Advertisement

ಆಸ್ಪತ್ರೆ ಬಿಲ್‌ ಬಾಕಿ: ಮಹಿಳೆ ಒತ್ತೆ; 7 ವರ್ಷದ ಮಗನಿಂದ ಭಿಕ್ಷೆ

11:50 AM Nov 28, 2017 | Team Udayavani |

ಪಟ್ನಾ : ಬಿಲ್‌ ಪಾವತಿಸದ ಕಾರಣಕ್ಕೆ ಆಸ್ಪತ್ರೆ ಅಧಿಕಾರಿಗಳು ಒತ್ತೆ ಇರಿಸಿಕೊಂಡಿರುವ ತನ್ನ ತಾಯಿಯ ಮೆಡಿಕಲ್‌ ಬಿಲ್‌ ಪಾವತಿಸಲು ಆಕೆಯ 7 ವರ್ಷ ಪ್ರಾಯದ ಮಗ ಇಲ್ಲಿನ ರಸ್ತೆಗಳಲ್ಲಿ ಭಿಕ್ಷೆ ಬೇಡುತ್ತಿದ್ದಾನೆ.

Advertisement

31 ವರ್ಷ ಪ್ರಾಯದ ಗರ್ಭಿಣಿ ಲಲಿತಾ ದೇವಿ ಕಳೆದ ವಾರ ಮೃತ ಮಗವನ್ನು ಹೆತ್ತಿದ್ದಳು. ಆಸ್ಪತ್ರೆಯವರು ಆಕೆಯ ಹೆರಿಗೆ – ಚಿಕಿತ್ಸೆಗೆ ಸಂಬಂಧಿಸಿ 70,000 ರೂ. ಬಿಲ್‌ ಮಾಡಿದ್ದರು. ಬಿಲ್‌ ಪಾವತಿಸದೆ ಮಹಿಳೆಯನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಆಕೆಯನ್ನು ಆಸ್ಪತ್ರೆ ಅಧಿಕಾರಿಗಳು ಒತ್ತೆ ಇರಿಸಿಕೊಂಡಿದ್ದರು. 

ತುಂಬು ಗರ್ಭಿಣಿ ಲಲಿತಾ ದೇವಿಯನ್ನು ಆಕೆಯ ಮನೆಯವರು ಇಲ್ಲಿನ ಮಾ ಶೀತಲಾ ಎಮರ್ಜೆನ್ಸಿ ಹಾಸ್ಪಿಟಲ್‌ ಪ್ರೈವೇಟ್‌ ಲಿಮಿಟೆಡ್‌ಗೆ ಏಜಂಟ್‌ ಒಬ್ಬರ ಮೂಲಕ ಸೇರಿಸಿದ್ದರು. ಆಸ್ಪತ್ರೆಯವರು ಆಕೆಗೆ 1.5 ಲಕ್ಷ ರೂ. ಬಿಲ್‌ ಮಾಡಿದ್ದರು. ಅನಂತರ ಇದನ್ನು 70,000 ರೂ.ಗೆ ಇಳಿಸಿದ್ದರು.

ಲಲಿತಾ ದೇವಿಯನ್ನು ಆಸ್ಪತ್ರೆಗೆ ಸೇರಿಸುವಾಗ ಏಜಂಟ್‌, ಆಕೆಯ ಪತಿ ನಿರ್ಧನ್‌ ರಾಮ್‌ ಗೆ ಕೇವಲ 25,000 ರೂ. ಪಾವತಿಸಿದರಾಯಿತು ಎಂದಿದ್ದ.

ಅಂತೆಯೇ ನಿರ್ಧನ್‌ ರಾಮ್‌ ತನ್ನಲ್ಲಿದ್ದ ಹಣವನ್ನೆಲ್ಲ ಒಟ್ಟುಗೂಡಿಸಿ ಹೇಗೋ 25,000 ರೂ. ಠೇವಣಿ ಇರಿಸಿದ್ದ. ಆದರೆ 70,000 ರೂ. ಪಾವತಿಸದೆ ಲಲಿತಾ ದೇವಿಯನ್ನು ಬಿಡುಗಡೆ ಮಾಡಲಾಗದು ಎಂದು ಆಸ್ಪತ್ರೆ ಅಧಿಕಾರಿಗಳು ಆಕೆಯನ್ನು ಒತ್ತೆ ಇರಿಸಿಕೊಂಡರು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

Advertisement

ನಿರ್ಧನ್‌ ರಾಮ್‌ ನ 7 ವರ್ಷದ ಮಗ ಈಗ ತಂದೆಗೆ ಆಸ್ಪತ್ರೆ ಬಿಲ್‌ ಪಾವತಿಸಲು ನೆರವಾಗುವುದಕ್ಕಾಗಿ ಪಟ್ನಾದ ರಸ್ತೆಗಳಲ್ಲಿ ಭಿಕ್ಷೆ ಎತ್ತತ್ತಿದ್ದಾನೆ ಎಂದವರು ಹೇಳಿದರು. 

ಬಾಲಕನು ನಗರದ ರಸ್ತೆಗಳಲ್ಲಿ ಭಿಕ್ಷೆ ಬೇಡುತ್ತಿರುವುದನ್ನು ಮಾಧ್ಯಮದವರು ಕಂಡು ವರದಿ ಮಾಡಿದರು. ಆ ಸಂದರ್ಭದಲ್ಲಿ ಮಾಧೇಪುರ ಸಂಸದ ಪಪ್ಪು ಯಾದವ್‌ ಮಧ್ಯ ಪ್ರವೇಶಿಸಿ ಬಾಲಕನ ತಾಯಿಯನ್ನು ಆಸ್ಪತ್ರೆಯಿಂದ ಬಿಡಿಸಿದರು. ಮಾತ್ರವಲ್ಲದೆ ಲಲಿತಾ ದೇವಿಗೆ 10,000 ರೂ. ಪರಿಹಾರವನ್ನು ಕೊಡುವಂತೆ ಆಸ್ಪತ್ರೆ ಅಧಿಕಾರಿಗಳಿಗೆ ಹೇಳಿ, ಆಕೆಯನ್ನು ಎಂಬುಲೆನ್ಸ್‌ನಲ್ಲಿ ಆಕೆಯ ಮನೆಗೆ ತಲುಪಿಸಿದರು. 

ಪೊಲೀಸರು ಆಸ್ಪತ್ರೆ ಆಡಳಿತೆ ವಿರುದ್ಧ ಎಫ್ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next