ಎಚ್.ಡಿ.ಕೋಟೆ: ಇತ್ತೀಚಿಗೆ ತಾಯಿ ಮತ್ತು ಶಿಶು ಮರಣ ಹಾಗೂ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮತ್ತು ಅಂತಾರಾಷ್ಟ್ರೀಯ ಯೂನಿಸೆಫ್ ಹಾಗೂ ತಾಲೂಕು ಆರೋಗ್ಯ ಇಲಾಖೆ ಸಂಯೋಗದಲ್ಲಿ ರಾಷ್ಟ್ರೀಯ ನಾಟಕ ಶಾಲೆ ಕಲಾ ತಂಡ ಜಿಲ್ಲೆಯಲ್ಲಿ ಸದಸ್ಯರು ಕೈಗೊಂಡಿರುವ 50 ದಿನ ಜಾಗೃತಿ ಜಾಥಾಕ್ಕೆ ರಾಜ್ಯದಲ್ಲೇ ಪ್ರಥಮವಾಗಿ ತಾಲೂಕಿನಿಂದ ಸಂಕೇತಿಕವಾಗಿ ಚಾಲನೆ ನೀಡಲಾಯಿತು.
ಪುರಸಭೆ ಅಧ್ಯಕ್ಷೆ ಮಂಜುಳಾ ಹಸಿರು ಬಾವುಟ ತೋರುವ ಮೂಲಕ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ತಹಶೀಲ್ದಾರ್ ಎಂ.ನಂಜುಂಡಯ್ಯ ಡೊಲು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಸರ್ಕಾರ ತಾಯಿ ಮತ್ತು ಶಿಶುಗಳ ಮರಣ, ಬಾಲ್ಯ ವಿವಾಹ ತಪ್ಪಿಸುವ ನಿಟ್ಟಿನಲ್ಲಿ ಹಳ್ಳಿಗಾಡಿನ ಪ್ರದೇಶದ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಉತ್ತಮ ಕಾರ್ಯಕ್ರಮ ರೂಪಿಸಿದೆ. ಆದರೆ, ಹಳ್ಳಿಗಾಡಿನ ಜನರು ಕೂಲಿಗಾಗಿ ಬೇಗ ಮನೆ ಬಿಡುವುದರಿಂದ ನಿಮ್ಮ ಸಮಯಕ್ಕೆ ಅವರು ಲಭ್ಯವಿರುವುದಿಲ್ಲ. ಹೀಗಾಗಿ ಜಾಗೃತಿ ಜಾಥಾ ಕೈಗೊಳ್ಳುವ ದಿನವನ್ನು ಮುನ್ನ ದಿನ ಆಯಾ ಗ್ರಾಮಗಳಿಗೆ ಜಾಗೃತಿ ಕೈಗೊಂಡರೇ ಯೋಜನೆ ಫಲಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.
ಅಂತಾರಾಷ್ಟ್ರೀಯ ಯೂನಿಸೆಫ್ ಕರ್ನಾಟಕ ಸಂಯೋಜಕ ಮನೋಜ್ ಸಬೇಸ್ಟಿನ್, ವಿಶೇಷವಾಗಿ ಕಾಡಿನಲ್ಲಿ ವಾಸಿಸುವ ಹಾಗೂ ಗ್ರಾಮೀಣ ಪ್ರದೇಶದ ಓದಲು ಬರೆಯಲು ಬಾರದ ಅವಿದ್ಯಾವಂತ ಜನರಲ್ಲಿ ಬೀದಿ ನಾಟಕದ ಮೂಲಕ ತಾಯಿ ಮತ್ತು ಶಿಶು ಮರಣ ಹಾಗೂ ಬಾಲ್ಯ ವಿವಾಹ, ತಾಯಿ ಶಿಶುವಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಕರ್ನಾಟಕ ಸರ್ಕಾರ ಹಾಗೂ ಯೂನಿಸೆಫ್ನ ವಿಶಿಷ್ಟ ಕಾರ್ಯಕ್ರಮ ಇದಾಗಿದ್ದು ಜಿಲ್ಲೆಯಲ್ಲಿ 50 ದಿನಗಳ ಕಾಲ ನಡೆಯಲಿದೆ ಎಂದು ತಿಳಿಸಿದರು.
ಎಚ್.ಡಿ.ಕೋಟೆಯಲ್ಲಿ 25, ನಂಜನಗೂಡಿನಲ್ಲಿ 10 ಹಾಗೂ ಹುಣಸೂರು ಮತ್ತು ಪಿರಿಯಾಪಟ್ಟಣ 15 ಕಡೆ ಸೇರಿ ಒಟ್ಟು 50 ಕಡೆ ರಾಷ್ಟ್ರೀಯ ನಾಟಕ ಶಾಲಾ ಕಲಾ ತಂಡದ ಸದಸ್ಯರು ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಿದ್ದಾರೆ. ಒಂದು ದಿನ ಕಲಾ ಜಾಥಾದಲ್ಲಿ ಕಲಾ ತಂಡದ ಸದಸ್ಯರು ಅಲ್ಲೇ ಒಂದು ದಿನ ವಾಸ್ತವ್ಯ ಹೂಡಿ ಜನರಲ್ಲಿ ತಾಯಿ, ಶಶು ಮರಣ ಹಾಗೂ ಆರೋಗ್ಯ ಮತ್ತು ಬಾಲ್ಯ ವಿವಾಹದ ಬಗ್ಗೆ ಜನರೊಂದಿಗೆ ಮುಕ್ತವಾಗಿ ಚರ್ಚಿಸಲಿದ್ದಾರೆ.
ರಾಜ್ಯದಲ್ಲೇ ಮೊದಲ ಬಾರಿಗೆ ಎಚ್.ಡಿ.ಕೋಟೆಯಿಂದ ಸಂಕೇತಿಕವಾಗಿ ಚಾಲನೆ ನೀಡಲಾಗುತ್ತಿದೆ ಎಂದರು. ತಹಶೀಲ್ದಾರ್ ಎಂ.ನಂಜುಂಡಯ್ಯ, ರಾಷ್ಟ್ರೀಯ ನಾಟಕ ಶಾಲೆ ಶಿಲ್ಪಾ, ಎಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಭಾಸ್ಕರ್, ತಾಲೂಕು ವೈದ್ಯಾಧಿಕಾರಿ ರವಿಕುಮಾರ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಉದಯಕುಮಾರ್, ಮುಖಂಡ ಗೋವಿಂದಚಾರಿ, ರಾಷ್ಟ್ರೀಯ ನಾಟಕ ಶಾಲೆ ಕಲಾ ತಂಡದ ಸದಸ್ಯರಿದ್ದರು.
ತಾಯಿ, ಶಿಶುಗಳ ಮರಣ ಸಂಖ್ಯೆ ಉತ್ತರ ಕರ್ನಾಟಕದಲ್ಲಿ ಹೆಚ್ಚು ಕಂಡು ಬಂದಿದೆ. ನಮ್ಮಲ್ಲಿ ಕೆಲ ಸಮುದಾಯದಲ್ಲಿ ಮಾತ್ರ ಕಂಡು ಬಂದಿದೆ. ಈಗ ಸರ್ಕಾರ ಯೂನಿಸೆಫ್ ಜೊತೆಗೂಡಿ ಬೀದಿ ನಾಟಕದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ತಾಯಿ ಮತ್ತು ಶಿಶುಗಳ ಮರಣ ಸಂಖ್ಯೆ, ಬಾಲ್ಯ ವಿವಾಹಗಳು ಭಾಗಶಃ ಕಡಿಮೆಯಾಗಲಿವೆ.
-ಡಾ.ರವಿಕುಮಾರ್, ತಾಲೂಕು ವೈದ್ಯಾಧಿಕಾರಿ