Advertisement

ಅಮ್ಮನೇ ಬೆಸ್ಟ್‌ ಫ್ರೆಂಡ್‌

06:19 PM Feb 06, 2020 | Team Udayavani |

ಅಮ್ಮನಷ್ಟು ಒಳ್ಳೆಯ ಗೆಳತಿ ಸಿಗಲು ಸಾಧ್ಯವಿಲ್ಲ. ಎಲ್ಲವನ್ನು ಮೀರಿ ನಿಜವಾದ ಕಾಳಜಿ ಮಾಡುವ ಪರಿಶುದ್ಧ ಮನಸ್ಸಿನ ಗೆಳತಿಯೇ ಅಮ್ಮ.

Advertisement

ತಮಗೇನು ಬೇಕು ಎಂಬುದು ಮಕ್ಕಳಿಗೆ ಗೊತ್ತಿರುತ್ತದೆಯೇ? ಆದರೆ, ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಏನೇನು ಬೇಕು ಎಂಬ ಸರಿಯಾದ ಗ್ರಹಿಕೆ ಅಮ್ಮನಿಗೆ ಇರುತ್ತದೆ. ಮಗ ಎಸ್ಸೆಸ್ಸೆಲ್ಸಿ ಪ್ರವೇಶಿಸಿದ ಕೂಡಲೇ ಅಮ್ಮನಾದವಳು ಅಕ್ಕಪಕ್ಕದ ಪದವಿಪೂರ್ವ ಕಾಲೇಜುಗಳ ಮಾಹಿತಿ ಸಂಗ್ರಹಿಸಲು ಶುರುಮಾಡುತ್ತಾಳೆ. ಮಗನ ಒಲವೇನಾದರೂ ವಿಜ್ಞಾನದ ಕಡೆಗಿತ್ತೆಂದರೆ, ತಕ್ಷಣವೇ ಆಸುಪಾಸಿನಲ್ಲಿ ಟ್ಯೂಷನ್‌ ಯಾವುದು ಚೆನ್ನಾಗಿದೆ ಎಂದು ವಿಚಾರಿಸಲು ಶುರುಮಾಡುತ್ತಾಳೆ. ಅಷ್ಟೇ ಏಕೆ, ಈಗಿನ ಟ್ರೆಂಡ್‌ ಇರುವ ಬಟ್ಟೆ ಬರೆಗಳು ಯಾವುದು, ತನ್ನ ಮಕ್ಕಳು ಯಾವ ಕಾರ್ಯಕ್ರಮಕ್ಕೆ ಎಂತಹ ಬಟ್ಟೆ ಹಾಕಿಕೊಂಡರೆ ಚೆನ್ನ ಎಂಬುದನ್ನೆಲ್ಲ ಸದಾ ಸೂಕ್ಷ್ಮವಾಗಿ ಅವಲೋಕನ ಮಾಡುತ್ತಾ ಇರುತ್ತಾಳೆ. ಬಂಧುಗಳ ಮನೆಗಾದರೆ ಹೇಗೆ ಹೋಗಬೇಕು, ಸ್ನೇಹಿತರ ಬರ್ತ್‌ಡೇ ಪಾರ್ಟಿಗಾದರೆ ಹೇಗೆ ಹೋಗಬೇಕು ಎಂಬುದನ್ನು ಪ್ರೀತಿಯಿಂದ ನಿಧಾನವಾಗಿ ತಿಳಿಹೇಳುತ್ತ ನಮ್ಮನ್ನು ರೂಪಿಸುತ್ತಾಳೆ.

ಈಗ ಹೇಳಿ, ಅಮ್ಮನಿಗಿಂತ ಉತ್ತಮ ಗೆಳತಿ ಎಲ್ಲಿ ಸಿಗಲು ಸಾಧ್ಯ? ಆದರೆ, ಈ ಅಮ್ಮ ಮಕ್ಕಳ ಬಗ್ಗೆಯೇ ಯೋಚಿಸುತ್ತ ತನ್ನ ಬಗ್ಗೆಯೇ ಮರೆಯುವುದುಂಟು. ಕಾಲೇಜ್‌ಡೇಗಾಗಿ ಮಗನಿಗೆ ಉತ್ತಮ ಸೂಟ್‌ ತರುವ ಅಮ್ಮ, ತಾನು ಯಾವುದೋ ಮಾಸಿದ ಚೂಡಿದಾರ್‌ ಸಿಕ್ಕಿಸಿಕೊಂಡು ಬಂದುಬಿಡುವುದುಂಟು. ಹಾಗೆ ಬಂದು ಎಲ್ಲರೆದುರಿಗೆ ಮಕ್ಕಳಿಂದಲೇ ಬೈಸಿಕೊಳ್ಳುವುದುಂಟು.

ಮಕ್ಕಳು ತಮ್ಮ ಇಷ್ಟಗಳ ಬಗ್ಗೆ ಯೋಚಿಸುತ್ತ ಅವಳಿಗೇನು ಇಷ್ಟ ಎಂದು ಯೋಚಿಸಿರುವುದಿಲ್ಲ. ತಮ್ಮದೇ ಗೆಲುವಿನ ಬಗ್ಗೆ ಹೆಮ್ಮೆಪಡುತ್ತ, ಆ ಗೆಲುವಿನಲ್ಲಿ ಅಮ್ಮನ ತ್ಯಾಗ ಎಷ್ಟಿದೆ ಎಂದು ನೆನಪಿಸಿಕೊಳ್ಳುವುದಿಲ್ಲ. ಆದರೂ ಅಮ್ಮ ಬೇಸರವೇ ಮಾಡಿಕೊಳ್ಳುವುದಿಲ್ಲ. ಎಲ್ಲದಕ್ಕಿಂತಲೂ ಮಿಗಿಲಾದ ನಿಷ್ಕಲ್ಮಷ ಪ್ರೀತಿ ಅಮ್ಮನದು.

ಶಾಲೆ ಅಥವಾ ಕಾಲೇಜಿನಲ್ಲಿ ಒಂದು ಸಣ್ಣ ಬಹುಮಾನ ಸಿಕ್ಕರೂ “ತನ್ನ ಮಕ್ಕಳು ದೊಡ್ಡ ಸಾಧನೆಯನ್ನೇ ಮಾಡಿದರು’ ಅನ್ನುವಷ್ಟು ಸಂತೋಷ ಅಮ್ಮನ ಮುಖದಲ್ಲಿ ಕಾಣಿಸುತ್ತದೆ. ಆ ಪುಟ್ಟ ಸಾಧನೆಯ ಬಗ್ಗೆ ಎಲ್ಲರೊಡನೆ ಹಂಚಿಕೊಂಡು ಸಂಭ್ರಮಪಡುತ್ತಾಳೆ. ಯಾವುದೇ ಕಷ್ಟದ ಸಂದರ್ಭದಲ್ಲಿಯೂ ಅಥವಾ ನಾವೇ ಯಾವುದಾದರೂ, ತಪ್ಪು ಮಾಡಿದರೂ ಅಮ್ಮ ನಮ್ಮನ್ನು ಅರ್ಥಮಾಡಿಕೊಂಡು ಮಾರ್ಗದರ್ಶನ ಮಾಡುತ್ತಾಳೆ ಎಂಬ ದೃಢವಾದ ನಂಬಿಕೆ ಹೃದಯದಲ್ಲಿ ಇರುತ್ತದಲ್ಲ!

Advertisement

ಮನೆಯ ಕಷ್ಟಗಳೇನೇ ಇರಲಿ, ಕಾಲೇಜಿನಿಂದ ನೇರಬಂದು ಅಮ್ಮನೊಡನೆ ಹರಟೆ ಶುರುಮಾಡಿದಾಗ ಅಮ್ಮ ಸಿಡುಕುವುದಿಲ್ಲ. ನಗುನಗುತ್ತ ಮಾತನಾಡುತ್ತ, ಮಕ್ಕಳು ಹೇಳಿದ್ದನ್ನೆಲ್ಲ ಆಲಿಸುತ್ತಾಳೆ. ಸಮಸ್ಯೆಗಳ ಬಗ್ಗೆ ನಮಗೆ ಗೊತ್ತಾದ ಮೇಲೆಯೇ ಅಮ್ಮ ಎಷ್ಟು ತಾಳ್ಮೆಯಿಂದ ಆಲಿಸಿದಳಲ್ಲ ಎಂಬ ಅರಿವು ನಮಗಾಗುವುದು.

ಹರ್ಷಿತಾ
ಪೂರ್ವ ವಿದ್ಯಾರ್ಥಿನಿ
ಡಾ. ಜಿ. ಶಂಕರ್‌ ಪ್ರಥಮದರ್ಜೆ ಕಾಲೇಜು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next