Advertisement

ತಾಯಿ, ಮಕ್ಕಳ ನೂತನ ಆಸ್ಪತ್ರೆ ಲೋಕಾರ್ಪಣೆ

12:57 PM Mar 08, 2017 | Team Udayavani |

ಕೆ.ಆರ್‌.ನಗರ: ಸರ್ಕಾರಿ ಆಸ್ಪತ್ರೆಗಳ ವೈದ್ಯರು ಆಸ್ಪತ್ರೆಗೆ ಬರುವವರು ಬಡ ರೋಗಿಗಳೆಂದು ಅರಿತು ಅವರೊಂದಿಗೆ ಸೌಜನ್ಯದಿಂದ ವರ್ತಿಸಿ ಶ್ರದ್ಧೆಯಿಂದ ಸೇವೆ ನೀಡಿದಾಗ ಮಾತ್ರ ಆಸ್ಪತ್ರೆಗಳು ದೇವಾಲಯ ಆಗಲು ಸಾಧ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಹೇಳಿದರು.

Advertisement

ಪಟ್ಟಣದ ಹಳೆ ಹೆರಿಗೆ ಆಸ್ಪತ್ರೆ ಆವರಣದಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಯಂದಿರು ಹೆರಿಗೆಗೆ ಬಂದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮರಣ ಹೊಂದಬಾರದು ಎಂಬ ಉದ್ದೇಶದಿಂದ ಈ ಆಸ್ಪತ್ರೆಯನ್ನು ಆರಂಭಿಸಲಾಗಿದ್ದು, ದಿನದ 24 ಗಂಟೆ ಆರೋಗ್ಯ ಸೇವೆ ದೊರೆಯುವುದರಿಂದ ತಾಯಿ ಮಕ್ಕಳ, ಮರಣ ಕಡಿಮೆಯಾಗಲಿದೆ ಎಂದು ತಿಳಿಸಿದರು.

30 ಹಾಸಿಗೆ ಉಳ್ಳ ನೂತನ ಆಸ್ಪತ್ರೆಯಲ್ಲಿ 2 ಮಂದಿ ಸ್ತ್ರೀ ರೋಗ ತಜ್ಞರು, 2 ಮಂದಿ ಮಕ್ಕಳ ತಜ್ಞರು ಮತ್ತು ಅರವಳಿಕೆ ತಜ್ಞರೂ ಸೇರಿದಂತೆ ಆಸ್ಪತ್ರೆಯ ಅಧೀಕ್ಷಕರು, 8 ಮಂದಿ ಸ್ಟಾಫ್ನರ್ಸ್‌ ಇರುತ್ತಾರೆ. ಉಚಿತವಾಗಿ ತುರ್ತು ವಾಹನದ ಸೇವೆಗಳಲ್ಲಿ ಲಭ್ಯವಿದೆ. ಸಿಬ್ಬಂದಿ ಅನುಕೂಲಕ್ಕಾಗಿ 8 ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗಿದ್ದು ಸಿಬ್ಬಂದಿ ಬೇರೆಡೆಯಿಂದ ಪ್ರಯಾಣಿಸದೆ ಆಸ್ಪತ್ರೆಯ ಆವರಣದಲ್ಲಿಯೇ ವಾಸ ಇದ್ದು ಗ್ರಾಮೀಣ ಜನತೆಗೆ ಉತ್ತಮ ರೀತಿಯ ಆರೋಗ್ಯ ಸೇವೆಯನ್ನು ನೀಡಬೇಕೆಂದು ಸೂಚಿಸಿದರು.

ಆಸ್ಪತ್ರೆಯ ಆವರಣದಲ್ಲಿ ಉದ್ಯಾನವನ ನಿರ್ಮಾಣ ಮಾಡಲು ಅವಶ್ಯಕತೆ ಇರುವ ಅನುದಾನವನ್ನು ಬಿಡುಗಡೆ ಮಾಡಲು ಸರ್ಕಾರ ಸಿದ್ಧವಿದೆ. ಅಲ್ಲದೆ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂತ್ರಪಿಂಡ ತೊಂದರೆಯಿಂದ ಬಳಲುತ್ತಿರುವವರಿಗೆ ಅನುಕೂಲ ಕಲ್ಪಿಸಲು ಡಯಾಲಿಸಿಸ್‌ ಕೇಂದ್ರ ಮತ್ತು ತುರ್ತು ನಿಗಾ ಘಟಕ‌(ಐಸಿಯು) ಕೇಂದ್ರವನ್ನು ಆರಂಭಿಸಲು ತೀರ್ಮಾನಿಸಲಾಗಿದ್ದು ಶೀಘ್ರದಲ್ಲಿಯೇ ಚಾಲನೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಸರ್ಕಾರಿ ಆಸ್ಪತ್ರೆಗಳ ವೈದ್ಯರ ಕೊರತೆಗಳನ್ನು ಸ್ವಲ್ಪಮಟ್ಟಿಗೆ ನೀಗಿಸಲಾಗಿದ್ದು ತಜ್ಞ ವೈದ್ಯರನ್ನು ತಾಲೂಕು ಮಟ್ಟದ ಆಸ್ಪತ್ರೆಗೆ ನೇಮಕ ಮಾಡಿಕೊಳ್ಳಲು 1.25 ಲಕ್ಷ ರೂ. ವರೆಗೆ ಮಾಸಿಕ ವೇತನ ನೀಡಲು ನಿರ್ಧರಿಸಿ ಈಗಾಗಲೇ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ ಎಂದು ಸಚಿವರು ತಿಳಿಸಿದರು.

Advertisement

ಶಾಸಕ ಸಾ.ರಾ.ಮಹೇಶ್‌ ಮಾತನಾಡಿ, ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆ ಮತ್ತು ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ಬರುವ ಮಹಿಳೆಯರಿಗೆ, ಮಕ್ಕಳಿಗೆ, ಚಿಕಿತ್ಸೆ ನೀಡಲು ವೈದ್ಯರ ಕೊರತೆ ಜತೆಗೆ ಸ್ಥಳಾವಕಾಶದ ತೊಂದರೆಯಿಂದ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿರಲಿಲ್ಲ. ನೂತನ ಆಸ್ಪತ್ರೆಯಿಂದ ತಾಲೂಕಿನ ತಾಯಿ ಮತ್ತು ಮಕ್ಕಳಿಗೆ ಉತ್ತಮ ಆರೋಗ್ಯ ಸೇವೆ ದೊರೆಯಲಿದೆ ಎಂದು ಹೇಳಿದರು.

ತಾಲೂಕಿನ ಮಹಿಳೆಯರು ಅಲ್ಲದೆ ಕೆ.ಆರ್‌.ಪೇಟೆ, ಪಿರಿಯಾಪಟ್ಟಣ ಮತ್ತು ಹುಣಸೂರು ತಾಲೂಕಿನವರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ಒಳ ಮತ್ತು ಹೊರ ರೋಗಿಗಳಾಗಿ ಬರುತ್ತಿದ್ದು ನೂತನ ಆಸ್ಪತ್ರೆಯಲ್ಲಿ ಹೆರಿಗೆಗೆ ಬರುವ ಮಹಿಳೆಯರ ಅನುಕೂಲಕ್ಕೆ ತಕ್ಕಂತೆ ಸಿಜೆರಿಯನ್‌ ಮಾಡಲು ಪ್ರತ್ಯೇಕ ಕೊಠಡಿ, ಸ್ಕ್ಯಾನಿಂಗ್‌ ಸೆಂಟರ್‌ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯ ಹೊಂದಿರುವುದರಿಂದ ತಾಯಂದಿರಿಗೆ ಮತ್ತು ಮಕ್ಕಳಿಗೆ ಅನುಕೂಲವಾಗಲಿದ್ದು ಜಿಲ್ಲಾ ಕೇಂದ್ರ ಮೈಸೂರಿಗೆ ಹೋಗುವುದು ತಪ್ಪುತ್ತದೆ ಎಂದು ತಿಳಿಸಿದರು.

ಸಂಸದ ಸಿ.ಎಸ್‌. ಪುಟ್ಟರಾಜು, ಜಿಪಂ ಅಧ್ಯಕ್ಷೆ ನಹೀಮಾ ಸುಲ್ತಾನ್‌, ಪುರಸಭೆ ಅಧ್ಯಕ್ಷೆ ಸಿ.ಬಿ. ಕವಿತಾ, ಉಪಾಧ್ಯಕ್ಷೆ ಪಾರ್ವತಿ, ತಾಪಂ ಅಧ್ಯಕ್ಷ ಎಚ್‌.ಟಿ. ಮಂಜುನಾಥ್‌, ಉಪಾಧ್ಯಕ್ಷೆ ನೀಲಾಮಣಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸವರಾಜು, ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಟಿ.ಶಿವಪ್ರಸಾದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next