ಅದೊಂದು ಪುಟ್ಟ ಊರು. ಪೇಟೆಗಿಂತ ಸ್ವಲ್ಪ ದೂರದಲ್ಲಿ ಪ್ರಕೃತಿಯ ಮಡಿಲಿನಲ್ಲಿದ್ದ ಸಣ್ಣ ಪ್ರದೇಶ. ಸುತ್ತಲೂ ಕಾಡು ಗುಡ್ಡಗಳಿಂದ ಆವೃತ್ತವಾಗಿತ್ತು. ಮರಗಿಡಗಳಿಂದ ಆ ಊರು ಹಚ್ಚ ಹಸುರಿನಿಂದ ಕೂಡಿರುತ್ತಿತ್ತು. ಮಳೆಗಾಲದಲ್ಲಂತೂ ಅಲ್ಲಿನ ಗದ್ದೆಯಲ್ಲಿ ನಾಟಿ ಮಾಡಿ ಪೈರುಗಳನ್ನು ನೋಡುವಾಗ ಹಸುರು ಕಂಬಳಿಯನ್ನು ಆ ಭೂಮಿಯು ಹೊದ್ದಂತೆ ಕಾಣುತ್ತಿತ್ತು.
ಮಳೆಗಾಲದಲ್ಲಿ ಹಸರು ತುಂಬಿದ ಆ ಊರನ್ನು ನೋಡಿದಾಗ ಸ್ವರ್ಗವೇ ಕಂಡಂತೆ ಭಾಸವಾಗುತ್ತಿತ್ತು. ಸಂಜೆಯ ಹೊತ್ತಿನಲ್ಲಿ ತಣ್ಣನೆಯ ತಂಗಾಳಿ ಬೀಸುತ್ತಿತ್ತು. ಆ ಗಾಳಿಯು ಯಾವ ಫ್ಯಾನಿನ ಗಾಳಿಗೂ ಕಡಿಮೆ ಇರಲಿಲ್ಲ. ಮನೆಯ ಜಗಲಿಯಲ್ಲಿ ಕುಳಿತಾಗ ಬೀಸುವ ತಂಗಾಳಿಯು ಮೈಸೋಕಿದಾಗ ಮನಸ್ಸಿಗೆ ಒಂದು ರೀತಿಯ ಮುದ ನೀಡುತ್ತಿತ್ತು. ಹಚ್ಚ ಹಸುರಿನಿಂದ ಕೂಡಿದ ಗದ್ದೆಯನ್ನು ನೋಡುತ್ತ ಓದಲು ಕುಳಿತಾಗ ನೀಸುವ ತಂಗಾಳಿಯು ಆ ಪ್ರಕೃತಿ ಮಾತೆಯೇ ನಮ್ಮನ್ನು ಹರಸುವಂತಿತ್ತು.
ಕಾಲ ಕಳೆಯುತ್ತಾ ಹೋಯಿತು, ಕಾಲ ಕ್ಷಣಿಕ ಎನ್ನುವಂತೆ ಆ ಸಂತೋಷವು ಹೆಚ್ಚು ಸಮಯ ಉಳಿಯಲಿಲ್ಲ. ಮನುಷ್ಯರಿಗೆ ದುರಾಸೆ ಹೆಚ್ಚು, ಅದರಂತೆ ಆ ಊರಿನ ಕೆಲವು ಜನರು ಹಣದಾಸೆಗಾಗಿ ತಮಗೆ ಸೇರಿದ ಜಾಗದಲ್ಲಿರುವ ಮರಗಳನ್ನು ಕಡಿದು ಕಾಡು ನಾಶಗೊಳಿಸಿ ಆ ಜಾಗದಲ್ಲಿ ಕಲ್ಲಿನ ಗಣಿಗಾರಿಕೆಯನ್ನು ಮಾಡಲು ಪ್ರಾರಂಭಿಸಿದರು. ದುರಾಸೆ ಎನ್ನುವುದು ಮನುಷ್ಯನ ಹುಟ್ಟುಗುಣ. ಮಾನವ ಹಣದಾಸೆಗೆ ಯಾವ ಮಟ್ಟಕ್ಕೂ ಇಳಿಯಲು ಸಿದ್ಧನಿದ್ದಾನೆ.
ಮಾನವನ ಅತಿಯಾಸೆಗೆ ಪ್ರಕೃತಿ ಮಾತೆಯ ಮೇಲೆ ದೌರ್ಜನ್ಯ ನಡೆಸುತ್ತಿದ್ದಾನೆ. ಹಿಂದಿನ ಹಚ್ಚ ಹಸುರಿನ ಪರಿಸರ ಈಗ ಇಲ್ಲ. ಎಲ್ಲ ನಾಶವಾಗಿ ಸುಡುಗಾಡಿನ ಹಾಗೆ ಆಗಿದೆ. ಮುಂಚೆ ಮುಸ್ಸಂಜೆ ಬೀಸುತ್ತಿದ್ದ ತಂಗಾಳಿ ಈಗ ರಾತ್ರಿಯಲ್ಲಿಯೂ ಬೀಸುತ್ತಿಲ್ಲ. ಮಧ್ಯಾಹ್ನದ ಅತಿಯಾದ ಉರಿಬಿಸಿಲಿನಲ್ಲಿ ನಾವು ಮರಳುಗಾಡಿನಲ್ಲಿರುವಂತೆ ಭಾಸವಾಗುತ್ತಿದೆ. ಕಾಡುನಾಶದಿಂದ ಸರಿಯಾಗಿ ಮಳೆಯಾಗುತ್ತಿಲ್ಲ ಇದರಿಂದ ಬರಗಾಲದ ಪರಿಸ್ಥಿತಿ ಎದುರಾಗಿದೆ. ಇನ್ನು ಕೆಲವರು ಕಡಿಮೆ ಮಳೆಯಾಗುತ್ತಿರುವುದರಿಂದ ಬೇಸಾಯವನ್ನು ಕೈ ಬಿಟ್ಟಿದ್ದಾರೆ.
ಇಷ್ಟಾದರೂ ಮಾನವನಿಗೆ ಸ್ವಲ್ಪವೂ ಪರಿಜ್ಞಾನವಿಲ್ಲ. ಹಣದಾಸೆಗಾಗಿ ಬುದ್ಧಿ ಭ್ರಮಣೆ ಇಲ್ಲದವರಂತೆ ಕಾಡುನಾಶ ಮಾಡುತ್ತಿದ್ದಾರೆ. ಇಷ್ಟಾದರೂ ಪ್ರಕೃತಿ ಮಾತೆಯೂ ಮಾನವನ ದೌರ್ಜನ್ಯವನ್ನು ಸಹಿಸಿಕೊಂಡು ಮೂಕಳಾಗಿದ್ದಾಳೆ. ಪ್ರಕೃತಿ ಮಾತೆಯೇ ನನ್ನ ಬಳಿ ನಿನ್ನದೊಂದು ಪ್ರಶ್ನೆ ನೀ ಏಕೆ ಮೌನವಾಗಿರುವೆ?
ಕೀರ್ತನ್ ಎಸ್. ಮಡಿವಾಳ
ಎಂಪಿಎಂ ಪ್ರ. ದ.ಕಾಲೇಜು ಕಾರ್ಕಳ