ತಂದೆ-ತಾಯಿಯನ್ನೇ ಕಾಣದವರು, ಎಲ್ಲೋ ರಸ್ತೆ ಬದಿಗಳಲ್ಲಿ ಸಿಕ್ಕಿದವರು, ಪೋಷಕರಿಂದ ದೂರವಾದವರು… ಹೀಗೆ ಅನಾಥ ಮಕ್ಕಳ ಪಾಲಿಗೆ ತಾಯಿಯಂತಿದ್ದ ಸಿಂಧುತಾಯಿ ಸಪ್ಕಾಲ್ ಇನ್ನಿಲ್ಲ!
ಪೋಷಕರೇ ಇಲ್ಲ ಎಂಬ ಕೊರಗನ್ನು ಕಾಣದಂತೆ ಸುಮಾರು 1,000ಕ್ಕೂ ಹೆಚ್ಚು ಅನಾಥ ಮಕ್ಕಳನ್ನು ಸಾಕುತ್ತಿದ್ದ 74 ವರ್ಷದ ಈ ಮಹಾತಾಯಿ, ಮಹಾರಾಷ್ಟ್ರದ ಪುಣೆಯಲ್ಲಿ ಮಂಗಳವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 1948ರ ನ.14ರಂದು ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿ ಜನ್ಮತಾಳಿದ್ದ ಸಿಂಧುತಾಯಿ ಓದಿದ್ದು ಕೇವಲ 4ನೇ ಕ್ಲಾಸು. 12ನೇ ವಯಸ್ಸಿಗೇ 32 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರನ್ನು ವಿವಾಹವಾಗಿದ್ದರು. ಮದುವೆಯ ಅನಂತರ, ವಾರ್ಧಾದ ನವಗ್ರಾಂನ್ ಅರಣ್ಯದಲ್ಲಿ ವಾಸ್ತವ್ಯ ಹೂಡಿದ್ದರು. ಮೊದಲಿಗೆ ಮೂರು ಮಕ್ಕಳಾಗಿದ್ದವು. ನಾಲ್ಕನೇ ಮಗುವಿಗೆ ಗರ್ಭಿಣಿಯಾಗಿದ್ದ ವೇಳೆ, ಜಮೀನಾªರ ನೊಬ್ಬ ಇವರ ಬಗ್ಗೆ ಇಲ್ಲಸಲ್ಲದ ಕಥೆ ಹೇಳಿದ ಕಾರಣ, ಗಂಡ ತ್ಯಜಿಸಿಹೋಗಿದ್ದ. ಗಂಡನ ಮನೆ ಜತೆಗೆ ತವರು ಮನೆಯ ಬಾಗಿಲೂ ಇವರಿಗೆ ಬಂದ್ ಆಯಿತು. ಕಡೆಗೆ ದನದ ಕೊಟ್ಟಿಗೆಯಲ್ಲಿ ಹೆರಿಗೆಯಾಗಿತ್ತು.
ಇದನ್ನೂ ಓದಿ:ಪ್ರಸಿದ್ಧ ಹಿನ್ನೆಲೆ ಗಾಯಕ ಸೋನು ನಿಗಮ್ ಕುಟುಂಬಕ್ಕೆ ಕೋವಿಡ್ ಸೋಂಕು
ತನ್ನ ಮಕ್ಕಳನ್ನು ಸಾಕಲು ಮತ್ತು ಜೀವನಕ್ಕಾಗಿ ಅನಂತರ ರೈಲಿನಲ್ಲಿ ಹಾಡುತ್ತಾ, ಭಿಕ್ಷೆ ಬೇಡುತ್ತಿದ್ದರು. ಆಗ ತಾಯಿಯ ಮಡಿಲು ಇಲ್ಲದೇ ಹಲವಾರು ಮಕ್ಕಳು ಓಡಾಡುತ್ತಿರುವುದು ಕಂಡುಬಂದಿತು. ಬಳಿಕ ತಮ್ಮ ಜೀವನದ ಗತಿಯನ್ನೇ ಬದಲಿಸಿಕೊಂಡ ಅವರು, ಮಕ್ಕಳನ್ನು ದತ್ತುತೆಗೆದುಕೊಳ್ಳಲು ಆರಂಭಿಸಿದರು. ಪುಣೆಯ ಹದಾಪ್ಸರ್ ಪ್ರದೇಶದಲ್ಲಿ ಸನ್ಮತಿ ಬಾಲನಿಕೇತನ ಸಂಸ್ಥಾ ಎಂಬ ಅನಾಥಾಶ್ರಮವನ್ನು ಕಟ್ಟಿದರು. ಅಷ್ಟೇ ಅಲ್ಲ, ಇವರ ಸತತ ಪರಿಶ್ರಮದಿಂದಾಗಿ ಪುಣೆ ಜಿಲ್ಲೆಯ ಮಾಂಜ್ರಿಯಲ್ಲಿ ಅತ್ಯಂತ ಸುಸಜ್ಜಿತ ಅನಾಥಾಲಯವೊಂದು ತಲೆ ಎತ್ತಿದೆ. ಸಿಂಧುತಾಯಿ ಅವರ ಈ ಸೇವೆಗೆ 750ಕ್ಕೂ ಹೆಚ್ಚು ಪ್ರಶಸ್ತಿಗಳು ಸಿಕ್ಕಿವೆ. 2021ರಲ್ಲಿ ಭಾರತ ಸರಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ಮಹಾರಾಷ್ಟ್ರ ಸರಕಾರ 2010ರಲ್ಲಿ ಅಹಿಲ್ಯಾಬಾಯಿ ಹೋಳ್ಕರ್ ಪ್ರಶಸ್ತಿ ನೀಡಿತ್ತು. 2010ರಲ್ಲಿ ಇವರ ಕಥೆಯನ್ನು ಆಧರಿಸಿ ಮಿ ಸಿಂಧುತಾಯಿ ಸಪ್ಕಾಲ್ ಬೋಲ್ಟೆ ಎಂಬ ಸಿನೆಮಾ ಬಂದಿತ್ತು. 1000ಕ್ಕೂ ಹೆಚ್ಚು ಮಕ್ಕಳನ್ನು ಸಾಕಿದ ಇವರಿಗೆ207 ಅಳಿಯಂದಿರು, 36 ಸೊಸೆಯಂದಿರು ಸಿಕ್ಕಿದ್ದಾರೆ.