Advertisement
ತಂದೆ-ತಾಯಿಯರನ್ನು ನೋಡಿಕೊಳ್ಳದ ಮಗ-ಸೊಸೆಯರ ಬಗೆಗಿನ ಸಾಕಷ್ಟು ಕತೆಗಳು, ವೃದ್ಧರ ಬವಣೆಗಳನ್ನು ಬಿಂಬಿಸುವ ಚಿತ್ರಗಳು, ಧಾರಾವಾಹಿಗಳನ್ನು ನೋಡುತ್ತಿರುತ್ತೇವೆ. ನಮ್ಮದೇ ಪರಿಚಿತರ, ಬಂಧುಗಳ ಮನೆಯಲ್ಲಿ ಇಂಥ ಘಟನೆಗಳು, ನಡೆಯುತ್ತಿರಬಹುದು. ಇದರ ಮೂಲಕಾರಣ ಏನಿರಬಹುದು ಅಂತ ಯಾವಾಗಲೂ ನನ್ನಲ್ಲಿ ಪ್ರಶ್ನೆ ಇತ್ತು. ಆದರೆ, ಕೆಲವೊಂದಷ್ಟು ಘಟನೆಗಳು ಆ ಪ್ರಶ್ನೆಯನ್ನು ಮತ್ತೂಂದು ದೃಷ್ಟಿಕೋನದಿಂದ ನೋಡುವಂತೆ ಮಾಡಿದವು.
Related Articles
Advertisement
ಸುಜಾತಾ ಬಹಳ ಚುರುಕು, ಬುದ್ಧಿವಂತೆ. ವೈದ್ಯಕೀಯ ಪದವಿಯ ನಂತರ ಮದುವೆಯಾಯಿತು. ಮುಂದೆ ಮಕ್ಕಳಾದಾಗ ನೋಡಿಕೊಳ್ಳಲು ಯಾರೂ ಇಲ್ಲವೆಂದು ಕೆಲಸ ಬಿಟ್ಟಳು. ಅತ್ತೆ-ಮಾವ, ತಮ್ಮ ಬೇರೆ ಮಕ್ಕಳಿಗೆ ಬೇಕಾಗುವ ಸೌಲಭ್ಯಗಳನ್ನೆಲ್ಲ ಇವಳ ಗಂಡನಿಂದ ಮಾಡಿಸಿಕೊಳ್ಳುತ್ತಿದ್ದರು. ಹೆಣ್ಮಕ್ಕಳಿಗೆ ಒಡವೆ, ಸೀರೆಗಳನ್ನು ಕೊಳ್ಳುವಾಗ ಸೊಸೆಗೆ ಕೊಡಿಸಲು ಅವರಿಗೆ ಮನಸು ಬರುತ್ತಿರಲಿಲ್ಲ. ಈಗ ಅತ್ತೆಮಾವಂದಿರು ಅಶಕ್ತರಾಗಿದ್ದಾರೆ. ಸುಜಾತಳಿಗೆ ಹಳೆಯದೆಲ್ಲ ಚೆನ್ನಾಗಿ ನೆನಪಿದೆ. ಸೊಸೆ ನಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಅಂತ ಅವರೀಗ ದೂರುತ್ತಿದ್ದಾರೆ!
ಈ ರೀತಿಯ ಉದಾಹರಣೆ ಗಳು ಸಾಕಷ್ಟಿವೆ. ಇಂಥದ್ದನ್ನೆಲ್ಲ ನೋಡಿ ನೋಡಿ, ಇತ್ತೀಚಿನ ಹುಡುಗಿಯರು ಗಂಡನ ಮನೆಯವರಿಂದ ಸ್ವಲ್ಪ ದೂರವೇ ಇರುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಮುಂಚಿನಂತೆ ಕೂಡು ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ, ಮಗ-ಸೊಸೆ ಒಂದು ಕಡೆ, ಅತ್ತೆ-ಮಾವ ಬೇರೊಂದು ಕಡೆ ಅಂತ ಆಗಿರುವುದಕ್ಕೆ, ಸೊಸೆಯನ್ನು ಹೊರಗಿನವರಂತೆ ಕಾಣುವ ಗಂಡನ ಮನೆಯವರ ನಡವಳಿಕೆಯೇ ಕಾರಣ ಅಂದರೂ ತಪ್ಪಲ್ಲ. ಮದುವೆಯಾದ ಹೊಸತರಲ್ಲಿ ಸೊಸೆಯನ್ನು ಮನೆಯವಳಂತೆ ಕಾಣದೆ, ವೃದ್ಧಾಪ್ಯದಲ್ಲಿ ಅವಳಿಂದ ಆರೈಕೆಯನ್ನು ಬಯಸುವುದು ಎಷ್ಟು ಸರಿ? ನೀವೇ ಹೇಳಿ…
* ಡಾ. ಉಮಾಮಹೇಶ್ವರಿ ಎನ್.