Advertisement
“ಅತ್ತೆ ಮನೆಯಲ್ಲಿ ಹುಷಾರು…’- ಮದುವೆಯಾಗಿ ಹೊರಟು ನಿಂತ ಪ್ರತಿ ಹುಡುಗಿಗೂ, ಅವಳ ಅಮ್ಮ ಈ ಎಚ್ಚರಿಕೆಯ ಮಾತನ್ನು ಹೇಳೇ ಕಳಿಸುವುದು. ಯಾಕಂದ್ರೆ, ಅತ್ತೆ ಅಂದ್ರೆ ಅಮ್ಮನಿಗೂ ಭಯ. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಅನ್ನೋ ಗಾದೆಯಂತೆ, ಅನಾದಿ ಕಾಲದಿಂದಲೂ ಅತ್ತೆಗೆ “ಖಳನಾಯಕಿ’ಯ ಪಾತ್ರ ಕಾಯಂ. ಸಿನಿಮಾ, ಧಾರಾವಾಹಿಗಳಲ್ಲೂ ಅತ್ತೆ ಗಯ್ನಾಳಿಯೇ. ಪೇಪರ್, ಟಿವಿಗಳಲ್ಲಿ, ಸೊಸೆಗೆ ಕಿರುಕುಳ ನೀಡಿದ ಅತ್ತೆಯ ಸುದ್ದಿ… ಹೀಗಿರುವಾಗ, ಅತ್ತೆಯ ಬಗ್ಗೆ ಯಾರಿಗೆ ಒಳ್ಳೆ ಅಭಿಪ್ರಾಯ ಮೂಡಲು ಸಾಧ್ಯ ಹೇಳಿ?
ಮಾರನೆ ದಿನ ಬೆಳಗ್ಗೆ, ಅತ್ತೆಯೇ ನನಗೆ ಬಿಸಿ ಬಿಸಿ ಟೀ ಮಾಡಿಕೊಟ್ಟರು. “ನಾನು ಎದ್ದಿದ್ದು ತಡವಾಯಿತೇನೋ?’, “ಇವರು ನಂಗೀಗ ಬೈತಾರೇನೋ…’ ಅಂತೆಲ್ಲಾ ಯೋಚಿಸುತ್ತಿರುವಾಗಲೇ, “ನೀರು ಕಾಯಿಸಿದ್ದೇನೆ ಸ್ನಾನ ಮಾಡಿ ಬಾ. ಟಿಫನ್ ರೆಡಿ ಮಾಡುತ್ತೇನೆ’ ಎಂದರು. ಜೊತೆಗೆ, “ನಾನೇನೂ ಬೈಯುವುದಿಲ್ಲ ನಿನಗೆ. ಒಂದೊಂದೇ ಕೆಲಸವನ್ನು ನಿಧಾನವಾಗಿ ಕಲಿತುಕೋ. ನಿಮ್ಮ ಅಮ್ಮನ ಮನೆಯ ರೀತಿಯಲ್ಲೇ ಇಲ್ಲೂ ಇರು’ ಎಂದರು. ಎದೆ ಮೇಲಿದ್ದ ದೊಡ್ಡ ಭಾರ ಇಳಿದಷ್ಟು ನೆಮ್ಮದಿಯಾಯ್ತು. ಆ ಕ್ಷಣದಿಂದಲೇ ಅತ್ತೆಗೆ ನಾನು “ಅಮ್ಮ’ ಎಂದು ಕರೆಯಲು ಶುರುಮಾಡಿದೆ.
Related Articles
ಕಾಲೇಜು, ಓದು, ಪರೀಕ್ಷೆ ಅಂತ ನನ್ನದೇ ಲೋಕದಲ್ಲಿದ್ದ ನನಗೆ, ಅಡುಗೆ ಮಾಡಲು ಗೊತ್ತಿರಲಿಲ್ಲ. ದಿನಕಳೆದಂತೆ ಅತ್ತೆಯ “ಪಾಕಶಾಲೆ’ಯಲ್ಲಿ ಒಂದೊಂದೇ ಅಡುಗೆ ಕಲಿಯತೊಡಗಿದೆ. ಅವರು ಮಾಡುವುದನ್ನು ನೋಡುತ್ತಾ, ಕಲಿಯುತ್ತಿದ್ದ ನನಗೆ ಮನೆಯ ಜವಾಬ್ದಾರಿ ಹೊರೆಯಾಗಲಿಲ್ಲ. ಅವರಿಂದಲೇ ನಾನು ಎಲ್ಲಾ ಕೆಲಸವನ್ನು ಕಲಿತಿದ್ದೇನೆ. ಸುಮ್ಮನೆ ಹೇಳುತ್ತಿಲ್ಲ, ನಾನು ಮತ್ತು ಅತ್ತೆ “ಅಮ್ಮ-ಮಗಳ’ ರೀತಿ ಇದ್ದೇವೆ. ಇದುವರೆಗೂ ನಮ್ಮಿಬ್ಬರ ನಡುವೆ ಒಮ್ಮೆಯೂ ಮನಸ್ತಾಪ ಮೂಡಿಲ್ಲ. ಅವರೊಂದಿಗೆ ಎಲ್ಲವನ್ನೂ ಮುಚ್ಚುಮರೆಯಿಲ್ಲದೆ ಹೇಳಿಕೊಳ್ಳಬಹುದು. ಒಬ್ಬ ಒಳ್ಳೆ ಗೆಳತಿಯಂತೆ ಎಲ್ಲವನ್ನೂ ಕೇಳಿಸಿಕೊಂಡು, ಸಲಹೆ-ಸೂಚನೆ ನೀಡುತ್ತಾರೆ.
Advertisement
ಹರಟೆಮಲ್ಲಿಯರುನಾವಿಬ್ಬರೂ ಹರಟೆ ಹೊಡೆಯಲು ಕೂತರೆ ಸಮಯ ಹೋಗಿದ್ದೇ ಗೊತ್ತಾಗುವುದಿಲ್ಲ. ಯೂ ಟ್ಯೂಬ್ ನೋಡಿ ಹೊಸ ಹೊಸ ಅಡುಗೆಗಳನ್ನು ಮಾಡುವುದು ಇಬ್ಬರಿಗೂ ಇಷ್ಟ. ಒಂದುವೇಳೆ ಆ ಅಡುಗೆ ಏನಾದ್ರೂ ಸರಿಯಾಗದಿದ್ದರೆ, ಅದಕ್ಕೆ ಇನ್ನೇನೋ ಪದಾರ್ಥಗಳನ್ನು ಸೇರಿಸಿ, ಹೊಸ ಹೆಸರು ಕೊಟ್ಟು, ಮನೆಮಂದಿಗೆ ತಿನ್ನಿಸುತ್ತೇವೆ. ಮೇಕಪ್ ಕುರಿತಾದ ವಿಡಿಯೋಗಳನ್ನು ನೋಡಿ, ಪಕ್ಕದ ಮನೆಯ ಚಿಕ್ಕ ಹುಡುಗಿಯರನ್ನು ಕರೆದು, ಅದನ್ನು ಪ್ರಯೋಗಿಸಿ ನೋಡುತ್ತೇವೆ. ಇಬ್ಬರೂ ಒಟ್ಟಿಗೆ ಶಾಪಿಂಗ್ ಹೋಗುತ್ತೇವೆ. ಮೊದಮೊದಲು, ಬೇಕರಿಯ, ಬೀದಿಬದಿಯ ತಿನಿಸುಗಳನ್ನು ತಿನ್ನಲು ಸುತರಾಂ ಒಪ್ಪದ ಅತ್ತೆ, ಈಗ ನನ್ನ ಜೊತೆ ಸೇರಿ ಚಾಟ್ಸ್, ಗೋಲ್‌ಗಪ್ಪ ತಿನ್ನಲು ಕಲಿತಿದ್ದಾರೆ! ನಮ್ಮತ್ತೆ ಯಾರ ಮಾತಿಗೂ ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲರೊಂದಿಗೂ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಪರಿಚಿತರ ಮನೆಯಲ್ಲಿ ಅತ್ತೆ-ಸೊಸೆ ಜಗಳವಂತೆ ಅಂತ ಗೊತ್ತಾದರೆ, ಅವರನ್ನು ಕೂರಿಸಿಕೊಂಡು ಬುದ್ಧಿಮಾತು ಹೇಳುತ್ತಾರೆ. ಇತ್ತೀಚೆಗೆ ನಮ್ಮ ಅಕ್ಕಪಕ್ಕದವರೂ ತಮ್ಮ ಸೊಸೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಸೊಸೆಯಂದಿರೂ ತಮ್ಮ ಅತ್ತೆಯರನ್ನು ಅರ್ಥ ಮಾಡಿಕೊಂಡಿದ್ದಾರೆ. ಇದಕ್ಕೆ ಪರೋಕ್ಷ ಕಾರಣ ನಮ್ಮತ್ತೆಯೇ ಇರಬಹುದು. ಈ ರೀತಿಯ ಅತ್ತೆ ಸಿಕ್ಕಿರೋದು ನನ್ನ ಪುಣ್ಯದ ಫಲವೇ ಸರಿ. ಈಗ ನಾನು ಕೆಲಸದ ನಿಮಿತ್ತ ಬೇರೆ ಊರಿಗೆ ಬಂದಿದ್ದೇನೆ. ಈ ಸಮಯದಲ್ಲಿ ಅವರನ್ನು ತುಂಬಾ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. -ಶ್ವೇತಾ. ಜಿ