Advertisement
ನನ್ನಪ್ಪನ ಕುಡಿತದ ಚಟ ಎಲ್ಲೆ ಮೀರಿತ್ತು. ಕುಡಿದು ಬಂದು ತನ್ನ ಪಾಡಿಗೆ ತಾನಿರದೆ, ಅಮ್ಮನಿಗೆ ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ನೀಡುವುದೇ ಅಪ್ಪನ ಕೆಲಸವಾಗಿತ್ತು. ಇಷ್ಟಲ್ಲದೆ, ಕುಟುಂಬದ ಜವಾಬ್ದಾರಿ ಹೊರಲೂ ಅಪ್ಪ ಸಿದ್ಧವಿರಲಿಲ್ಲ, ಅಮ್ಮ, ನಾನೇ ದುಡಿದು ಜವಾಬ್ದಾರಿ ನಿಭಾಯಿಸುತ್ತೇನೆ ಅಂದರೂ ಇಲ್ಲಸಲ್ಲದ ಹಿಂಸೆ, ಕಿರುಕುಳ ನೀಡುತ್ತಿದ್ದ.
Related Articles
Advertisement
ಉಡುಗೆ ಮಾಸಿದರೂ, ಹರಿದರೂ, ತನಗಾಗಿ ಅಂತ ಆಕೆ ಒಂದು ಕರವಸ್ತ್ರವನ್ನು ಕೂಡಾ ಖರೀದಿಸಿದವಳಲ್ಲ. ಆದರೆ, ತನ್ನ ಮಕ್ಕಳು ನಾಲ್ಕಾರು ಜನರೊಂದಿಗೆ ಓಡಾಡುವಾಗ ಒಳ್ಳೆಯ ಬಟ್ಟೆ ತೊಡಬೇಕು ಅಂತ ನಮಗೆಲ್ಲಾ ಹೊಸ ಬಟ್ಟೆ ಕೊಡಿಸುತ್ತಿದ್ದಳು. ಗಂಡನನ್ನು ತೊರೆದು ಬಂದ ನನ್ನಮ್ಮನಿಗೆ ಆದ ಅವಮಾನಗಳಿಗೇನು ಕೊರತೆಯೇ? ಮಹಿಳೆಯೊಬ್ಬಳು ಎಷ್ಟೇ ನಿಯತ್ತಾಗಿ ದುಡಿದು ತಿಂದರೂ, ಕಾಲೆಳೆಯುವ ಜನರು ಇದ್ದೇ ಇರುತ್ತಾರೆ. ಅವರೆಲ್ಲ, “ಗಂಡ ಬಿಟ್ಟವಳು’, “ಒಂಟಿ ಹೆಂಗಸು’ ಅಂತೆಲ್ಲಾ ಬಾಯಿಗೆ ಬಂದಂತೆ ಮಾತನಾಡಿದರೂ, ಅಮ್ಮನ ಉತ್ತರ ಮೌನವೇ ಆಗಿರುತ್ತಿತ್ತು. ಅಮ್ಮ ಓದಿದ್ದು 8ನೇ ತರಗತಿಯಾದರೂ, ಆಕೆಯ ಯೋಚನೆಗಳು ಯಾವ ಆಧುನಿಕ ಮಹಿಳೆಗಿಂತ ಕಡಿಮೆಯಿರಲಿಲ್ಲ. ನಮ್ಮ ಪ್ರಾಮಾಣಿಕತೆ ನಮ್ಮನ್ನು ಕಾಪಾಡುತ್ತದೆ, ಸತ್ಯಕ್ಕೆ ಬೆಲೆ ಇದೆ ಎಂದು ಹೇಳುತ್ತಾ, ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಾ ಹೋದಳು. ನಾವಿಂದು ನೆಮ್ಮದಿಯಾಗಿ ತುತ್ತು ಅನ್ನ ತಿನ್ನುತ್ತಿರುವುದಕ್ಕೆ ಅವಳೇ ಕಾರಣ. “ಗಂಡನನ್ನು ಬಿಟ್ಟವಳು ಅಂತ ಸಮಾಜ ದೂಷಿಸುತ್ತದೆ’ ಅಂತ ಹೆದರಿ ಅಲ್ಲೇ ಉಳಿದಿದ್ದರೆ, ಇವತ್ತು ನಾವು ಬದುಕಿರುತ್ತಿದ್ದೆವೋ ಇಲ್ಲವೋ.
ಅಮ್ಮನಾಗಿ, ಅಪ್ಪನ ಸ್ಥಾನವನ್ನೂ ತುಂಬಿದ ಆಕೆ, ಸ್ನೇಹಿತೆಯಾಗಿಯೂ ಜೊತೆಗಿದ್ದಾಳೆ. ಗೆದ್ದಾಗ ಬೆನ್ನು ತಟ್ಟಿ, ಸೋತಾಗ ಧೈರ್ಯ ತುಂಬಿ, ಗೊಂದಲಕ್ಕೀಡಾದಾಗ ಸಲಹೆ-ಸೂಚನೆಗಳನ್ನು ನೀಡಿದ್ದಾಳೆ. ಉದ್ಯೋಗ ಪಡೆಯಲು ಅಗತ್ಯವಿರುವಷ್ಟು ವಿದ್ಯಾಭ್ಯಾಸ ಕೊಡಿಸಿದ್ದಾಳೆ. ಯಾರಿಗೂ ಕೇಡು ಬಯಸಬೇಡಿ, ಆಗಷ್ಟೇ ನಿಮಗೆ ಒಳ್ಳೆಯದಾಗುವುದು ಅಂತ, ಜೀವನ ಪಾಠವನ್ನೂ ಹೇಳಿದ್ದಾಳೆ. ಅದೆಷ್ಟೋ ಜನ, ಜೀವನಮೌಲ್ಯಗಳನ್ನು ಕಲಿಯಲು ಕಾರ್ಯಾಗಾರ, ಅಧ್ಯಾತ್ಮಿಕ ಕೇಂದ್ರ, ಕಲಿಕಾ ಕೇಂದ್ರಗಳಿಗೆ ಹೋಗುತ್ತಾರಂತೆ. ಆದರೆ, ನಮಗೆ ಅವುಗಳ ಅಗತ್ಯವೇ ಇಲ್ಲ. ಆಕೆಯ ಬದುಕೇ ನಮಗೆ ಜೀವನ ಪಾಠ.
-ವಿದ್ಯಾ ಹೊಸಮನಿ