ಬಿಹಾರ/ಪಾಟ್ನಾ: ಅತ್ತೆ ಮತ್ತು ಅಳಿಯನ ಕಳ್ಳಾಟ ಪತಿಗೆ ತಿಳಿದ ನಂತರ ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗದಂತೆ ತಡೆಯಲು ಅಳಿಯನ ಜತೆ ಸೇರಿ ಪತಿಯನ್ನು ಕೊಲೆಗೈದ ಘಟನೆ ಬಿಹಾರದ ವೈಶಾಲಿಯಲ್ಲಿ ನಡೆದಿದೆ.
ತಿಲಕ್ ರಾಯ್ ಪತ್ನಿ ಸವಿತಾ ಜತೆ ಅಳಿಯ ಮೋಹನ್ ರಾಯ್ ಅನೈತಿಕ ಸಂಬಂಧ ಹೊಂದಿದ್ದ. ಇಬ್ಬರ ನಡುವಿನ ಕಳ್ಳಾಟ ತಿಳಿದ ನಂತರ ಅಳಿಯನಿಂದ ದೂರ ಇರುವಂತೆ ಪತಿ ಪತ್ನಿಗೆ ಎಚ್ಚರಿಕೆ ನೀಡಿದ್ದ. ಆದರೆ ಅತ್ತೆ ಮತ್ತು ಅಳಿಯ ಸೇರಿ ಪತಿಯನ್ನು ಕೊಲ್ಲುವ ಸಂಚು ರೂಪಿಸಿದ್ದರು ಎಂದು ವರದಿ ತಿಳಿಸಿದೆ.
ಮದ್ಯದ ಅಮಲಿನಲ್ಲಿದ್ದ ಪತಿಯನ್ನು ಅತ್ತೆ ಮತ್ತು ಅಳಿಯ ಸೇರಿ ಕೊಂದು ಹಾಕಿದ್ದು, ನಂತರ ನಿರ್ಮಾಣ ಹಂತದಲ್ಲಿದ್ದ ಮನೆಯಲ್ಲಿ ಶವವನ್ನು ನೇತು ಹಾಕಿದ್ದರು. ಗ್ರಾಮಸ್ಥರು ಬೆಳಗ್ಗೆ ಘಟನೆಯನ್ನು ನೋಡಿದ ನಂತರ ಬೆಳಕಿಗೆ ಬಂದಿರುವುದಾಗಿ ವರದಿ ವಿವರಿಸಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಮೊದಲು ಸವಿತಾ ಹಾಗೂ ಆಕೆಯ ಮಗನ ವಿಚಾರಣೆ ನಡೆಸಿದ್ದರು. ಆದರೆ ಈ ಸಂದರ್ಭದಲ್ಲಿ ಕುಡಿದು ಬಂದು ದಿನಾ ಗಲಾಟೆ ಮಾಡುತ್ತಿದ್ದರು. ನಂತರ ಸಿಟ್ಟಿನಿಂದ ಹೊರ ಹೋದವರು ನೇಣು ಹಾಕಿಕೊಂಡಿರಬಹುದು ಎಂದು ತಿಳಿಸಿದ್ದರು. ಆದರೆ ಶವದ ಮೇಲೆ ಗಾಯದ ಗುರುತು ಗಮನಿಸಿದ ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿರುವುದಾಗಿ ವರದಿ ತಿಳಿಸಿದೆ.
ತಾನು ಅಳಿಯನ ಜತೆ ಅಕ್ರಮ ಸಂಬಂಧ ಹೊಂದಿರುವುದು ಹೌದೆಂದು ಸವಿತಾ ತನಿಖೆ ವೇಳೆ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.