ಸಾಮಾನ್ಯವಾಗಿ ಒಂದೇ ಗುರುಗಳ ಇಬ್ಬರು ಶಿಷ್ಯರು ಅಥವಾ ಅಣ್ಣ-ತಂಗಿ, ಅಕ್ಕ-ತಂಗಿ- ಹೀಗೆ ಜೋಡಿಯಲ್ಲಿ ರಂಗಪ್ರವೇಶ ಮಾಡುವವರ ಬಗ್ಗೆ ಕೇಳಿದ್ದೇವೆ. ಆದರೆ, ಇಲ್ಲೊಂದು ಅಪರೂಪದ ರಂಗಪ್ರವೇಶ ಆಯೋಜನೆಗೊಂಡಿದೆ. ಇಲ್ಲಿ ಒಟ್ಟಿಗೆ ಗೆಜ್ಜೆ ಕಟ್ಟುತ್ತಿರುವುದು ತಾಯಿ ಮತ್ತು ಮಗ! ಶ್ರೀಲಕ್ಷ್ಮೀ ಪ್ರಸಾದ್ ಮತ್ತು ಅಕ್ಷಯ್ ಎಸ್. ಭಾರದ್ವಾಜ್- ಇಬ್ಬರೂ ಭರತನಾಟ್ಯದಲ್ಲೊಂದು ಹೊಸ ದಾಖಲೆ ತೆರೆಯುತ್ತಿದ್ದಾರೆ. ತಾಯಿ- ಮಗನ ರಂಗಪ್ರವೇಶ ಏಕಕಾಲದಲ್ಲಿ ನಡೆಯುತ್ತಿರುವುದು ಬಹುಶಃ ಇದೇ ಮೊದಲು.
ಶ್ರೀಲಕ್ಷ್ಮಿ ಅವರು “ಕನ್ನಡದ ಕಣ್ಣ’ ಬಿ.ಎಂ.ಶ್ರೀ. ಅವರ ಮನೆತನದವರು. ಈಗ ಇವರಿಗೆ 42 ವರ್ಷ. 32 ವರ್ಷದಲ್ಲಿ ನೃತ್ಯದ ಶಾಸ್ತ್ರೀಯ ಕಲಿಕೆಗೆ ಮಂದಾದರಂತೆ. ಶ್ರೀಲಕ್ಷ್ಮಿ ಅವರಿಗೆ ಬಾಲ್ಯದಲ್ಲಿಯೇ ನೃತ್ಯದ ಮೇಲೆ ಅಪಾರ ಒಲವಿತ್ತು. ಆರಂಭದಲ್ಲಿ ಒಂದೆರಡು ವರ್ಷ ಕಲಿತರಂತೆ. ನಂತರ ಅವರ ಕಲಿಕೆಯೇ ನಿಂತುಹೋಗಿತ್ತು. ಮದುವೆ, ಮಕ್ಕಳಾದ ಮೇಲೆ ಅತ್ತ ಆಸಕ್ತಿ ಹೊರಳಿಸಲೂ ಸಾಧ್ಯವಾಗಲಿಲ್ಲ.
ಆದರೆ, ಪುತ್ರ ಅಕ್ಷಯನನ್ನು ನೃತ್ಯ ಕಲಾವಿದನನ್ನಾಗಿ ರೂಪಿಸಲು ಪಣತೊಟ್ಟರು. ಆತನಿಗೆ 3 ವರ್ಷವಾಗಿದ್ದಾಗ, ಅಜಂತಾ ಕಲ್ಚರಲ್ ಸೊಸೈಟಿ ನೃತ್ಯ ಸಂಸ್ಥೆಯಲ್ಲಿ ಗುರು ಲಕ್ಷ್ಮಿಮೂರ್ತಿ ಮತ್ತು ಮಂಜು ಭೈರವಿ ಅವರಲ್ಲಿ ಭರತನಾಟ್ಯ ಕಲಿಯಲು ಸೇರಿಸಿದರು. ಇದರೊಂದಿಗೆ ತಮ್ಮ ಕನಸು ನನಸು ಮಾಡಿಕೊಳ್ಳುವ ಸುಯೋಗವೂ ಅವರಿಗೆ ಒದಗಿಬಂತು. ಈಗ ಅಕ್ಷಯ್‌ಗೆ 20 ವರ್ಷ. ಅಚ್ಚರಿಯೆಂದರೆ, ಅಕ್ಷಯ್ ಕೆಲ ತಿಂಗಳ ಹಿಂದೆ ಅಪಘಾತಕ್ಕೆ ಒಳಗಾಗಿ, ಕಾಲಿಗೆ ಬಲವಾದ ಪೆಟ್ಟು ಮಾಡಿಕೊಂಡವರು.
ಅವರ ಕಾಲೊಳಗೆ ರಾಡ್ ಅಳವಡಿಕೆಯಾಗಿದ್ದರೂ, ಆ ನೋವನ್ನೆಲ್ಲ ಮರೆತು ರಂಗಪ್ರವೇಶಕ್ಕೆ ಸಜ್ಜುಗೊಂಡಿದ್ದಾರೆ. ಗುರು ಡಾ. ಸಂಜಯ್ ಶಾಂತರಾಂ ಅವರ ಸೂಕ್ತ ಮಾರ್ಗದರ್ಶನ ಅವರಿಗೆ ಸಿಕ್ಕಿದೆ. ಸರ್ಕಾರ ನಡೆಸುವ ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯಪರೀಕ್ಷೆಗಳಲ್ಲಿ ತಾಯಿ- ಮಗ ಇಬ್ಬರೂ ಪ್ರಥಮದರ್ಜೆಯಲ್ಲಿ ಪಾಸಾಗಿದ್ದಾರೆ. ರಾಜ್ಯದ ಅನೇಕ ಪುಣ್ಯಕ್ಷೇತ್ರಗಳು, ದೆಹಲಿ, ಮುಂಬೈ, ರಾಜಾಸ್ಥಾನಗಳಲ್ಲೂ ನೃತ್ಯ ಜುಗಲ್‌ಬಂದಿ, ಜನರ ಮೆಚ್ಚುಗೆ ಪಡೆದಿದೆ. “ಶಿವಪ್ರಿಯ ಅಂತಾರಾಷ್ಟ್ರೀಯ ನೃತ್ಯಸಂಸ್ಥೆ’ಯು, ಈ ರಂಗಪ್ರವೇಶ ಕಾರ್ಯಕ್ರಮವನ್ನು ಆಯೋಜಿಸಿದೆ.
ಯಾವಾಗ?: ಡಿಸೆಂಬರ್ 1, ಭಾನುವಾರ, ಬೆಳಗ್ಗೆ 10
ಎಲ್ಲಿ?: ಸೇವಾಸದನ, 14ನೇ ಕ್ರಾಸ್, ಮಲ್ಲೇಶ್ವರ
* ವೈ.ಕೆ. ಸಂಧ್ಯಾಶರ್ಮ