ವರದಿ :ಶ್ರೀಶೈಲ ಕೆ. ಬಿರಾದಾರ
ಬಾಗಲಕೋಟೆ: ಇದೊಂದು ಕರುಳು ಹಿಂಡುವ ಪ್ರಸಂಗ. ಇದಕ್ಕೆ ಸಾಕ್ಷಿಯಾದವರೆಲ್ಲ ಕ್ರೂರಿ ಕೊರೊನಾಗೆ ಕಣ್ಣೀರಿನ ಆಕ್ರೋಶ ಹೊರ ಹಾಕಿದರು. ಅಸಹಾಯಕರು, ಅನಾಥರು, ಶ್ರೀಮಂತರು, ಬಡವರು ಯಾರ ಮನೆಯಲ್ಲಿ ಯಾರೇ ಮೃತಪಟ್ಟರೂ ತಕ್ಷಣ ಅಲ್ಲಿ ಹಾಜರಿದ್ದು, ಅಂತಿಮ ಸಂಸ್ಕಾರದ ಜತೆಗೆ ಮೃತದೇಹ ಸಾಗಿಸಲು ಹೆಗಲು ಕೊಡುವ ತಂಡದ ಯುವಕನೊಬ್ಬನ ತಾಯಿ ಮೃತಪಟ್ಟಾಗ ಅಲ್ಲಿ ಅದೇ ತಂಡಕ್ಕೆ ಶವಸಂಸ್ಕಾರ ನಡೆಸಲು ಅವಕಾಶ ಸಿಗಲಿಲ್ಲ.
ಹೆತ್ತು-ಹೊತ್ತು ಸಾಕಿದ ತಾಯಿ ಮೃತಪಟ್ಟಾಗ ಅವಳ ಅಂತ್ಯಕ್ರಿಯೆ ನಡೆಸಲೂ ಆ ಯುವಕ ಹಾಗೂ ಸೇವೆಯ ತಂಡ ಚಡಪಡಿಸುವ ಪ್ರಸಂಗ ಎದುರಿಸಬೇಕಾಯಿತು. ಈ ವೇಳೆ ಆ, ಯುವಕನ ಸಂಕಟ ಹೇಳತೀರದ್ದಾಗಿತ್ತು.
ಏನಿದು ಪ್ರಸಂಗ?: ವಿದ್ಯಾಗಿರಿಯ 57 ವರ್ಷದ ಮಹಿಳೆಯೊಬ್ಬರು ಕಳೆದ ಐದು ದಿನಗಳ ಹಿಂದೆ ಕೊರೊನಾ 2ನೇ ಅಲೆಯ ಸೋಂಕಿಗೆ ಒಳಗಾಗಿದ್ದರು. ಮೊದಲು ಕೆಮ್ಮು, ನೆಗಡಿ, ಜ್ವರ ಸ್ವಲ್ಪ ಮಟ್ಟಿಗೆ ಕಾಣಿಸಿಕೊಂಡಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರಾದರೂ ಕ್ರೂರಿ ಕೊರೊನಾ ಆ ತಾಯಿಯ ದೇಹ ಆವರಿಸಿಕೊಂಡಿತ್ತು. ಆಸ್ಪತ್ರೆಯಲ್ಲಿ ನಿತ್ರಾಣ ಸ್ಥಿತಿಯಲ್ಲಿದ್ದ ಆ ಮಹಿಳೆ, ಗುರುವಾರ ರಾತ್ರಿ 11:45ರ ಸುಮಾರಿಗೆ ಅಸುನೀಗಿದರು. ತಾಯಿಯ ಶವವನ್ನು ಕುಟುಂಬದ ವಶಕ್ಕೆ ಪಡೆದು ತಮ್ಮ ಸಂಪ್ರದಾಯದಂತೆ ವಿಧಿ-ವಿಧಾನದೊಂದಿಗೆ ಅಂತಿಮ ಸಂಸ್ಕಾರ ನಡೆಸಬೇಕೆನ್ನುವ ಕಾರ್ಯಕ್ಕೆ ಕೋವಿಡ್ ನಿಯಮಗಳು ಅಡ್ಡಿಯಾದವು. ನಗರದಲ್ಲಿ ನೂರಾರು ಜನ ಮೃತಪಟ್ಟಾಗ ಅವರ ಅಂತ್ಯಸಂಸ್ಕಾರಕ್ಕೆ ಶವ ಸಾಗಿಸಲು ಹೆಗಲು ಕೊಡುವ ಸೇವೆ ಮಾಡುವ ಯುವಕನೇ ತನ್ನ ತಾಯಿಯ ಅಂತ್ಯಸಂಸ್ಕಾರ ನಡೆಸದಂತಹ ಪರಿಸ್ಥಿತಿ ಕೊರೊನಾ ನಿರ್ಮಾಣ ಮಾಡಿತ್ತು. ಹೀಗಾಗಿ ಕೋವಿಡ್ ನಿಯಮಾವಳಿ ಪ್ರಕಾರ, ಕುಟುಂಬದ ಮೂವರು, ಆ ಯುವಕನ ಸಮಾನ ಮನಸ್ಕ ಸ್ನೇಹಿತರ ಬಳಗ ಮಾತ್ರ ಹಾಜರಾಯಿತು.
ಆಸ್ಪತ್ರೆಯ ಕೊರೊನಾ ವಿಭಾಗದ ಅಂತ್ಯಸಂಸ್ಕಾರ ನಡೆಸುವ ವ್ಯಕ್ತಿ, ಕಟ್ಟಿಗೆ ತಂದು ಕೊಡುವ ವ್ಯಕ್ತಿ ಮಾತ್ರ ಬಂದಿದ್ದರು. ಕೇವಲ ಏಳೆಂಟು ಜನ ಕೂಡಿ, ರಾತ್ರಿ 2ರ ಹೊತ್ತಿಗೆ ಆ ತಾಯಿಯ ಅಂತ್ಯಸಂಸ್ಕಾರ ನಡೆಸಲಾಯಿತು. ಅದು ಕೋವಿಡ್ ನಿಯಮಾವಳಿ ಪ್ರಕಾರ. ಹೆಗಲು ಕೊಡುವ ತಂಡ: ನಗರದಲ್ಲಿ ಸುಮಾರು 9 ವರ್ಷಗಳಿಂದ ಸಮಾನ ಮನಸ್ಕ ಯುವಕರ ತಂಡವೊಂದು ತಮ್ಮ ಸಮಾಜವೂ ಸೇರಿದಂತೆ ಯಾರೇ ಅಸಹಾಯಕರು, ಬಡವರ ಮನೆಯಲ್ಲಿ ಮೃತಪಟ್ಟರೆ ಅಲ್ಲಿ ಹಾಜರಾಗಿ, ಎಲ್ಲ ರೀತಿಯ ವಿಧಿ-ವಿಧಾನ, ಪರಂಪರೆಯ ಕಾರ್ಯ ನಡೆಸಿ ಅಂತ್ಯಸಂಸ್ಕಾರ ನಡೆಸುವ ಸೇವಾ ಕಾರ್ಯದಲ್ಲಿ ತೊಡಗಿದ್ದಾರೆ. ಆ ತಂಡದಲ್ಲಿ ಈ ಯುವಕನೂ ಕ್ರಿಯಾಶೀಲನಾಗಿ ಕೆಲಸ ಮಾಡಿ, ಮೃತಪಟ್ಟವರಿಗೆ ಅಂತಿಮ ನಮನ ಹೇಳಿ, ಆ ಮೂಲಕ ಸೇವಾ ಕಾರ್ಯ ಮಾಡುವ ಹೃದಯವಂತ. ಆದರೆ, ತನ್ನ ತಾಯಿಯೇ ಮೃತಪಟ್ಟಾಗ ಅಂತ್ಯಸಂಸ್ಕಾರಕ್ಕೂ ಕೊರೊನಾ ನಿಯಮಗಳು ಅಡ್ಡಿಯಾದವು. ಹೀಗಾಗಿ ಆತ ಎದುರಿಸಿದ ಪ್ರಸಂಗದಿಂದ ತೀವ್ರ ದುಃಖೀತನಾಗಿದ್ದ.