ಮಣಿಪಾಲ: ಕೋವಿಡ್-19 ಅಟ್ಟಹಾಸ ಮೆರೆಯುತ್ತಿರುವ ಈ ಸಂದರ್ಭದಲ್ಲಿ ಅತಿ ಹೆಚ್ಚು ಸಮಸ್ಯೆ ಎದುರಿಸುತ್ತಿರುವವರೆಂದರೆ ಕೋವಿಡ್ ವಾರಿಯರ್ಸ್. ಸೋಂಕಿತರ ಚಿಕಿತ್ಸೆಗಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿರುವ ಇವರು ರಜೆಗಳನ್ನು ರದ್ದು ಮಾಡಿ ನಿರಂತರ ಸೇವೆ ನೀಡುತ್ತಿದ್ದಾರೆ. ಇತ್ತ ಮನೆಗೂ ಬಾರದೆ, ಕುಟುಂಬ ಸದಸ್ಯರಿಂದಲೂ ದೂರವಿದ್ದು, ಆಸ್ಪತ್ರೆಯಲ್ಲೇ ಉಳಿದು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಿರುವಾಗ ಲಂಡನ್‌ನ ನರ್ಸ್ ಒಬ್ಬರು ತನ್ನ ಮಕ್ಕಳನ್ನು ಎರಡು ತಿಂಗಳ ಬಳಿಕ ಭೇಟಿಯಾಗುತ್ತಿರುವ ವೀಡಿಯೋ ಒಂದು ಭಾರೀ ವೈರಲ್ ಆಗಿದ್ದು, ಹಲವಾರು ದಿನಗಳ ಬಳಿಕ ಅಮ್ಮನನ್ನು ಕಂಡು ಈ ಮಕ್ಕಳು ಸಂತಸದಿಂದ ಕುಣಿದಿದ್ದಾರೆ.
ರಾಕ್ಸ್ ಚ್ಯಾಪ್‌ಮನ್ ಎಂಬವರು ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್‌ಮಾಡಿಕೊಂಡಿದ್ದಾರೆ. ಈ ಘಟನೆ ಕುರಿತು ವಿವರಣೆ ನೀಡಿರುವ ರಾಕ್ಸ್ “ಈಕೆ ಶಾರ್ಲೆಟ್, ಕೋವಿಡ್ ಅಟ್ಟಹಾಸದ ಸಂದರ್ಭದಲ್ಲಿ ಜನರ ಪ್ರಾಣ ಕಾಪಾಡುವ ಕಾರ್ಯದಲ್ಲಿ ತೊಡಗಿದ್ದರು. ಆ ಸಲುವಾಗಿಯೇ ತಮ್ಮ ಮಕ್ಕಳಿಂದ ಒಂಬತ್ತು ವಾರದಿಂದ ದೂರ ಉಳಿಯುವ ಪರಿಸ್ಥಿತಿ ಎದುರಾಗಿತ್ತು. ಈ ಹಿನ್ನೆಲೆಯಲ್ಲಿಯೇ ಶಾರ್ಲೆಟ್ ತನ್ನ 9 ವರ್ಷದ ಬೆಲಾ ಹಾಗೂ 7ವರ್ಷದ ಹ್ಯಾಟಿ ಎಂಬಿಬ್ಬರು ಮಕ್ಕಳನ್ನು ಆಕೆಯ ತಂಗಿಯ ಮನೆಯಲ್ಲಿ ಉಳಿಸಿಕೊಂಡಿದ್ದಳು. ಸುಮಾರು 9 ವಾರಗಳ ಕಾಲ ಈ ಮಕ್ಕಳು ತಾಯಿಯ ಮುಖವನ್ನೇ ನೋಡಿರಲಿಲ್ಲ’ ಎಂದು ಹೇಳಿದ್ದಾರೆ.
ಮಕ್ಕಳು ಕೂಡ ತಾಯಿಯನ್ನು ನೋಡಲು ತುಂಬಾ ಬಯಸುತ್ತಿದ್ದರು. ಮಕ್ಕಳ ಪ್ರಾರ್ಥನೆ ದೇವರಿಗೆ ತಲುಪಿತೋ ಎಂಬಂತೆ ಕೋವಿಡ್-19 ಸೋಂಕಿತರ ಶುಶ್ರೂಷೆಯಲ್ಲಿ ಸತತ 9 ವಾರಗಳಿಂದ ದುಡಿಯುತ್ತಿದ್ದ ಶಾರ್ಲೆಟ್ ಈಗ ಮನೆಗೆ ಹಿಂದಿರುಗಿದ್ದಾರೆ. ಮಕ್ಕಳಿಗೆ ಸರ್‌ಪ್ರೈಸ್ ನೀಡಬೇಕು ಎಂಬ ಉದ್ದೇಶದಿಂದ ಯಾವುದೇ ಪೂರ್ವ ಮಾಹಿತಿ ನೀಡದೇ ಮನೆಗೆ ಭೇಟಿ ನೀಡಿದ್ದಾಳೆ. ಮಕ್ಕಳು ತಮ್ಮ ಪಾಡಿಗೆ ಕುಳಿತು ಮಾತನಾಡುತ್ತಿದ್ದಾಗ, ಹಿಂಬದಿಯಿಂದ ಸದ್ದು ಮಾಡದೇ ಬಂದು ಮಕ್ಕಳ ತಲೆ ನೇವರಿಸುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.
ಇನ್ನು ತಮ್ಮ ಪಾಡಿಗೆ ಟಿವಿ ನೋಡುತ್ತಾ ಕಾಲ ಕಳೆಯುತ್ತಿದ್ದ ಮಕ್ಕಳಿಗೆ, “ಏನು ನೋಡುತ್ತಿದ್ದೀರಾ’ ಎಂಬ ಧ್ವನಿ ಹಿಂಬದಿಯಿಂದ ಕೇಳಿತು. ತಿರುಗಿ ನೋಡಿದಾಗ ಆಶ್ಚರ್ಯ ಕಾದಿತ್ತು. ಅಲ್ಲಿ ಅವರ ತಾಯಿ ನಿಂತಿದ್ದರು. ಎರಡು ತಿಂಗಳ ಬಳಿಕ ತಾಯಿಯನ್ನು ನೋಡಿದ ಅವರು ಖುಷಿಯಿಂದ ಕುಣಿದಾಡಿದ್ದಾರೆ. ಸಂತೋಷದಲ್ಲಿ ಅಮ್ಮನನ್ನು ಅಪ್ಪಿಕೊಂಡು ಅಳಲಾರಂಭಿಸಿದ್ದು, ತಾಯಿ ಮಕ್ಕಳ ವಾತ್ಸಲ್ಯದ ಈ ವೀಡಿಯೋ ಸದ್ಯ ಭಾರೀ ವೈರಲ್ ಆಗಿದೆ.