ರಾಯಚೂರು: ಹೆಣ್ಣಿಗೆ ಮರುಜನ್ಮ ನೀಡುವ ಹೆರಿಗೆ ಸುಸಜ್ಜಿತವಾಗಿ ನೆರವೇರಬೇಕು. ಆದರೆ, ಜಿಲ್ಲೆಯಲ್ಲಿ ಕಳೆದ 15 ದಿನಗಳಲ್ಲಿ ಮೂವರು ಮಹಿಳೆಯರು 108 ವಾಹನದಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇಂಥ ಘಟನೆಗಳು ಪದೇ ಪದೇ ನಡೆಯುತ್ತಿರುವುದು ಆತಂಕಕ್ಕೀಡು ಮಾಡಿದೆ.
ಮೂರು ಪ್ರಕರಣಗಳಲ್ಲಿ ಮಕ್ಕಳು ಹಾಗೂ ತಾಯಂದಿರು ಆರೋಗ್ಯದಿಂದ ಇದ್ದಾರೆ. ಆದರೆ, ಹೆರಿಗೆ ವೇಳೆ ಕೊಂಚ ಹೆಚ್ಚು ಕಡಿಮೆಯಾದರೂ ತಾಯಿ-ಮಗುವಿನ ಜೀವಕ್ಕೆ ಅಪಾಯವಿದ್ದು, ಇಂಥ ವಿಚಾರದಲ್ಲೂ ಗ್ರಾಮೀಣ ಭಾಗದ ಜನ ಎಚ್ಚೆತ್ತುಕೊಳ್ಳದಿರುವುದು ವಿಪರ್ಯಾಸ.
ಮೇ 16ರಂದು ದೇವದುರ್ಗ ತಾಲೂಕಿನ ಸಜ್ಜಲಗುಡ್ಡ ಗ್ರಾಮದ ಅಂಜಿನಮ್ಮಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯ 108 ವಾಹನದಲ್ಲೇ ಅವಳಿ ಮಕ್ಕಳು ಜನಿಸಿವೆ. ಸಿಂಧನೂರಿನ ಸುಕಾಲಪೇಟೆ ನಿವಾಸಿ ಲಕ್ಷ್ಮೀ ಮೇ 26ರಂದು 108 ವಾಹನದಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಸೋಮವಾರ ಕೂಡ ಸಿರವಾರ ತಾಲೂಕಿನ ಕಸನದೊಡ್ಡಿ ನಿವಾಸಿ ಅಂಬಮ್ಮಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, 108 ವಾಹನದಲ್ಲಿ ಕರೆದೊಯ್ಯುವಾಗ ಮಾರ್ಗಮಧ್ಯೆಯೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಹಿಂದೆ ಕೂಡ ಅನೇಕ ಬಾರಿ 108 ವಾಹನದಲ್ಲೇ ಹೆರಿಗೆಯಾದ ಪ್ರಕರಣಗಳು ಘಟಿಸಿವೆ. ಗ್ರಾಮೀಣ ಭಾಗದಲ್ಲಿ ಹೆರಿಗೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಪರಿಣಾಮಕಾರಿ ಆಗುತ್ತಿಲ್ಲ ಎಂಬ ಸಂಗತಿ ಮೇಲ್ನೋಟಕ್ಕೆ ಸಾಬೀತಾಗಿದೆ.
ಏಕೆ ಈ ಸಮಸ್ಯೆ?: ಆರೋಗ್ಯ ಇಲಾಖೆ ಸಿಬ್ಬಂದಿ ಹೇಳುವ ಪ್ರಕಾರ ಗ್ರಾಮೀಣ ಭಾಗದ ಮಹಿಳೆಯರು ಗರ್ಭವತಿಯಾದರೆ ಅವರ ಹೆರಿಗೆ ಸುಸೂತ್ರವಾಗಿ ಜರುಗುವಂತೆ ನೋಡಿಕೊಳ್ಳುವ ಸಂಪೂರ್ಣ ಹೊಣೆ ಆ ಗ್ರಾಮದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು, ಆಯಾಗಳ ಮೇಲಿರುತ್ತದೆ. ಆರೋಗ್ಯ ಇಲಾಖೆ ಹೆರಿಗೆ ದಿನಾಂಕ ನಿಗದಿ ಮಾಡಿದ ಮೇಲೆ ಆಶಾ ಕಾರ್ಯಕರ್ತೆಯರು ಸಮೀಪದ ಆಸ್ಪತ್ರೆಗಳಿಗೆ ಸಂಪರ್ಕಿಸಿ 108 ವಾಹನಗಳು ಬರುವಂತೆ ವ್ಯವಸ್ಥೆ ಮಾಡಬೇಕು. ಇಲ್ಲವೇ ಮನೆಯವರಿಗಾದರೂ ಹೆರಿಗೆ ಮುನ್ನಾ ದಿನವೇ ಈ ಬಗ್ಗೆ ಎಚ್ಚರಿಕೆ ನೀಡಬೇಕು. ಅದು ಸಮರ್ಪಕವಾಗಿ ಆಗದ ಕಾರಣ ಇಂಥ ಘಟನೆಗಳು ಮರುಕಳಿಸುತ್ತಿವೆ ಎನ್ನಲಾಗುತ್ತಿದೆ.
ಸಕಾಲಕ್ಕೆ ಸಿಗದ 108 ಆ್ಯಂಬುಲನ್ಸ್: ಇನ್ನು ಜಿಲ್ಲೆಯಲ್ಲಿ ಜನಸಂಖ್ಯೆಗೆ ಅನುಸಾರವಾಗಿ 108 ಆರೋಗ್ಯ ಕವಚ ವಾಹನಗಳು ಇಲ್ಲ. ಇದರಿಂದ ಸಾರ್ವಜನಿಕರು ಕರೆ ಮಾಡಿದ ತಕ್ಷಣ ಸಕಾಲಕ್ಕೆ ವಾಹನಗಳು ಸಿಗದೆ ಹೀಗೆ ಮಾರ್ಗ ಮಧ್ಯೆ ಹೆರಿಗೆ ಸಂಭವಿಸುತ್ತಿವೆ. ದೇಶದ 115 ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ ರಾಯಚೂರು ಸೇರಿದ ಹಿನ್ನೆಲೆಯಲ್ಲಿ ಆರೋಗ್ಯದ ವಿಚಾರವಾಗಿ ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ. ಈ ದಿಸೆಯಲ್ಲಿ ಹೆಚ್ಚುವರಿ 108 ವಾಹನಗಳನ್ನು ನೀಡುವಂತೆ ಜಿಲ್ಲಾಡಳಿತ ಈಚೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇನ್ನು ಗ್ರಾಮೀಣ ರಸ್ತೆಗಳು ಕೂಡ ಕೆಲವೆಡೆ ಸಂಪೂರ್ಣ ಹದಗೆಟ್ಟಿದ್ದು, ಗರ್ಭಿಣಿಯರಿಗೆ ಮಾರ್ಗ ಮಧ್ಯೆಯೇ ಹೆರಿಗೆಯಾಗುವ ಪರಿಸ್ಥಿತಿ ನಿರ್ಮಾಣಗೊಂಡಿವೆ.
ಸೌಲಭ್ಯ ಬಳಸುತ್ತಿಲ್ಲ: ಸರ್ಕಾರ ಹೆರಿಗೆಯನ್ನು ಸಂಪೂರ್ಣ ಉಚಿತವಾಗಿ ಮಾಡುವ ನಿಟ್ಟಿನಲ್ಲಿ ಅನೇಕ ಸೌಲಭ್ಯ ಕಲ್ಪಿಸಿದೆ. ಹೆರಿಗೆ ದಿನಾಂಕ ನಿಗದಿ ಮಾಡಿ ಎರಡು ದಿನ ಮುಂಚಿತವಾಗಿ ಆಸ್ಪತ್ರೆಗೆ ದಾಖಲಾದರೆ ಎರಡು ಹೊತ್ತಿನ ಊಟ ಸೇರಿ ಇತರೆ ಸೌಲಭ್ಯ ಉಚಿತವಾಗಿ ಸಿಗಲಿದೆ. ಗರ್ಭಿಣಿಯರಾದಾಗಲೇ ವೈದ್ಯರು ತಪಾಸಣೆ ನಡೆಸಿ ಹೆರಿಗೆ ದಿನಾಂಕ ನೀಡಿರುತ್ತಾರೆ. ತಾಯಿ ಕಾರ್ಡ್ ಜತೆಗೆ ಬಂದು ಉಚಿತವಾಗಿ ಹೆರಿಗೆ ಮಾಡಿಸಿಕೊಂಡು ಹೋಗಬಹುದು. ಇನ್ನು ಸರ್ಕಾರ ಜನನಿ ಸುರಕ್ಷಾ ಯೋಜನೆಯಡಿ ತಾಯಿ-ಮಗುವನ್ನು ಮನೆಗೆ ಉಚಿತವಾಗಿ ಬಿಟ್ಟು ಬರುವ ಸೌಲಭ್ಯವಿದೆ. ಆದರೆ, ಜನ ಈ ಸೌಲಭ್ಯ ಪಡೆಯುವ ಮೂಲಕ ಸುರಕ್ಷಿತ ಹೆರಿಗೆಗೆ ಮುಂದಾಗುತ್ತಿಲ್ಲ.