Advertisement

ಹುಬ್ಬಳ್ಳಿ:  ಗಾಯತ್ರಿ ತಪೋವನ ಬಳಿ ತಾಯಿ-ಮಗು ಉದ್ಯಾನ

10:16 PM Sep 15, 2021 | Team Udayavani |

ವರದಿ: ಬಸವರಾಜ ಹೂಗಾರ

Advertisement

ಹುಬ್ಬಳ್ಳಿ: ತಡಸ ಗಾಯಿತ್ರಿ ತಪೋವನದ ಬಳಿ ಸುಮಾರು 20 ಎಕರೆ ಜಾಗದಲ್ಲಿ ತಾಯಿ-ಮಗುವಿನ ಕಲಾಕೃತಿ ಉದ್ಯಾನವನ ನಿರ್ಮಾಣಗೊಳ್ಳಲಿದ್ದು, ಗೊಟಗೋಡಿ ರಾಕ್‌ ಗಾರ್ಡನ್‌ ನಿರ್ಮಾತೃ ದಾಸನೂರು ಕುಟುಂಬದಿಂದ ಮತ್ತೂಂದು ಮೈಲುಗಲ್ಲಾಗಲಿದೆ.

ಈಗಾಗಲೇ ರಾಕ್‌ ಗಾರ್ಡನ್‌ನಲ್ಲಿ ನಮ್ಮ ಹಳ್ಳಿ ಸೊಗಡು ಸೇರಿದಂತೆ ಮಗುವಿನ ಜನನದಿಂದ ಹಿಡಿದು ಅವನ ಅಂತ್ಯದವರೆಗೂ ತೋರಿಸಿದ್ದಾರೆ. ವರನಟ ಡಾ| ರಾಜಕುಮಾರ ಕಲಾಕೃತಿ, ರೈತನ ಸೊಬಗು ತೋರಿಸುವ ಕಲಾಕೃತಿ ರಾಕ್‌ ಗಾರ್ಡನ್‌ನಲ್ಲಿ ಇಡಲಾಗಿದ್ದು ಎಲ್ಲರ ಮನಸೆಳೆದಿರುವುದು ಇತಿಹಾಸ. ಅಂತಹ ಮತ್ತೂಂದು ಇತಿಹಾಸ ನಿರ್ಮಾಣಕ್ಕೆ ದಾಸನೂರ ಕುಟುಂಬ ಮುಂದಾಗಿದೆ. ಸುಮಾರು 10 ಕೋಟಿ ವೆಚ್ಚದಲ್ಲಿ ತಾಯಿ-ಮಗುವಿನ ಮಮತೆ ತೋರುವ ವಿವಿಧ ಕಲಾಕೃತಿಗಳನ್ನು ಸಿದ್ಧಪಡಿಸಿ ಉದ್ಯಾನವನವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ದಾಸನೂರು ಕುಟುಂಬ ಮುಂದಾಗಿದೆ. ಈಗಾಗಲೇ ಅದಕ್ಕೆ ಬೇಕಾಗುವ ಕಲಾಕೃತಿಗಳನ್ನು ಹುಬ್ಬಳ್ಳಿ ರಾಯಾಪುರ ಬಳಿಯಿರುವ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ.

ಮಹಿಳೆಯು ತನ್ನ ಮಗುವಿನ ಲಾಲನೆ ಪಾಲನೆ ಯಾವ ರೀತಿ ಮಾಡುತ್ತಾಳೆ. ಯಾವ ರೀತಿ ಮಕ್ಕಳು ತಾಯಿಯೊಂದಿಗೆ ಬೆರೆಯುತ್ತಾರೆ ಎಂಬುದೆಲ್ಲವನ್ನು ಕಲಾಕೃತಿಯ ಮೂಲಕ ತೋರಿಸಲು ದಾಸನೂರು ಕುಟುಂಬ ಮುಂದಾಗಿದೆ.

ಮ್ಯೂಸಿಕ್‌ ಗ್ಯಾಲರಿ

Advertisement

ಕೇವಲ ಕಲಾಕೃತಿಗಳ ಮೂಲಕ ತೋರಿಸುವುದಷ್ಟೇ ಅಲ್ಲದೆ ಈ ಉದ್ಯಾನವನದಲ್ಲಿ ಆರ್ಟ್‌ ಗ್ಯಾಲರಿ, ತಾಯಿ ಹಾಗೂ ಮಗುವಿನ ಕುರಿತು ವಿವಿಧ ಚಿತ್ರಗಳಲ್ಲಿ ಮೂಡಿಬಂದಿರುವ ಗೀತೆಗಳ ಸಂಗ್ರಹ, ಜಾನಪದ ಗೀತೆಗಳ ಸಂಗ್ರಹ, ಸೋಬಾನ ಪದಗಳ ಸಂಗ್ರಹ ಮಾತ್ರವಲ್ಲದೇ ಕನ್ನಡ, ಹಿಂದಿ ಹಾಗೂ ಆಂಗ್ಲ ಭಾಷೆಯ ಗೀತೆಗಳನ್ನು ಸಂಗ್ರಹಿಸುವ ಮೂಲಕ ಇದೇ ಉದ್ಯಾನವನದಲ್ಲಿ ಮ್ಯೂಸಿಕ್‌ ಗ್ಯಾಲರಿ ಸಹ ಮಾಡಲು ಉದ್ದೇಶಿಸಲಾಗಿದೆ.

ಅಳುತ್ತ ಬರುವ ಮಗುವನ್ನು ತನ್ನ ತೊಡೆಯ ಮೇಲೆ ಮಲಗಿಸಿ ತಾಯಿ ಅಡುಗೆ ಮಾಡುವುದು, ಕೂಲಿ ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ಬೆನ್ನು ಬೀಳುವ ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡು ಕೆಲಸ ಮಾಡುವುದು, ಇನ್ನು ಹೊಲಕ್ಕೆ ಹೋಗುವ ಸಮಯದಲ್ಲಿ ಬುತ್ತಿ ಗಂಟು ತಲೆಯ ಮೇಲೆ ಮಗು ಕಂಕುಳಲ್ಲಿ ಇಟ್ಟುಕೊಂಡು ಹೋಗುವುದು, ಭಿಕ್ಷೆ ಬೇಡುವ ತಾಯಿ ತನ್ನ ಮಗುವನ್ನು ತೊಡೆಯ ಮೇಲೆ ಹಾಕಿಕೊಂಡು ತುತ್ತಿನ ಚೀಲ ತುಂಬಿಕೊಳ್ಳುತ್ತಿರುವ ನೂರಾರು ಕಲಾಕೃತಿಗಳನ್ನು ಈ ಉದ್ಯಾನವನದಲ್ಲಿ ಇಡುವ ಮೂಲಕ ಮಾದರಿ ಉದ್ಯಾನವನನ್ನಾಗಿ ಮಾಡಲು ದಾಸನೂರ ಕುಟುಂಬ ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next