ಜಮಖಂಡಿ: ತಾಲೂಕಿಗೆ 24 ಗಂಟೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸೇವೆ ಸಲ್ಲಿಸುವ ಜಮಖಂಡಿ ಸರಕಾರಿ ಆಸ್ಪತ್ರೆಗೆ ಹೊಸದಾಗಿ ಇನ್ನೊಂದು ಆಂಬ್ಯುಲೆನ್ಸ್ ನೀಡಲಾಗಿದ್ದು, ಇಂದಿನಿಂದ ಆರೋಗ್ಯ ಸೇವೆ ಆರಂಭಿಸಲಿದೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ಉಪವಿಭಾಗ ಸರ್ಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕ ಸೇವೆಗೆ ನೂತನ ಆಂಬ್ಯುಲೆನ್ಸ್‌ಗೆ ಪೂಜೆ ಸಲ್ಲಿಸಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನಾಲ್ಕು ತಿಂಗಳಲ್ಲಿ ಹೊಸದಾಗಿ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆಗೊಳ್ಳಲಿದೆ. ಇದರಿಂದ ಈ ಭಾಗದ ಜನತೆಗೆ ಎಲ್ಲ ತರಹದ ಸರಕಾರಿ ಸೌಲಭ್ಯಗಳು ಲಭಿಸಿದಂತಾಗುತ್ತದೆ ಎಂದರು.
ತಾಲೂಕಿನ ಯಾವುದೇ ಭಾಗದಿಂದ ರೋಗಿಗಳು ಆರೋಗ್ಯ ತಪಾಸಣೆಗೆ ಬಂದರೆ ಅಂತಹವರಿಗೆ ಈ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯ ಸಿಗುವಂತೆ ಮಾಡಲಾಗಿದೆ. ರಕ್ತ ಭಂಡಾರ, ಡಯಾಲಾಸಿಸ್ ಮತ್ತು ನವಜಾತ ಶಿಶುಸ್ಥಿರಿಕರಣ ಘಟಕ ಕೂಡಾ ನಾಗರಿಕರಿಗೆ ಅನುಕೂಲವಾಗಲಿದ್ದು, ಹುಟ್ಟಿದ ಮಗುವಿಗೆ ನಂಜು, ಕಾಮಾಲೆ ಇರುವ ಶಿಶುವಿಗೆ ಇನ್ನು ಮುಂದೆ ಚಿಕಿತ್ಸೆ ಲಭಿಸಲಿದೆ. ಸುಸಜ್ಜಿತ ಶಸ್ತ್ರಚಿಕಿತ್ಸೆಗೆ ಬಿಪಿ, ಇಸಿಜಿ, ಸ್ತ್ರೀರೋಗಕ್ಕೆ ಸಂಬಂಧಿಸಿದ ಎಲ್ಲ ಉಪಕರಣಗಳು ಲಭ್ಯತೆ ಇರುವ ಮೂರು ಆಂಬ್ಯುಲೆನ್ಸ್‌ಗಳ ವ್ಯವಸ್ಥೆ ಮಾಡಿದೆ. ಇದರಿಂದ ಕ್ಷೇತ್ರದ ಜನರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಈಗಾಗಲೇ ಬಾಗಲಕೋಟೆಯಲ್ಲಿ ಪ್ರತಿ ನಿಮಿಷಕ್ಕೆ ಒಂದು ಸಾವಿರ ಲೀಟರ್ ಆಕ್ಸಿಜನ್ ತಯಾರಿಸುವ ಪ್ಲಾಂಟೇಶನ್ ಇದ್ದು, ಜಮಖಂಡಿ ಕ್ಷೇತ್ರದಲ್ಲಿ ಪ್ರತಿ ನಿಮಿಷಕ್ಕೆ 500 ಲೀಟರ್ ಆಕ್ಸಿಜನ್ ಪ್ಲಾಂಟೇಶನ್ ಸಿದ್ಧವಾಗಿದೆ. ಕೊರೊನಾ ಮೂರನೇ ಅಲೆ ಅಬ್ಬರಿಸುತ್ತಿದ್ದು, ಅದನ್ನು ತಡೆಗಟ್ಟಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಕ್ತ ಭಂಡಾರ ಮತ್ತೆ ಪ್ರಾರಂಭಿಸಿ ಸೋಮವಾರದಿಂದ ಸಾರ್ವಜನಿಕರಿಗೆ ರಕ್ತ ಸಿಗುವ ಹಾಗೆ ವ್ಯವಸ್ಥೆ ಮಾಡಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್, ಐಸಿಯು ಹೀಗೆ ಎಲ್ಲ ರೀತಿಯ ಸೌಲಭ್ಯಗಳಿವೆ. ಜಮಖಂಡಿ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ತರಹದ ವ್ಯವಸ್ಥೆಗಳಿದ್ದು, ಉತ್ತಮ ಚಿಕಿತ್ಸೆ ನೀಡಿ ಶ್ರೇಷ್ಠ ಗುಣಮಟ್ಟದ ಆಸ್ಪತ್ರೆಯನ್ನಾಗಿಸಬೇಕೆಂದು ಸಲಹೆ ನೀಡಿದರು.
ತಾಲೂಕು ವೈದ್ಯಾಧಿ ಕಾರಿ ಡಾ| ಜಿ.ಎಸ್.ಗಲಗಲಿ, ಸರಕಾರಿ ಆಸ್ಪತ್ರೆ ಮುಖ್ಯವೈದ್ಯಾಧಿ ಕಾರಿ ಡಾ| ಟಿ.ಎಂ. ವೆಂಕಟರಾಜು, ಸ್ತ್ರೀ ರೋಗತಜ್ಞ ಡಾ| ಎಸ್.ಜಿ. ಜಮಖಂಡಿ ಇದ್ದರು.