ಚಂಡೀಗಢ: ಕಣ್ಣಿಗೆ ಕಾಣುವ ದೇವರೆಂದರೆ ಅದು ಹೆತ್ತ ತಾಯಿ. ಅಂತಹ ತಾಯಿ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆ ಸೇರಿದರೆ ಮಗನಾದವನ ಪರಿಸ್ಥಿತಿ ಹೇಗಾಗಬೇಡ ಹೇಳಿ. ಅದೂ ರಣಜಿ ಕ್ರಿಕೆಟ್ ಸಂದರ್ಭದಲ್ಲಿ, ಊಹಿಸುವುದು ಕಷ್ಟ.
ಹೌದು, ಇಲ್ಲೊಬ್ಬ ವೇಗದ ಬೌಲರ್ ತನ್ನ ತಾಯಿಗಾಗಿ ದಿನನಿತ್ಯ ರಾತ್ರಿ ಪಾಳಿಯಲ್ಲಿ ಆಸ್ಪತ್ರೆಗೆ ಓಡಾಡಿದ್ದಲ್ಲದೆ ಚಂಡೀಗಢದಲ್ಲಿ ನಡೆದ ರಣಜಿ ಪಂದ್ಯದ ಇನಿಂಗ್ಸ್‌ವೊಂದರಲ್ಲಿಅರುಣಾಚಲ ಪ್ರದೇಶದ ವಿರುದ್ಧ 5 ವಿಕೆಟ್ ಕಬಳಿಸಿ ಭಾರೀ ಸುದ್ದಿಯಾಗಿದ್ದಾರೆ. ಹೆಸರು ಶ್ರೇಷ್ಠ ನಿರ್ಮೋಹಿ.
28 ವರ್ಷ. ಚಂಡೀಗಢ ತಂಡದ ವೇಗದ ಬೌಲರ್. ಒಟ್ಟಾರೆ ಚಂಡೀಗಢ ಪರ ರಣಜಿ ಕ್ರಿಕೆಟ್‌ನ ಇನಿಂಗ್ಸ್ ವೊಂದರಲ್ಲಿ 5 ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಕಷ್ಟದ ಸರಪಳಿಯನ್ನು ಮೆಟ್ಟಿ ಸಾಧನೆಗೈದ ಸಾಧಕನಿಗೆ ದೇಶದೆಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ನಿರ್ಮೋಹಿ ತಾಯಿ ಅಂಜಲಿ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು, ಇವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಚೇತರಿಸುತ್ತಿದ್ದಾರೆ.
ಈ ಬಗ್ಗೆ ಶ್ರೇಷ್ಠ ನಿರ್ಮೋಹಿ ಪ್ರತಿಕ್ರಿಯಿಸಿದ್ದು ಹೀಗೆ..”ತಾಯಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ. ಹಗಲು ಪಾಳಿಯಲ್ಲಿ ತಂದೆ ಬಂದು ಅಮ್ಮನನ್ನು ನೋಡಿಕೊಳ್ಳುತ್ತಾರೆ.
ಹಗಲಿನ ವೇಳೆ ನಾನು ರಣಜಿ ಪಂದ್ಯ ಆಡುತ್ತೇನೆ. ರಾತ್ರಿ ಪಾಳಿಯಲ್ಲಿ ಆಸ್ಪತ್ರೆಗೆ ಬಂದು ತಾಯಿಯನ್ನು ನೋಡಿಕೊಳ್ಳುತ್ತೇನೆ. ಸದ್ಯ ತಾಯಿ ಆರೋಗ್ಯವಾಗಿದ್ದಾರೆ. ಆಸ್ಪತ್ರೆಯಿಂದ ಬುಧವಾರ ಬಿಡುಗಡೆಯಾಗಲಿದ್ದಾರೆ’ ಎಂದು ತಿಳಿಸಿದ್ದಾರೆ.