Advertisement

ಮಾತೃಭಾಷೆ ಕನ್ನಡ ನುಡಿಗಿಂತ ಮಿಗಿಲು ಮತ್ತೊಂದಿಲ್ಲ

05:43 AM Jan 01, 2019 | Team Udayavani |

ಮೈಸೂರು: ಮಾತೃಭಾಷೆ ಎಂಬುದು ತಾಯಿ ಕೊಡುಗೆಯಾಗಿ ಕರುಳು ಬಳ್ಳಿಯಂತೆ ಹೆಣೆದುಕೊಂಡು ಹುಟ್ಟಿನೊಡನೆಯೇ ಪ್ರತಿಯೊಬ್ಬರಲ್ಲೂ ರಕ್ತಗತವಾಗಿ ಬಂದಿರುವ ನುಡಿ ಭಾಗ್ಯ, ಹಾಗಾಗಿ ಭಾಷೆಯ ವಿಷಯದಲ್ಲಿ ಕನ್ನಡದ ಮಕ್ಕಳಿಗೆ ಕನ್ನಡ ನುಡಿಗಿಂತ ಮಿಗಿಲು ಮತ್ತೂಂದಿಲ್ಲ ಎಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.

Advertisement

ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದ ವತಿಯಿಂದ ತಾಲೂಕಿನ ನಾಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ನುಡಿ ಕನ್ನಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡದ ಬಗ್ಗೆ ಮಕ್ಕಳಲ್ಲಿ ಅಭಿಮಾನವಿದ್ದರಷ್ಟೇ ಸಾಲದು. ಕನ್ನಡದ ಮಕ್ಕಳು ಎಷ್ಟು ಪ್ರತಿಭಾಶಾಲಿಗಳೆಂಬುದನ್ನು ತಮ್ಮ ಓದಿನ ಮೂಲಕ ಸಾಧಿಸಿ ತೋರಿಸಬೇಕು. ದೊಡ್ಡ ಸಾಧಕರಾಗಲು ಪಠ್ಯಪುಸ್ತಕಗಳ ಓದು ಮಾತ್ರ ಸಾಲದು, ಇದರ ಜೊತೆಗೆ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಮುಂತಾದ ವಿಷಯಗಳಲ್ಲಿ ಆಸಕ್ತಿ ಬೆಳೆಸಿಕೊಂಡು ರಸಪ್ರಶ್ನೆ ಮತ್ತು

ಸಾಮಾನ್ಯ ಜ್ಞಾನ ಸ್ಪರ್ಧೆಗಳಂತಹ ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದು ಜ್ಞಾನವಂತರಾಗಬೇಕು. ಅರಿವು, ವಿವೇಕ, ಜ್ಞಾನ ಎಲ್ಲಿಂದ ಬಂದರೂ ಸರಿಯೆ ಅದನ್ನು ಗಳಿಸಿಕೊಳ್ಳುವಲ್ಲಿ ಕ್ರಿಯಾಶೀಲರಾಗಿ ಕನ್ನಡದ ಜೊತೆಗೆ ಭವಿಷ್ಯದ ದೃಷ್ಟಿಯಿಂದ ಇತರೇ ಭಾಷೆಗಳನ್ನೂ ಕಲಿಯಬೇಕೆಂದು ಸಲಹೆ ನೀಡಿದರು.

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಯಾವ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೂ ಕಡಿಮೆಯಿಲ್ಲವೆಂಬ ಮನೋಭಾವ ಬೆಳೆಸಿಕೊಂಡು ಪ್ರತಿಯೊಂದು ಹಂತದಲ್ಲೂ ವಿದ್ಯಾರ್ಥಿಗಳು ತಮ್ಮ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ವಿಶೇಷವಾಗಿ ಅಧ್ಯಯನ ಶೀಲರಾಗಬೇಕೆಂದು ಹೇಳಿದರು.

Advertisement

ಕಾರ್ಯಕ್ರಮ ಉದ್ಘಾಟಿಸಿದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎನ್‌.ಎಸ್‌.ನಾರಾಯಣ ಮಾತನಾಡಿ, ಖಾಸಗಿ ಶಾಲೆಗಳಿಗಿಂತಲೂ ಹೆಚ್ಚಿನ ನುರಿತ ಶಿಕ್ಷಕರ ತಂಡ ನಮ್ಮ ಸರ್ಕಾರಿ ಶಾಲೆಯಲ್ಲಿದ್ದು, ಇವರ ಸಾಮರ್ಥ್ಯವನ್ನು ಮಕ್ಕಳು ಸದ್ಬಳಕೆ ಮಾಡಿಕೊಂಡು ಕಷ್ಟಪಟ್ಟು ಕಲಿಯುವುದಕ್ಕಿಂತ ಹೆಚ್ಚಾಗಿ ಇಷ್ಟಪಟ್ಟು ಕಲಿತು ಸಾಧಕರಾಗಿ ಕಲಿತ ಶಾಲೆಗೆ ಕಲಿಸಿದ ಗುರುಗಳಿಗೆ ಕೀರ್ತಿ ತರಬೇಕೆಂದರು. 

ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ಕಾವೇರಿ ಬಳಗದ ಅಧ್ಯಕ್ಷೆ ಎನ್‌.ಕೆ. ಕಾವೇರಿಯಮ್ಮ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎನ್‌. ಮೀನಾಕ್ಷಿ, ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಜಯರತ್ನ, ಎಸ್‌ಡಿಎಂಸಿ ಸದಸ್ಯ ಶಿವಣ್ಣ, ಪ್ರೌಢಶಾಲಾ ಮುಖ್ಯಶಿಕ್ಷಕಿ ಎಚ್‌. ಹೇಮಾಕ್ಷಮ್ಮ ಇತರರು ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಎಚ್‌.ಹೇಮಾಕ್ಷಮ್ಮ ಹಾಗೂ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಕು.ರಕ್ಷಿತಾ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next