ಅಲಾರಾಂ ಸದ್ದು ಕೇಳದೆಯೂ, ಮುಂಜಾನೆಯೇ ಅಮ್ಮನಿಗೆ ಎಚ್ಚರಾಗಿಬಿಡುತ್ತದೆ. ಇನ್ನೂ ಬೆಳಕಾಗಿಲ್ಲ, ಸ್ವಲ್ಪ ಹೊತ್ತು ನಿದ್ರೆ ಮಾಡಿ ಎಂದು ಎಲ್ಲರಿಗೂ ಹೇಳಿ ತಾನು ಮಾತ್ರ ಒಂದೊಂದೇ ಕೆಲಸದಲ್ಲಿ ತೊಡಗಿಕೊಳ್ಳುತ್ತಾಳೆ…
ಬೆಳಗ್ಗೆ ಬೇಗ ಏಳುವುದು ಅಮ್ಮನಿಗೇಕೆ ಕಷ್ಟವಲ್ಲ?
ಇದು ನಿನ್ನೆ -ಮೊನ್ನೆ ಕಾಡಿರುವ ಪ್ರಶ್ನೆಯಲ್ಲ. ಬಾಲ್ಯದಿಂದ ಇಂದಿನವರೆಗೂ ಯಕ್ಷಪ್ರಶ್ನೆಯಾಗಿ ಕಾಡುತ್ತಿರುವ, ಸರಿಯಾಗಿ ಉತ್ತರ ಸಿಗದೆ ಮತ್ತಷ್ಟು ಕಗ್ಗಂಟಾಗಿ ಉಳಿದಿರುವ ಪ್ರಶ್ನೆ. ಬೆಳಗ್ಗೆ ಬೇಗ ಏಳಬೇಕು ಅಂದರೆ ಎಲ್ಲರೂ ಮೂಗು ಮುರಿಯುವವರೇ. ಆದರೆ, ಬೆಳಗ್ಗೆ ಬೇಗ ಏಳುವುದು ಅಮ್ಮನಿಗೇಕೆ ಕಷ್ಟವಾಗುವುದಿಲ್ಲ?
ಚಿಕ್ಕಂದಿನಿಂದಲೂ, ಅಮ್ಮ ಮುಂಜಾನೆಯೇ ಏಳುವುದು ಎಂದು ಗೊತ್ತು. ಸೂರ್ಯ ಮೇಲೆ ಬರೋ ಮುನ್ನವೇ ಅಡುಗೆಕೋಣೆಯ ಮಬ್ಬು ಕತ್ತಲಲ್ಲಿ ಚಿಮಣಿ ದೀಪ ಬೆಳಗುತ್ತಿತ್ತು. ಪಾತ್ರೆಗಳ ಸದ್ದು ಕೇಳುತ್ತಿತ್ತು. ಬೆಳಗ್ಗೆಯೇ ಎದ್ದು ಹೊರಡುವ ಅಪ್ಪನಿಗೆ ಬಿಸಿಬಿಸಿ ದೋಸೆ ರೆಡಿಯಾಗುತ್ತಿತ್ತು. ಎಲ್ಲರೂ ಗಾಢ ನಿದ್ದೆಯಲ್ಲಿ ಮುಳುಗಿದ್ದರೆ, ಅವಳು ಗಾಢ ಕೆಲಸದಲ್ಲಿ ಮುಳುಗಿರುತ್ತಿದ್ದಳು. ಅವಳು ಎದ್ದು ಮನೆಯ ಅರ್ಧ ಕೆಲಸ ಮುಗಿಸಿದ ಮೇಲೆಯೇ ಮನೆಯಲ್ಲಿರುವ ಉಳಿದ ಮಂದಿಗೆ ಬೆಳಗಾಗೋದು.
ಬೇಸಿಗೆ ಕಾಲವಿರಲಿ, ಮಳೆಗಾಲವಿರಲಿ, ಚಳಿಗಾಲವೇ ಬರಲಿ- ಅವಳ ದಿನಚರಿಯಲ್ಲಂತೂ ಯಾವುದೇ ಬದಲಾವಣೆ ಆಗುವುದಿಲ್ಲ. ವೀಕ್ ಡೇಸ್, ವೀಕೆಂಡ್ ಆದರೂ ಅವಳು ಏಳುವ ಹೊತ್ತು ಅದೇ. ಸಂಡೇ ಆಗಲಿ, ಮಂಡೇ ಆಗಲಿ ಅವಳು ಬೆಳಗ್ಗೆ ಎದ್ದು ಪಟಪಟನೆ ಕೆಲಸ ಮಾಡಿ ಮುಗಿಸೋದನ್ನು ನಿಲ್ಲಿಸೋದಿಲ್ಲ. ಹಬ್ಬ ಹರಿದಿನವಿರಲಿ, ಇಲ್ಲದೇ ಇರಲಿ, ಮನೆಗೆ ನೆಂಟರು ಬರಲಿ ಬರದೇ ಇರಲಿ, ಅವಳಂತೂ ಬೆಳಗಾಗೋ ಮುನ್ನವೇ ಅಡುಗೆ ಮನೆಯಲ್ಲಿರುತ್ತಾಳೆ.
ಅಲಾರಾಂ ಇಟ್ಟು ಬೆಳಗ್ಗೆ ಏಳುವುದೆಂದರೆ, ಸಾಮಾನ್ಯವಾಗಿ ಎಲ್ಲರಿಗೂ ಅಪಥ್ಯವಾಗುವ ವಿಷಯ. ವೀಕ್ ಡೇಸ್‌ಗಳಲ್ಲಿ ಕಷ್ಟಪಟ್ಟು ಅಲಾರಾಂ ಸದ್ದಿಗೆ ಏಳುವವರು, ರಜೆಯ ದಿನಗಳಲ್ಲಿ ಅಲಾರಾಂ ಮ್ಯೂಸಿಕ್ ಕೇಳಿದರೇನೇ ಬೆಚ್ಚಿ ಬೀಳುತ್ತಾರೆ. ಆ ಸದ್ದೇ ಬೆಳಗ್ಗೆ ಬೇಗ ಏಳುವ ನೆನಪನ್ನು ತಂದು ಬೇಸರ ಹುಟ್ಟಿಸಿಬಿಡುತ್ತದೆ. ಆದರೆ, ಸ್ಕೂಲ್, ಕಾಲೇಜು, ಕೆಲಸದ ನಿಮಿತ್ತ ತೆರಳುವವರು, ಅನಿವಾರ್ಯವಾಗಿ ಬೆಳಗ್ಗೆ ಬೇಗ ಏಳಲೇಬೇಕಾದ ಪರಿಸ್ಥಿತಿ. ನಗರವಾಸಿಗಳಂತೂ ಶಿಫ್ಟ್ ವೈಸ್ ಕೆಲಸ ಮಾಡುವ ಸಲುವಾಗಿ ಮಾರ್ನಿಂಗ್ ಶಿಫ್ಟ್ ಎಂದು ನಾಲ್ಕು ಗಂಟೆಗೂ ಏಳುವವರಿದ್ದಾರೆ. ಅಂಥವರ ಪಾಲಿಗೆ ಶನಿವಾರ, ಭಾನುವಾರ ಎಂದರೆ ವಾರದ ನಿದ್ದೆಯನ್ನೆಲ್ಲ ಮುಗಿಸಿಬಿಡುವ ದಿನ. “ಸಂಡೇ ಈಸ್ ಹಾಲಿಡೇ’ ಅಂತ ಹೊತ್ತು ಮೀರುವವರೆಗೂ ನಿದ್ದೆ ಮಾಡುತ್ತಾರೆ. ಆಗೊಮ್ಮೆ ಈಗೊಮ್ಮೆ ವೀಕೆಂಡ್‌ನಲ್ಲಿ ಅರ್ಲಿ ಮಾರ್ನಿಂಗ್ ಟ್ರಿಪ್ ಹೋಗುವಾ ಎಂದು ಪ್ಲಾನ್ ಮಾಡಿದರೆ, ಬೆಳಗ್ಗೆ ಬೇಗ ಏಳುವ ಸೋಮಾರಿತನದಿಂದ “ಹುಷಾರಿಲ್ಲ’ ಎಂದು ನೆಪ ಹೇಳಿ ತಪ್ಪಿಸಿಕೊಳ್ಳುವವರೇ ಹೆಚ್ಚು. ಇನ್ನು ಸಂಬಂಧಿಕರು, ಸ್ನೇಹಿತರ ಮದುವೆಗೆ ಹೋದಾಗಲೆಲ್ಲ ಬೆಳಗ್ಗೆ ಬೇಗ ಎದ್ದು ರೆಡಿಯಾಗುವ ಪಾಡು ಇದ್ದಿದ್ದೇ.
ಆದರೆ, ಅಮ್ಮ, ಆಕೆ ಪ್ರತಿನಿತ್ಯ ಬೆಳಗ್ಗೆ ಬೇಗ ಏಳುತ್ತಾಳೆ. ವರ್ಷಪೂರ್ತಿ ಮುಂಜಾನೆಯೇ ಏಳುವ ಅವಳಿಗೆ, ಆ ಬಗ್ಗೆ ಯಾವ ಬೇಸರವೂ ಇಲ್ಲ. ಮಳೆಗಾಲದಲ್ಲಿ ಹೊರಗಡೆ ಜೋರು ಮಳೆ ಸುರಿಯುತ್ತಿದ್ದರೆ, ಮತ್ತಷ್ಟು ಹೊದಿಕೆ ಎಳೆದು ಮಲಗುವ ಆಸೆ ನಮಗೆ. ಆದರೆ, ಯಾವಾಗ ಕರೆಂಟ್ ಹೋಗುತ್ತೋ ಅನ್ನೋ ಭಯದಲ್ಲಿ ಅವಳಾಗಲೇ ಎದ್ದು, ಗ್ರೈಂಡರ್‌ಗೆ ಅಕ್ಕಿ ಹಾಕಿ ರುಬ್ಬಲು ಶುರು ಮಾಡಿರುತ್ತಾಳೆ. ಚಳಿಗಾಲದಲ್ಲಿ , “ಅಯ್ಯೋ ಚಳಿ’ ಎಂದು ನಾವು ಮಲಗಿದರೆ, ಅವಳಾಗಲೇ ಚಳಿಯಲ್ಲೇ ಚುರುಕಾಗಿ ಓಡಾಡಿಕೊಂಡು ಅರ್ಧ ಕೆಲಸ ಮುಗಿಸಿರುತ್ತಾಳೆ. ಜಗವೆಲ್ಲ ನಿದ್ದೆಯೆಂದು ಮಲಗಿದರೆ ಅವಳೊಬ್ಬಳು ಎದ್ದಿರುತ್ತಾಳೆ.
ಅಪರೂಪಕ್ಕೊಮ್ಮೆ ಅಮ್ಮನಿಗೆ ಹುಷಾರಿಲ್ಲವೆಂದರೆ ಮುಗಿಯಿತು. ಮನೆಯಲ್ಲೆಲ್ಲ ಅಲ್ಲೋಲಕಲ್ಲೋಲ. ಅವಳ ಗೈರು ಹಾಜರಿಯಲ್ಲಿ, ಒಂದೆರಡು ದಿನ ಬೆಳಗ್ಗೆ ಬೇಗ ಎದ್ದು ತಿಂಡಿ ರೆಡಿ ಮಾಡಲು ಉಳಿದವರು ಒದ್ದಾಡುತ್ತಾರೆ. ಯಾರು ಬೇಕಾದರೂ ಮಾಡಿಕೊಳ್ಳಲಿ, ಅನ್ನೋ ನಿಲುವಿಗೂ ಬಂದು ಬಿಡುತ್ತಾರೆ. ಅಮ್ಮ ಅದ್ಹೇಗೆ ಯಾವುದೇ ಕಷ್ಟವಿಲ್ಲದೆ, ಯಾರನ್ನೂ ದೂರದೆ ಪ್ರತಿನಿತ್ಯ ಬೆಳಗ್ಗೆ ಅಲಾರಾಂ ಇಲ್ಲದೆಯೂ ಎದ್ದು ಬಿಡುತ್ತಾಳೆ ಅನ್ನೋದು ಇವತ್ತಿಗೂ ಅಚ್ಚರಿ. ಅವಳು ವರ್ಷಪೂರ್ತಿ ಒಂದು ಮುಂಜಾನೆ ಏಳುತ್ತಾಳೆ. ಅವಳಿಗಾಗಿ ಅಲ್ಲ, ಬೆಳಗ್ಗೆ ಬೇಗ ಆಫೀಸಿಗೆ ಹೊರಡುವ ಗಂಡನಿಗಾಗಿ, ಸ್ಕೂಲಿಗೆ ರೆಡಿಯಾಗುವ ಮಕ್ಕಳಿಗಾಗಿ, ಅಪರೂಪಕ್ಕೆ ಮನೆಗೆ ಬರುವ ಅತಿಥಿಗಳನ್ನು ಆದರಿಸುವುದಕ್ಕಾಗಿ. ಆದರೆ, ಅದಕ್ಕಾಗಿ ಅವಳು ಯಾರ ಬಗ್ಗೆಯೂ ಬೇಸರಪಡುವುದಿಲ್ಲ. ತನ್ನ ನಿತ್ಯ ಕಾಯಕವೆಂಬಂತೆ, ಅದೂ ಇದೂ ಕೆಲಸ ಮಾಡುತ್ತಲೇ ಇರುತ್ತಾಳೆ. ಅದಕ್ಕಾಗಿಯೇ ಅಮ್ಮ ಎಂದರೆ ಅಕ್ಕರೆ, ಅಮ್ಮ ಎಂದರೆ ಆದರ, ಅಮ್ಮ ಅಂದರೆ ಅಗಾಧ, ಅಮ್ಮ ಎಂದರೆ ಆಸರೆ, ಅಮ್ಮ ಎಂದರೆ ಅನೂಹ್ಯ ಸಂಬಂಧ. ಅಮ್ಮ ಎಂದರೆ ಯಾವತ್ತೂ ಅರಿಯಲಾಗದ ಅದ್ಭುತ.
-ವಿನುತಾ ಪೆರ್ಲ