ಅಮ್ಮ… ಶಕ್ತಿ ಹಾಗೂ ಪಾವಿತ್ರತೆಯುಳ್ಳಂತಹ ಶಬ್ದ. ಒಂಬತ್ತು ತಿಂಗಳು ಅದೆಷ್ಟೋ ನೋವುಗಳ ಸಹಿಸಿ ಅಂಧಕಾರದ ಪ್ರಪಂಚದಿಂದ ಬೆಳಕಿನತ್ತ ನಮ್ಮನ್ನು ತಂದ ದೇವತೆ. ಮೊದಲ ತೊದಲು ನುಡಿಯಾಗಿ, “ಅ’ ಎಂದರೆ ಅಮ್ಮ ಎಂದು ಕಲಿಸಿದ ಗುರುವಾಗಿ, ಬೆಳೆಯುತ್ತಾ ಹೋದಂತೆ ಜೀವನದ ಮೊದಲ ಸ್ನೇಹಿತೆಯಾಗಿ ಜತೆಗಿದ್ದ ಜೀವ. ತಾನು ಹಸಿವಿನಲ್ಲಿದ್ದರು ತನ್ನ ಮಕ್ಕಳ ಹಸಿವು ನೀಗಿಸುವ ನಿಸ್ವಾರ್ಥ ಗುಣದವಳು. ಹುಟ್ಟಿನಿಂದ ಸಾಯುವವರೆಗೂ ಬದಲಾಗದ ಪ್ರೀತಿ ಎಂದರೆ ಅದು ತಾಯಿ ಪ್ರೀತಿ ಮಾತ್ರ.
ಆದರೆ ಈಗಿನ ಪ್ರಾಪಂಚಿಕ ಜೀವನದಲ್ಲಿ ವಯಸ್ಸಾದ ತಂದೆ – ತಾಯಿಯನ್ನು ನೋಡಿಕೊಳ್ಳುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ತುಳು ಭಾಷೆಯಲ್ಲಿ ಒಂದು ಮಾತಿದೆ “ಪತ್ತ್ ಜೋಕುಲೆನ ಅಪ್ಪೆ ಸಾದಿಟ್ ಬೂರ್ದ್ ಸೈಪಲ್‌ಗೆ’ ಎಂದು. ಇಂದು ಈ ಮಾತನ್ನು ಅದೆಷ್ಟೋ ಮಂದ ಬುದ್ಧಿಯ ಮಕ್ಕಳು ನಿಜವಾಗಿಸಿದ್ದಾರೆ.
ಸಣ್ಣವರಿದ್ದಾಗ ಆ ತಾಯಿ ತನ್ನ ಮಗುವಿಗೆ ಹುಲ್ಲು ಕಡ್ಡಿಯಷ್ಟು ನೋವಾದರು ಸಹಿಸುವುದಿಲ್ಲ. ಬಾಲ್ಯದಲ್ಲಿರುವಾಗ ತಾವು ಕೇಳಿದ ತಿಂಡಿ -ತಿನಿಸುಗಳನ್ನು ಸಾಲವಾದರು ಮಾಡಿ ತಂದು ಕೊಡುತ್ತಿದ್ದ ತಾಯಿ ಇಂದು ಒಂದು ತುತ್ತು ಊಟಕ್ಕಾಗಿ ಮಗನನ್ನೇ ಬೇಡಿಕೊಳ್ಳುವ ಪರಿಸ್ಥಿತಿ ಉದ್ಭವವಾಗಿದೆ.
ಆಸ್ತಿಯ ವಿಚಾರವಾಗಿ ಮನೆಯಲ್ಲಿ ಮಕ್ಕಳಿಬ್ಬರ ನಡುವೆಯೇ ವಾಗ್ವಾದ ನಡೆಯುತ್ತಿರುತ್ತದೆ. ಆ ಸಂದರ್ಭದಲ್ಲಿ ತಾಯಿ ಕೇಳುತ್ತಾಳೆ “ಮಗಾ, ನನ್ನನು ಯಾರು ನೋಡಿಕೊಳ್ಳುತೀರಾ?’ಎಂದು. ತಾಯಿಯ ಆ ಕಿರು ಮಾತಿಗೆ ನಡೆಯುತ್ತಿದ್ದ ಆ ವಾಗ್ವಾದವು ಒಮ್ಮೆಲೇ ನಿಶ್ಶಬ್ದಕ್ಕೆ ಜಾರುತ್ತದೆ. ಹಾಗಾದರೆ ಆಸ್ತಿಯ ಮುಂದೆ ತಾಯಿಯ ಪ್ರೀತಿ ಮರಿಚಿಕೆ ಆಗಿ ಹೋಯಿತೆ?
ಎಂತಹ ವಿಪರ್ಯಾಸ ಎಂದರೆ ಒಂದು ಪಶುವಿಗೆ ನೀನು ಆ ಪಶುವಿನಂತೆ ಇರಬೇಕೆಂದು ಯಾರು ಹೇಳಿಕೊಡಬೇಕಾಗಿಲ್ಲ, ಒಂದು ಪಕ್ಷಿಗೆ ನೀನು ಆ ಪಕ್ಷಿಯಂತೆ ಹಾರಾಡಬೇಕೆಂದು ಯಾರು ತಿಳಿಹೇಳಬೇಕಾಗಿಲ್ಲ. ಆದರೆ ಒಬ್ಬ ಮನುಷ್ಯನಿಗೆ ನೀನು ಅವರಂತೆ ಬದುಕಬೇಕು, ಅವರಂತೆಯೇ ಜೀವಿಸಬೇಕು ಎಂಬುದನ್ನು ಯಾರೋ ಇನ್ನೋಬ್ಬರಿಂದ ಹೇಳಿಸಿಕೊಳ್ಳುವ ಪರಿಸ್ಥಿತಿ ಉದ್ಭವವಾಗಿದೆ. ಹಾಗಾದರೆ ಮನುಷ್ಯ ಒಂದು ಸಣ್ಣ ಹುಳುವಿಗಿಂತ ಕಡೆಯಾಗಿ ಹೋದನೆ?
ಅಮ್ಮ ಎಂದರೆ ಅಮೃತ ಉಣಿಸಿ ಪೋಷಿಸಲಷ್ಟೇ ಸೀಮಿತವಲ್ಲ, ಆಕೆ ಸದಾ ಮಕ್ಕಳ ಸಂರಕ್ಷಣೆಯ ಹೊಣೆ ಹೊತ್ತ ಮಡಿಲಿನ ಒಡಲು. ಅಂತಿಮವಾಗಿ ಆಕೆ ನೀಡಿದಷ್ಟು ಪ್ರೀತಿ ಕೊಡಲು ಸಾಧ್ಯವಾಗದಿದ್ದರೂ ಪರವಾಗಿಲ್ಲ, ಬದಲಾಗಿ ಆಕೆ ನಮ್ಮನ್ನು ತೊರೆದು ಹೋಗುವ ಮುಂಚೆ ಸಂತಸದಿಂದ ನೋಡಿಕೊಳ್ಳೋಣ.
ಧನ್ಯಶ್ರೀ ಕೆ. ಪೆರ್ಲಂಪಾಡಿ
ವಿವೇಕಾನಂದ ಮಹಾವಿದ್ಯಾಲಯ
(ಸ್ವಾಯತ್ತ) ಪುತ್ತೂರು