Advertisement

Mother Love: ಕಣ್ಣಿಗೆ ಕಾಣುವ ದೇವರು ಅಮ್ಮ …

12:32 PM Nov 29, 2023 | Team Udayavani |

ಅಮ್ಮ ಅಂದರೆ ಅದೊಂದು ಅದ್ಭುತವಾದ ಜೀವ. ಯಾರಿಗೂ ಯಾವುದಕ್ಕೂ ಹೋಲಿಸಲಾಗದಂತಹ ಮಿಗಿಲಾದ ಬಂಧನ. ಸೂರ್ಯನು ತನ್ನ ಕಿರಣಗಳನ್ನು ಭೂಮಿಗೆ ಚೆಲ್ಲುವುದರೊಳಗೆ ಎದ್ದು ಎಲ್ಲಾ ಕೆಲಸ ಕಾರ್ಯಗಳನ್ನು ಮಾಡುತ್ತಾ ಮತ್ತೆ ಸೂರ್ಯ ಮುಳುಗಿ ಚಂದ್ರ ಮೇಲೆ ಬಂದರೂ ಆಕೆಗೆ ವಿರಾಮ ಎನ್ನುವುದೇ ದೊರೆಯುವುದಿಲ್ಲ. ಮನೆಯಲ್ಲಿರುವವರೆಲ್ಲಾ ಹೊರಗಡೆ ಹೋಗಿ ದುಡಿದು ಸಂಬಳ ತೆಗೆದುಕೊಳ್ಳುತ್ತಾರೆ ಆದರೆ ಈ ತಾಯಿಯ ಕೆಲಸಕ್ಕೆ ನಾವು ಹಣವನ್ನು ನೀಡಲು ಸಾಧ್ಯವೇ. ತನಗೆ ಮೈ ಸುಡುವಂತಹ ಜ್ವರ ಬಂದರೂ ಸ್ವಲ್ಪವೂ ಲೆಕ್ಕಿಸದೆ ಕಾರ್ಯಗಳನ್ನು ಮಾಡುವಳು ಆದರೆ ತನ್ನ ಮಕ್ಕಳಿಗೆ ಸ್ವಲ್ಪ  ನೆಗಡಿಯಾದದನ್ನು ಕಂಡರೂ ಆಕೆಯ ಜೀವ ಚಡಪಡಿಸುತ್ತದೆ.

Advertisement

ಆ ತಾಯಿಯು ತೋರಿಸುವ ಪ್ರೀತಿ ವಾತ್ಸಲ್ಯವನ್ನು ಬೇರಾರಿಂದಲೂ ಪಡೆಯುವುದು ಅಸಾಧ್ಯವಾದಂತಹ ಮಾತು. ಎಲ್ಲ ಕಷ್ಟಗಳು ನನಗೆ ಬರಲಿ ನನ್ನ ಮಕ್ಕಳು ಸುಖವಾಗಿರಲಿ ಎಂದು ಬೇಡಿಕೊಳ್ಳುವ ನಿಸ್ವಾರ್ಥ ಮನಸ್ಸಿನ ಜೀವ ಎಂದರೆ ಅದು ತಾಯಿ. ಒಂಭತ್ತು ತಿಂಗಳುಗಳ ಕಾಲ ಹೊತ್ತು ಹೆತ್ತು ಪಾಲನೆ ಮಾಡಿದವಳು ಆಕೆ, ಆಕೆಯ ಋಣವನ್ನು ತೀರಿಸಲು ಸಾಧ್ಯವೇ. ನಾವು ಎಂತದೇ ಒಂದು ಮನಸ್ಥಿತಿಯಲ್ಲಿದ್ದರೂ ಆಕೆಯ ಒಂದು ಸ್ಪರ್ಶದಿಂದ ಮತ್ತೆ ಹುರಿದುಂಬುತ್ತದೆ. ತಂದೆ ತಾಯಿಯ ಹತ್ತಿರ ಇದ್ದವರಿಗೆ ಇದರ ಮಹತ್ವ ಅಷ್ಟೊಂದು ತಿಳಿದಿರುವುದಿಲ್ಲ ಎಲ್ಲೋ ದೂರದಲ್ಲಿದ್ದು ಬದುಕು ನಡೆಸುತ್ತಿದ್ದವರಿಗೆ ಈ ಒಂದು ಮಮತೆ ವಾತ್ಸಲ್ಯದ ಬಗ್ಗೆ ವಿವರಿಸುವ ಆವಶ್ಯಕತೆಯೇ ಇರುವುದಿಲ್ಲ.

ದಿನಕ್ಕೆ ಒಂದು ಬಾರಿಯಾದರೂ ತನ್ನನ್ನು ಭೂಮಿಗೆ ತಂದ ಆ ಮಹಾನ್‌ ತಾಯಿಯನ್ನು ನೆನಪಿಸಿಕೊಂಡು ಅವಳೊಂದಿಗೆ ಮಾತನಾಡದಿದ್ದರೆ ಅವರ ಅಂದಿನ ದಿನದಲ್ಲಿ ಏನೋ ಕಳೆದುಕೊಂಡ ಹಾಗೆ ಅನ್ನಿಸುತ್ತದೆ. ಅವಳದ್ದು ನಿಷ್ಕಲ್ಮಶವಾದಂತಹ ಪ್ರೀತಿ. ಆಕೆಯ ಬಗ್ಗೆ ಎಷ್ಟು ವರ್ಣಿಸಿದರೂ ಸಾಲದು. ತವರು ಮನೆಯನ್ನು ಬಿಟ್ಟು ಅಪರಿಚಿತರೊಂದಿಗೆ ಹೋಗಿ ಪರಿಚಿತರಾಗಿ ತನ್ನ ಬದುಕು ಸಾಗಿಸುತ್ತಿರುವ ಒಂದು ಹೆಣ್ಣು ಮಗಳಿಗೆ ಗೊತ್ತು ತಾಯಿಯ ಮಹತ್ವ.

ಇಂದಿನ ಯುವಜನರಿಗೆ ತಾಯಿಯ ಮಹತ್ವ ಏನೆಂದು ತಿಳಿದೇ ಇಲ್ಲ ಬಾಯಿಗೆ ಬಂದ ಹಾಗೆ ಎದುರು ವಾದಿಸುವುದು ಬೆದರಿಕೆ ಹಾಕುವುದು ಇಂತಹ ಸಂಗತಿಗಳು ಇಂದಿನ ದಿನದಲ್ಲಿ ತುಂಬಾ ಕಂಡುಬರುತ್ತಿದೆ. ಅವರು ಇರುವಷ್ಟು ದಿನ ಅವರ ಮಹತ್ವ ಏನೆಂದು ತಿಳಿಯುವುದಿಲ್ಲ ಅವರು ಹೋದ ಮೇಲೆ ಎಷ್ಟೇ ಅತ್ತು ಕರೆದರೂ ಮರಳಿ ಬರುವುದಿಲ್ಲ. ಇರುವಾಗ ಅವರನ್ನ ಕೊಂಚವೂ ಲಕ್ಷಿಸದೆ ಇರುವವರು ಹೋದ ಮೇಲೆ ಅವರು ಇಲ್ಲಿ ಇದ್ದರೆ ಹೀಗೆ ಮಾಡುತ್ತಿದ್ದರು ಪುಣ್ಯ ಸ್ಮರಣೆಯ ದಿನದಂದು ವಿಜೃಂಭಣೆಯಿಂದ ಆಚರಿಸುವುದನ್ನು ಬಿಟ್ಟು ಅವರು ಇದ್ದಾಗ ಗಂಜಿ ನೀರನ್ನು ಕೊಟ್ಟರೆ ಎಷ್ಟು ಸುಖದಿಂದ ಇರುತ್ತಾರೆ ಎಂದು ತಿಳಿದಿಲ್ಲ ನಮ್ಮ ಜನಕ್ಕೆ.

-ಸುದೀಪ ರವಿ ಮಾಳಿ

Advertisement

ಎಂಎಂ ಕಾಲೇಜು, ಶಿರಸಿ

 

Advertisement

Udayavani is now on Telegram. Click here to join our channel and stay updated with the latest news.

Next