Advertisement

ಬಸವ ಪಥದಲ್ಲಿ ಸಾಗಿದ ಮಾತೆ

07:45 AM Mar 15, 2019 | |

ಕೂಡಲಸಂಗಮ: ಸುಮಾರು 60-70ರ ದಶಕದಲ್ಲಿ ಸ್ತ್ರೀ ಮನೆಯ ನಾಲ್ಕು ಗೋಡೆಗಳ ಮಧ್ಯದಲ್ಲೇ ಬದುಕು ಸಾಗಿಸಬೇಕು ಎಂಬ ಅಲಿಖೀತವಾದ ಇತ್ತು. ಅಂತಹ ದಿನಗಳಲ್ಲಿ ಮಹಿಳೆ ವಿಶ್ವ ವಿದ್ಯಾನಿಲಯದ ಪದವಿ ಪಡೆದು ಉದ್ಯೋಗ ಮಾಡುವುದು ಸಾಹಸದ ಕತೆಯಾಗಿತ್ತು. ಇನ್ನು ಸ್ತ್ರೀ ಧಾರ್ಮಿಕ ಕ್ಷೇತ್ರಕ್ಕೆ ಕಾಲಿರಿಸಿ, ಗುರು ಸ್ಥಾನ ಪಡೆಯುವುದು ಬಹುದೂರದ ಮಾತಾಗಿತ್ತು. ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸ್ತ್ರೀ ಶಕ್ತಿಯೊಂದು ಕಾಲಿರಿಸಿ ಗುರುಮಾತೆ ಸ್ಥಾನ ಪಡೆದವರು ಕೂಡಲಸಂಗಮದ ಬಸವ ಧರ್ಮ ಪೀಠದ ಜಗದ್ಗುರು ಮಾತೆ ಮಹಾದೇವಿಯವರು.

Advertisement

ಸಮಾನತೆ ತತತ್ತ್ವದಡಿಯಲ್ಲಿ ಬಸವಣ್ಣನವರ ತತ್ತ್ವ ಸಂದೇಶ ವಿಶ್ವ ಧರ್ಮ ಪ್ರವಚನವೆಂಬ ಪವಿತ್ರ ಜಂಗಮ ಕಾಯಕದಿಂದ ನಾಡಿನ ಜನತೆಗೆ ಸಾರಿದವರು. ಲಿಂಗವ ಪೂಜಿಸುತ್ತ ಜಂಗಮಮುಖವ ನೋಡುತ್ತಿಪ್ಪ ಪರಮ ಸುಖವ ಕೊಡು ಲಿಂಗವೆ ಎಂಬ ಬಸವಣ್ಣನವರ ವಚನ ತತ್ತ್ವದಂತೆ ಸಮಾಜಮುಖೀ ಚಿಂತನೆ ಕಾರ್ಯದಲ್ಲಿಯೇ ಪರಮಾತ್ಮನನ್ನು ಕಂಡಿರುವವರು.

ಸ್ತ್ರೀ ಸಾಧನೆ ದಿಕ್ಸೂಚಿ : ಪರಮ ಪೂಜ್ಯ ಲಿಂ| ಜಗದ್ಗುರು ಶ್ರೀಲಿಂಗಾನಂದ ಸ್ವಾಮೀಜಿಯವರ ಜ್ಞಾನ ಪ್ರಭೆಗೊಳಗಾದ ಮಾತೆ ಮಹಾದೇವಿ 1966ರಲ್ಲಿ ಪೂಜ್ಯರಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿದರು. ಧರ್ಮದ ಬಗ್ಗೆ ಜನತೆಯೊಳಗಿದ್ದಂತಹ ಅಜ್ಞಾನ ಹೊಗಲಾಡಿಸಿ ಬಸವತತ್ವಗಳ ಬೆಳಕು ಚೆಲ್ಲುವ ಕಾರ್ಯಕ್ಕೆ ಮುಂದಾದರು. 1970 ರಲ್ಲಿ ಅವರು ಧಾರವಾಡದಲ್ಲಿ ಸ್ಥಾಪನೆಗೊಂಡ ಪ್ರಪ್ರಥಮ ಸ್ತ್ರೀ ಜಗದ್ಗುರು ಪೀಠದ ಪೀಠಾಧ್ಯಕ್ಷೆರಾಗಿ ಸ್ತ್ರೀ ಪರ ಚಿಂತನೆಯ ಧ್ವನಿಯಾದರು. ಸ್ತ್ರೀ ಸಮಾನತೆಗಾಗಿ ಹಗಳಿರುಳು ಶ್ರಮಿಸಿ, ಶಿಕ್ಷಣ, ಸ್ವಾವಲಂಬಿ, ಬದುಕು, ಉದ್ಯೋಗ, ಧಾರ್ಮಿಕ ಹಕ್ಕು ಹಾಗೂ ಶೋಷಣೆ ವಿರುದ್ಧ ಧ್ವನಿ ಎತ್ತಿದ್ದರು.

ಬಸವಜ್ಯೋತಿ ಬೆಳಗಿದ ಮಾತೆ: ತತ್ವ ನಿರ್ಮಾಣ ಕಾರ್ಯದಷ್ಟೇ ತತ್ವದ ಪುನರ್‌ನಿರ್ಮಾಣ ಕಾರ್ಯವೂ ಸಹ ಅಷ್ಟೇ ಕಷ್ಟವಾಗಿತ್ತು. ಅಂತಹ ತತ್ವ ಪುನರುತ್ಥಾನ ಕಾರ್ಯ ಅವರು ತಮ್ಮ ಸಂಕಲ್ಪ ಶಕ್ತಿಯಿಂದ ಕೃತಿಗಿಳಿಸಿದರು. ಜಾತಿ ವ್ಯವಸ್ಥೆ ಬದಿಗೊತ್ತಿ ಧರ್ಮದ ಸಂದೇಶ ಜನರ ಮನಕ್ಕೆ ಅರ್ಥೈಸಿದ್ದರು.

ಮನದ ಸತ್‌ಪರಿವರ್ತನೆ ಕಾರ್ಯದಲ್ಲಿ ಯಶಸ್ಸು ಸಾಧಿಸಿದ್ದರು. ಜಂಗಮ ತತ್ವಕ್ಕೆ ನಿಜಾರ್ಥ ತುಂಬಿ, ಬಸವಣ್ಣನವರು ನೀಡಿದ ಲಿಂಗಾಯತ ಧರ್ಮದ ತತ್ವ ವಿಚಾರಗಳು ಯಾವುದೊಂದು ಜಾತಿ ವರ್ಗಕ್ಕೆ ಸೀಮಿತವಾದುದಲ್ಲ ಎಂದು ಪ್ರತಿಪಾದಿಸಿದ್ದರು.
ಬಸವ ಧರ್ಮದ ಆಚಾರ-ವಿಚಾರಗಳು ಬದುಕಿನ ಸಾರ್ಥಕತೆಗಾಗಿ ಮುಖ್ಯವಾಗಿವೆ ಎನ್ನುತ್ತಿದ್ದರು. ಅಜ್ಞಾನದಿಂದ ಕೂಡಿದ ಸಮಾಜದೊಳಗೆ ಬಸವ ತತ್ವ ಪಸರಿಸುವ ಮೂಲಕ ನಾಡಿನ ಜನತೆಗೆ ಬಸವ ಪಥ ತೋರಿದ್ದರು.

Advertisement

ಪ್ರವಚನ ತಪಸ್ವಿನಿ: ಪ್ರವಚನದ ಕಾಯಕ ಒಂದು ತಪಸ್ಸಿನಂತೆ. ಭಕ್ತ ಹಾಗೂ ಪರಮಾತ್ಮನನ್ನು ಯಾವ ರೀತಿ ಯೋಗ ಒಂದುಗೂಡಿಸುತ್ತದೆಯೋ ಅದೇ ರೀತಿ ಅವರ ಪ್ರವಚನ ಕೂಡಾ ಮನಸ್ಸಿನ ಎಲ್ಲಾ ಚಿಂತೆ ದೂರ ಮಾಡುತ್ತದೆ. ಮನಸ್ಸನ್ನು ಪರಮಾತ್ಮ ತತ್ವದಲ್ಲಿ ಒಂದುಗೂಡಿಸುತ್ತದೆ. ಜ್ಞಾನ ತತ್ವದಲ್ಲಿ ಮನಸ್ಸನ್ನು ತನ್ಮಯಗೊಳಿಸುವ ಅವರ ಪ್ರವಚನ ಯೋಗ ಶಕ್ತಿಯಲ್ಲಿ ಆಧ್ಯಾತ್ಮಿಕ ಶಕ್ತಿ ಕಾಣುತ್ತಿತ್ತು.  ಅವರ ಪ್ರವಚನ ಯೋಗದ ಪ್ರಭಾವದಿಂದ ಅಸಂಖ್ಯಾತ ಜನರು ಮನಪರಿವರ್ತನೆಗೊಂಡು, ಸಾತ್ವಿಕ ಬದುಕಿನತ್ತ ಮುಖ ಮಾಡಿದ್ದಾರೆ.

ಇ ಸಮಾಜಮುಖೀ ವ್ಯಕ್ತಿತ್ವ : ಬಸವ ತತ್ವ ಪ್ರಸಾರ ಕಾರ್ಯಗಳೊಂದಿಗೆ ವಿವಿಧ ಸಮಾಜಮುಖೀ ಕಾರ್ಯ ಕೈಗೊಂಡು ರಾಷ್ಟ್ರದ ಗಮನ ಸೆಳೆದಿದ್ದರು. ರಾಷ್ಟ್ರಾದ್ಯಂತ ರಾಷ್ಟ್ರೀಯ ಬಸವ ದಳ ಸ್ಥಾಪಿಸುವುದರ ಮೂಲಕ ಜನತೆಗೆ ಧಾರ್ಮಿಕ ಸತ್‌ಸಂಸ್ಕಾರ ನೀಡಿದ್ದರು. ಕೂಡಲಸಂಗಮ ಬಸವಧರ್ಮ ಪೀಠದ ದ್ವಿತೀಯ ಜಗದ್ಗುರುಗಳಾಗಿ ಕೈಗೊಂಡ ರಚನಾತ್ಮಕ ಕಾರ್ಯಗಳು ಶರಣ ಸಮಾಜದ ಪುನರ್‌ ಸಂಘಟನೆಗೆ ನೆರವಾಗಿವೆ. ವಿಶಿಷ್ಟ ಆಲೋಚನೆಗಳ ಕ್ರಿಯಾತ್ಮಕ ಆಚರಣೆಗಳಿಂದ ಒಂದು ಆದರ್ಶಪೂರ್ಣ ಶರಣ ಸಮಾಜ ಮರು ಸೃಷ್ಟಿಸಿದ್ದಾರೆ. ಗುರು ಬಸವಣ್ಣನವರ ಐಕ್ಯ ಕ್ಷೇತ್ರ ಕೂಡಲಸಂಗಮ ಸುಕ್ಷೇತ್ರವನ್ನು ಧರ್ಮ ಕ್ಷೇತ್ರವೆಂದು ಕರೆದಿದ್ದರು. ಬಸವ ಧರ್ಮಿಯರ ಸಾಂಘಿಕ ಸಂಘಟನೆಗಾಗಿ 1988ರಲ್ಲಿ ಅವರು ಶರಣ ಮೇಳ ಆರಂಭಿಸಿದ್ದರು.

ವಿದೇಶ ಬಸವ ತತ್ವ ಪ್ರಚಾರ: ವಿದೇಶದಲ್ಲಿಯೂ ಸಹ ಬಸವ ಧರ್ಮದ ಧಾರ್ಮಿಕ ಮೌಲ್ಯಗಳ ತತ್ವ ಸಾರಿದ್ದರು. ಗುರು ಬಸವಣ್ಣನವರು ನೀಡಿದ ಲಿಂಗಾಯತ ಧರ್ಮವು ಮಾನವೀಯ ಮೌಲ್ಯಗಳಿಂದ ಕೂಡಿದ ವಿಶ್ವಧರ್ಮ ಎಂಬುದನ್ನು ಇಡೀ ಜಗತ್ತಿಗೆ ತಿಳಿಸಿದ್ದಾರೆ. ಎಲ್ಲರಲ್ಲಿಯೂ ಭ್ರಾತೃತ್ವ ಅರಳಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಕೈಗೊಂಡಿದ್ದಾರೆ. 

ಅವರ ಸಂಪಾದಕತ್ವದಲ್ಲಿ 1970ರಲ್ಲಿ ಪ್ರಾರಂಭಗೊಂಡ ಕಲ್ಯಾಣ ಕಿರಣ ಮಾಸ ಪತ್ರಿಕೆ ವೈಚಾರಿಕ ವಿಚಾರಗಳ ಒಂದು ಹೊಸ ಕ್ರಾಂತಿಯನ್ನೇ ಮಾಡಿತು. ವೈಚಾರಿಕಪೂರ್ಣ ಲೇಖನಗಳ ಜನರ ಮನ ಪರಿವರ್ತನೆ ಮಾಡಿದ್ದವು. ಧರ್ಮ ಹಾಗೂ ನೈತಿಕ ಮೌಲ್ಯಗಳಿಗೆ ಚ್ಯುತಿ ಬಂದಂತಹ ಸಂದರ್ಭದಲ್ಲಿ ಅವರು ಅಹಿಂಸಾತ್ಮಕ ಹೋರಾಟಕ್ಕೆ ಜೀವ ತುಂಬಿದ್ದರು. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಒದಗಿಸುವ ದಿಕ್ಕಿನಲ್ಲಿ ಕೈಗೊಂಡ ಹಲವಾರು ದಿಟ್ಟವಾದ ಹೆಜ್ಜೆಗಳಲ್ಲಿ ಅವರ ಸಮಾನತೆ ತತ್ವ ಪ್ರತಿಪಾದನೆ ಮುಖ ನಾವು ಕಾಣಬಹುದು.

ಬಸವಧರ್ಮದ ಆಚಾರ ವಿಚಾರಗಳ ಸಂಹಿತೆಗಳಿಂದ ಕೂಡಿರುವ ಧಾರ್ಮಿಕ ಗ್ರಂಥದ ರಚನೆ ಮಹತ್ವಪೂರ್ಣ ಕಾರ್ಯದಲ್ಲಿಯೂ ಅವರು ಧ್ಯಾನಾಸಕ್ತಗೊಂಡಿದ್ದಾರೆ. ಬದುಕಿನ ಪ್ರತಿಯೊಂದು ಕ್ಷಣವನ್ನೂ ಸಹ ಬಸವತತ್ವ ಚಿಂತನೆಯನ್ನಾಗಿಸಿಕೊಂಡಿರುವ ಅವರು ನೂರಾರು ಆಶ್ರಯರಹಿತ ಮಕ್ಕಳ ಹಾಗೂ ವೃದ್ಧ ತಂದೆ ತಾಯಂದಿರ ಸಂರಕ್ಷಣೆ ಮತ್ತು ಆರೈಕೆಯ ಹೊಣೆಗಾರಿಕೆ ಸಹ ಹೊತ್ತಿದ್ದರು.

ಜ್ಞಾನ ಸುಬೋಧನೆಯ ನೂರಾರು ಸಾಹಿತ್ಯ ಗ್ರಂಥಗಳು ಸಾಹಿತ್ಯ ಲೋಕಕ್ಕೊಂದು ಅಮೂಲ್ಯ ಕೊಡುಗೆಯಾಗಿದೆ. ಭಕ್ತಿ ಹಾಗೂ ಜ್ಞಾನ ಪ್ರಧಾನವುಳ್ಳ ಮಧುರ ವಚನ ಗಾಯನಗಳ ಸಿಡಿಗಳ ಮೂಲಕ ಅವರು ಸಂಗೀತ ಲೋಕಕ್ಕೂ ಅಪಾರ ಕೊಡುಗೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next