Advertisement

ಅಮ್ಮನಾಗುವುದೆಂದರೆ…ತಾಯಿಯೊಬ್ಬಳ ತಳಮಳ

03:45 AM Feb 15, 2017 | Harsha Rao |

ಮಗುವಿನ ಹೋಂ ವರ್ಕ್‌ ಪೂರ್ಣವಾಗದಿದ್ದರೂ, ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯದಿದ್ದರೂ ದೂಷಣೆಗೊಳಗಾಗುವಳು ತಾಯಿಯೇ. ಕೌರವರು ದಾರಿತಪ್ಪಿದ್ದಕ್ಕೆ ಗಾಂಧಾರಿಯನ್ನೇ ಎಲ್ಲರೂ ನಿಂದಿಸಿದಂತೆ. ಅವಳ ಪರದಾಟವನ್ನು ನೋಡುವವರು, ಅರ್ಥ ಮಾಡಿಕೊಳ್ಳುವವರು ಕಡಿಮೆ. ಇತ್ತ ತಮ್ಮ ವೃತ್ತಿಯಲ್ಲಿ ಗೆಲುವು ಸಾಧಿಸಬೇಕೆಂಬ ಹಂಬಲ ಅತ್ತ ಮನೆಯನ್ನು ಸರಿಯಾಗಿ ನೋಡಿಕೊಳ್ಳುವ ಬಯಕೆಗಳ ನಡುವೆ ಕಂಗಾಲಾಗದ ಹೆಣ್ಣುಮಕ್ಕಳನ್ನು ಹುಡುಕುವುದು ಬಹಳ ಕಷ್ಟ. 

Advertisement

ನೋಡಮ್ಮಾ, ನಿನ್ನ ಹವ್ಯಾಸ, ಆಸಕ್ತಿ, ಉದ್ಯೋಗದ ಒತ್ತಡ ಏನೇ ಇರಲಿ, ಎಲ್ಲದರಲ್ಲೂ ಸಾಧನೆಯ ಹೆಮ್ಮೆ ನಿನ್ನದಾಗಬೇಕು ಎಂಬ ಆಶಯ ಖಂಡಿತ ತಪ್ಪಲ್ಲ. ಆದರೆ ನಿನ್ನ ಗಮನ ಕೇವಲ ಅಷ್ಟೇ ಆದರೆ ಮಕ್ಕಳು ಸೊರಗುತ್ತಾರೆ. ಅವರ ವಿದ್ಯಾಭ್ಯಾಸ ಮಿಕ್ಕುಳಿದ ಸಾಧನೆಗಳೆಲ್ಲ ಮಂಕಾಗುತ್ತವೆ. ಅವರೊಂದಿಗೆ ಹೆಚ್ಚು ಸಮಯ ಕಳೆ. ಅವರೆಡೆಗೆ ಜಾಸ್ತಿ ಗಮನ ಕೊಡು. ನಿನ್ನ ಗಂಡನಿಗೆ ನಾನಿದನ್ನೆಲ್ಲ ಹೇಳುವುದಕ್ಕಾಗುವುದಿಲ್ಲ. ಯಾರ ಬದುಕಿನಲ್ಲೇ ಆಗಲಿ, ಅಮ್ಮನ ಸ್ಥಾನ ಬಹಳ ಮುಖ್ಯವಾದದ್ದು. ದೊಡ್ಡ ದೊಡ್ಡ ಸಾಧನೆ ಮಾಡಿದವರ ಬದುಕಿನ ಪುಟಗಳನ್ನು ನೋಡಿದರೆ ಅಮ್ಮಂದಿರ ಶ್ರಮ ಬಹಳರುತ್ತದೆ. ಅರ್ಥ ಮಾಡಿಕೊ.. ಮಗಳ ಸಂಗೀತ ಗುರುಗಳು ಹೇಳುತ್ತಿದ್ದರೆ ನನಗೆ ಅರಿಲ್ಲದಂತೆ ಕಣ್ಣಾಲಿಗಳು ಹನಿಗೂಡಿದ್ದವು. ಆಗಲೆಂಬಂತೆ ತಲೆ ಅಲ್ಲಾಡಿಸಿ ಅಲ್ಲಿಂದ ಮೆಲ್ಲಗೆ ಎದ್ದು ಬಂದಿದ್ದೆ. 

ಮೊದಮೊದಲು ಗುರುಗಳು ಹೇಳಿಕೊಡುತ್ತಿದ್ದ ಪಾಠಗಳನ್ನು ಚಾಚೂ ತಪ್ಪದಂತೆ ಒಪ್ಪಿಸುತ್ತಿದ್ದವಳು ಈಗ ಸರಿಯಾಗಿ ಹೇಳುತ್ತಿಲ್ಲ ಎಂದರೆ ಅದಕ್ಕೆ ಕಾರಣ ನಾವು ಅಂದರೆ ಅಪ್ಪ ಅಮ್ಮ ಬ್ಯುಸಿಯಾಗಿರುವುದು ಎಂಬುದು ಅವರ ಕಳಕಳಿ. ನಿಜವೇ? ನನ್ನ ಹವ್ಯಾಸಗಳು, ನನ್ನದೇ ಆದ ಗುರಿಗಳು ಮಕ್ಕಳಿಗೆ ಮುಳ್ಳಾದಾವೇ? ಪಂಡಿತನ ಮಗ ದಡ್ಡ ಎಂಬ ಗಾದೆಯೇ ಇದೆಯಲ್ಲ..ಅದನ್ನು ನೆನೆಸಿಕೊಂಡರೆ ಭಯವಾಗುತ್ತದೆ. ಹಾಗೆಂದು ನನ್ನದಾದ ಯಕ್ಷಗಾನ, ಬರವಣಿಗೆ, ಉಪನ್ಯಾಸಕ ವೃತ್ತಿ, ಯಾವುದನ್ನು ಬದಿಗಿರಿಸಲಿ? ಹಾಗೆಂದು ನಮ್ಮ ಎಲ್ಲ ಗಡಿಬಿಡಿಗಳ ನಡುವೆಯೂ ಅವರಿಗಾಗಿ ಸಮಯ ಮೀಸಲಿಟ್ಟು ಅಭ್ಯಾಸಕ್ಕೋ, ಓದಿಕೊಳ್ಳುವುದಕ್ಕೋ ಕರೆದರೆ ಅವಳು ಬರವೊಲ್ಲಳು. ಸಂಗೀತಕ್ಕೂ ಅದರದೇ ಆದ ಲಹರಿ ಬೇಕಲ್ಲ, ಅದಿಲ್ಲದ ವೇಳೆಗೆ ಅಭ್ಯಾಸ ಮಾಡು ಎಂದರೆ ಅವಳು ಅತ್ತುಕೊಂಡು ಎಧ್ದೋಡುತ್ತಾಳೆ ನಾ ಅದರಿಂದ ಏನೂ ಪ್ರಯೋಜನವಾಗುವುದಿಲ್ಲ. ನನಗೋ ಹತಾಶೆ. ನಾನೇನು ಮಾಡಲಿ ಎಂಬ ಗೊಂದಲ. 

ಒಂದೊಮ್ಮೆ ಅನ್ನಿಸುವುದಿದೆ ನನಗೆ ಅಮ್ಮನಾಗುವುದೆಂದರೆ ನಮ್ಮ ಎಲ್ಲ ಗುರುತುಗಳನ್ನು ಮರೆತು ಕೇವಲ ಅಮ್ಮನಷ್ಟೇ ಆಗುವ ಪಯಣವೇ ಎಂದು. ಗರ್ಭಾಂಕುರವಾದಲ್ಲಿಂದಲೇ ನಮ್ಮ ಶರೀರದ ಮೇಲಿನ ನಿಯಂತ್ರಣ ನಮ್ಮ ಕೈತಪ್ಪುತ್ತದೆ. ಅಲ್ಲಿಯವರೆಗೆ ನಾವು ಬಯಸಿ ತಿನ್ನುತ್ತಿದ್ದ ಉಪಾಹಾರಗಳೆಲ್ಲ ನೋಡಿದರೇ ವಾಕರಿಕೆ ಬರುವಂತಾಗುತ್ತದೆ. ಇಷ್ಟ ಪಡದೇ ಇರುತ್ತಿದ್ದ ಹಲವು ಬಗೆಗಳು ತೀರಾ ಇಷ್ಟವಾಗುತ್ತವೆ. ಭಾವನಾತ್ಮಕವಾಗಿ ನಾವದೆಷ್ಟೇ ಸದೃಢರಾಗಿದ್ದರೂ ಒಡಲಲ್ಲಿ ಮಗುವೊಂದು ರೂಪುಗೊಳ್ಳುವಾಗ ಅತ್ಯಂತ ಸೂಕ್ಷ್ಮ ಮನಸ್ಸಿನವರಾಗಿ ಬಿಡುತ್ತೇವೆ. ನಮಗೆ ಇಷ್ಟವಿರಲಿ ಇಲ್ಲದಿರಲಿ ತೂಕ ಮಾತ್ರ ಏರಲೇ ಬೇಕು. ಇಲ್ಲದಿದ್ದರೆ ಮಗುವಿಗೆ ತೊಂದರೆ. ಚೊಚ್ಚಲ ಬಸಿರಿನ ಸಂಕಟಕ್ಕಾದರೂ ಸರಿ ಮನೆಯ ಕೆಲವರಾದರೂ ಸ್ಪಂದಿಸಿಯಾರು. ಆದರೆ ಎರಡನೇ ಮಗುವಿನ ತಾಯಿಯಾಗುವಾಗಲಂತೂ ಮೊದಲ ಮಗುನ ಆರೈಕೆ, ಮನೆಮಂದಿಯ ಕಾಳಜಿ ಎಲ್ಲವನ್ನೂ ನಿಭಾಯಿಸಿಕೊಳ್ಳಲೇ ಬೇಕಾದ ನಿರ್ಭಾವುಕ ಸ್ಥಿತಿಯಲ್ಲಿ ನಾವಿರುತ್ತೇವೆ. 

ಸೋಜಿಗವೆನ್ನಿಸುವುದು ಅದಕ್ಕಲ್ಲ, ಮದುವೆಗಿಂತ ಮೊದಲು ದಣಿದು ಮನೆಗೆ ಬರುವಾಗ ಅಮ್ಮ ಬಿಸಿ ಕಾಫಿ ಮಾಡಿಕೊಡಲಿ ಎಂದು ಆಶಿಸುತ್ತಿದ್ದ ನಾವು, ತಲೆನೋವಿಗೆ ಅಮ್ಮ ಪಕ್ಕದಲ್ಲಿ ಕುಳಿತು ಹಿತವಾಗಿ ಮಸಾಜ್‌ ಮಾಡಲಿ ಎಂದು ಬಯಸುತ್ತಿದ್ದ ನಾವು, ಮನೆಗೆ ಹಿಂದಿರುಗಿ ನಾವೇ ಅಡುಗೆ ಮನೆ ಹೊಕ್ಕು, ಬೆಳಗಿನಿಂದ ರಾಶಿಬಿದ್ದ ಪಾತ್ರೆಗಳನ್ನು ತೊಳೆದುಕೊಂಡು, ಮನೆಮಂದಿಗೆ ಕಾಫಿ ಮಾಡಿಕೊಟ್ಟು, ತಲೆ ಸಿಡಿಯುವಂತಿದ್ದರೂ ಬೆಳಗ್ಗೆ ಬಕೆಟ್‌ ತುಂಬಾ ನೆನೆಸಿ ಹೋಗಿದ್ದ ಬಟ್ಟೆ ಒಗೆಯಲು ಸಜಾjಗುತ್ತೇವಲ್ಲ, ಅದು! ನಾವು ಇಷ್ಟೊಂದು ಬದಲಾಗುತ್ತೇವಾ? ಪತ್ನಿಯಾಗಿ ಬದಲಾಗುತ್ತೇವೋ ಇಲ್ಲವೋ ಗೊತ್ತಿಲ್ಲ. ಆದರೆ ಅಮ್ಮನಾಗಿ ನಮ್ಮ ವ್ಯಕ್ತಿತ್ವ ಮಾತ್ರ ನೂರಕ್ಕೆ ನೂರು ಬದಲಾಗಿಬಿಡುತ್ತದೆ. ಬದಲಾಗಲಿಲ್ಲ ಎಂದುಕೊಳ್ಳಿ, ಸಮಾಜ ನಮ್ಮನ್ನು ನೋಡುವ ದೃಷ್ಟಿಕೋನವೇ ಬದಲಾಗಿರುತ್ತದೆ. 
ಎಲ್ಲದಕ್ಕಿಂತ ದೊಡ್ಡ ಹಿಂಸೆಯಾಗುವುದು ಮಗುವಿನ ಆರೋಗ್ಯ ಏರುಪೇರಾಗಿದ್ದು ನಮಗೆ ರಜೆ ಸಿಗದೇ ಹೋದಾಗ.

Advertisement

‘ಬಿಟ್ಟು ಹೋಗಬೇಡಮ್ಮಾ ಪ್ಲೀಸ್‌, ನನ್ನ ಜೊತೆಗೇ ಇರು ಭಯವಾಗುತ್ತೆ’ ಎಂದು ಕಣ್ಣೀರುಗರೆಯುವ ಕಂದನನ್ನು ಬಿಟ್ಟು ಹೋಗುವ ಹಿಂಸೆ ಅನುಭವಿಸಿದವರಿಗೇ ಗೊತ್ತು. ಅದನ್ನಾದರೂ ಹೇಗೋ ಸಮಾಧಾನಿಸಿ ಹೊರಟೇವು. ಆದರೆ ಮನೆಯಲ್ಲಿ ಸಿಗುವ ಮೂದಲಿಕೆಗಳೆಷ್ಟು? ‘ಮಗುವಿಗೆ ಅಷ್ಟು ಉಷಾರಿಲ್ಲದಿದ್ದರೂ ಬಿಟ್ಟು ಹೋಗುತ್ತಾಳಲ್ಲಾ ಇವಳೆಂತವಳು’ ಎಂಬುದು ಒಂದುಕಡೆಯಾದರೆ ‘ಏನಮ್ಮಾ ಇದು ಹೀಗೆ ರಜೆ ತೆಗೆದುಕೊಳ್ಳುವಂತಿದ್ದರೆ ಸುಮ್ಮನೇ ಯಾಕೆ ಕೆಲಸಕ್ಕೆ ಸೇರುತ್ತೀರಿ? ಉಳಿದವರೂ àಗೆ ರಜೆ ಮಾಡುತ್ತಿರಲಿ, ನಾವು ಉದ್ಧಾರವಾದಂತೆ’ ಎಂದು ವ್ಯಂಗವಾಡುವ ಅಧಿಕಾರಿಗಳು ಒಂದೆಡೆ. ಇಬ್ಬರೂ ಅವರವರ ನೆಲೆಯಲ್ಲಿ ಸರಿಯೇ ಇರಬಹುದು, ಆದರೆ ನಡುವೆ ನಜ್ಜುಗುಜಾjಗುವುದು ಮಾತ್ರ ತಾಯಿ ಹೃದಯ. 

ಮಗುವಿನ ಹೋಂ ವರ್ಕ್‌ ಪೂರ್ಣವಾಗದಿದ್ದರೂ, ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯದಿದ್ದರೂ ದೂಷಣೆಗೊಳಗಾಗುವಳು ತಾಯಿಯೇ. ಕೌರವರು ದಾರಿತಪ್ಪಿದ್ದಕ್ಕೆ ಗಾಂಧಾರಿಯನ್ನೇ ಎಲ್ಲರೂ ನಿಂದಿಸಿದಂತೆ. ಅವಳ ಪರದಾಟವನ್ನು ನೋಡುವವರು, ಅರ್ಥ ಮಾಡಿಕೊಳ್ಳುವವರು ಕಡಿಮೆ. ಇತ್ತ ತಮ್ಮ ವೃತ್ತಿಯಲ್ಲಿ ಗೆಲುವು ಸಾಧಿಸಬೇಕೆಂಬ ಹಂಬಲ ಅತ್ತ ಮನೆಯನ್ನು ಸರಿಯಾಗಿ ನೋಡಿಕೊಳ್ಳುವ ಬಯಕೆಗಳ ನಡುವೆ ಕಂಗಾಲಾಗದ ಹೆಣ್ಣುಮಕ್ಕಳನ್ನು ಹುಡುಕುವುದು ಬಹಳ ಕಷ್ಟ. 

ಎಷ್ಟೋ ಬಾರಿ ಅನ್ನಿಸುವುದಿದೆ, ಈ ಎಲ್ಲ ತಾಪತ್ರಯಗಳ ನಡುವೆ ಮಕ್ಕಳನ್ನು ಅನಾಥರಾಗಿಸಿಕೊಂಡು ಒದ್ದಾಡುವುದಕ್ಕಿಂತ ಕೆಲಸ ಬಿಟ್ಟು ಮನೆಯಲ್ಲಿರುವುದೇ ಕ್ಷೇಮವೇನೋ ಎಂದು. ಆದರೆ ಹಾಗೆ ಮಾಡಲಾರೆವು. ಸವಾಲಾದರೂ ಸರಿಯೇ; ಎಲ್ಲವನ್ನೂ ನಿಭಾಯಿಸಿಕೊಂಡು ಸಾಧಿಸುವ ಹುಮ್ಮಸ್ಸು ನಮ್ಮಲ್ಲಿ ಕಡಿಮೆಯಾಗಬಾರದು. ಮನೆಗಾಗಿ ಮಕ್ಕಳಿಗಾಗಿ ಬದುಕೇ ಮೀಸಲಿಟ್ಟು ನಾವು ಕೊನೆಗೆ ಸಾಧಿಸುವುದೇನೂ ಇಲ್ಲ. ಅಷ್ಟಕ್ಕೂ ಅಮ್ಮನಾಗುವುದೆಂದರೆ ಮಗುವಿಗಾಗಿ ನಾವೇನನ್ನು ಕಳೆದುಕೊಂಡೆವು ಎಂಬುದಲ್ಲ, ಅಮ್ಮನಾಗುವ ಮೂಲಕ ನಾವೇನು ಗಳಿಸಿಕೊಂಡೆವು ಎಂಬುದು. 

ಅನಾಮಿಕ ತಾಯಿಯೊಬ್ಬಳ ಮಾತು ಸದಾ ಕಾಡುತ್ತದೆ: ಜೀವನದಲ್ಲಿ ನೀವು ಧರಿಸಬಹುದಾದ ಅತ್ಯಂತ ಅಮೂಲ್ಯವಾದ ಕೊರಳ ಮಾಲೆಯೆಂದರೆ ನಿಮ್ಮ ಮಕ್ಕಳು ಮುದ್ದಾಗಿ ಜೋತು ಬೀಳುವುದು! 
ಅಮ್ಮನಾಗುವುದೆಂದರೆ ಸುಲಭವೇ?! 

-ಆರತಿ ಪಟ್ರಮೆ

Advertisement

Udayavani is now on Telegram. Click here to join our channel and stay updated with the latest news.

Next