ಹೃದಯದ ಬಾಗಿಲು ತೆರೆಯುವ ಮುನ್ನ ನಿನ್ನನ್ನು ಈ ಜಗತ್ತಿಗೆ ಪರಿಚಯಿಸಿದವರ ಮರೆಯಬೇಡ, ಕನಸಿನ ಲೋಕದಲಿ ಹಾರುವ ಮುನ್ನ ನಿನಗೆ ಈ ಭೂಮಿಯ ಮೇಲೆ ನಡೆದಾಡಲು ಸಹಾಯ ಮಾಡಿದವರ ಮರೆಯಬೇಡ. ಹೃದಯ ಮಿಡಿತವ ನಿಲ್ಲಿಸುವ ಮುನ್ನ ನಿನ್ನ ಜೀವಕ್ಕೆ ಜೀವ ಕೊಟ್ಟವಳ ಮರೆಯಬೇಡ. ಏಕೆಂದರೆ ಈ ಜೀವ ನಿನ್ನದಲ್ಲ. ನಿನ್ನದಂಥ ಉಳಿದಿರುವುದು ಏನೂ ಇಲ್ಲ. ಎಲ್ಲವೂ ಆಕೆ ನಿನಗೆ ಕೊಟ್ಟವರ. ಇಷ್ಟಕ್ಕೂ ಆಕೆ ಯಾರು ಅಂತ ಕೇಳ್ತಿರಾ? ಆಕೆಯೇ ತಾಯಿ ಅಮ್ಮ.
ಅಂದು ಮುಸ್ಸಂಜೆಯ ವೇಳೆ. ಬಾನ ಚಂದಿರನು ತನ್ನ ಕಾಯಕವನ್ನು ಶುರುಮಾಡುವ ಸಮಯ. ಇತ್ತ ಬಾನಂಗಳದಲಿ ಕಾರ್ಮೋಡಗಳ ಸಮ್ಮಿಲನ. ಮಳೆರಾಯನ ಆಗಮನ ಉಲ್ಕೆಗಳಂತೆ ಭೂಮಿಗೆ ಅಪ್ಪಳಿಸುತ್ತಿರುವ ಮಿಂಚು-ಸಿಡಿಲುಗಳ ಆರ್ತನಾದ. ಇವೆಲ್ಲದರ ನಡುವೆ ದೂರದಲ್ಲಿ ಯಾರಧ್ದೋ ಅಳುವಿನ ಸದ್ದು ಕೇಳಿ ಬರುತ್ತಿದೆ. ಹತ್ತಿರ ಹೋಗಿ ನೋಡಿದೆ. ಆಗತಾನೆ ಹುಟ್ಟಿದ ಮಗು. ಅತ್ತ ತಾಯಿ ಪ್ರಜ್ಞಾಹೀನಳಾಗಿ ಮಲಗಿದ್ದಾಳೆ. ಈ ಮಗು ಕಣ್ಣು ತೆರೆದ ಅರೆಗಳಿಗೆಯಲ್ಲಿ ಕೆಲಸ ಹೋಗಿದ್ದ ಮಗುವಿನ ತಂದೆ ಸಿಡಿಲಿನ ಬಡಿತಕ್ಕೆ ಅಸು ನೀಗಿದ್ದನು. ಇತ್ತ ಆ ತಾಯಿಗೆ ಎಚ್ಚರವಾದಾಗ ತನ್ನ ಗಂಡನ ನಿಧನದ ಸುದ್ದಿ ತಿಳಿಯುತ್ತದೆ. ಇದನ್ನು ಕೇಳಿದ ಆಕೆಯು ಅರೆಗಳಿಗೆ ಮೌನಿಯಾಗಿದ್ದಳು. ಗಂಡನಿಲ್ಲದೆ ವಿಧವೆಯಾದಳು. ಆದರೂ ಮಗುವಿಗಾಗಿ ತಾನು ಬದುಕಬೇಕೆಂದು ನಿರ್ಧರಿಸಿದಳು. ಅಷ್ಟರಲ್ಲಾಗಲೇ ಪ್ರಕೃತಿ ಶಾಂತವಾಗಿತ್ತು. ರವಿಯು ತನ್ನ ಕಾಯಕದಲ್ಲಿ ತೊಡಗಿದ್ದ. ಒಂದೆಡೆ ತಾಯಿ ಹಸಿವೆಯಿಂದ ಬಳಲುತ್ತಿದ್ದರೆ ಇನ್ನೊಂದೆಡೆ ಮಗು ಹಸಿವಿನಿಂದ ಅಳುತ್ತಿದೆ. ತಾಯಿ ತನ್ನ ಹಸಿವೆಯನ್ನು ಮರೆತು ಮಗುವಿಗೆ ಎದೆಹಾಲು ಕುಡಿಸಿ ಮಲಗಿಸಿದಳು. ಹೀಗೆ ದಿನಗಳು ಕಳೆದವು. ಕೆಲಸವಿಲ್ಲದೆ ತಾಯಿ ಹೊಟ್ಟೆಪಾಡಿಗಾಗಿ ಪರದಾಡುತ್ತಿದ್ದಳು. ಮಗುವನ್ನು ಜೋಳಿಗೆಗೆ ಹಾಕಿಕೊಂಡು ಕೆಲಸ ಕೇಳಲು ಹೋದಳು. ಆ ಊರಿನ ದೊಡ್ಡ ಮನೆಯೊಂದರಲ್ಲಿ ನೆಲ ಒರೆಸುವ ಕೆಲಸಕ್ಕೆ ಸೇರಿದಳು. ಕೆಲಸ ಮಾಡಿ ಬಂದ ಹಣದಿಂದ ಮಗುವಿಗೆ ಬಟ್ಟೆ ತೆಗೆದುಕೊಂಡಳು. ಉಳಿದ ಅಲ್ಪಸ್ವಲ್ಪ ಹಣವನ್ನು ಕೂಡಿಟ್ಟಳು.
ಮಗುವಿಗೆ ಕೀರ್ತಿ ಎಂದು ನಾಮಕರಣ ಮಾಡಿದಳು. ತಾನು ಅನುಭವಿಸಿದ ನರಕಯಾತನೆ ತನ್ನ ಮಗಳು ಅನುಭವಿಸಬಾರದೆಂದು ನಿರ್ಧಾರ ಮಾಡಿದಳು. ತನ್ನದೇ ಮನೆಯ ತೋಟದ ಮಾವಿನಕಾಯಿ ಕೊಯ್ದು ಉಪ್ಪಿನಕಾಯಿ ಹಾಕಿದಳು. ಮೊದಲು ಒಂದೆರಡು ಅಂಗಡಿಗೆ ಅದನ್ನು ಕೊಟ್ಟಳು. ಕಾಲ ಉರುಳಿದ ಹಾಗೆ ಅವಳ ಉಪ್ಪಿನಕಾಯಿಗೆ ಬೇಡಿಕೆ ಹೆಚ್ಚಾಯಿತು. ಕಷ್ಟಪಟ್ಟು ದುಡಿದು ಉಪ್ಪಿನಕಾಯಿ ಫ್ಯಾಕ್ಟರಿಯನ್ನು ತೆರೆದಳು. ನೂರಾರು ಜನರು ಕೆಲಸಕ್ಕೆ ಸೇರಿದರು. ಅವಳು ಆ ಊರಿಗೆ ಶ್ರೀಮಂತ ಮಹಿಳೆಯಾದಳು. ನೋಡನೋಡುತ್ತಿದ್ದಂತೆ ಕೀರ್ತಿ 10ನೆಯ ತರಗತಿ ಕಾಲಿಟ್ಟಳು. ತನ್ನ ಮಗಳನ್ನು ಸುಖವಾಗಿ ಬೆಳೆಸಿದಳು. ಹೀಗಾಗಿ ಕೀರ್ತಿಗೆ ಬಡತನದ ಅರಿವಿರಲಿಲ್ಲ. ಓದಿನ ಕಡೆ ಗಮನವೂ ಇರಲಿಲ್ಲ. ಹಾಗೂ ಹೀಗೂ ಎಸ್‌ಎಸ್‌ಎಲ್‌ಸಿ ಪಾಸ್ ಆಗಿ ಕಾಲೇಜಿಗೆ ಸೇರಿದಳು. ತಾಯಿ ಕೂಡಿಟ್ಟ ಹಣವನ್ನು ಖಾಲಿ ಮಾಡುವುದೇ ಅವಳ ಕಾಯಕವಾಯಿತು.
ನಿಜ, ಆಕೆ ಓದಿನ ಕಡೆ ಗಮನ ಕೊಡದೆ ಪ್ರೀತಿಯ ಕಡೆ ತನ್ನ ಮನಸ್ಸನ್ನು ತಿರುಗಿಸಿದಳು. ಇತ್ತ ತಾಯಿ ರಾತ್ರಿ-ಹಗಲೆನ್ನದೆ ದುಡಿದು ತನ್ನ ಕರುಳ ಬಳ್ಳಿಗಾಗಿ ಒದ್ದಾಟ ನಡೆಸಿ ಇಂದು ಈ ಮಟ್ಟಕ್ಕೆ ಬಂದುನಿಂತರೆ, ಅತ್ತ ಮಗಳು ತಾಯಿಯ ಹೃದಯವನ್ನೇ ಒಡೆಯುತ್ತಿದ್ದಾಳೆ. ಹೌದು ಈ ಪ್ರೀತಿನೇ ಹಾಗೆ. ಒಮ್ಮೆ ಅದರ ಬಲೆಗೆ ಬಿದ್ದರೆ ಮತ್ತೆ ಅದರಿಂದ ಹೊರಬರಲು ತುಂಬಾ ಕಷ್ಟ. ಅದರಂತೆ ಕೀರ್ತಿಯೂ ಕಾಲೇಜಿನಲ್ಲಿ ಪ್ರಶಾಂತ್ ಎಂಬ ತರುಣನ ಪ್ರೀತಿಯ ಬಲೆಯೊಳಗೆ ಬಿದ್ದಿದ್ದಳು. ಇವರ ಪ್ರೀತಿಯ ವಿಷಯ ಕೀರ್ತಿಯ ತಾಯಿಗೆ ತಿಳಿಯುತ್ತದೆ. ಆಗ ತಾಯಿಗೆ ಒಮ್ಮೆಲೆ ಸಿಡಿಲು ಬಡಿದಂತಾಯಿತು. ಮಗಳ ಬರುವಿಕೆಗಾಗಿ ಕಾಯುತ್ತಾ ಕುಳಿತಳು. ಮಗಳು ಮನೆಗೆ ಬಂದಾಗ ತಾಯಿ ಹೇಳುವಳು, “ನಿನಗೆ ಯಾವ ಕಷ್ಟದ ಅರಿವೂ ಇಲ್ಲದೆ ಬೆಳೆಸಿದ್ದು ಪ್ರೀತಿ ಮಾಡಲಿಕ್ಕಾ? ನೀನು ಕಾಲೇಜಿಗೆ ಹೋಗಿದ್ದು ಪ್ರೀತಿಸಲಾ? ನಾನು ಇಷ್ಟು ಕಷ್ಟಪಟ್ಟು ನಿನ್ನ ಸಾಕಿ ಸಲಹಿದ್ದು ಇದಕ್ಕಾಗಿಯೇನಾ?’ ಎಂದು ಅಳಲು ಶುರುಮಾಡಿದಳು. ಈ ಮಾತನ್ನು ಕೇಳಿದ ಕೀರ್ತಿ ಕೋಣೆಯ ಬಾಗಿಲು ಹಾಕಿ ಕೂತಳು. ಮರುದಿನ ಎಂದಿನಂತೆ ಕಾಲೇಜಿಗೆ ಹೋದಳು. ಮನೆಯಲ್ಲಿ ನಡೆದ ವಿಷಯವನ್ನು ತನ್ನ ಪ್ರಿಯತಮನ ಬಳಿ ಹೇಳುತ್ತಾಳೆ. ಆಗ ಪ್ರಶಾಂತ್ ಕೀರ್ತಿಯ ತಲೆಕೆಡಿಸಿ ನಾವು ಓಡಿಹೋಗುವ ಎಂದು ಹೇಳುವನು. ಕೀರ್ತಿ ಒಲ್ಲದ ಮನಸ್ಸಿನಲ್ಲಿ ಆಯ್ತು ಎಂದು ಹೇಳಿ ಮನೆಯಿಂದ ಓಡಿ ಹೋಗುವಳು. ಇತ್ತ ತಾಯಿ ಕೀರ್ತಿಯ ಹುಡುಕಾಟ ನಡೆಸುತ್ತಾಳೆ. ಹಲವು ದಿನಗಳು ಉರುಳಿದರೂ ಆಕೆಯ ಸುಳಿವೇ ಸಿಗುವುದಿಲ್ಲ.
ಒಂದು ದಿನ ನಡುರಾತ್ರಿ ಯಾರೋ ಬಾಗಿಲು ಬಡಿದ ಸದ್ದು ಕೇಳುತ್ತದೆ. ಗಡಿಬಿಡಿಯಲ್ಲಿ ಎದ್ದು ಬಾಗಿಲು ತೆರೆದು ನೋಡಿದರೆ ತನ್ನ ಕರುಳ ಕುಡಿ ಮುಂದೆ ನಿಂತಿರುತ್ತಾಳೆ. ಅವನ್ನು ನೋಡಿ ತಾಯಿಗೆ ಕಳೆದು ಹೋದ ಜೀವ ಮತ್ತೆ ಬಂದಂತಾಯಿತು. ಒಂದೂ ಮಾತು ಆಡಲಾಗದೆ ಕಲ್ಲುಬಂಡೆಯಂತೆ ನಿಂತುಬಿಡುತ್ತಾಳೆ. ಕೀರ್ತಿ ತಾಯಿಯನ್ನು ನೋಡಿ ಅತ್ತು ತಾಯಿಯ ಕಾಲು ಹಿಡಿದು ಕ್ಷಮೆ ಕೇಳುತ್ತಾಳೆ. “”ನನ್ನನ್ನು ಕ್ಷಮಿಸು ಅಮ್ಮ… ನಿನ್ನ ಪ್ರೀತಿಯ ಅರಿಯದೆ ಹೋದೆ ನಾನು. ಈ ಲೋಕದಲ್ಲಿ ನನ್ನಂತಹ ಪಾಪಿ ಹುಟ್ಟಬಾರದು. ನಾನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಪ್ರಶಾಂತ್ ನನಗೆ ಮೋಸ ಮಾಡಿದ. ಹೇಗೋ ನಾನು ಅವನಿಂದ ತಪ್ಪಿಸಿಕೊಂಡು ಬಂದೆ” ಎಂದು ಅಳುತ್ತಾಳೆ.
ಇತ್ತ ಆಕೆಯ ಪ್ರಿಯತಮ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿರುತ್ತಾನೆ. ಒಂದೊಮ್ಮೆ ಬೇಸರಗೊಂಡ ಕೀರ್ತಿ ಆತ್ಮಹತ್ಯೆಗೂ ಪ್ರಯತ್ನಿಸುತ್ತಾಳೆ. ಆದರೆ ತಾಯಿ ಅವಳನ್ನು ರಕ್ಷಿಸಿ, “”ಇದಕ್ಕಾಗಿಯೇ ನಾನು ನಿನ್ನನ್ನು ಬೆಳೆಸಿದ್ದು?” ಎಂದು ಕೀರ್ತಿಗೆ ಹುಟ್ಟಿನಿಂದ ಇಲ್ಲಿಯವರೆಗೆ ನಡೆದ ಎಲ್ಲಾ ಕಥೆಯನ್ನು ಹೇಳುತ್ತಾಳೆ. ಆಕೆಯ ಮಾತುಗಳನ್ನು ಕೇಳಿದ ಮಗಳಿಗೆ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಡುತ್ತಾಳೆ. ನಡೆದ ಘಟನೆಗಳು ಒಳ್ಳೆಯ ಪಾಠವನ್ನೂ ಕಲಿಸುತ್ತವೆ. ಬಳಿಕ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿ ಪೊಲೀಸ್ ಕೆಲಸಕ್ಕೆ ಸೇರುತ್ತಾಳೆ. ಒಬ್ಬ ದಕ್ಷ ಪೊಲೀಸ್ ಅಧಿಕಾರಿಯೂ ಆಗುತ್ತಾಳೆ. ತನ್ನ ಉತ್ತಮ ಕರ್ತವ್ಯ ನಿಷ್ಠೆಯಿಂದ ತಪ್ಪು ಮಾಡಿದವರನ್ನು ಹಿಡಿದು ಶಿಕ್ಷಿಸುವಲ್ಲಿ ಯಶಸ್ವಿಯಾಗುತ್ತಾಳೆ. ತನ್ನ ಬಾಳಿನ ಬೆಳಕಾದ ತಾಯಿಯನ್ನು ಕಣ್ಣಿನ ರೆಪ್ಪೆಯಂತೆ ನೋಡಿಕೊಂಡಳು. ಮಂದೆ ತಾಯಿ-ಮಗಳು ಇಬ್ಬರೂ ಖುಷಿ ಖುಷಿಯಾಗಿ ಜೀವನ ಸಾಗಿಸಿದರು.
ದೀಕ್ಷಿತ್ ಸ್ನೇಹ ಟ್ಯುಟೋರಿಯಲ್ ಕಾಲೇಜಿನ ಹಳೆವಿದ್ಯಾರ್ಥಿ, ಉಡುಪಿ