ಬೀದರ: ಭೂ ತಾಯಿಯಂತೆ ಮಾತೃ ಭಾಷೆಯು ಶ್ರೇಷ್ಠ. ಮಾತೃ ಭಾಷೆ ಕನ್ನಡದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಿದರೆ, ಮಗು ಬಹು ಬೇಗ ವಿಷಯವನ್ನು ಗ್ರಹಿಸುವುದಲ್ಲದೇ ಕಲಿಕೆಯಲ್ಲಿ ಸದಾ ಮುಂದಿರುತ್ತದೆ. ಮಗುವಿನ ಚಿಂತನಾ ಶಕ್ತಿ, ಕ್ರಿಯಾಶೀಲತೆ, ವಾಕ್ ಚಾತುರ್ಯ ಮತ್ತು ಅರಿವು ಉತ್ತಮಗೊಳ್ಳುತ್ತದೆ ಎಂದು ಹಿರಿಯ ಸಾಹಿತಿ ಡಾ| ಎಂ.ಜಿ. ದೇಶಪಾಂಡೆ ನುಡಿದರು.
ಕರ್ನಾಟಕ ಜಾಗೃತಿ ವೇದಿಕೆ, ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ, ನ್ಯೂ ಮದರ್ ಥೆರೆಸಾ ಅಭಿವೃದ್ಧಿ ಸಂಸ್ಥೆ ಹಾಗೂ ಡಾ| ಕೇರ್ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ನಗರದ ಹಿಮಾಲಯ ಕಾನ್ವೆಂಟ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಾತೃ ಭಾಷಾ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಮಕ್ಕಳಿಗೆ ಮಾತೃ ಭಾಷೆಯಲ್ಲಿ ಶಿಕ್ಷಣ ಕಲ್ಪಿಸಲು ಮುಂದಾಗಬೇಕು ಎಂದರು.
ಮಕ್ಕಳ ತಜ್ಞ ಡಾ| ಸಿ. ಆನಂದರಾವ ಮಾತನಾಡಿ, ವ್ಯಕ್ತಿ ಹುಟ್ಟುತ್ತಲೇ ಮಾತನಾಡಲು ಕಲಿಯುವ ಪ್ರಥಮ ಭಾಷೆಯೇ ಆತನ ಮಾತೃ ಭಾಷೆ. ಮಾತೃ ಭಾಷೆಯ ಮೂಲಕ ಒಂದು ಮಗು ಅತೀ ಸ್ಪಷ್ಟವಾಗಿ ತನ್ನ ವಿಚಾರಗಳನ್ನು ಹಂಚಿಕೊಳ್ಳಬಲ್ಲದು. ಹೀಗಾಗಿ ಮಾತೃ ಭಾಷೆಗೆ ತಾಯಿ ಸ್ಥಾನ ನೀಡಲಾಗಿದೆ ಎಂದು ಹೇಳಿದರು.
ಪ್ರಗತಿ ಸಂಸ್ಥೆಯ ಅಧ್ಯಕ್ಷ ಅರವಿಂದ ಕುಲಕರ್ಣಿ ಅಧ್ಯಕ್ಷತೆ ವಹಿಸಿ, ಮಾತೃ ಭಾಷೆಯು ತಾಯಿ ನುಡಿ ಇದ್ದಂತೆ. ನಾವು ಬಾಲ್ಯದಲ್ಲಿ ಪ್ರಥಮವಾಗಿ ಕಲಿತ ಭಾಷೆ, ಅದು ನಮ್ಮ ಜೀವನ ನಾಡಿ, ನಮ್ಮ ಭಾವನೆ ಹಾಗೂ ವಿಚಾರಗಳನ್ನು ಮನದಟ್ಟಾಗುವಂತೆ ಪರಸ್ಪರ ವಿನಿಮಯಗೊಳಿಸುವ ಪ್ರಬಲ ಸಂವಹನ ಮಾಧ್ಯಮವೆಂದು ನುಡಿದರು.
ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಸಂಜೀವಕುಮಾರ ಸ್ವಾಮಿ ಮಾತನಾಡಿ, ಕನ್ನಡದ ಅಭಿಯಾನ ಕೇವಲ ನ.1ರ ರಾಜ್ಯೋತ್ಸವದ ದಿನಕ್ಕಷ್ಟೇ ಮಾತ್ರ ಸೀಮಿತವಾಗಿರದೇ, ವರ್ಷದ ಪೂರ್ತಿ ಕನ್ನಡ ನಾಡು-ನುಡಿ, ಸಂಸ್ಕೃತಿ ಉಳಿಸಿ-ಬೆಳೆಸುವ ಕಾರ್ಯ ನಿರಂತರವಾಗಿರಬೇಕು. ಕನ್ನಡವೇ ನಮ್ಮ ಮಾತೃ ಭಾಷೆ ಎಂಬ ಸತ್ಯ ನಾವು ಮರೆಯಬಾರದು ಎಂದರು.
ಪತ್ರಕರ್ತ ಜೈಕುಮಾರ ಯೇಸುದಾಸ, ನವೀನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕಾಮಶೆಟ್ಟಿ ಚಿಕಬಸ್ಸೆ, ನಿವೇದಿತಾ ಹೂಗಾರ ಟ್ರಸ್ಟ್ ಅಧ್ಯಕ್ಷೆ ಶ್ರೀದೇವಿ ಹೂಗಾರ ಮತ್ತು ಉಪನ್ಯಾಸಕಿ ಡಾ| ಜಗದೇವಿ ತಿಬಶೆಟ್ಟಿ ಮಾತನಾಡಿದರು. ವೀರಭದ್ರಪ್ಪಾ ಉಪ್ಪಿನ್, ಸಂಗಮೇಶ ಜ್ಯಾಂತೆ, ಅನಂತ ಕುಲಕರ್ಣಿ, ಓಂಕಾರ ಪಾಟೀಲ, ಜೈಪ್ರಕಾಶ, ಧನರಾಜ ಇದ್ದರು. ಕನ್ನಡ ಭಾಷೆಯಲ್ಲಿ ಮಕ್ಕಳಿಗೆ ವಿದ್ಯಾದಾನ ನೀಡುತ್ತಿರುವ ಶಿಕ್ಷಕ, ಶಿಕ್ಷಕಿಯರನ್ನು ಗೌರವಿಸಲಾಯಿತು.