೆ ಆ ಬಾಲ್ಯ ಸದಾ ನೆನಪು. ನಾವು ಆಗಾಗ ಸ್ಕೂಲು ರಜೆಯಲ್ಲಿ ಮುಂಬೈಯ ಚಾಲ್‌ನಿಂದ ಗೋವಾದ ನಮ್ಮೂರು ಕುರ್ಡಿಗೆ ಹೋಗುತ್ತಿ¨ªೆವು. ಕಕೋಡದಿಂದ ಕುರ್ಡಿಗೆ ಎತ್ತಿನಗಾಡಿಯಲ್ಲಿ ಪಯಣ. ಎತ್ತುಗಳ ಕುತ್ತಿಗೆಯ ಕಿಣಿಕಿಣಿ ಮೆಲ್ಲನೆ ಕಿವಿಗೆ ಬೀಳುತ್ತಿತ್ತು. ಮಣ್ಣಿನ ಮಾರ್ಗದ ಎರಡು ಕಡೆ ಹೂವು ತುಂಬಿದ ಎತ್ತರದ ಮರಗಳಿಂದ ಪರಿಮಳವಾವುದೋ ಮೂಗಿಗೆ ಮುಟ್ಟುತ್ತಿತ್ತು. ಆ ಪಯಣ ಎಷ್ಟು ಚಂದ. ನಮ್ಮ ಮನೆಯ ಸುತ್ತಮುತ್ತ ಹಣ್ಣಿನ ಮರಗಳು. ಕಲಾವಿದೆಯಾದ ನನ್ನ ಮುತ್ತಜ್ಜಿಯ ಸಮಾಧಿ ಅಲ್ಲಿತ್ತು. ಅದರ ಹತ್ತಿರ ಒಂದು ಸಂಪಿಗೆಯ ಮರ. “ಅಲ್ಲಿ ಹಾವು ಇದೆ ಹೋಗಬೇಡ’ ಎಂದರೂ ಪುಟ್ಟ ಹುಡುಗಿ ನಾನು ಹೋಗುತ್ತಿ¨ªೆ. ಕಲಾವಿದೆಯಾಗಿದ್ದ ನನ್ನ ಮುತ್ತಜ್ಜಿ ಸಮಾಧಿಯೊಳಗೆ ಈಗ ಏನು ಮಾಡುತ್ತಿರಬಹುದು? ಅವಳೇಕೆ ಅಲ್ಲಿಂದ ಹೊರಬರಲಾರಳು? ಈ ನಿಗೂಢತತ್ವವು ನನ್ನ ಮನಸ್ಸನ್ನು ಸೆಳೆಯುತ್ತಿತ್ತು. ನನ್ನ ಸಂಗೀತವು ನಿಗೂಢ ಆಧ್ಯಾತ್ಮದ ಕಡೆಗೆ ಸಾಗಲು ಈ ನನ್ನ ಮನಸ್ಸಿನ ಗುಣವೇ ಕಾರಣವಾಗಿರಬೇಕು.
Related Articles
Advertisement
ಇಪ್ಪತ್ತೈದು ವರುಷದ ಸಣಕಲು ಸುಂದರಿಯು ಮದುವೆಯಾದದ್ದು ತಾಯಿ ಆರಿಸಿದ ರವಿ ಅಮೋನ್ಕರ್ ಎಂಬ ಶಿಕ್ಷಕನನ್ನು. ಅವನೋ ಡಿಕ್ಷನರಿಯನ್ನು ಪ್ರೀತಿಸುವ ಭಾಷಾಶಿಕ್ಷಕ. ಹಾಡುವುದಕ್ಕೆ ಹೆಂಡತಿಯನ್ನು ತಡೆಯಲಿಲ್ಲ. ಇಬ್ಬರು ಮಕ್ಕಳು, ಅವರಿಗೆ ಮೊಮ್ಮಕ್ಕಳು. ಹೀಗೆ ಎಲ್ಲ ಇದ್ದರೂ ಕಿಶೋರಿಯ ಸಂಗೀತ ಮಾತ್ರ ಅಂತರ್ಮುಖೀಯಾದುದು, ಒಂಟಿ ಮನಸ್ಸೊಂದು ಅನುಭವಿಸುವ ತೀವ್ರ ನೋವಿಗೆ ರೂಪಕವಾದಂತೆ ಇದ್ದುದು ಆಶ್ಚರ್ಯ. ಸುಕೋಮಲ ಮೃದುಗಾಯನದಲ್ಲಿದ್ದ ಈ ತೀವ್ರ ಭಾವುಕತೆಯೇ ಕಿಶೋರಿತಾಯಿಯ ಎದುರು ಕುಳಿತಿದ್ದ ಲಕ್ಷಾಂತರ ಕೇಳುಗರನ್ನು ಮಕ್ಕಳಾಗಿಸಿ ಬಿಟ್ಟ ಮಾಂತ್ರಿಕತೆಗೆ ಕಾರಣ. ಅಮ್ಮ ಹೇಳಿ ಕೊಟ್ಟ ಕಲಾಪದ್ಧತಿಯಿಂದ ತನಗೆ ಬೇಕಾದ ಶಿಸ್ತು, ಅಚ್ಚುಕಟ್ಟು , ಸ್ವರ ಸಾಧನೆ, ಸಂಕೀರ್ಣ ಸ್ವರವಿನ್ಯಾಸವನ್ನು ಗಾಯನದ ಆಳದಲ್ಲಿ ಬುನಾದಿಯಂತೆ ಅಡಗಿಸಿ ಅದರ ಮೇಲೆ ತನ್ನ ವಿಹಾರ ಸೌಧವನ್ನು ತನಗೆ ಬೇಕಾದಂತೆ ಈ ಮಗಳು ಕಟ್ಟಿಬಿಟ್ಟಳು. ನಿಜ ಏನೆಂದರೆ, “ನನ್ನ ಸಂಗೀತದಿಂದ ಜೈಪುರ ಘರಾನಾವನ್ನು ತೆಗೆದರೆ ನನ್ನ ಸಂಗೀತವೇ ಇರುವುದಿಲ್ಲ’ – ಇದು ಕಿಶೋರಿಯ ತುಂಟತನದಂತೆ ಕಾಣುವ ವಾಸ್ತವದ ಮಾತು. ಅಪಾರವೂ ಸಂಕೀರ್ಣವೂ ಆದಂಥ ಆಲಾಪವನ್ನು ತನ್ನ ಘರಾನಾಕ್ಕೆ ಹೊಸದಾಗಿ ತಂದು, ಪ್ರತಿಸ್ವರಕ್ಕೂ ತೀವ್ರ ಭಾವುಕತೆಯ ಬೆಳಕನ್ನು ಕೊಟ್ಟು, ಸಾಹಿತ್ಯದ ಸಾಲುಗಳಲ್ಲಿರುವ ಭಾವಕ್ಕೆ ಪ್ರಚಂಡ ಬಲ ಕೊಟ್ಟು ಆಕೆಯು ಮಂಡಿಸಿದ ಗಾಯನ ಶೈಲಿಯು ಮನುಕುಲದ ಎದೆಯಾಳದ ಎಲ್ಲ ನೋವನ್ನು ಯಾತನೆಯನ್ನು ಹೊರಗೆಳೆದು ಬಿಡಿಸಿಟ್ಟು ಹಗುರಗೊಳಿಸುವಂತೆ ಮಾಡುತ್ತಿತ್ತು. ನಮ್ಮ ಪುರಾತನ ಸಂಗೀತ ಗ್ರಂಥಗಳನ್ನು ನಾವು ಹೊರಹೊರಗಿನಿಂದ ಅರ್ಥ ಮಾಡಿಬಿಟ್ಟೆವು. ಕೇಳುವ ಕಿವಿಗಳಿಗಾಗಿ ಯಾಂತ್ರಿಕ ಮಂಡನೆ ಮಾಡಿಬಿಟ್ಟೆವು. ಆ ಗ್ರಂಥಗಳು ಹೇಳುವ ವಿಚಾರವನ್ನು ಅದರ ನಿಜವಾದ ಅರ್ಥದಲ್ಲಿ ತಿಳಿದು ಪ್ರಯೋಗಿಸುವ ಹುಡುಕಾಟವನ್ನು ನಾನು ಮಾಡುತ್ತಿದ್ದೇನೆ. ಹೀಗೆ ಕಿಶೋರಿ ತಾಯಿ ತನ್ನ ಸಮರ್ಥನೆಯನ್ನು ಮಹತ್ವದ ಸಂಕಿರಣಗಳಲ್ಲಿ ವಿವರಿಸಿ ಪಂಡಿತರ ಮನಸ್ಸು ಗೆಲ್ಲುತ್ತಿದ್ದಳು. ಆಕೆ ಕಲಾವಿದೆ ಮಾತ್ರವಲ್ಲ, ಸಂಗೀತದ ಮೇಧಾವಿನಿ.
ಎಪ್ಪತ್ತರ ದಶಕದಲ್ಲಿ ಆಕೆಯ ಗಂಟಲು ಒಮ್ಮೆ ಹಿಂಜರಿಯಿತು. ಆಕೆ ಆಧ್ಯಾತ್ಮದ ಮೊರೆಹೋದಳು. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಭಕ್ತಳಾದ ಆಕೆ ಕನ್ನಡದ ಯತಿಗಳಿಗಾಗಿ ಕನ್ನಡದಲ್ಲಿಯೆ ಹಾಡಿದ್ದು ಇತ್ತು. “ಹೊರಗಡೆ ಹಾಡಲು ಗಂಟಲು ಇಲ್ಲದಿದ್ದರೇನು? ನನ್ನೊಳಗೆ ಹಾಡಬಹುದಲ್ಲ? ಅದನ್ನೇ ಮಾಡುತ್ತಿ¨ªೆ. ಅಂತರಂಗಕ್ಕೆ ಬದ್ಧವಾಗಿ ಹಾಡುವುದು, ನನಗೆ ನಾನು ನಿಷ್ಠಳಾಗಿ ಸ್ವರತೆಗೆಯುವುದು. ಆಗ ಅರ್ಥವಾಯಿತು. ಮುಂದೆ ಸ್ವರ ಬಂದ ಬಳಿಕ ನಾನು ಹಾಡಿದ್ದು ಪ್ರೇಕ್ಷಕರಿಗಾಗಿ ಇರಲಿಲ್ಲ. ಕಛೇರಿ ಮುಗಿದ ಬಳಿಕ ನಾನು ಕೈಜೋಡಿಸುವುದು ಪ್ರೇಕ್ಷಕರೂಪದಲ್ಲಿ ಎದುರು ಕಂಡುಕೊಳ್ಳುವ ರಾಘವೇಂದ್ರ ಮುನಿಗಳಿಗೆ ಆಗಿರುತ್ತಿತ್ತು’ ಕಿಶೋರಿ ತಾಯಿಯ ಈ ಮಾತು- ಆಕೆಯದ್ದು ವಿಕ್ಷಿಪ್ತ ವರ್ತನೆ, ಅವಳ್ಳೋ ಮಹಾಮೂಡಿ ಹೆಂಗಸು, ಸಂಘಟಕರಿಗೆ ಅವಳು ಕಿರಿಕಿರಿ- ಎಂಬ ಎಲ್ಲ ಆಕ್ಷೇಪಗಳಿಗೆ ಉತ್ತರದಂತಿದೆ. ಕಛೇರಿ ಸಿಗಲು ಸಂಘಟಕರ ಯಾವ ಮರ್ಜಿಯನ್ನು ಬೇಕಾದರೂ ಹಿಡಿಯುವ, ಕಲೆಯಲ್ಲಿ ರಾಜಿಮಾಡಿಕೊಂಡು ತಾನು ಗೆಲ್ಲುವ ಅವಕಾಶವಾದಿ ಸಂಗೀತಕ್ಕೆ ಹೋಲಿಸಿದರೆ ಕಿಶೋರಿ ಸಂಪೂರ್ಣ ಬೇರೆ. ಒಂದು ಗಾಯನ ಪ್ರಸ್ತುತಿಗಾಗಿ ತಿಂಗಳ ಹಿಂದೆಯೇ ರಾಗಗಳ ನಿರ್ಧರಿಸಿ ತನ್ನÇÉೇ ತಯಾರಿ ನಡೆಸುವ ಅವಳ ಪ್ರಪಂಚದಲ್ಲಿ ಕಲೆಯಷ್ಟೆ ಮುಖ್ಯ, ಉಳಿದುದೆಲ್ಲ ಅಮುಖ್ಯ. ಇದು ಅಹಂಕಾರದಂತೆ ಕಂಡರೂ ಹಾಗಲ್ಲ, ಇದು ಸೃನಶೀಲತೆಯ ಬಗ್ಗೆ ಆಕೆಯಲ್ಲಿರುವ ಅಂತರ್ಮುಖತೆ.ಗಂಡನಿಗಿಂತಲೂ ತುಸು ಎತ್ತರ ಎಂಬಷ್ಟು ದೀರ್ಘ ಶರೀರ, ಮುಖದಲ್ಲಿ ಮೂಗು ಪ್ರಧಾನ, ಹೊಳೆಯುವುದು ಕಣ್ಣುಗಳು ಮಾತ್ರ. ದೇಹವು ಎಷ್ಟು ಸಣಕಲೆಂದರೆ ತಂಬೂರಿಯನ್ನು ಆಧರಿಸಲು ಕಷ್ಟವೆನಿಸುವಷ್ಟು ! “”ನಿಮಗೆ ಗೊತ್ತಾ? ನಾನು ಸ್ವರಮಂಡಲ ಬಳಸಲು ತೊಡಗಿದ್ದು ತಾನ್ಪುರ ಹಿಡಿಯಲು ನನಗೆ ತ್ರಾಣವಿಲ್ಲದ್ದರಿಂದ. ಸ್ವರಮಂಡಲದ ಸಣ್ಣ ಸರಿಗೆಗಳ ಮೇಲೆ ಒಮ್ಮೆ ಬೆರಳು ಓಡಿದರಾಯಿತು, ರಾಗದ ಸೂûಾ¾ತಿಸೂಕ್ಷ್ಮ ಸ್ವರಲೋಕಕ್ಕೆ ನಾನು ಸೇರಿಕೊಂಡಾಯಿತು”
ಇದು ಈ ತಾಯಿಯ ಗಾನಗರ್ಭ. – ಮಹಾಲಿಂಗ ಭಟ್ ಕೆ.